ಚಾಮರಾಜಪೇಟೆ ಅಂಚೆ ಕಚೇರಿ ಮೇಲೆ ಸಿಸಿಬಿ ದಾಳಿ: ಸ್ಪೋಟಕ ವಿಚಾರ ಬಹಿರಂಗ
ಇತ್ತೀಚಿಗೆ ಕೇಂದ್ರ ಅಪರಾಧ ವಿಭಾಗದ ಅಧಿಕಾರಿಗಳು ಬೆಂಗಳೂರಿನ ಚಾಮರಾಜಪೇಟೆ ಅಂಚೆ ಕಚೇರಿ ಮೇಲೆ ದಾಳಿ ಮಾಡಿದ್ದರು. ದಾಳಿ ವೇಳೆ ಅಂಚೆ ಮೂಲಕ ಬಂದ ಪ್ಯಾಕೆಟ್ಗಳಲ್ಲಿ ಡ್ರಗ್ಸ್ ಪತ್ತೆಯಾಗಿತ್ತು. ಇದರ ಮೂಲವನ್ನು ಪತ್ತೆ ಹಚ್ಚಲು ತನಿಖೆಗೆ ಇಳಿದ ಅಧಿಕಾರಿಗಳಿಗೆ ಸ್ಫೋಟಕ ವಿಚಾರಗಳು ತಿಳಿದಿವೆ.
ಬೆಂಗಳೂರು, ಅಕ್ಟೋಬರ್ 20: ಚಾಮರಾಜಪೇಟೆ ಅಂಚೆ ಕಚೇರಿ (Chamarajpet Post Office) ಮೇಲೆ ಕೇಂದ್ರ ಅಪರಾಧ ವಿಭಾಗ (CCB) ಅಧಿಕಾರಿಗಳ ದಾಳಿಯಿಂದ ಹಲವು ಸಂಗತಿಗಳು ಬಯಲಾಗಿವೆ. ಬೆಂಗಳೂರಿಗೆ (Bengaluru) ಕಾನೂನು ಬದ್ಧವಾಗಿಯೇ ಹೈ-ಎಂಡ್ ಡ್ರಗ್ಸ್ (Drugs) ಸಪ್ಲೈ ಆಗುತ್ತಿತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ.
ಕಳೆದ ತಿಂಗಳು ಸೆಪ್ಟೆಂಬರ್ 9ರಂದು ಚಾಮರಾಜಪೇಟೆ ಬಳಿಯ ಅಂಚೆ ಕಚೇರಿ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ಮಾಡಿದ್ದರು. ದಾಳಿ ವೇಳೆ ಮಾದಕ ವಸ್ತು ಇರುವ 606 ಪ್ಯಾಕೆಟ್ಗಳು ಪತ್ತೆಯಾಗಿದ್ದವು. ಈ ಮಾದಕ ವಸ್ತುಗಳ ಪ್ಯಾಕೆಟ್ಗಳನ್ನು ಸಿಸಿಬಿ ಅಧಿಕಾರಿಗಳು ಜಪ್ತಿ ಮಾಡಿ, ವಶಕ್ಕೆ ಪಡೆದುಕೊಂಡಿದ್ದರು.
ಈ ಪ್ಯಾಕೆಟ್ಗಳ ಮೂಲ ಪತ್ತೆ ಹಚ್ಚಲು ಸಿಸಿಬಿಯ ವಿಶೇಷ ತಂಡ ಕಾರ್ಯಾಚರಣೆಗೆ ಫೀಲ್ಡ್ಗೆ ಇಳಿಯಿತು. ತನಿಖೆ ವೇಳೆ ಎಲ್ಲ ಪ್ಯಾಕೆಟ್ಗಳು ವಿದೇಶದಿಂದ ಬಂದಿರುವುದು ತಿಳಿದಿದೆ. ಆದರೆ, ಯಾವ ಯಾವ ದೇಶದಿಂದ ಬರುತ್ತಿದ್ದವು ಎಂದು ತಿಳಿಯಲು ಹೋದಾಗ, ಶಾಕ್ ಕಾದಿತ್ತು. ಈ ಎಲ್ಲ ಡ್ರಗ್ಸ್ ಪ್ಯಾಕೆಟ್ಗಳು ಥೈಲ್ಯಾಂಡ್, ಅಮೆರಿಕ, ಹಾಂಕಾಂಗ್, ಬ್ರಿಟನ್ನಿಂದ ಬಂದಿರುವುದು ಪತ್ತೆಯಾಗಿದೆ.
