Attibele: ಅಪಘಾತದಿಂದ ಧರೆಗುರುಳಿದ ಕನ್ನಡದ ಗಡಿ ಗೋಪುರ- ನಾಲ್ವಡಿ ಕೃಷ್ಣರಾಜರ ಕಾಲದಲ್ಲಿ ಕಟ್ಟಲಾಗಿದ್ದ ಏಕೈಕ ಮೈಲಿಗಲ್ಲು ಇದು!

| Updated By: ಸಾಧು ಶ್ರೀನಾಥ್​

Updated on: Nov 26, 2022 | 10:53 AM

ಅದು ಕನ್ನಡ ನೆಲದ ಗತವೈಭವ ಸಾರುವ ಸ್ಮಾರಕ,‌ ಕರ್ನಾಟಕಕ್ಕೆ ಬರುವ ಬೇರೆ ಭಾಷಿಕರಿಗೆ ಕನ್ನಡದ ಪರಿಚಯ ಮಾಡಿಕೊಡುವ ಮೈಲಿಗಲ್ಲಿನ ಗೋಪುರ,‌ ಅಂತಹ ಐತಿಹಾಸಿಕ ಗಡಿ ಗೋಪುರ ಅಪಘಾತದಿಂದಾಗಿ ನೆಲಕ್ಕುರುಳಿ ಜಖಂ ಗೊಂಡಿದೆ. ಇನ್ನು ಕನ್ನಡದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುವ ರಾಜ್ಯ ಸರ್ಕಾರ ಕನ್ನಡದ ಸ್ಮಾರಕ ಬಿದ್ದಿದ್ದರೂ ತಲೆ ಕೆಡಿಸಿಕೊಂಡಿಲ್ಲ

Attibele: ಅಪಘಾತದಿಂದ ಧರೆಗುರುಳಿದ ಕನ್ನಡದ ಗಡಿ ಗೋಪುರ- ನಾಲ್ವಡಿ ಕೃಷ್ಣರಾಜರ ಕಾಲದಲ್ಲಿ ಕಟ್ಟಲಾಗಿದ್ದ ಏಕೈಕ ಮೈಲಿಗಲ್ಲು ಇದು!
ಅಪಘಾತದಿಂದ ಧರೆಗುರುಳಿದ ಕನ್ನಡದ ಗಡಿ ಗೋಪುರ- ನಾಲ್ವಡಿ ಕೃಷ್ಣರಾಜರ ಕಾಲದಲ್ಲಿ ಕಟ್ಟಲಾಗಿದ್ದ ಏಕೈಕ ಮೈಲಿಗಲ್ಲು ಅದು!
Follow us on

ಮೇಲಿನ ಚಿತ್ರದಲ್ಲಿ ಕಾಣುತ್ತಿರುವ ಈ ಗಡಿಗೋಪುರಕ್ಕೆ ಅದರದೇ ಆದ ಇತಿಹಾಸವಿದೆ‌. ‌‌ನಾಲ್ವಡಿ ಕೃಷ್ಣರಾಜರ ಕಾಲದಲ್ಲಿ ಕರ್ನಾಟಕ ತಮಿಳುನಾಡು ಬಾರ್ಡರ್ ಅತ್ತಿಬೆಲೆಯಲ್ಲಿ (Attibele, Anekal) ಕಟ್ಟಲಾದ ಈ ಗಡಿ ಗೋಪುರಕ್ಕೆ ತಮಿಳುನಾಡು ಲಾರಿಯೊಂದು ಗುದ್ದಿದ ಪರಿಣಾಮ ಎಡಭಾಗದ ಗೋಡೆ ಸಂಪೂರ್ಣ ಕುಸಿದು ಇಡೀ ಸ್ಮಾರಕ ಜಖಂಗೊಂಡಿದೆ. ಏನಾಯಿತೆಂದರೆ ಸಾಮಾನ್ಯವಾಗಿ ಗೋಪುರದ ಬಳಿಯೇ ಹಲವು ವಾಹನಗಳು ಯು ಟರ್ನ್ ತೆಗೆದುಕೊಳ್ಳುತ್ತವೆ. ಅದೇ ರೀತಿ ಯು ಟರ್ನ್ ತೆಗೆದುಕೊಳ್ಳುತ್ತಿದ್ದ ಲಾರಿಯೊಂದು ಕಟ್ಟಡಕ್ಕೆ ಮುತ್ತಿಕ್ಕಿ ಡಿಕ್ಕಿಯಾದ ಪರಿಣಾಮ (Lorry Accident) ಕರ್ನಾಟಕದ ಎಕೈಕ ಗಡಿಗೋಪುದ ಅರ್ಧ ಭಾಗ ನೆಲಕ್ಕುರುಳಿದೆ.

