ಶವಸಂಸ್ಕಾರಕ್ಕೆ ಜಮೀನು ಬಿಡದ ಮಾಲೀಕ, ಗ್ರಾಮಸ್ಥರ ಕಿತ್ತಾಟ – ಬೇಸತ್ತ ಮಹಿಳೆಯರು ತಾವೇ ಅಂತ್ಯಸಂಸ್ಕಾರ ಮಾಡಿದರು!

| Updated By: ಆಯೇಷಾ ಬಾನು

Updated on: Feb 17, 2024 | 1:04 PM

ಬೆಳಗಾವಿ ತಾಲೂಕಿನ ಕಾವಳೇವಾಡಿ ಗ್ರಾಮದಲ್ಲಿ ಸ್ಮಶಾನವಿಲ್ಲದೆ, ಅಂತ್ಯಸಂಸ್ಕಾರ ಮಾಡಲಾಗದಂತಹ ಪರಿಸ್ಥಿತಿ ಇದೆ. ಹೀಗಾಗಿ ಗ್ರಾಮಸ್ಥರು ಜಮೀನೊಂದರಲ್ಲಿ ಅಂತ್ಯಸಂಸ್ಕಾರ ಮಾಡುತ್ತಿದ್ದರು. ಆದರೆ ಈಗ ಜಮೀನು ಮಾಲೀಕ ಕೋರ್ಟ್ ಆರ್ಡರ್ ತಂದಿದ್ದು ಶವಸಂಸ್ಕಾರಕ್ಕೆ ಅಡ್ಡಿ ಪಡಿಸಿದ್ದಾನೆ. ಗ್ರಾಮಸ್ಥರು-ಮಾಲೀನಕ ನಡುವೆ ಕಿತ್ತಾಟ ನಡೆದಿದ್ದು ಬೇಸತ್ತ ಮಹಿಳೆಯರು ತಾವೇ ಅಂತ್ಯಸಂಸ್ಕಾರ ಮಾಡಿದ್ದಾರೆ.

ಶವಸಂಸ್ಕಾರಕ್ಕೆ ಜಮೀನು ಬಿಡದ ಮಾಲೀಕ, ಗ್ರಾಮಸ್ಥರ ಕಿತ್ತಾಟ - ಬೇಸತ್ತ ಮಹಿಳೆಯರು ತಾವೇ ಅಂತ್ಯಸಂಸ್ಕಾರ ಮಾಡಿದರು!
ತುಕಾರಾಮ್ ಮೋರೆ, ಮೃತ ವ್ಯಕ್ತಿ
Follow us on

ಬೆಳಗಾವಿ, ಫೆ.17: ಸ್ಮಶಾನ ವಿಲ್ಲದ ಕಾರಣ ಈ ಹಿಂದೆ ಜಮೀನೊಂದರಲ್ಲಿ ಅಂತ್ಯಸಂಸ್ಕಾರ ನಡೆಸಲಾಗುತ್ತಿತ್ತು. ಆದರೆ ಈಗ ಜಮೀನಿನ ಮಾಲೀಕ (Land Owner) ಕೋರ್ಟ್ ಆರ್ಡರ್ ತಂದಿದ್ದು ಅಂತ್ಯಸಂಸ್ಕಾರಕ್ಕೆ (Last Rites) ಅಡ್ಡಿಪಡಿಸಿದ್ದಾನೆ. ಈ ಹಿನ್ನೆಲೆ ಕುಟುಂಬಸ್ಥರು, ಸಂಬಂಧಿಗಳು ಕಳೆದ ಎರಡು ಗಂಟೆಗಳಿಂದ ಸ್ಥಳದಲ್ಲಿ ಶವ ಇಟ್ಟು ಆಕ್ರೋಶ ಹೊರ ಹಾಕಿದ್ದರು. ಸದ್ಯ ಗಲಾಟೆಯಿಂದ ಬೇಸತ್ತ ಮಹಿಳೆಯರು ಮುನ್ನುಗ್ಗಿ ಅಂತ್ಯಸಂಸ್ಕಾರ ಮಾಡಿದ್ದಾರೆ. ಬೆಳಗಾವಿ (Belagavi) ತಾಲೂಕಿನ ಕಾವಳೇವಾಡಿ ಗ್ರಾಮದಲ್ಲಿ ಸ್ಮಶಾನವಿಲ್ಲದೆ, ಅಂತ್ಯಸಂಸ್ಕಾರ ಮಾಡಲಾಗದೆ ಪರದಾಡುವಂತಹ ಪರಿಸ್ಥಿತಿ ಇದೆ.

