ಕರ್ನಾಟಕ-ಮಹಾರಾಷ್ಟ್ರ ನಡುವಣ ನದಿ ನೀರಿನ ವಿವಾದ ಪರಿಹರಿಸಲು ನನ್ನಿಂದ ಆಗಲೇ ಇಲ್ಲ: ಕೇಂದ್ರ ಸಚಿವ ನಿತಿನ್ ಗಡ್ಕರಿ ವಿಷಾದ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Feb 28, 2022 | 5:29 PM

ನಾನು ಜಲ 13 ವಿವಾದಗಳನ್ನು ಪರಿಹರಿಸಿದ್ದೆ. ಆದರೆ ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಣ ಕೃಷ್ಣ ಜಲವಿವಾದ ಪರಿಹರಿಸಲು ನನಗೆ ಸಾಧ್ಯವಾಗಲೇ ಇಲ್ಲ ಎಂದು ಕೇಂದ್ರ ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ ಹೇಳಿದರು.

ಕರ್ನಾಟಕ-ಮಹಾರಾಷ್ಟ್ರ ನಡುವಣ ನದಿ ನೀರಿನ ವಿವಾದ ಪರಿಹರಿಸಲು ನನ್ನಿಂದ ಆಗಲೇ ಇಲ್ಲ: ಕೇಂದ್ರ ಸಚಿವ ನಿತಿನ್ ಗಡ್ಕರಿ ವಿಷಾದ
ನಿತಿನ್​ ಗಡ್ಕರಿ
Follow us on

ಬೆಳಗಾವಿ: ನಾನು ಕೇಂದ್ರ ಜಲಸಂಪನ್ಮೂಲ ಖಾತೆ ಸಚಿವನಾಗಿದ್ದಾಗ ಸುಮಾರು 20 ಅಂತರರಾಜ್ಯ ನೀರಾವರಿ ವಿವಾದಗಳಿದ್ದವು. ಈ ಪೈಕಿ 13 ವಿವಾದಗಳನ್ನು ಪರಿಹರಿಸಿದ್ದೆ. ಆದರೆ ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಣ ಕೃಷ್ಣ ಜಲವಿವಾದ ಪರಿಹರಿಸಲು ನನಗೆ ಸಾಧ್ಯವಾಗಲೇ ಇಲ್ಲ ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಖಾತೆ ಸಚಿವ ನಿತಿನ್ ಗಡ್ಕರಿ (Nitin Gadkari) ಹೇಳಿದರು. ಜಿಲ್ಲಾ ಕ್ರೀಡಾಂಗಣದ ಬಳಿ ನಡೆದ ಸಮಾರಂಭದಲ್ಲಿ ಐದು ಹೆದ್ದಾರಿ ಯೋಜನೆಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ‘ಜಲವಿವಾದಕ್ಕೆ ಸಂಬಂಧಿಸಿದ ಚರ್ಚೆಗಳು ನಡೆಯುವಾಗ ಕೊಠಡಿಯ ಬಾಗಿಲು ಹಾಕಿಸುತ್ತಿದ್ದೆ. ವಿವಾದ ಪರಿಹಾರವಾಗುವವರೆಗೂ ಬಾಗಿಲು ತೆಗೆಯಬಾರದು ಎಂದು ಸ್ಪಷ್ಟವಾಗಿ ಹೇಳಿರುತ್ತಿದ್ದೆ. ಆದರೆ ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಣ ವಿವಾದ ಬಗೆಹರಿಯಲೇ ಇಲ್ಲ ಎಂದರು.

