ಬೆಳಗಾವಿ ಮಹಾನಗರ ಪಾಲಿಕೆಗೆ ಸೂಪರ್ ಸೀಡ್ ತೂಗುಗತ್ತಿ: ಪಾಲಿಕೆ ವಿಸರ್ಜನೆಗೆ ನಡೆದಿದೆಯಾ ಹುನ್ನಾರ?

| Updated By: Ganapathi Sharma

Updated on: Oct 20, 2023 | 6:46 PM

ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಬಿಜೆಪಿ ಶಾಸಕ ಅಭಯ್ ಪಾಟೀಲ್ ಮಧ್ಯದ ಫೈಟ್ ತಾರಕ್ಕೇರಿದ್ದು ಇದರ ಪರಿಣಾಮ ಪಾಲಿಕೆ ಮೇಲೆ ಆಗ್ತಿದೆ ಅನ್ನೋದು ಕೂಡ ಚರ್ಚೆ. ಈ ಹಂತದಲ್ಲಿ ಬಿಜೆಪಿ ಆಡಳಿತವಿರೋ ಪಾಲಿಕೆ ಸೂಪರ್ ಸೀಡ್ ಗೆ ಹುನ್ನಾರ ರೂಪಿಸಲಾಗ್ತಿದೆಯಾ ಎಂಬ ಅನುಮಾನ ಎದುರಾಗಿದೆ.

ಬೆಳಗಾವಿ ಮಹಾನಗರ ಪಾಲಿಕೆಗೆ ಸೂಪರ್ ಸೀಡ್ ತೂಗುಗತ್ತಿ: ಪಾಲಿಕೆ ವಿಸರ್ಜನೆಗೆ ನಡೆದಿದೆಯಾ ಹುನ್ನಾರ?
ಬೆಳಗಾವಿ ಮಹಾನಗರ ಪಾಲಿಕೆ
Follow us on

ಬೆಳಗಾವಿ, ಅಕ್ಟೋಬರ್ 20: ಬೆಳಗಾವಿ ಮಹಾನಗರ ಪಾಲಿಕೆಗೆ (Belagavi City Corporation) ಸೂಪರ್ ಸೀಡ್ ತೂಗುಗತ್ತಿ ನೇತಾಡುತ್ತಿದೆ. ಬಿಜೆಪಿ (BJP) ಆಡಳಿತವಿರೋ ಪಾಲಿಕೆ ವಿಸರ್ಜನೆಗೆ ಹುನ್ನಾರ ನಡೆದಿದೆಯಾ ಅನ್ನೋ ಅನುಮಾನ ಕೂಡ ಕಾಡುತ್ತಿದೆ. ಪಾಲಿಕೆ ಆಯುಕ್ತರು ಸೇರಿ ಮೂವರು ವಿರುದ್ಧ ಬಿಜೆಪಿ ಮೇಯರ್ ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ದೂರು ನೀಡಿದ್ದಾರೆ. ಈ ಎಲ್ಲ ಬೆಳವಣಿಗೆ ಮಧ್ಯೆ ನಾಳೆ ಪಾಲಿಕೆಯಲ್ಲಿ ತುರ್ತು ಸಾಮಾನ್ಯ ಸಭೆ ಕರೆದಿದ್ದು ಸಾಕ್ಷಿ ಸಮೇತ ಸ್ಪೋಟಿಸುವುದಾಗಿ ಅಭಯ್ ಹೇಳಿದ್ದಾರೆ. ಅಷ್ಟಕ್ಕೂ ಬೆಳಗಾವಿ ಪಾಲಿಕೆಯಲ್ಲಿ ಹೇಗಿದೆ ಜಟಾಪಟಿ? ಅದ್ಯಾವ ಕಾರಣಕ್ಕೆ ಪಾಲಿಕೆ ಸೂಪರ್ ಸೀಡ್ ಮಾಡಲಾಗ್ತಿದೆ? ಇಲ್ಲಿದೆ ಮಾಹಿತಿ.

