ಕೆಹೆಚ್​ ಮುನಿಯಪ್ಪಗೆ ದೇವನಹಳ್ಳಿ ಟಿಕೆಟ್; ಮತ್ತಷ್ಟು ಭುಗಿಲೆದ್ದ ಅಸಮಾಧಾನ, ಕೈ ನಾಯಕರಿಂದ ಮನವೊಲಿಸೋ ಯತ್ನ

|

Updated on: Mar 25, 2023 | 11:08 AM

ಮಾಜಿ ಕೆಂದ್ರ ಸಚಿವ ಕೆ.ಹೆಚ್. ಮುನಿಯಪ್ಪರಿಗೆ ದೇವನಹಳ್ಳಿ ಕ್ಷೇತ್ರದ ಟಿಕೆಟ್ ಘೋಷಣೆ ಮಾಡಲಾಗಿದೆ. ವಿರೋಧದ ನಡುವೆಯೂ ಟಿಕೆಟ್ ನೀಡಿದ ಹಿನ್ನೆಲೆ ಅಸಮಾಧಾನ ಮತ್ತಷ್ಟು ಭುಗಿಲೆದ್ದಿದೆ.

ಕೆಹೆಚ್​ ಮುನಿಯಪ್ಪಗೆ ದೇವನಹಳ್ಳಿ ಟಿಕೆಟ್; ಮತ್ತಷ್ಟು ಭುಗಿಲೆದ್ದ ಅಸಮಾಧಾನ, ಕೈ ನಾಯಕರಿಂದ ಮನವೊಲಿಸೋ ಯತ್ನ
ಕೆಹೆಚ್​ ಮುನಿಯಪ್ಪ
Follow us on

ದೇವನಹಳ್ಳಿ: ರಾಜ್ಯ ವಿಧಾನಸಭೆ ಚುನಾವಣೆಗೆ(Karnataka Assembly Elections 2023) ಕಾಂಗ್ರೆಸ್ (Congress) ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಎಐಸಿಸಿ(AICC) ಇಂದು (ಮಾರ್ಚ್ 25) ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಮಾಜಿ ಕೆಂದ್ರ ಸಚಿವ ಕೆ.ಹೆಚ್. ಮುನಿಯಪ್ಪರಿಗೆ(KH Muniyappa) ದೇವನಹಳ್ಳಿ ಕ್ಷೇತ್ರದ ಟಿಕೆಟ್ ಘೋಷಣೆ ಮಾಡಲಾಗಿದೆ. ವಿರೋಧದ ನಡುವೆಯೂ ಟಿಕೆಟ್ ನೀಡಿದ ಹಿನ್ನೆಲೆ ಅಸಮಾಧಾನ ಮತ್ತಷ್ಟು ಭುಗಿಲೆದ್ದಿದೆ. ಪರ-ವಿರೋಧವೆಂದು ಎರಡು ಗುಂಪುಗಳಾಗಿದ್ದ ಸ್ಥಳೀಯ ಮುಖಂಡರಲ್ಲಿ ಮತ್ತಷ್ಟು ಭಿನ್ನಮತ ಸ್ಫೋಟಗೊಂಡಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಟಿಕೆಟನ್ನು ಕೆಹೆಚ್ ಮುನಿಯಪ್ಪಗೆ ನೀಡಲಾಗಿದೆ. ಈ ಹಿನ್ನೆಲೆ ಮತ್ತಷ್ಟು ಕಿಚ್ಚು ಹೆಚ್ಚಾಗಿದೆ. ಎರಡು ದಿನಗಳ ಹಿಂದೆ ಕೆಹೆಚ್​ ಮುನಿಯಪ್ಪರಿಗೆ ಟಿಕೆಟ್ ನೀಡದಂತೆ ಸ್ಥಳೀಯ ಮುಖಂಡರು ರಾಜೀನಾಮೆ ಪತ್ರ ನೀಡಿದ್ದರು. ಆದ್ರೆ ಈಗ ಹೈಕಮಾಂಡ್ ಟಿಕೆಟ್ ಘೋಷಿಸಿದೆ. ಹೀಗಾಗಿ ಮುಖಂಡರು ಮತ್ತಷ್ಟು ಅಸಮಾಧಾನಗೊಂಡಿದ್ದು ಇಂದು ಅಸಮಾಧಾನಿತರ ಸಭೆ ನಡೆಸಿ ಕೆಲವು ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಸದ್ಯ ಕೈ‌ ನಾಯಕರು ಕರೆ ಮಾಡಿ ಮನವೊಲಿಸುವ ಯತ್ನ‌ ಮಾಡಿದ್ದಾರೆ. ಭಿನ್ನಮತ ಶಮನಗೊಳಿಸಿ ಕೆಹಚ್ ಮುನಿಯಪ್ಪ ಪರ ಕೆಲಸ‌ ಮಾಡುವಂತೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ: ರಾಜ್ಯ ರಾಜಕಾರಣಕ್ಕೆ ಮರಳಲು ಕಸರತ್ತು ನಡೆಸಿರುವ ಮುನಿಯಪ್ಪಗೆ ಶಾಕ್, ದೇವನಹಳ್ಳಿ ಕಾಂಗ್ರೆಸ್​ನಲ್ಲಿ ಸಾಮೂಹಿಕ ರಾಜೀನಾಮೆ

