
ಬೆಂಗಳೂರು, ಜೂನ್ 4: ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (KIA) ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು ಹಾಗೂ ವಿಮಾನ ಪ್ರಯಾಣಿಕರು ನಾಳೆ (ಶುಕ್ರವಾರ) ತೀವ್ರ ಜಾಗ್ರತೆ ವಹಿಸಬೇಕಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೆಐಎಡಿಬಿ (KIADB) ಭೂಸ್ವಾಧೀನ ಪ್ರಕ್ರಿಯೆ ಖಂಡಿಸಿ ರೈತರು ಹಮ್ಮಿಕೊಂಡಿರುವ ಬೃಹತ್ ‘ವಿಧಾನಸೌಧ ಚಲೋ’ ಪ್ರತಿಭಟನೆಯಿಂದಾಗಿ ನಾಳೆ ಇಡೀ ಏರ್‌ಪೋರ್ಟ್ ರಸ್ತೆ ಬಂದ್ ಆಗುವ ಅಥವಾ ಭಾರಿ ಪ್ರಮಾಣದಲ್ಲಿ ಸಂಚಾರ ದಟ್ಟಣೆ (Traffic Jam) ಉಂಟಾಗುವ ಸಾಧ್ಯತೆಯಿದೆ. ಹೀಗಾಗಿ ವಿಮಾನ ನಿಲ್ದಾಣಕ್ಕೆ ಹೋಗುವವರು ನಿಗದಿತ ಸಮಯಕ್ಕಿಂತ ಸಾಕಷ್ಟು ಮುಂಚಿತವಾಗಿಯೇ ಹೊರಡುವುದು ಉತ್ತಮ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಹೋಬಳಿಯ 13 ಹಳ್ಳಿಗಳ ರೈತರು ಕಳೆದ 80 ದಿನಗಳಿಂದ ಜಿಲ್ಲಾಡಳಿತ ಭವನದ ಮುಂದೆ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದಾರೆ. ಜಂಗಮಕೋಟೆ ಭಾಗದ ಸುಮಾರು 2,800 ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಕೈಗಾರಿಕೆಗಳ ಸ್ಥಾಪನೆಗಾಗಿ ಭೂಸ್ವಾಧೀನ ಮಾಡಿಕೊಳ್ಳಲು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (KIADB) ಮುಂದಾಗಿದೆ. ಸರ್ಕಾರದ ಈ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ರೈತರು, ಈ ಪ್ರಕ್ರಿಯೆಯನ್ನು ತಕ್ಷಣವೇ ಕೈಬಿಡಬೇಕೆಂದು ಆಗ್ರಹಿಸಿ ಈಗ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘದ (ಕೋಡಿಹಳ್ಳಿ ಚಂದ್ರಶೇಖರ್ ಬಣ) ನೇತೃತ್ವದಲ್ಲಿ ಈ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡಿದೆ.
ನಾಳೆ ಬೆಳಿಗ್ಗೆ ಚಿಕ್ಕಬಳ್ಳಾಪುರದಿಂದ ಹೊರಡಲಿರುವ ಈ ಬೃಹತ್ ಪ್ರತಿಭಟನಾ ಬೈಕ್ ರ್ಯಾಲಿಯಲ್ಲಿ 5,000 ಕ್ಕೂ ಹೆಚ್ಚು ರೈತರು ಭಾಗವಹಿಸಲಿದ್ದಾರೆ. ಈ ಮೆರವಣಿಗೆಯು ರಾಷ್ಟ್ರೀಯ ಹೆದ್ದಾರಿ ಮೂಲಕ ದೇವನಹಳ್ಳಿ, ಯಲಹಂಕ, ಹೆಬ್ಬಾಳ ಫ್ಲೈಓವರ್ ಹಾಗೂ ಮೇಖ್ರಿ ಸರ್ಕಲ್ ರಸ್ತೆಯ ಮೂಲಕ ವಿಧಾನಸೌಧವನ್ನು ತಲುಪಲಿದೆ. ಸಾವಿರಾರು ದ್ವಿಚಕ್ರ ವಾಹನಗಳು ಏಕಕಾಲದಲ್ಲಿ ಹೆದ್ದಾರಿಯಲ್ಲಿ ಸಂಚರಿಸುವುದರಿಂದ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುವ ಭೀತಿ ಎದುರಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಕುಸಿದು ಬಿದ್ದ ರಸ್ತೆ; ಫುಲ್ ಟ್ರಾಫಿಕ್ ಜಾಮ್, ವಿಡಿಯೋ ನೋಡಿ
ವಿಮಾನ ಪ್ರಯಾಣಿಕರು ಕೊನೆಯ ಕ್ಷಣದ ತಳಮಳ ತಪ್ಪಿಸಲು ರೈಲು ಸೌಲಭ್ಯ ಅಥವಾ ಪರ್ಯಾಯ ರಸ್ತೆಗಳನ್ನು ಬಳಸಲು ಹಾಗೂ ಅತ್ಯಂತ ಮುಂಚಿತವಾಗಿಯೇ ಮನೆಯಿಂದ ಹೊರಡಲು ಸಲಹೆ ನೀಡಲಾಗಿದೆ. ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