ಹೌದು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಬೆಳಗಾವಿ ಮಹಾನಗರ ಪಾಲಿಕೆಗೆ ಸೂಪರ್ ಸೀಡ್ ತೂಗುಗತ್ತಿ ನೇತಾಡುತ್ತಿದೆ. ಕೆಲ ಕಾಣದ ಕೈಗಳ ಆಟದಿಂದ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಸೂಪರ್ ಸೀಡ್ ಮಾಡಿಸುವ ಹುನ್ನಾರ ನಡೆದಿದೆ ಅನ್ನೋದು ಚರ್ಚೆಯಾಗುತ್ತಿದೆ. ಕೆಲದಿನಗಳ ಹಿಂದೆಯಷ್ಟೇ ಪಾಲಿಕೆ ಮೇಯರ್ ಗೆ ಸರ್ಕಾರ ಸೂಪರ್ ಸೀಡ್ ಯಾಕೆ ಮಾಡಬಾರದು ಅಂತಾ ನೋಟೀಸ್ ನೀಡಿತ್ತು. ಈ ನೋಟೀಸ್ ಬಂದ ಬೆನ್ನಲ್ಲೇ ಬಿಜೆಪಿ ಮೇಯರ್ ಮತ್ತು ಸದಸ್ಯರು, ಶಾಸಕರು ಅಲರ್ಟ್ ಆಗಿದ್ದಾರೆ. ಪಾಲಿಕೆಯಲ್ಲಿ‌ ಈಗ ಕಾಂಗ್ರೆಸ್, ಬಿಜೆಪಿ ಮಧ್ಯೆ ಜಂಗಿ ಕುಸ್ತಿ ಆರಂಭವಾಗಿದೆ.

ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮತ್ತು ಬಿಜೆಪಿ ಶಾಸಕ ಅಭಯ್ ಪಾಟೀಲ್ ಮಧ್ಯದ ಫೈಟ್ ತಾರಕ್ಕೇರಿದ್ದು ಇದರ ಪರಿಣಾಮ ಪಾಲಿಕೆ ಮೇಲೆ ಆಗ್ತಿದೆ ಅನ್ನೋದು ಕೂಡ ಚರ್ಚೆ. ಈ ಹಂತದಲ್ಲಿ ಬಿಜೆಪಿ ಆಡಳಿತವಿರೋ ಪಾಲಿಕೆ ಸೂಪರ್ ಸೀಡ್ ಗೆ ಹುನ್ನಾರ ರೂಪಿಸಲಾಗ್ತಿದೆಯಾ ಎಂಬ ಅನುಮಾನ ಎದುರಾಗಿದೆ. ಯಾಕೆಂದರೆ ಪಾಲಿಕೆ ಮೆಯರ್ ಶೋಭಾ ಸೋಮನಾಚೆಯಿಂದ ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಲಿಖಿತ ದೂರು ನೀಡಿರುವುದು ಇದಕ್ಕೆ ಕಾರಣ. ಇದೇ ಅಕ್ಟೋಬರ್ 17 ರಂದು ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಮೇಯರ್ ದೂರು ನೀಡಿದ್ದು, ಈ ದೂರಿನ ಪತ್ರದಲ್ಲಿ ಬೆಳಗಾವಿ ಪಾಲಿಕೆ ಆಯುಕ್ತರು, ಕಂದಾಯ ಶಾಖೆ ಉಪ ಆಯುಕ್ತರು ಮತ್ತು ಪರಿಷತ್ ಕಾರ್ಯದರ್ಶಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲು ಒತ್ತಾಯಿಸಿದ್ದಾರೆ. ರಾಜ್ಯ ಸರ್ಕಾರಕ್ಕೆ ಈ ಮೂವರು ಅಧಿಕಾರಿಗಳು ತಿರುಚಿ ವರದಿ ಕೊಟ್ಟಿದ್ದಾರೆ. ಸರ್ಕಾರ ಆಸ್ತಿ ಕರ ಪರಿಷ್ಕರಣೆ ಬಗ್ಗೆ ಮೇಯರ್, ಪಾಲಿಕೆ ಆಯುಕ್ತರಿಗೆ ನೋಟೀಸ್ ಕೊಟ್ಟಿತ್ತು.

