FSL ತಜ್ಞರಿಗೆ ತಲೆನೋವಾದ ಬೆಂಗಳೂರು ಮಹಾಲಕ್ಷ್ಮೀ ಕೊಲೆ, ಪತ್ತೆಯಾಗದ ರಕ್ತದ ಕಲೆ!
Bengaluru Mahalaxmi Murder Case: ದೆಹಲಿ ಶ್ರದ್ಧಾ ಕೊಲೆ ಮಾದರಿಯಲ್ಲಿ ಬೆಂಗಳೂರಿನಲ್ಲೂ ನಡೆದಿದೆ. ಬೆಂಗಳೂರು ನಗರದ ವೈಯಾಲಿಕಾವಲ್‌ನಲ್ಲಿ ವಾಸವಿದ್ದ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿ, 30ಕ್ಕೂ ಹೆಚ್ಚು ತುಂಡು ಮಾಡಿ ಪ್ರೀಜರ್ನಲ್ಲಿ ತುಂಬಲಾಗಿತ್ತು. ಈ ಕೊಲೆ ಪ್ರಕರಣದ ತನಿಖೆ ವೇಳೆ ಪೊಲೀಸರಿಗೆ ಹಲವು ವಿಚಾರ ತಿಳಿದಿದೆ.
ಬೆಂಗಳೂರು, ಸೆಪ್ಟೆಂಬರ್ 23: ಬೆಂಗಳೂರು ನಗರದ ವೈಯಾಲಿಕಾವಲ್‌ನಲ್ಲಿ ವಾಸವಿದ್ದ ಮಹಾಲಕ್ಷ್ಮೀ ಕೊಲೆ (Bengaluru Mahalaxmi Murder Case) ಪ್ರಕರಣ ವಿಧಿ ವಿಜ್ಞಾನ ಪ್ರಯೋಗಾಲಯ (FSL) ತಜ್ಞರಿಗೆ ತಲೆ ನೋವಾಗಿ ಪರಿಣಮಿಸಿದೆ. ಕೊಲೆಯಾದ ಮಹಾಲಕ್ಷ್ಮೀ ಮನೆಯನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿದರೂ ಎಫ್ಎಸ್ಎಲ್ ತಜ್ಞರಿಗೆ ರಕ್ತದ ಕಲೆಗಳು ಮತ್ತು ದೇಹ ಕತ್ತರಿಸಿದ ಸ್ಥಳದ ಗುರುತುಗಳು ಪತ್ತೆಯಾಗಿಲ್ಲ. ಕೊಲೆ ಆರೋಪಿ ಯಾವುದೇ ಗುರುತು ಸಿಗದಂತೆ ಮನೆಯನ್ನು ಸ್ವಚ್ಛ ಮಾಡಿ, ಪರಾರಿಯಾಗಿದ್ದಾನೆ.
ರಕ್ತದ ಕಲೆ ಹೇಗೆ ಪತ್ತೆ ಹಚ್ಚುತ್ತಾರೆ?
ಕೊಲೆ ನಡೆದ ಸ್ಥಳದಲ್ಲಿ, ರಕ್ತ ಕಾಣಬಾರದೆಂದು ಸ್ವಚ್ಛ ಮಾಡಿದ ಮೇಲೂ ಕಲೆಗಳನ್ನು ಪತ್ತೆ ಹಚ್ಚಬಹುದು. ಎಫ್ಎಸ್ಎಲ್ ತಜ್ಞನರು ಲುಮಿನಾಲ್ ಎಂಬ ಕೆಮಿಕಲ್ ಬಳಸಿ ರಕ್ತದ ಕಲೆಗಳನ್ನು ಪತ್ತೆ ಹಚ್ಚುತ್ತಾರೆ. 200 ದಿನಗಳ ಹಿಂದಿನ ರಕ್ತದ ಕಲೆಗಳನ್ನೂ ಸಹ ಲುಮಿನಾಲ್ ಕೆಮಿಕಲ್ ಬಳಸಿ ಪತ್ತೆ ಮಾಡಬಹುದು.