ಆಲಮಟ್ಟಿ ಅಣೆಕಟ್ಟೆಯ ಎತ್ತರ ಹೆಚ್ಚಿಸುವ ಸಂಬಂಧ ನಡೆಯುತ್ತಿರುವ ಚರ್ಚೆಯ ಕುರಿತು ಮಾತನಾಡಿದ ಅವರು, ಪ್ರತಿವರ್ಷ ಮಹಾರಾಷ್ಟ್ರದ ಕೊಲ್ಹಾಪುರ ಪ್ರದೇಶದಲ್ಲಿ ಪ್ರವಾಹ ಕಾಣಿಸಿಕೊಂಡಾಗಲೂ ಅಲ್ಲಿರುವ ಜನರು ಅಲಮಟ್ಟಿ ಅಣೆಕಟ್ಟೆಯನ್ನು ದೂರುತ್ತಾರೆ. ವಾಟರ್​ ಗ್ರಿಡ್​ಗಳನ್ನು ರೂಪಿಸುವ ಮೂಲಕ ಮಾತ್ರ ಈ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗುತ್ತದೆ. ಅಂದರೆ ನಾವು ಕೆರೆಗಳನ್ನು ಸಮರ್ಪಕ ರೀತಿಯಲ್ಲಿ ನಿರ್ವಹಿಸಬೇಕು. ನದಿಪಾತ್ರಗಳು ಒತ್ತುವರಿಯಾಗದಂತೆ ಎಚ್ಚರವಹಿಸಬೇಕು. ನಾಲೆಗಳ ಜಾಲವನ್ನು ಸಮರ್ಪಕವಾಗಿ ಇರಿಸಿಕೊಳ್ಳಬೇಕಿದೆ. ಇಂಥ ಕ್ರಮಗಳನ್ನು ತೆಗೆದುಕೊಂಡರೆ ಅಲಮಟ್ಟಿ ಅಣೆಕಟ್ಟೆಯ ಎತ್ತರ ಹೆಚ್ಚಿಸುವ ಅಗತ್ಯವೇ ಉಂಟಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಬೆಳಗಾವಿ ವರ್ತುಲ ರಸ್ತೆಯ ಬಗ್ಗೆ ಶಾಸಕ ಅಭಯ್ ಪಾಟೀಲ್ ಸಲ್ಲಿಸಿದ ಮನವಿ ಪತ್ರ ಕುರಿತು ಪ್ರಸ್ತಾಪಿಸಿದ ಅವರು, ಈ ಯೋಜನೆಗೆ ಈಗಾಗಲೇ ಅನುಮೋದನೆ ನೀಡಲಾಗಿದೆ. ಕಾಮಗಾರಿಯೂ ಶೀಘ್ರ ಆರಂಭವಾಗಲಿದೆ. ನಗರದಲ್ಲಿ ಫ್ಲೈಓವರ್ ನಿರ್ಮಿಸುವ ಕಾಮಗಾರಿಗೆ ಸ್ಥಳೀಯರ ವಿರೋಧ ವ್ಯಕ್ತವಾಗಿದೆ. ಹೀಗಾಗಿ ಆ ಕಾಮಗಾರಿ ಸ್ಥಗಿತಗೊಂಡಿದೆ. ಜನರನ್ನು ಮನವೊಲಿಸಲು ಶಾಸಕರಿಗೆ ಸಾಧ್ಯವಾದರೆ ಈ ಯೋಜನೆಯನ್ನು ಮುಂದುವರಿಸಲಾಗುವುದು ಎಂದರು.