ಈ ನೋಟೀಸ್ ನಲ್ಲಿ ಯಾಕೆ ಸೂಪರ್ ಸೀಡ್ ಮಾಡಬಾರದೆಂದು ಎಚ್ಚರಿಕೆ ನೀಡಿತ್ತು. ಆದ್ರೆ 16-9-2023 ರ ಪಾಲಿಕೆ ಸಾಮಾನ್ಯ ಸಭೆಯಲ್ಲಿ 2023/24 ನೇ ಸಾಲಿನ ಆಸ್ತಿ ಕರ ಹೆಚ್ಚಳ ಮಾಡಲಾಗಿದೆ. ಬೆಳಗಾವಿ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಠರಾವು ಪಾಸ್ ಮಾಡಲಾಗಿದೆ. ಆದ್ರೂ ಈ ಅಧಿಕಾರಿಗಳು ದುರುದ್ದೇಶದಿಂದ ಸರ್ಕಾರಕ್ಕೆ ಖೊಟ್ಟಿ ದಾಖಲೆ ಸೃಷ್ಟಿಸಿ ವರದಿ ಸಲ್ಲಿಸಿದ್ದಾರೆ. ಬೆಳಗಾವಿ ಪಾಲಿಕೆ 2024/25 ನೇ ಸಾಲಿಗೆ ಆಸ್ತಿ ಕರ ಹೆಚ್ಚಳ ಮಾಡಿದೆ ಎಂದು ಸಾಮಾನ್ಯ ಸಭೆ ಠರಾವು ತಿರುಚಿದ್ದಾರೆ. ಬೆಳಗಾವಿ ಪಾಲಿಕೆ ಮೇಯರ್ ಗೆ ಕನ್ನಡ ಭಾಷೆ ಬಾರದೆ ಇರೋದನ್ನೆ ದುರ್ಬಳಕೆ ಮಾಡಿಕೊಂಡಿದ್ದಾರೆ. ಸರ್ಕಾರಿ ಅಧಿಕಾರಿಗಳಾಗಿ ಕರ್ತವ್ಯ ಲೋಷ ಎಸಗಿದ್ದಾರೆ. ಈ ಮೂವರು ಅಧಿಕಾರಿಗಳ ವಿರುದ್ಧ ಕರ್ನಾಟಕ ನಾಗರಿಕ ಸೇವಾ ನಿಯಮಗಳ ಪ್ರಕಾರ ಶಿಸ್ತು ಜರುಗಿಸಬೇಕು. ದಾಖಲೆಗಳನ್ನ ತಿರುಚಿದ್ದಕ್ಕಾಗಿ ಕ್ರಿಮಿನಲ್ ಕೇಸ್ ದಾಖಲಿಸಲು ಒತ್ತಾಯಿಸಿದ್ದಾರೆ. ಇನ್ನೂ ಪಾಲಿಕೆ ಆಡಳಿತ ಪಕ್ಷದ ನಾಯಕ ರಾಜಶೇಖರ ಡೋಣಿ ಮಾತನಾಡಿ ಮೇಯರ್ ದೂರು ಕೊಟ್ಟಿದ್ದಾರೆ. ‌ಈ ಬಗ್ಗೆ ನಾಳೆ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಎಲ್ಲಾ ಸತ್ಯ ಹೊರಗೆ ಬರಲಿದೆ ಅಂತಾ ಹೇಳಿದ್ರೆ. ಮೊನ್ನೆಯಷ್ಟೇ ಬಿಜೆಪಿ ಶಾಸಕ ಅಭಯ ಪಾಟೀಲ್ ಅಧಿಕಾರಿಗಳ ಬಣ್ಣವನ್ನ ಬಯಲು ಮಾಡ್ತಿನಿ ಅಂತಾ ಗುಡುಗಿದ್ರು.