ದೇವನಹಳ್ಳಿ ಕಾಂಗ್ರೆಸ್​ನಲ್ಲಿ ಭಿನ್ನಮತ ಸ್ಫೋಟ

ಕಾಂಗ್ರೆಸ್ ಪಟ್ಟಿ ಬಿಡುಗಡೆಗೂ ಮುನ್ನವೇ ಕೆಹೆಚ್​ ಮುನಿಯಪ್ಪರಿಗೆ ಟಿಕೆಟ್ ಫೈನಲ್ ಆಗಿದೆ ಎಂಬ ಸುದ್ದಿ ಹರಿದಾಡುತ್ತಿತ್ತು. ಈ ಸುದ್ದಿ ಸಿಗುತ್ತಿದ್ದಂತೆ ಮುನಿಯಪ್ಪ ಟಿಕೆಟ್ ಸಂಬಂಧ ದೇವನಹಳ್ಳಿ ಕಾಂಗ್ರೆಸ್ ಮುಖಂಡರಲ್ಲಿ ಭಿನ್ನಮತ ಸ್ಪೋಟಗೊಂಡಿತ್ತು. ಟಿಕೆಟ್ ನೀಡಬೇಕು ಎಂದು ಒಂದು ಗುಂಪು ನಿಂತರೆ, ಮತ್ತೊಂದು ಗುಂಪು ಟಿಕೆಟ್ ನೀಡಬಾರದು ಎಂದು ಸಾಮೂಹಿಕ ರಾಜೀನಾಮೆ ನೀಡಿತ್ತು.

ಮಾರ್ಚ್ 23ರಂದು ಮಾಜಿ ಕೇಂದ್ರ ಸಚಿವ ಕೆಹೆಚ್ ಮುನಿಯಪ್ಪಗೆ ದೇವನಹಳ್ಳಿ ವಿಧಾನಸಭಾ ಕ್ಷೇತ್ರದ ಟಿಕೆಟ್ ನೀಡದಂತೆ ಒಂದು ಬಣ ಸಾಮೂಹಿಕ ರಾಜಿನಾಮೆ ನೀಡಿತ್ತು. ಈ ಬೆನ್ನಲ್ಲೆ ಕಾಂಗ್ರೆಸ್​ನ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಜಣ್ಣ ನೇತೃತ್ವದ ಗುಂಪು ಮುನಿಯಪ್ಪ ಪರ ಬ್ಯಾಟ್ ಬೀಸಿ ದೇವನಹಳ್ಳಿ ಟಿಕೆಟ್ ಕೆ.ಹೆಚ್ ಮುನಿಯಪ್ಪಗೆ ನೀಡಿದ್ರೆ ಗೆಲ್ಲಲಿದೆ ಅಂತ ವಿರೋಧಿ ಬಣಕ್ಕೆ ಟಾಂಗ್ ನೀಡಿತ್ತು. ಸದ್ಯ ಟಿಕೆಟ್ ಘೋಷಣೆಯಾಗಿದ್ದು ಪರ ಬಣ ಖುಷ್ ಆಗಿದ್ದು ವಿರೋಧ ಬಣ ಮತ್ತಷ್ಟು ಅಸಮಾಧಾನಗೊಂಡಿದೆ. ಈ ಹಿನ್ನೆಲೆ ಅಸಮಾಧಾನಗೊಂಡ ದೇವನಹಳ್ಳಿ ಕಾಂಗ್ರೆಸ್ ಮುಖಂಡರಿಗೆ ಕೈ ನಾಯಕರು ಕರೆ ಮಾಡಿ ಮನವೊಲಿಸುವ ಯತ್ನ ಮಾಡಿದ್ದಾರೆ. ಈಗ ಏನು ಮಾಡಲು ಆಗೊಲ್ಲ. ಎಲ್ಲವನ್ನೂ ಮರೆತು ಮುನಿಯಪ್ಪರಿಗೆ ಬೆಂಬಲ ನೀಡಿ. ಚುನಾವಣೆಯಲ್ಲಿ ನಮ್ಮ ಗೆಲುವು ಮುಖ್ಯ ಎಂದು ಸೂಚಿಸಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