ತುಕಾರಾಮ್ ಮೋರೆ ಎನ್ನುವವರು ನಿನ್ನೆ ರಾತ್ರಿ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಇವರ ಅಂತ್ಯಸಂಸ್ಕಾರ ಮಾಡಲು ಕುಟುಂಬಸ್ಥರು ಜಮೀನಿನ ಬಳಿ ಚಿತೆ ಸಿದ್ದಗೊಳಿಸಿದ್ದರು. ಇನ್ನೇನು ಅಂತ್ಯಸಂಸ್ಕಾರ ಮಾಡಬೇಕು ಎನ್ನುವಷ್ಟರಲ್ಲಿ ಜಮೀನು ಮಾಲೀಕ ಆಕ್ಷೇಪ ವ್ಯಕ್ತಪಡಿಸಿದ್ದ. ನನ್ನ ಜಮೀನಿನಲ್ಲಿ ಅಂತ್ಯಸಂಸ್ಕಾರ ಮಾಡಬೇಡಿ ಎಂದು ಕೋರ್ಟ್ ಆರ್ಡರ್ ತಂದಿದ್ದಾನೆ. ಆದರೆ ಈ ಹಿಂದಿನಿಂದಲೂ ಇದೇ ಜಾಗದಲ್ಲಿ ಅಂತ್ಯ ಸಂಸ್ಕಾರ ಮಾಡಲಾಗುತ್ತಿದೆ. ಇಲ್ಲೇ ಮೃತ ವ್ಯಕ್ತಿಯ ಅಂತ್ಯಕ್ರಿಯೆ ಮಾಡುತ್ತೇವೆ ಎಂದು ಗ್ರಾಮಸ್ಥರು ಪಟ್ಟು ಹಿಡಿದಿದ್ದರು. ವಿವಾದಿತ ಜಾಗದಲ್ಲೇ ಶವ ಇಟ್ಟು ಗ್ರಾಮಸ್ಥರು ಧರಣಿ ನಡೆಸಿದ್ದರು.

ಇದನ್ನೂ ಓದಿ: ಮಂಗಳೂರುನಲ್ಲಿಂದು ರಾಜ್ಯ ಕಾಂಗ್ರೆಸ್ ಕಾರ್ಯಕರ್ತರ ಬೃಹತ್ ಸಮಾವೇಶ, ಸಿದ್ಧತೆ ವೀಕ್ಷಿಸಿದ ಡಿಕೆ ಶಿವಕುಮಾರ್

ಪೊಲೀಸರಿಂದ ಮಾಲೀಕನ ಮನವೊಲಿಕೆ ಪ್ರಯತ್ನ

ಇನ್ನು ಪ್ರತಿಭಟನೆ ಕಾವು ಹೆಚ್ಚಾಗುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಜಮೀನು ಮಾಲೀಕನ ಮನವೊಲಿಸುವ ಪ್ರಯತ್ನ ಮಾಡಿದ್ದರು. ಸ್ಮಶಾನ ಭೂಮಿ ಇಲ್ಲದ ಕಾರಣ ವೋಮಿನಿ ಗಾವಡೆ ಎಂಬುವವರ ಜಾಗದಲ್ಲಿ ಅಂತ್ಯಕ್ರಿಯೆ ನಡೆಸಲಾಗುತ್ತಿತ್ತು. ಕೆಲ ದಿನಗಳ ಹಿಂದೆ ಕೋರ್ಟ್ ಮೊರೆ ಹೋಗಿದ್ದ ವೋಮನಿ ಗಾವಡೆ ಅವರ ಪರ ಕೋರ್ಟ್ ಆದೇಶ ಬಂದಿದೆ. ಈ ಮೊದಲು ಇದೇ ಜಾಗದಲ್ಲಿ ಗ್ರಾಮಸ್ಥರು ಅಂತ್ಯಕ್ರಿಯೆ ನೆರವೇರಿಸುತ್ತಿದ್ದರು. ಸದ್ಯ ಅಂತ್ಯ ಸಂಸ್ಕಾರಕ್ಕೆ ಬಂದ ಗ್ರಾಮಸ್ಥರು ಶವ ಇಟ್ಟುಕೊಂಡು ಧರಣಿ ನಡೆಸುತ್ತಿದ್ದರು. ಜಮೀನು ಮಾಲೀಕ, ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು.

ಮಹಿಳೆಯರಿಂದಲೇ ಅಂತ್ಯಸಂಸ್ಕಾರ

ಇನ್ನು ಸ್ಥಳದಲ್ಲಿ ಯಾವುದೇ ರೀತಿಯ ರಾಜಿ-ಪಂಚಾಯಿತಿ ಆಗದ ಹಿನ್ನಲೆ ಬೇಸತ್ತ ಮಹಿಳೆಯರು ತಾವೇ ಮುಂದೆ ಬಂದು ಅಂತ್ಯಸಂಸ್ಕಾರ ಮಾಡಿದ್ದಾರೆ. ತಾವೇ ಶವ ಹೊತ್ತು ತಂದು ಚಿತೆಯ ಮೇಲಿಟ್ಟು ಅಂತ್ಯಸಂಸ್ಕಾರ ಮಾಡಿದ್ದಾರೆ. ಪುರುಷರನ್ನ ಬಿಟ್ಟು ತಾವೇ ಪೂಜೆ ಸಲ್ಲಿಸಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