ಪುಣೆ-ಬೆಂಗಳೂರು ನಡುವೆ ಬೆಳಗಾವಿ ಮಾರ್ಗವಾಗಿ ಮತ್ತೊಂದು ರಾಷ್ಟ್ರೀಯ ಹೆದ್ದಾರಿ ನಿರ್ಮಿಸಲಾಗುವುದು. ಈ ಯೋಜನೆಯು ಕಾರ್ಯರೂಪಕ್ಕೆ ಬಂದ ನಂತರ ಎರಡೂ ನಗರಗಳ ನಡುವಣ ಅಂತರ 100 ಕಿಲೋಮೀಟರ್​ನಷ್ಟು ಕಡಿಮೆಯಾಗಲಿದೆ. ಹಾಗೆಂದು ಹಾಲಿ ಅಸ್ತಿತ್ವದಲ್ಲಿರುವ ಹೆದ್ದಾರಿಯ ಪ್ರಾಮುಖ್ಯತೆಯೇನೂ ಕಡಿಮೆಯಾಗುವುದಿಲ್ಲ. ಸರ್ಕಾರವು ಹೆದ್ದಾರಿ ಕಾಮಗಾರಿಗಳನ್ನು ಘೋಷಿಸಿದ ನಂತರ ಭೂಮಾಫಿಯಾಗಳು ಜನರಿಂದ ಭೂಮಿಯನ್ನು ಖರೀದಿಸಿ, ನಂತರ ಅದೇ ಭೂಮಿಯನ್ನು ಐದಾರುಪಟ್ಟು ದೊಡ್ಡಮೊತ್ತಕ್ಕೆ ಮಾರಿಕೊಳ್ಳುತ್ತಾರೆ. ಹೆದ್ದಾರಿಗಳಿಗೆ ಹೊಂದಿಕೊಂಡಂತೆ ಇರುವ ಭೂಮಿಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಖರೀದಿಸಿ ಸ್ಮಾರ್ಟ್​ ಹಳ್ಳಿಗಳನ್ನು ರೂಪಿಸಲು ಅಥವಾ ವಾಣಿಜ್ಯ ಉದ್ದೇಶಗಳಿಗೆ ಬಳಸಲು ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿದರು.

ದಕ್ಷಿಣ ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕದ ಹಲವು ಧಾರ್ಮಿಕ ಮತ್ತು ಪ್ರವಾಸಿ ತಾಣಗಳನ್ನು ಸಂಪರ್ಕಿಸುವ ಹಲವು ರಸ್ತೆಗಳನ್ನು ನಿರ್ಮಿಸಲಾಗಿದೆ. ಪಂಡರಾಪುರ, ತುಳಜಾಪುರ ಮತ್ತು ಬಾಗಲಕೋಟೆ ಜಿಲ್ಲೆಯ ಹಲವು ತಾಣಗಳನ್ನು ಸಂಪರ್ಕಿಸಲು ಹಲವು ರಸ್ತೆಗಳನ್ನು ನಿರ್ಮಿಸಲಾಗಿದೆ ಎಂದರು. ರಸ್ತೆ ಮತ್ತು ಹೆದ್ದಾರಿ ಯೋಜನೆಗಳಿಗೆ ಹಣ ಹೂಡಿಕೆ ಮಾಡಲು ನಮಗೆ ಎಂದಿಗೂ ಸಂಪನ್ಮೂಲ ಕೊರತೆ ಬಾಧಿಸಿಲ್ಲ. ಈವರೆಗೆ ನಾನು ₹ 50 ಲಕ್ಷ ಕೋಟಿಯನ್ನು ಈ ಯೋಜನೆಗಳಿಗೆ ವಿನಿಯೋಗಿಸಿದ್ದೇನೆ. 2024ರ ಹೊತ್ತಿಗೆ ಭಾರತದ ಹೆದ್ದಾರಿಗಳನ್ನು ಅಮೆರಿಕದ ಹೆದ್ದಾರಿಗಳೊಂದಿಗೆ ಹೋಲಿಕೆ ಮಾಡಬಹುದಾಗಿದೆ ಎಂದು ನುಡಿದರು.

ಇದನ್ನೂ ಓದಿ: ಬೆಳಗಾವಿ: ಐದು ರಾಷ್ಟ್ರೀಯ ಹೆದ್ದಾರಿಗಳ ಲೋಕಾರ್ಪಣೆ; ಕರ್ನಾಟಕಕ್ಕೆ ವಿಶೇಷ ಯೋಜನೆಗಳನ್ನು ಘೋಷಿಸಿದ ನಿತಿನ್ ಗಡ್ಕರಿ

ಇದನ್ನೂ ಓದಿ: ಐದು ಹೆದ್ದಾರಿ ಯೋಜನೆ ಶಂಕುಸ್ಥಾಪನೆ ನೆರವೇರಿಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ; ಜಾರಕಿಹೊಳಿ‌ ಸಹೋದರರು ಕಾರ್ಯಕ್ರಮಕ್ಕೆ ಗೈರು