ಬೆಂಗಳೂರು: ಡ್ರಗ್ಸ್ ಕೇಸ್ನಲ್ಲಿ ಸ್ನೇಹಿತರು ಅರೆಸ್ಟ್, 1 ಕೋಟಿಗೂ ಅಧಿಕ ಮೌಲ್ಯದ ಮಾದಕ ವಸ್ತು ವಶ
ಬೆಂಗಳೂರು ನಗರದಲ್ಲಿ ಡ್ರಗ್ಸ್ ಹಾವಳಿ ಮಿತಿ ಮೀರಿದೆ. ಬೆಂಗಳೂರಿನಲ್ಲಿ ಡ್ರಗ್ಸ್ ಮಾಫಿಯಾವನ್ನು ಮಟ್ಟ ಹಾಕಲು ಪೊಲೀಸರು ಟೊಂಕ ಕಟ್ಟಿ ನಿಂತಿದ್ದಾರೆ. ಇದೀಗ, ನಗರದಲ್ಲಿ ಡ್ರಗ್ಸ್ ಸರಬರಾಜು ಮಾಡುತ್ತಿದ್ದ ಸ್ನೇಹಿತರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಒಂದು ಕೋಟಿಗೂ ಅಧಿಕ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ.
ಬೆಂಗಳೂರು, ಸೆಪ್ಟೆಂಬರ್ 23: ಡ್ರಗ್ಸ್ ಪೆಡ್ಲಿಂಗ್ (Drug Peddling) ಮಾಡುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು (CCB Police) ಬೆಂಗಳೂರು (Bengaluru) ಗ್ರಾಮಾಂತರ ಜಿಲ್ಲೆಯ ಯರಪ್ಪನಹಳ್ಳಿ ಗ್ರಾಮದಲ್ಲಿ ಬಂಧಿಸಿದ್ದಾರೆ. ಆಫ್ರಿಕಾ ಮೂಲದ ಮೈಕಲ್ ಓಕೆಲಿ, ಮತ್ತು ಬೆಂಗಳೂರಿನ ಸಹನಾ ಬಂಧಿತ ಆರೋಪಿಗಳು. ಬಂಧಿತರಿಂದ ಒಂದು ಕೋಟಿಗೂ ಅಧಿಕ ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ.
ಆರೋಪಿ ಮೈಕೆಲ್ 2018ರಲ್ಲಿ ಬ್ಯುಸಿನೆಸ್ ವೀಸಾದಲ್ಲಿ ಭಾರತಕ್ಕೆ ಬಂದು, ಕೆ.ಆರ್.ಪುರಂನಲ್ಲಿ ಬಾಡಿಗೆ ಮನೆ ಮಾಡಿಕೊಂಡು ಇದ್ದನು. ಸಹನಾ ಮತ್ತು ಮೈಕಲ್ ಸ್ನೇಹಿತರಾಗಿದ್ದು, ಒಟ್ಟಿಗೆ ಡ್ರಗ್ಸ್ ಪೆಡ್ಲಿಂಗ್ ಮಾಡುತ್ತಿದ್ದರು. ನಂತರ, ಮೈಕಲ್ ಮತ್ತು ಸಹನಾ ಒಟ್ಟಿಗೆ ಕೆಆರ್ಪುರಂನಿಂದ ಯರಪ್ಪನಹಳ್ಳಿ ಗ್ರಾಮಕ್ಕೆ ಶಿಫ್ಟ್ ಆಗಿದ್ದಾರೆ. ಇಲ್ಲಿ, ಒಂದೇ ಮನೆಯಲ್ಲಿ ವಾಸವಾಗಿದ್ದ ಮೈಕಲ್ ಮತ್ತು ಸಹನಾ, ಇಲ್ಲಿಂದಲೇ ಡ್ರಗ್ಸ್ ಸರಬರಾಜು ಮಾಡಲು ಆರಂಭಿಸಿದರು.
ಇದನ್ನೂ ಓದಿ: FSL ತಜ್ಞರಿಗೆ ತಲೆನೋವಾದ ಬೆಂಗಳೂರು ಮಹಾಲಕ್ಷ್ಮೀ ಕೊಲೆ, ಪತ್ತೆಯಾಗದ ರಕ್ತದ ಕಲೆ!
ಸಿಸಿಬಿ ಪೊಲೀಸರು ಜುಲೈನಲ್ಲಿ ಓರ್ವ ಡ್ರಗ್ಸ್ ಪೆಡ್ಲರ್ನನ್ನು ಬಂಧಿಸಿದ್ದರು. ಈತ ನೀಡಿದ ಮಾಹಿತಿ ಆಧರಿಸಿ ಸಿಸಿಬಿ ಪೊಲೀಸರು ಮೈಕಲ್ನ ಬಂಧನಕ್ಕೆ ಬಲೆಬೀಸಿದರು. ಆರೋಪಿ ಮೈಕಲ್ ಯರಪ್ಪನಹಳ್ಳಿ ಗ್ರಾಮದಲ್ಲಿರುವ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಆತನ ಮನೆ ಮೇಲೆ ದಾಳಿ ಮಾಡಿದರು. ಬಳಿಕ ಇಬ್ಬರನ್ನೂ ಬಂಧಿಸಿದ್ದಾರೆ. ಬಂಧಿತರಿಂದ ಒಂದು ಕೆಜಿಗೂ ಅಧಿಕ ಎಂಡಿಎಂಎ, ಮೂರು ಮೊಬೈಲ್, ಎರಡು ಎಲೆಕ್ಟ್ರಾನಿಕ್ ತೂಕದ ಯಂತ್ರವನ್ನು ಸಿಸಿಬಿ ಪೊಲೀಸರುಸ ವಶಕ್ಕೆ ಪಡೆದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:37 pm, Mon, 23 September 24