BDA: ಶಿವರಾಮ ಕಾರಂತ ಬಡಾವಣೆಗಾಗಿ ಭೂಸ್ವಾಧೀನ, ಬೆಳೆದು ನಿಂತ ಹಣ್ಣಿನ ಗಿಡಗಳನ್ನ ದಿಢೀರನೆ ಕತ್ತರಿಸಿ ಹಾಕಿದರು ಬಿಡಿಎ ಅಧಿಕಾರಿಗಳು

|

Updated on: Feb 25, 2023 | 9:48 AM

Shivaram Karanth Layout: ಬಿಡಿಎ 2008ರಲ್ಲಿ ಆದ ಅಧಿಸೂಚನೆಯನ್ನ ಗಮನದಲ್ಲಿಟ್ಟುಕೊಂಡು ರೈತರಿಗೆ ಯಾವುದೇ ನೋಟಿಸ್ ನೀಡಿಲ್ಲ, ಇವತ್ತು ಏಕಾಏಕಿ ಜೆಸಿಬಿ ಜೊತೆ ಬಂದು ರೈತರ ಜಮೀನು ನಾಶಪಡಿಸುತ್ತಿದ್ದಾರೆ.

BDA: ಶಿವರಾಮ ಕಾರಂತ ಬಡಾವಣೆಗಾಗಿ ಭೂಸ್ವಾಧೀನ, ಬೆಳೆದು ನಿಂತ ಹಣ್ಣಿನ ಗಿಡಗಳನ್ನ ದಿಢೀರನೆ ಕತ್ತರಿಸಿ ಹಾಕಿದರು ಬಿಡಿಎ ಅಧಿಕಾರಿಗಳು
ಶಿವರಾಮ ಕಾರಂತ ಬಡಾವಣೆಗಾಗಿ ಭೂಸ್ವಾಧೀನ, ಬೆಳೆದು ನಿಂತ ಹಣ್ಣಿನ ಗಿಡಗಳನ್ನ ದಿಢೀರನೆ ಕತ್ತರಿಸಿ ಹಾಕಿದರು ಬಿಡಿಎ ಅಧಿಕಾರಿಗಳು
Follow us on

ಅಲ್ಲಿನ ರೈತರು ತಮ್ಮ ಹತ್ತಾರು ಎಕರೆ ಜಮೀನಿನಲ್ಲಿ ಸೀಬೆ ಗಿಡಗಳನ್ನ (Guava) ನೆಟ್ಟು ಹತ್ತಾರು ವರ್ಷಗಳಿಂದ ಕಷ್ಟಪಟ್ಟು ತಮ್ಮ ಮಕ್ಕಳಂತೆ ಪಾಲನೆ ಪೋಷಣೆ ಮಾಡಿ ಬೆಳೆಸಿದ್ದರು. ಆದರೆ ನಿನ್ನೆ ಶುಕ್ರವಾರ ಬೆಳ್ಳಂಬೆಳಗ್ಗೆ ಜೆಸಿಬಿಯೊಂದಿಗೆ ಆಗಮಿಸಿದ ಬಿಡಿಎ (BDA) ಅಧಿಕಾರಿಗಳು ರೈತರಿಗೆ ಯಾವುದೇ ಮೂನ್ಸೂಚನೆಯನ್ನು ನೀಡದೆ ಆ ಮರಗಳನ್ನ ತೆರವುಗೊಳಿಸಿದ್ದಾರೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿ, ಇದು ಸಹಜವಾಗಿಯೇ ರೈತರ ಕೆಂಗಣ್ಣಿಗೆ ಗುರಿಯಾಗಿದೆ. ಹೌದು ಬೆಂಗಳೂರಿನ ಶಿವರಾಮ ಕಾರಂತ ಬಡಾವಣೆ (Shivaram Karanth Layout) ನಿರ್ಮಾಣಕ್ಕೆ ಭೂಸ್ವಾಧೀನ ಪಡಿಸಿಕೊಳ್ಳುವ ವಿಚಾರದಲ್ಲಿ ಹೈಡ್ರಾಮಾ ನಡೆದಿದ್ದು, ಶುಕ್ರವಾರ ಜೆಸಿಬಿ ಯೊಂದಿಗೆ ಬಿಡಿಎ ಅಧಿಕಾರಿಗಳು ರೈತರ ಕೃಷಿ ಜಮೀನು ತೆರವಿಗೆ ಮುಂದಾಗುತ್ತಿದ್ದಂತೆ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಜೆಸಿಬಿ ಮೂಲಕ ಬಿಡಿಎ ಅಧಿಕಾರಿಗಳು ಮರ ತೆರವಿಗೆ ಮುಂದಾಗುತ್ತಿದ್ದಂತೆ ರೈತರು ಪ್ರಶ್ನಿಸಿದ್ದಾರೆ. ಈ ವೇಳೆ ಅಧಿಕಾರಿಗಳು ಸುಪ್ರೀಂ ಕೋರ್ಟ್ ಆದೇಶ ಇದೆ. ಅಂತ ನಮ್ಮ ಜಮೀನಿನಲ್ಲಿರುವ ಸೀಬೆ, ಬಾಳೆ ತೋಟ ನಾಶ ಮಾಡಿದ್ದಾರೆ. ಇನ್ನು ಪ್ರಶ್ನಿಸಲು ಹೋದ ರೈತರ ಮೇಲೆ ಪೊಲೀಸರನ್ನ ಮುಂದೆ ಬಿಟ್ಟು ಹೆದರಿಸುತ್ತಿರುವುದಲ್ಲದೇ ಕೆಲ ರೈತರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ ಅಂತ ರೈತರು ಆರೋಪಿಸಿದ್ದು, ಪರಿಹಾರಕ್ಕಾಗಿ ಆಗ್ರಹಿಸುತ್ತಿದ್ದಾರೆ.