ಇದನ್ನೂ ಓದಿ: ಜಮೀನು ಗಲಾಟೆ: ಸತೀಶ್ ಜಾರಕಿಹೊಳಿ ಆಪ್ತನಿಗೆ ಗದಗ ಪಿಎಸ್​ಐನಿಂದ ಬೆದರಿಕೆ ಆರೋಪ

ಇನ್ನೂ ಸರ್ಕಾರದ ಸೂಪರ್ ಸೀಡ್ ತೂಗುಗತ್ತಿ ತಪ್ಪಿಸಿಕೊಳ್ಳಲು ಬಿಜೆಪಿ ಪ್ರತಿತಂತ್ರ ರೂಪಿಸಿದೆ. ಹೀಗಾಗಿ ತುರ್ತಾಗಿ ನಾಳೆ ಪಾಲಿಕೆ ಸಾಮಾನ್ಯ ಸಭೆಯನ್ನ ಕರೆಯಲಾಗಿದೆ. ಈ ಸಭೆಯಲ್ಲಿ ಸರ್ಕಾರಕ್ಕೆ ತಪ್ಪು ವರದಿ ಕೊಟ್ಟ ಅಧಿಕಾರಿಗಳ ಬಣ್ಣ ಬಯಲು ಮಾಡಲು ಪ್ಲಾನ್ ಮಾಡಿಕೊಂಡಿದೆ. ಇದೇ ಕಾರಣಕ್ಕೆ ಪ್ರಾದೇಶಿಕ ಆಯುಕ್ತರಿಗೆ ಪಾಲಿಕೆ ಆಯುಕ್ತ ಸೇರಿ ಮೂವರ ವಿರುದ್ಧ ದೂರು ನೀಡಲಾಗಿದೆ. ದೂರಿನಲ್ಲಿ ಇರೋ ಅಂಶಗಳನ್ನು ಪಾಲಿಕೆ ಸಭೆಯಲ್ಲಿ ಸಾಕ್ಷಿ ಸಮೇತ ಬಹಿರಂಗೊಳಿಸಲು ಬಿಜೆಪಿ ಶಾಸಕ ಅಭಯ ಪಾಟೀಲ್ ನೇತೃತ್ವದ ತಂಡ ಸಿದ್ಧತೆ ಮಾಡಿದೆ. ಇನ್ನೂ ಪಾಲಿಕೆ ಗೆ ಸೂಪರ್ ಸೀಡ್ ಪತ್ರ ಬಂದಿರೋ ಬಗ್ಗೆ ಕಾಂಗ್ರೆಸ್ ಶಾಸಕ ಆಸೀಫ್ ಸೇಠ್ ಅಚ್ಚರಿ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಸರ್ಕಾರದಿಂದ ಪಾಲಿಕೆ ಮೇಯರ್ ಗೆ ಪತ್ರ ಬಂದಿರೋದು ನನಗೆ ಗೊತ್ತಾಗಿದೆ. ಆದ್ರೆ ಅವರು ಸರ್ಕಾರಕ್ಕೆ ಏನು ಉತ್ತರ ಕೊಟ್ಟಿದ್ದಾರೆ ಅನ್ನೋದು ಗೊತ್ತಿಲ್ಲ. ಪಾಲಿಕೆ ಆಯುಕ್ತರಿಂದ ಹೆಚ್ಚಿನ ಮಾಹಿತಿ ಪಡೆಯುತ್ತೇನೆ ಅಂತಾ ಕಾಂಗ್ರೆಸ್ ಶಾಸಕ ಆಸೀಫ್ ಸೇಠ್ ಹೇಳಿದ್ದಾರೆ.

ಒಟ್ಟಿನಲ್ಲಿ ಶನಿವಾರ ನಡೆಯೋ ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯತ್ತ ಈಗ ಎಲ್ಲರ ಚಿತ್ತ ನೆಟ್ಟಿದೆ. ಬೆಂಕಿ ಇಲ್ಲದೇ ಹೊಗೆ ಆಡಲ್ಲಾ ಅನ್ನೋ ಹಾಗೇ ಬೆಳಗಾವಿ ಪಾಲಿಕೆ ಕಥೆಯಾಗಿದೆ. ಪಾಲಿಕೆ ಸೂಪರ್ ಸೀಡ್ ಆಗುತ್ತಾ ಇಲ್ಲವಾ ಅನ್ನೋದಕ್ಕೆ ನಾಳೆಯೇ ಉತ್ತರ ಸಿಗಲಿದೆ. ಆದ್ರೇ ಅಧಿಕಾರಕ್ಕಾಗಿ ಕಾಣದ ಕೈಗಳು ಪಾಲಿಕೆಯಲ್ಲಿ ಕೈ ಆಡಿಸುತ್ತಿರುವುದು ಮಾತ್ರ ಮೇಲ್ನೊಟಕ್ಕೆ ಕಂಡು ಬರ್ತಿದ್ದು ಇದು ಯಾವ ಹಂತಕ್ಕೆ ಹೋಗಿ ತಲುಪತ್ತೆ ಅನ್ನೋದನ್ನ ಕಾದುನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