ದೆಹಲಿ ಶ್ರದ್ಧಾ ವಾಕರ್ ರೀತಿಯಲ್ಲೇ ಬೆಂಗಳೂರಿನಲ್ಲಿ ಭಯಾನಕ ಕೊಲೆ: ಯುವತಿಯ ಹತ್ಯೆಗೈದು 30ಕ್ಕೂ ಹೆಚ್ಚು ತುಂಡು ಮಾಡಿ ಫ್ರಿಡ್ಜ್ನಲ್ಲಿಟ್ಟ ಆರೋಪಿ
ದೆಹಲಿಯ ಶ್ರದ್ಧಾ ವಾಕರ್ ಕೊಲೆಯ ರೀತಿಯಲ್ಲೇ ಬೆಂಗಳೂರು(Bengaluru) ನಗರದ ಪೈಪ್ ಲೈನ್ ರಸ್ತೆಯ ವೀರಣ್ಣ ಭವನ ಬಳಿಯ ಮನೆಯೊಂದರಲ್ಲಿ ಯುವತಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಆರೋಪಿಯು ಯುವತಿಯನ್ನು ಕೊಲೆಗೈದು ಪೀಸ್ ಪೀಸ್ ಮಾಡಿ ಫ್ರಿಜ್‌ನಲ್ಲಿ ಇಟ್ಟಿದ್ದಾನೆ. ಸ್ಥಳಕ್ಕೆ ವೈಯಾಲಿಕಾವಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ವಿವರ ಇಲ್ಲಿದೆ.
ಬೆಂಗಳೂರು, ಸೆ.21: ದೇಶವನ್ನೇ ಬೆಚ್ಚಿಬೀಳಿಸಿದ್ದ ದೆಹಲಿಯ ಶ್ರದ್ಧಾ ವಾಕರ್ ಕೊಲೆಯ ರೀತಿಯಲ್ಲೇ ಬೆಂಗಳೂರಿನಲ್ಲಿಯೂ (Bengaluru) ಯುವತಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ನಗರದ ವೈಯಾಲಿಕಾವಲ್‌ನ ಪೈಪ್ ಲೈನ್ ರಸ್ತೆಯ ವೀರಣ್ಣ ಭವನ ಬಳಿಯ ಮನೆಯೊಂದರಲ್ಲಿ ಆರೋಪಿಯು ಯುವತಿಯನ್ನು ಕೊಲೆಗೈದು 30 ಕ್ಕೂ ಹೆಚ್ಚು ಪೀಸ್ ಪೀಸ್ ಮಾಡಿ ಫ್ರಿಜ್‌ನಲ್ಲಿ ಇಟ್ಟಿದ್ದಾನೆ. ಮೇಲ್ನೋಟಕ್ಕೆ ಹೊರ ರಾಜ್ಯದ ಸುಮಾರು 25 ರಿಂದ 26 ವಯಸ್ಸಿನ ಯುವತಿ ಎಂದು ಗುರುತಿಸಲಾಗಿದ್ದು, ಹತ್ತರಿಂದ ಹದಿನೈದು ದಿನಗಳ ಹಿಂದೆಯೇ ಹತ್ಯೆ ಮಾಡಲಾಗಿದೆ. ಸಧ್ಯ ಸ್ಥಳಕ್ಕೆ ವೈಯಾಲಿಕಾವಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಳೆದ ಎರಡು ದಿನಗಳಿಂದ ಮನೆಯಿಂದ ದುರ್ವಾಸನೆ ಬರುತ್ತಿದ್ದ ಹಿನ್ನಲೆ ಅದೇ ಬಿಲ್ಡಿಂಗ್ನ ಅಕ್ಕಪಕ್ಕದವರು ಇವತ್ತು ಸಂಬಂಧಿಕರಿಗೆ ಹೇಳಿದ್ದಾರೆ. ಅದರಂತೆ ಕೊಲೆಯಾದಂತಹ ಯುವತಿಯ ತಾಯಿ ಮತ್ತು ಅಕ್ಕ ಮನೆ ಬಳಿ ಬಂದು ಬೀಗ ಹೊಡೆದು ಒಳಹೋದಾಗ ಕೊಲೆಯಾಗಿರುವುದು ಬೆಳಕಿಗೆ ಬಂದಿದೆ.