ಇದನ್ನೂ ಓದಿ: ಡ್ರಗ್ಸ್ ಕೇಸ್ನಲ್ಲಿ ಸ್ನೇಹಿತರು ಅರೆಸ್ಟ್, 1 ಕೋಟಿಗೂ ಅಧಿಕ ಮೌಲ್ಯದ ಮಾದಕ ವಸ್ತು ವಶ
ಪೆಡ್ಲರ್ಸ್ಗಳು ಆನ್ಲೈನ್ನಲ್ಲಿ ಬುಕ್ ಮಾಡಿ ಪೋಸ್ಟ್ ಮೂಲಕ ಡ್ರಗ್ಸ್ ತರಿಸಿಕೊಂಡಿರುವುದು ತಿಳಿದಿದೆ. ಈ ಡ್ರಗ್ಸ್ ಅನ್ನು ಹಾಂಕಾಂಗ್, ಥೈಲ್ಯಾಂಡ್, ಅಮೆರಿಕದ ಗಾಂಜಾ ಮಾರಾಟಗಾರರು ಕಳುಹಿಸುತ್ತಿದ್ದರು. ಅಲ್ಲಿ ಡ್ರಗ್ಸ್ ಸರಬರಾಜು ಕಾನೂನು ಬದ್ಧವಾಗಿದೆ. ಈ ಪ್ಯಾಕೆಟ್ಗಳು ಬೆಂಗಳೂರಿನ ಚಾಮರಾಜಪೇಟೆ ಬಳಿಯ ಅಂಚೆ ಕಚೇರಿಗೆ ಬರುತ್ತಿದ್ದವು.
ಈ ಸಂಬಂಧ ಸಿಸಿಬಿ ಅಧಿಕಾರಿಗಳು ಒಟ್ಟು 12 ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಿಸಿಬಿ ತಂಡ ಕೆಲ ಪೆಡ್ಲರ್ಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಪೆಡ್ಲರ್ಗಳ ವಿಚಾರಣೆ ವೇಳೆ ಹಾಂಕಾಂಗ್, ಥೈಲ್ಯಾಂಡ್, ಅಮೆರಿಕಗೆ ಲಿಂಕ್ ಇರುವುದು ಪತ್ತೆಯಾಗಿದೆ. ಸಿಸಿಬಿ ವಿಶೇಷ ತಂಡ ಸದ್ಯ ಅಂತಾರಾಷ್ಟ್ರೀಯ ಡ್ರಗ್ ನೆಟ್ವರ್ಕ್ ಬಗ್ಗೆ ತನಿಖೆ ನಡೆಸುತ್ತಿದೆ.
21 ಕೋಟಿ ಮೌಲ್ಯದ ಡ್ರಗ್ಸ್ ಪತ್ತೆ
ಸಿಸಿಬಿ ಅಧಿಕಾರಿಗಳು ಶ್ವಾನದಳದ ಸಹಾಯದಿಂದ ಅಂಚೆ ಕಚೇರಿಯಲ್ಲಿ ಸುಮಾರು 3500 ಪೋಸ್ಟ್ಗಳನ್ನ ಪರಿಶೀಲನೆ ನಡೆಸಿದರು. ಈ ವೇಳೆ ಯುಸ್, ಯುಕೆ, ಬೆಲ್ಜಿಯಂ, ಥೈಲ್ಯಾಂಡ್, ನೆದರಲ್ಯಾಂಡ್ ಹಾಗೂ ಇತರೆ ದೇಶಗಳಿಂದ ಬಂದಿರುವ 606 ಪೋಸ್ಟ್ಗಳಲ್ಲಿ ಬರೋಬ್ಬರಿ 21 ಕೋಟಿ ರೂ. ಮೌಲ್ಯದ ವಿವಿಧ ಬಗೆಯ ಐಷಾರಾಮಿ ಡ್ರಗ್ಸ್ಗಳು ಪತ್ತೆಯಾಗಿದ್ದವು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:15 am, Sun, 20 October 24