ಕರಾಳ ಭಾನುವಾರ: ಹಲವು ಅವಘಡ, ಕರ್ನಾಟಕದಲ್ಲಿ ಒಂದೇ ದಿನ 10 ಮಂದಿ ಸಾವು
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಹಲವು ಅವಘಡಗಳು ಸಂಭವಿಸಿದೆ. ಈ ಅವಘಡಗಳಲ್ಲಿ ಒಟ್ಟು 10 ಜನ ಮೃತಪಟ್ಟಿದ್ದಾರೆ. ಈ ಮೂಲಕ ರವಿವಾರ ರಾಜ್ಯಕ್ಕೆ ಕರಾಳ ದಿನವಾಗಿದೆ. ಧಾರವಾಡ, ಚಿತ್ರದುರ್ಗ, ಮಡಿಕೇರಿ, ದಾವಣಗೆರೆ ಮತ್ತು ರಾಮನಗರ ಜಿಲ್ಲೆಗಳಲ್ಲಿ ಅವಘಡಗಳು ಸಂಭವಿಸಿವೆ.
ಧಾರವಾಡ, ಅಕ್ಟೋಬರ್ 20: ಕರ್ನಾಟಕಕ್ಕೆ (Karnataka) ರವಿವಾರ (Sunday) ಕರಾಳ ದಿನವಾಗಿದೆ. ರಾಜ್ಯದ ವಿವಿಧಡೆ ಸಂಭವಿಸಿದ ಅವಘಡಗಳಲ್ಲಿ 10 ಜನರು ಮೃತಪಟ್ಟಿದ್ದಾರೆ. ಧಾರವಾಡ (Dharwad), ಹುಬ್ಬಳ್ಳಿ (Hubballi), ಮಡಿಕೇರಿ (Madikeri) ಮತ್ತು ಚಿತ್ರದುರ್ಗ (Chitradurga) ಜಿಲ್ಲೆಗಳಲ್ಲಿ ಅವಘಡಗಳು ಸಂಭವಿಸಿವೆ. ಧಾರವಾಡದ ಸಂಪಿಗೆ ನಗರದ ಬಳಿ ಲಾರಿ ಮತ್ತು ಆಟೋ ಮಧ್ಯೆ ಅಪಘಾತ ಸಂಭವಿಸಿ ಮೂವರು ಮೃಪಟ್ಟಿದ್ದಾರೆ. ಆಟೋ ಚಾಲಕ ರಮೇಶ್ ಹಂಚಿನಮನಿ (35), ಮರೆವ್ವ ಹಂಚಿನಮನಿ (55) ಪ್ರಣವ್ (06) ಮೃತ ದುರ್ದೈವಿಗಳು. ಮೃತರು ಕೆಲಗೇರಿ ಬಡಾವಣೆ ನಿವಾಸಿಗಳು ಎಂದು ತಿಳಿದು ಬಂದಿದೆ.
ಘಟನೆಯಲ್ಲಿ ರೇಣುಕಾ (25) ಮತ್ತು ಪೃಥ್ವಿ (4) ಎಂಬುವರಿಗೆ ಗಂಭೀರ ಗಾಯವಾಗಿದ್ದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಟೋ ರೈಲು ನಿಲ್ದಾಣಕ್ಕೆ ಹೊರಟಿತ್ತು. ದಾರಿ ಮಧ್ಯೆ ಬಿಡಾಡಿ ದನಗಳು ಮಲಗಿದ್ದವು. ದನಗಳಿಗೆ ತಪ್ಪಿಸಲು ಹೋಗಿ ಎದುರಿಗೆ ಬರುತ್ತಿದ್ದ ಲಾರಿಗೆ ಆಟೋ ಡಿಕ್ಕಿ ಹೊಡೆದಿದೆ. ಬಳಿಕ ಆಟೋ ಪಲ್ಟಿಯಾಗಿದೆ. ಸ್ಥಳದಲ್ಲೇ ರಮೇಶ್ ಮತ್ತು ಮರೆವ್ವ ಮೃತಪಟ್ಟಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಪ್ರಣವ್ ಮೃತಪಟ್ಟಿದ್ದಾನೆ. ಧಾರವಾಡ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಘಾತ: ಇಬ್ಬರು ಸಾವು
ಹುಬ್ಬಳ್ಳಿ: ಹುಬ್ಬಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು ಇಬ್ಬರು ಮೃಪಟ್ಟಿದ್ದಾರೆ. ಕಾರು ಡಿಕ್ಕಿಯಾಗಿ ಬೈಕ್ನಲ್ಲಿದ್ದ ಶಿವರಾಜ್, ಗದಿಗೆಪ್ಪ ಎಂಬುವರು ಸ್ಥಳದಲ್ಲೇ ಸಾವೀಗಿಡಾಗಿದ್ದಾರೆ. ಮೃತರು ಕುಂದಗೋಳ ಪಟ್ಟಣದ ಕುಂಬಾರ ಓಣಿ ನಿವಾಸಿಗಳು ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಉತ್ತರ ಸಂಚಾರಿ ಠಾಣೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ.