ಇದನ್ನೂ ಓದಿ:ಚಿಕ್ಕಮಗಳೂರಲ್ಲೊಂದು ಅಮಾನುಷ ಘಟನೆ: 5 ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ ಹತ್ಯೆ
ಸಿಂಗಲ್ ಡೋರ್ನ 165 ಲೀಟರ್ಸ್ ಫ್ರೀಡ್ಜ್ನಲ್ಲಿ ಮೃತದೇಹದ ತುಂಡು
ಈ ಕುರಿತು ಮಾತನಾಡಿದ ಕೇಂದ್ರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸತೀಶ್, ‘ಒರ್ವನೇ ಕೊಲೆ ಮಾಡಿದ್ದು, 30ಕ್ಕೂ ಹೆಚ್ಚು ಪೀಸ್ ಮಾಡಿ ಸಿಂಗಲ್ ಡೋರ್ನ 165 ಲೀಟರ್ಸ್ ಫ್ರೀಡ್ಜ್ನಲ್ಲಿ ಮೃತದೇಹದ ತುಂಡುಗಳನ್ನು ಇಡಲಾಗಿತ್ತು. ಮೃತ ಯುವತಿಯನ್ನು ಛತ್ತೀಸ್ಘಡ್ ಅಥವಾ ಪಶ್ಚಿಮ ಬಂಗಾಳ ಮೂಲದ ಮಹಾಲಕ್ಷ್ಮಿ ಎಂದು ಗುರುತಿಸಲಾಗಿದೆ. ಬೇರೆ ರಾಜ್ಯದವರು ಇಲ್ಲಿಯೇ ಸೆಟಲ್ ಆಗಿದ್ದವರು. ಗಂಡನ ಜೊತೆಗೆ ಬೇರೆಯಾಗಿದ್ದ ಮಹಿಳೆ, ಒಬ್ಬಳೆ ವಾಸವಾಗಿದ್ದಳು ಎಂದಿದ್ದಾರೆ.
8 ತಂಡಗಳನ್ನು ರಚಿಸಿ ಕೊಲೆ ಆರೋಪಿಗಾಗಿ ಹುಡುಕಾಟ
ಇನ್ನು ಮಹಿಳೆ ಕೊಲೆ ಆರೋಪಿಗಾಗಿ ವೈಯಾಲಿಕಾವಲ್, ಶೇಷಾದ್ರಿಪುರಂ ಹಾಗೂ ಹೈಗ್ರೌಂಡ್ಸ್ ಪೊಲೀಸರು ತನಿಖೆ ಆರಂಭಿಸಿದ್ದು, ಪೊಲೀಸರು 8 ತಂಡಗಳನ್ನು ರಚಿಸಿಕೊಂಡು ಹುಡುಕಾಟ ಶುರು ಮಾಡಿದ್ದಾರೆ. ಅನುಮಾನಿತ ವ್ಯಕ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿರುವ ಪೊಲೀಸರು, ಕುಟುಂಬಸ್ಥರ ಬಳಿಯೂ ಮಾಹಿತಿ ಕಲೆ ಹಾಕುತ್ತಿದ್ದಾರೆ. ಮಹಾಲಕ್ಷ್ಮೀ ಜೊತೆ ಸಂಪರ್ಕದಲ್ಲಿದ್ದ ಎಲ್ಲಾ ವ್ಯಕ್ತಿಗಳನ್ನು ವಿಚಾರಣೆ ನಡೆಸಲಾಗುತ್ತಿದೆ.
ರಾಜ್ಯದ ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:27 pm, Sat, 21 September 24