ಇನ್ನೂ ಬಿಡಿಎ 2008ರಲ್ಲಿ ಆದ ಅಧಿಸೂಚನೆಯನ್ನ ಗಮನದಲ್ಲಿಟ್ಟುಕೊಂಡು ರೈತರಿಗೆ ಯಾವುದೇ ನೋಟಿಸ್ ನೀಡಿಲ್ಲ, ಇವತ್ತು ಏಕಾಏಕಿ ಜೆಸಿಬಿ ಜೊತೆ ಬಂದು ರೈತರ ಜಮೀನು ನಾಶಪಡಿಸುತ್ತಿದ್ದಾರೆ. NGT (National Green Tribunal) ಯಿಂದ 19 ಅನುಮತಿಗಳನ್ನ ಪಡೆಯಬೇಕು ಈ ಪೈಕಿ 3 ಅನುಮತಿ ಮಾತ್ರ ಸಿಕ್ಕಿವೆ. ಹೀಗಾಗಿ “ಹಸಿರು ನ್ಯಾಯ ಮಂಡಳಿಗೆ” ದೂರು ಕೂಡ ಸಲ್ಲಿಸಲಾಗಿದೆ. ಸುಪ್ರೀಂಕೂರ್ಟ್‌ನಲ್ಲೂ ಈ ಬಗ್ಗೆ ಕೇಸ್ ನಡೆಯುತಿದೆ.

ಹೀಗಿರುವಾಗ ದಾಖಲೆ ತೋರಿಸುವಂತೆ ಕೇಳಿದರೆ ಏನೂ ಹೇಳದೆ ದೌರ್ಜನ್ಯ ಮಾಡುತ್ತಿದ್ದಾರೆ. ಈ ಕಾರಂತ ಬಡಾವಣೆ 3546.12 ಗುಂಟೆ ಜಮೀನು ಜಮೀನು ವಶ ಪಡಿಸಿಕೊಂಡಿದ್ದು ಒಟ್ಟು 17 ಹಳ್ಳಿಗಳಲ್ಲಿ ನಡೆದಿದ್ದು ಪ್ರಮುಖವಾಗಿ  ಟಿ. ದಾಸರಹಳ್ಳಿಯ ಲಕ್ಷ್ಮೀಪುರ ಗಾಣೀಗರಹಳ್ಳಿ ಹಾಗೂ ಸೋಮಶೆಟ್ಟಿ ಹಳ್ಳಿ ಈ ಪ್ರದೇಶದಲ್ಲಿ ಹತ್ತಾರು ಏಕರೆ ರೈತರ ಜಮೀನಿನಲ್ಲಿ‌ ಬೆಳೆದಿದ್ದ ಮರಗಳನ್ನ ಜೆಸಿಬಿ ಮೂಲಕ ಹಾಳು ಮಾಡುತ್ತಿದ್ದಾರೆ. 2013 ರ ಭೂ ಸ್ವಾಧೀನ ನಿಯಮ ಪ್ರಕಾರ ಜಮೀನಿಗೆ ಪರಿಹಾರ ಕೊಡಬೇಕು ಅಂತ ರೈತರು ಆಗ್ರಹಿಸಿದ್ದಾರೆ.

ಇನ್ನು ಟಿವಿ9 ಕ್ಯಾಮರಾ ಕಂಡೊಡನೆ ಬಿಡಿಎ ಅಧಿಕಾರಿಗಳು ಅಲ್ಲಿಂದ ಕಾಲುಕಿತ್ತರು.‌ ಒಟ್ಟಿನಲ್ಲಿ ರೈತರಿಗೆ ಯಾವುದೇ ನೋಟಿಸ್ ನೀಡದೇ, ಯಾವ ಉದ್ದೇಶಕ್ಕೆ ಜಮೀನು ವಶ ಪಡಿಸಿಕೊಳ್ಳುತ್ತಿದ್ದಾರೆ ಅಂತಾನೂ ಹೇಳದೇ, ರೈತರಿಗೆ ವಶ ಪಡಿಸಿಕೊಳ್ಳುತ್ತಿರುವ ಭೂಮಿಗೆ ಇತ್ತ ಸರಿಯಾದ ಪರಿಹಾರ ಕೂಡ ನೀಡದೇ ಸುಪ್ರೀಂ ಕೋರ್ಟ್ ಆದೇಶ ಇದೆ ಅಂತ ಹೀಗೆ ರೈತರ ಕೃಷಿ ಜಮೀನು ನಾಶ ಪಡಿಸಿದ್ದು ಎಷ್ಟು ಸರಿ ಎಂಬ ಮಾತುಗಳು ಕೇಳಿ ಬಂದಿವೆ. ಇನ್ನಾದರೂ ಸಂಬಂಧ ಪಟ್ಟವರು ಎಚ್ಚೆತ್ತುಕೊಂಡು ಆಗ್ರಹದಂತೆ ಪರಿಹಾರ ಒದಗಿಸುತ್ತಾರಾ ಇಲ್ವಾ ಕಾದು ನೋಡಬೇಕಿದೆ.

ವರದಿ: ವಿನಾಯಕ್ ಗುರವ್ ಟಿವಿ9 ನೆಲಮಂಗಲ