ಆದರೆ, ಮಹಾಲಕ್ಷ್ಮೀ ಕೊಲೆ ಪ್ರಕರಣದಲ್ಲಿ ಲುಮಿನಾಲ್ ಕೆಮಿಕಲ್ ಬಳಸಿದರೂ ರಕ್ತದ ಕಲೆಗಳು ಪತ್ತೆಯಾಗಿಲ್ಲ. ಹೀಗಾಗಿ ಕೊಲೆ ಆರೋಪಿ ಯಾವುದೊ ಕೆಮಿಕಲ್ ಬಳಸಿ ಮನೆ ಸ್ವಚ್ಛ ಮಾಡಿರುವ ಶಂಕೆ ಪೊಲೀಸರಿಗೆ ಬಂದಿದೆ. ಇನ್ನು, ಆರೋಪಿ ಮಹಾಲಕ್ಷ್ಮೀಯನ್ನು ಕೊಲೆ ಮಾಡಲು, ಪಕ್ಕಾ ಪ್ಲ್ಯಾನ್ ಮಾಡಿದ್ದಾನೆ. ಕೊಲೆ ಮಾಡಿದ ಬಳಿಕ ಸಾಕ್ಷ್ಯ ಹೇಗೆ ನಾಶ ಮಾಡಬೇಕು ಎಂಬುವುದನ್ನೂ ಮುಂಚೆಯೇ ಅಧ್ಯಯನ ಮಾಡಿದ್ದಾನೆ ಎಂಬ ಶಂಕೆ ತನಿಖಾಧಿಕಾರಿಗಳಿಗೆ ವ್ಯಕ್ತವಾಗಿದೆ.
ಇದನ್ನೂ ಓದಿ: ಬೆಂಗಳೂರು ಮಹಾಲಕ್ಷ್ಮೀ ಕೊಲೆ: ಸ್ನೇಹಿತ ಅಶ್ರಫ್ ಸೇರಿದಂತೆ ನಾಲ್ವರ ಮೇಲೆ ಕುಟುಂಬಸ್ಥರ ಅನುಮಾನ
ಮಹಾಲಕ್ಷ್ಮೀ ಸಂಪರ್ಕದಲ್ಲಿದ್ದ ಆಶ್ರಫ್
ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಪೊಲೀಸರು ಕಟಿಂಗ್ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದ ಅಶ್ರಫ್ ಎಂಬಾತನನ್ನು, ಕರೆದು ವಿಚಾರಣೆ ಮಾಡಿದ್ದಾರೆ. ವಿಚಾರಣೆ ವೇಳೆ ಆಶ್ರಫ್, ಮಹಾಲಕ್ಷ್ಮೀ ಜೊತೆ ಸಂಪರ್ಕದಲ್ಲಿದ್ದೆ ಎಂದು ಹೇಳಿದ್ದಾನೆ. “ಮಹಾಲಕ್ಷ್ಮೀ ಜೊತೆ ಸಂಪರ್ಕ ಇದ್ದಿದ್ದು ನಿಜ. ಆದರೆ ನಾನು ಕೊಲೆ ಮಾಡಿಲ್ಲ. ಆರು ತಿಂಗಳ ಹಿಂದೆ ಆಕೆ ಜೊತೆ ಸಂಪರ್ಕ ಇತ್ತು. ಈಗ ದೂರ ಆಗಿದ್ದೆ. ನಮ್ಮ ಇಬ್ಬರ ವಿಚಾರ ಕುಟುಂಬಸ್ಥರಿಗೆ ಗೊತ್ತಾಗಿ ಜಗಳವಾದ ಮೇಲೆ ಆಕೆಯ ತಂಟೆಗೆ ಹೋಗಿಲ್ಲ. ಈ ಕೊಲೆಗು, ನನಗು ಯಾವುದೇ ಸಂಬಂಧ ಇಲ್ಲ” ಎಂದು ಹೇಳಿದ್ದಾನೆ.
ಬಳಿಕ, ಪೊಲೀಸರು ಅಶ್ರಫ್ ಮೊಬೈಲ್ ಪರಿಶೀಲಿಸಿದಾಗ, ಇಬ್ಬರ ಮಧ್ಯೆ ಕಳೆದ ಆರು ತಿಂಗಳಿಂದ ಸಂಪರ್ಕ ಇಲ್ಲದಿರುವುದು ತಿಳಿದಿದೆ. ಸದ್ಯ ಪೊಲೀಸರು ಅಶ್ರಫ್ನನ್ನು ಬಿಟ್ಟು ಕಳಿಸಿದ್ದಾರೆ.
ಮಹಾಲಕ್ಷ್ಮೀಯ ಮೊಬೈಲ್ ಪತ್ತೆ
ಮಹಾಲಕ್ಷ್ಮೀ ಮನೆಯಲ್ಲೇ ಆಕೆಯ ಮೊಬೈಲ್ ಪತ್ತೆಯಾಗಿದೆ. ಮೊಬೈಲ್ ಸ್ವಿಚ್ ಆಫ್ ಆಗಿದೆ. ಮೊಬೈಲ್ ವಶಕ್ಕೆ ಪಡೆದ ಪೊಲೀಸರು, ಪರಿಶೀಲನೆ ನಡೆಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:38 am, Mon, 23 September 24