ಬೈಕ್ ಅಪಘಾತ, ಓರ್ವ ಸಾವು
ಮಡಿಕೇರಿ: ಟಿ.ಟಿ ವಾಹನ ಮತ್ತು ಸ್ಕೂಟಿ ನಡುವೆ ಅಪಘಾತ ಸಂಭವಿಸಿ ಓರ್ವ ಮೃತಪಟ್ಟಿರುವ ಘಟನೆ ಮಡಿಕೇರಿ ನಗರದ ಚೈನ್ ಗೇಟ್ ಬಳಿ ನಡೆದಿದೆ. ಬೈಕ್ ಸವಾರ ಗಜೇಶ್ವರ್ (42) ಮೃತ ದುರ್ದೈವಿ. ಬೈಕ್ ಹಿಂಬದಿ ಸವಾರ ಕಿಶೋರ್ ಎಂಬುವರಿಗೆ ಗಂಭೀರ ಗಾಯವಾಗಿದೆ. ಹೆಚ್ಚಿನ ಚಕಿತ್ಸೆಗಾಗಿ ಕಿಶೋರ್ ಅವರನ್ನು ಮಂಗಳೂರಿಗೆ ರವಾನಿಸಲಾಗಿದೆ.
ಇದನ್ನೂ ಓದಿ: ರಾಜಸ್ಥಾನದಲ್ಲಿ ಭೀಕರ ಅಪಘಾತ, ಆಟೋ-ಬಸ್ ನಡುವೆ ಡಿಕ್ಕಿ, 12 ಮಂದಿ ಸಾವು
ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರ ದುರ್ಮರಣ
ಚಿತ್ರದುರ್ಗ: ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ಮೃತಪಟ್ಟಿರುವ ಘಟನೆ ಹಿರಿಯೂರು ತಾಲೂಕಿನ ಕೃಷ್ಣಾಪುರ ಗ್ರಾಮದ ಜಯರಾಂ ಎಂಬುವರ ಅಡಕೆ ತೋಟದಲ್ಲಿ ನಡೆದಿದೆ. ಮಧ್ಯಪ್ರದೇಶ ಮೂಲದ ಮೋಹಿತ್ (24), ಕತರ್ವ (38) ಮೃತರು. ಜಯರಾಂ ಅವರ ಅಡಕೆ ತೋಟದಲ್ಲಿನ ಶ್ರೀಗಂಧ ಮರಗಳನ್ನು ಕಳ್ಳತನಕ್ಕೆ ಬಂದಿದ್ದರು ಎಂಬ ಶಂಕೆ ವ್ಯಕ್ತವಾಗಿದೆ. ಅಬ್ಬಿನಹೊಳೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಅಬ್ಬಿನಹೊಳೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿದ್ಯುತ್ ಶಾಕ್ನಿಂದ ಯುವಕ ಸಾವು
ಧಾರವಾಡ: ನೀರು ಕಾಯಿಸಲು ಕಾಯಿಲ್ ಅನ್ನು ಬೋರ್ಡ್ಗೆ ಸ್ವಿಚ್ ಮಾಡುವ ವೇಳೆ ಯುವಕ ಮೃತಪಟ್ಟಿರುವ ಘಟನೆ ಕುಂದಗೋಳ ತಾಲೂಕಿನ ಕುಂಕೂರ ಗ್ರಾಮದಲ್ಲಿ ನಡೆದಿದೆ. ಕುಂಕೂರ ನಿವಾಸಿ ಮೌಲಾಲಾ ದೊಡ್ಮನಿ (21) ಮೃತ ದುರ್ದೈವಿ. ಯುವಕ ಕುಂಕೂರ ಜಾಮೀಯಾ ಮಸೀದಿಯಲ್ಲಿ ಕೆಲಸ ಮಾಡುತ್ತಿದ್ದನು. ನೀರು ಕಾಯಿಸಲು ಹೋದಾಗ ಸ್ವಿಚ್ಗೆ ಕಾಯಿಲ್ ಹಾಕಲು ಹೋದಾಗ ದುರ್ಘಟನೆ ನಡೆದಿದೆ. ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸಾಲಭಾದೆ ತಾಳಲಾರದೆ ರೈತ ಅತ್ಮಹತ್ಯೆ
ದಾವಣಗೆರೆ: ಸಾಲಭಾದೆ ತಾಳಲಾರದೆ ರೈತ ಅತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚನ್ನಗಿರಿ ತಾಲೂಕಿನ ಕಬ್ಬಳ ಗ್ರಾಮದಲ್ಲಿ ನಡೆದಿದೆ. ಧನು ಕೆ (27) ಮೃತ ಯುವ ರೈತ. ರೈತ ಧನು ತನ್ನ ಒಂದು ಎಕರೆ ಜಮೀನಿನ ಜೊತೆಗೆ ನಾಲ್ಕು ಎಕರೆ ಜಮೀನನ್ನು ಗುತ್ತಿಗೆ ಪಡೆದು ಕೃಷಿ ಮಾಡುತ್ತಿದ್ದರು.