ಗಡಿಗೋಪುರ ಬಿದ್ದಿರುವ ವಿಷಯ ಗೊತ್ತಾಗಿ ತತ್ ಕ್ಷಣಕ್ಕೆ ಬಂದ ಕನ್ನಡ ಜಾಗೃತಿ ವೇದಿಕೆ ಸದಸ್ಯರು ಲಾರಿ ಚಾಲಕನ ಮೇಲೆ ದೂರು ದಾಖಲಿಸಿದ್ದಾರೆ. ಅಲ್ಲದೆ ಕೂಡಲೇ ಗಡಿ ಗೋಪುರ ದುರಸ್ತಿ ಕಾರ್ಯ ಆಗಬೇಕು ಅಂತ ರಾಜ್ಯ ಸರ್ಕಾರ ಹಾಗೂ ನ್ಯಾಷನಲ್ ಹೈವೇ ಅಥಾರಿಟಿಗೆ ಮನವಿ ಮಾಡಿದ್ದಾರೆ.

ಇನ್ನು ಕನ್ನಡದ ಬಗ್ಗೆ (Kannada Rajyotsava) ಪುಂಖಾನುಪುಂಖವಾಗಿ ಮಾತನಾಡುವ ರಾಜ್ಯ ಸರ್ಕಾರ ಕನ್ನಡದ ಸ್ಮಾರಕ ಬಿದ್ದಿದ್ದರೂ ತಲೆ ಕೆಡಿಸಿಕೊಂಡಿಲ್ಲ. ಹಾಗಯೇ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಯಾಗಲಿ, ಸ್ಥಳೀಯ ತಹಸೀಲ್ದಾರ್ ಆಗಲೀ‌ ಭೇಟಿ ಕೊಟ್ಟು ಯಾಕೆ ಹೀಗೆ ಆಯ್ತು? ಮುಂದೇ ಸ್ಮಾರಕವನ್ನು ಹೇಗೆ ಕಾಪಾಡಬೇಕು? ಅನ್ನೋ ವಿಚಾರದ ಗೋಜಿಗೆ ಹೋಗಿಲ್ಲ ಎಂದು ಕನ್ನಡ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷರಾದ ಮಂಜುನಾಥ್ ದೇವ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಗಡಿಗೋಪುರ ಬಳಿ ಯಾವುದೇ ವಾಹನ ಯು ಟರ್ನ್ ಮಾಡೊದಕ್ಕೆ ಅವಕಾಶ ಕೊಡಬಾರದು, ಕೂಡಲೇ ಅದನ್ನು ಮುಚ್ಚಿ ಅಂತ ನ್ಯಾಷನಲ್ ಹೈವೇ ಅಥಾರಿಟಿಗೆ ಈ ಮೊದಲೇ ಮನವಿ ಮಾಡಿದ್ದರೂ ಯಾವುದೇ ಅಧಿಕಾರಿ ತಲೆ ಕೆಡಿಸಿಕೊಂಡಿಲ್ಲ ಅಂತಾ ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಂದು ಕಡೆ ನವೆಂಬರ್ ತಿಂಗಳಲ್ಲಿ ರಾಜ್ಯದೆಲ್ಲೆಡೆ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲಾಗ್ತಿದೆ. ಇನ್ನೊಂದೆಡೆ ಕನ್ನಡದ ಗತವೈಭವ ಸಾರುವ ಸ್ಮಾರಕ ನೆಲಕ್ಕುರುಳಿದ್ರೂ ಸಿಗಬೇಕಾದ ಪ್ರಾಶಸ್ತ್ಯ ಸಿಗದೇ ಇರೋದು ಕನ್ನಡಿಗರು ಯೋಚಿಸಬೇಕಾದ ಸಂಗತಿ. ಈಗಲಾದ್ರೂ ಅಧಿಕಾರಿಗಳು ಭೇಟಿ ಕೊಟ್ಟು ಗಡಿಗೋಪುರ ದುರಸ್ತಿ ಕಾರ್ಯ ಶೀಘ್ರವೇ ಮಾಡಿಸುತ್ತಾರಾ ಅನ್ನೊದೇ‌‌ ಪ್ರಶ್ನೆ! (ವರದಿ: ಸೈಯ್ಯದ್ ನಿಜಾಮುದ್ದೀನ್, ಟಿವಿ 9, ಆನೇಕಲ್)