ಬೆಂಗಳೂರು, ಅಕ್ಟೋಬರ್ 20: ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ ಬೆಂಗಳೂರಿನ (Bengaluru) ಪೊಲೀಸ್ ಪೇದೆಯೊಬ್ಬರ (Police Constable) ವಿರುದ್ಧ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿರುವ (Fraud) ಆರೋಪ ಕೇಳಿಬಂದಿದೆ. ನಗರ ಸಶಸ್ತ್ರ ಮೀಸಲು ಪ್ರಧಾನ ಕಚೇರಿ (CAR) ಹೆಡ್ಕಾನ್ಸ್ಟೇಬಲ್ ಆಗಿರುವ ಪ್ರಶಾಂತ್ ಕುಮಾರ್ ಅವರ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ. ಮಹಾಲಕ್ಷ್ಮೀಲೇಔಟ್ ನಿವಾಸಿ ಭಾಗ್ಯಮ್ಮ ಎಂಬವರು ದೂರು ನೀಡಿದ್ದಾರೆ. ದೂರು ಆಧರಿಸಿ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಪ್ರಶಾಂತ್ ಕುಮಾರ್ 2011ರಲ್ಲಿ ದೂರುದಾರೆ ಭಾಗ್ಯಮ್ಮ ಅವರಿಗೆ ಪರಿಚಯವಾಗಿದ್ದಾರೆ. “ತಮ್ಮ ಇಬ್ಬರು ಮಕ್ಕಳಿಗೆ ಸರ್ಕಾರಿ ಕೆಲಸ ಕೊಡಿಸಿ” ಎಂದು ದೂರುದಾರೆ ಭಾಗ್ಯಮ್ಮ ಪ್ರಶಾಂತ್ ಕುಮಾರ್ ಅವರಿಗೆ ಹೇಳಿದ್ದಾರೆ. ಅದಕ್ಕೆ ಪ್ರಶಾಂತ್ ಕುಮಾರ್ “ನನಗೆ ಹಲವು ಸರ್ಕಾರಿ ಅಧಿಕಾರಿಗಳು ಪರಿಚಯ ಇದ್ದಾರೆ. ನಿಮ್ಮ ಇಬ್ಬರು ಮಕ್ಕಳಿಗೆ ಕೆಲಸ ಕೊಡಿಸುತ್ತೇನೆ” ಎಂದಿದ್ದರು.
ಕೆಲ ದಿನಗಳ ಬಳಿಕ ದೂರುದಾರೆ ಭಾಗ್ಯಮ್ಮ ಅವರನ್ನು ಮನೆಗೆ ಕರೆಸಿಕೊಂಡ ಪೇದೆ ಪ್ರಶಾಂತ್ ಕುಮಾರ್ “ನಿಮ್ಮ ಇಬ್ಬರು ಮಕ್ಕಳಿಗೆ ಮೂರು ತಿಂಗಳಲ್ಲಿ ಎಫ್ಡಿಎ, ಎಸ್ಡಿಎ ಶ್ರೇಣಿಯ ಕೆಲಸ ಕೊಡಿಸುವುದಾಗಿ” ಭರವಸೆ ನೀಡಿದ್ದಾರೆ. ಇದಕ್ಕಾಗಿ 25 ಲಕ್ಷ ರೂ. ಬೇಡಿಕೆ ಇಟ್ಟಿದ್ದಾರೆ.
ಇದನ್ನೂ ಓದಿ: ಚಾಮರಾಜಪೇಟೆ ಅಂಚೆ ಕಚೇರಿ ಮೇಲೆ ಸಿಸಿಬಿ ದಾಳಿ: ಸ್ಪೋಟಕ ವಿಚಾರ ಬಹಿರಂಗ
ನಂತರ, ಪೇದೆ ಪ್ರಶಾಂತ್ ಕುಮಾರ್, ಮಂಜುನಾಥ್ ಪ್ರಸಾದ್ ಎಂಬುವರನ್ನು ತನ್ನ ಪಿಎ ಎಂದು ಭಾಗ್ಯಮ್ಮ ಅವರಿಗೆ ಪರಿಚಯ ಮಾಡಿಸಿದ್ದಾನೆ. ನಂತರ ಆರೋಪಿಗಳು ಭಾಗ್ಯಮ್ಮ ಅವರಿಂದ ಒಟ್ಟು 47 ಲಕ್ಷ ರೂ. ವಸೂಲಿ ಮಾಡಿದ್ದಾರೆ. ಜೊತೆಗೆ 857 ಗ್ರಾಂ. ಚಿನ್ನಾಭರಣವನ್ನೂ ಪಡೆದಿದ್ದಾರೆ. ಆದರೆ, ಇನ್ನೂವರೆಗೂ ಯಾವುದೇ ನೌಕರಿ ಕೊಡಿಸಿಲ್ಲ.
ಹೀಗಾಗಿ ಭಾಗ್ಯಮ್ಮ ಆರೋಪಿಗಳ ವಿರುದ್ಧ ನಂದಿನಿಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಸಿದ್ದಾರೆ. ಹೆಡ್ ಕಾನ್ಸ್ಟೇಬಲ್ ಪ್ರಶಾಂತ್ ಕುಮಾರ್, ಪತ್ನಿ ದೀಪಾ ಮತ್ತು ಮಂಜುನಾಥ್ ಪ್ರಸಾದ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ವಂಚನೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪ್ರಶಾಂತ್ ಕುಮಾರ್ ಅವರನ್ನು ಅಮಾನತು ಮಾಡಲಾಗಿದೆ. ಸದ್ಯ ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