ಸರಿಯಾದ ಬೆಳೆ ಬಾರದೆ ಮತ್ತು ಬಂದ ಬೆಳೆಗೆ ಬೆಲೆ ಸಿಗದೆ ರೈತ ಧನು ಎರಡು ವರ್ಷಗಳಿಂದ ನಷ್ಟ ಅನುಭವಿಸಿದ್ದನು. ಖಾಸಗಿ ಚೀಟಿಗಳು, ಕೈಗಡ ಸಾಲ ಸೇರಿ ರೈತ ಧನು ಲಕ್ಷಾಂತರ ರೂಪಾಯಿ ಸಾಲ ಮಾಡಿದ್ದನು. ಸಾಲ ತೀರಿಸುವ ಚಿಂತೆಯಲ್ಲಿ ಮನನೊಂದು ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಸವಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಖಾಸಗಿ ಬಸ್ ಪಲ್ಟಿಯಾಗಿ 15ಕ್ಕೂ ಅಧಿಕ ಜನರಿಗೆ ಗಂಭೀರ ಗಾಯ
ರಾಮನಗರ: ಖಾಸಗಿ ಬಸ್ ಪಲ್ಟಿಯಾಗಿ ಕೋಡಿಹಳ್ಳಿ ಗ್ರಾಮದ 15ಕ್ಕೂ ಅಧಿಕ ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕನಕಪುರ ತಾಲೂಕಿನ ಸಂಗಮ ಬಳಿ ನಡೆದಿದೆ. ಮದುವೆಗೆ ಹೊರಟಿದ್ದ ಖಾಸಗಿ ಬಸ್ ಅತಿಯಾದ ವೇಗದಿಂದ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಗಾಯಾಳುಗಳನ್ನು ಕನಕಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ಬೆಂಗಳೂರಿನ ದಯಾನಂದ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಸಿಡಿಲು ಬಡಿದು 8 ಕುರಿಗಳು ಸಾವು
ಕಲಬುರಗಿ: ಯಡ್ರಾಮಿ ತಾಲೂಕಿನ ಮಾಗಣಗೇರಿ ಗ್ರಾಮದಲ್ಲಿ ಸಿಡಿಲು ಬಡಿದು 8 ಕುರಿಗಳು ಮೃತಪಟ್ಟಿದ್ದು, ಇಬ್ಬರು ಕುರಿಗಾಯಿಗಳಿಗೆ ಗಾಯವಾಗಿದೆ. ಕುರಿಗಾಹಿ ಕೆಂಚಪ್ಪ ಜಡಿ ಮತ್ತು ಮಂಜುನಾಥ್ ಕಡಕೋಳಗೆ ಸೇರಿದ ಕುರಿಗಳು ಮೃತಪಟ್ಟಿವೆ. ಶನಿವಾರ ಸಂಜೆ ಕುರಿಗಳನ್ನು ಹೊಡೆದುಕೊಂಡು ಜಮೀನಿನಿಂದ ಮನೆಗೆ ಬರುವಾಗ ಸಿಡಲು ಬಡಿದು ದುರಂತ ಸಂಭವಿಸಿದೆ. ಸಿಡಿಲಿನ ಹೊಡೆತದಿಂದ ಇಬ್ಬರು ಕುರಿಗಾಯಿಗಳು ಬಚಾವಾಗಿದ್ದಾರೆ. ಲಕ್ಷಾಂತರ ರೂಪಾಯಿ ಮೌಲ್ಯದ ಕುರಿಗಳು ಕಳೆದುಕೊಂಡು ಕರಿಗಾಹಿಗಳು ಕಂಗಾಲಾಗಿದ್ದಾರೆ. ಯಡ್ರಾಮಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:06 pm, Sun, 20 October 24