ದೇವನಹಳ್ಳಿ, ಮಾ.23: ಭ್ರೂಣಹತ್ಯೆ (Feticide) ಪ್ರಕರಣಗಳ ಕುರಿತ ವರದಿ ಬಹಿರಂಗ ಮಾಡದಂತೆ ಕಿರುಕುಳ ನೀಡಿದ ಆರೋಪ ಸಂಬಂಧ ಡಿಹೆಚ್ಒ ಸುನೀಲ್ ಕುಮಾರ್ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಂಜುನಾಥ್ ಅವರನ್ನು ವಿಚಾರಣೆಗೆ ಒಳಪಡಿಸುವಂತೆ ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲಾಧಿಕಾರಿ ಡಾ.ಶಿವಶಂಕರ್.ಎನ್. ಆದೇಶ ಹೊರಡಿಸಿದ್ದಾರೆ.
ಎಡಿಸಿ ನೇತೃತ್ವದಲ್ಲಿ ಡಿಹೆಚ್‌ಒ ಹಾಗೂ ಕುಟುಂಬ ಕಲ್ಯಾಣಾಧಿಕಾರಿ ವಿಚಾರಣೆ ನಡೆಸುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಇದರ ಬೆನ್ನಲ್ಲೇ ಎಡಿಸಿ, ಹೊಸಕೋಟೆ, ನೆಲಮಂಗಲ ಭ್ರೂಣಹತ್ಯೆಗಳ ಕುರಿತ ದಾಖಲೆ ಸಹಿತ ವಿಚಾರಣೆಗೆ ಹಾಜರಾಗುವಂತೆ ಇಬ್ಬರಿಗೂ ನೋಟಿಸ್ ನೀಡಿದ್ದಾರೆ. ವಿಚಾರಣೆ ಬಳಿಕ ಎಡಿಸಿ ದಾಖಲೆಗಳ ಸಹಿತ ವರದಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಿದ್ದಾರೆ.
ಒಂದೆಡೆ, ಭ್ರೂಣಹತ್ಯೆ ಪ್ರಕರಣಗಳ ವರದಿ ಬಹಿರಂಗಪಡಿಸದಂತೆ ಡಿಹೆಚ್ಒ ಸುನೀಲ್ ಕುಮಾರ್ ನೀಡುತ್ತಿರುವ ಕಿರುಕುಳದ ಬಗ್ಗೆ ಕುಟುಂಬ ಕಲ್ಯಾಣಾಧಿಕಾರಿ ಮಂಜುನಾಥ್ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಇದೀಗ, ಸುನೀಲ್ ಕುಮರ್ ಅವರು ಮಂಜುನಾಥ್ ವಿರುದ್ಧವೂ ಇಲಾಖೆಗೆ ಪತ್ರ ಬರೆದಿದ್ದಾರೆ. ಮಾಧ್ಯಮಗಳಿಗೆ ಮಾಹಿತಿ ನೀಡಿ ಇಲಾಖೆಯ ಗೌಪ್ಯತೆಗೆ ಧಕ್ಕೆ ತಂದಿರುವ ಮಂಜುನಾಥ್ ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಹೊಸಕೋಟೆ ಮತ್ತು ನೆಮಂಗಲದಲ್ಲಿ ನಡೆಯುತ್ತಿದ್ದ ಭ್ರೂಣ ಹತ್ಯೆ ಪ್ರಕರಣವನ್ನು ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಮಂಜುನಾಥ್ ಅವರು ಬಯಲು ಮಾಡಿದ್ದರು. ಆದರೆ, ಜಿಲ್ಲಾ ಆರೋಗ್ಯಾಧಿಕಾರಿ ಸುನೀಲ್ ಕುಮಾರ್, ಜಿಲ್ಲೆಯ ಮತ್ತಷ್ಟು ಆಸ್ವತ್ರೆಗಳ ಲೋಪದೋಷ ಹಾಗೂ ಗರ್ಭಪಾತ ಕರ್ಮಕಾಂಡದ ಬಗ್ಗೆ ಬಯಲು ಮಾಡದಂತೆ ಮಂಜುನಾಥ್ ಅವರಿಗೆ ಕಿರುಕುಳ ನೀಡುತ್ತಿರುವ ಆರೋಪ ಕೇಳಿಬಂದಿತ್ತು.
ಇದನ್ನೂ ಓದಿ: ನೆಲಮಂಗಲದ ಆಸರೆ ಆಸ್ಪತ್ರೆಯಲ್ಲಿ 74 ಭ್ರೂಣ ಹತ್ಯೆ ಪ್ರಕರಣ; ಕೆಲ ಮಹತ್ವದ ದಾಖಲೆ ವಶಕ್ಕೆ ಪಡೆದ ಅಧಿಕಾರಿಗಳು
ಮೂರು ದಿನಗಳಿಗೊಮ್ಮೆ ನೋಟಿಸ್ ನೀಡುತ್ತಾ ಆಸ್ವತ್ರೆಗಳ ಲೋಪದೋಷ ವರದಿ ನೀಡದಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಂಜುನಾಥ್ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಿಗೆ ಪತ್ರ ಬರೆದಿದ್ದರು. ಈ ಹಿಂದೆ ನೆಲಮಂಗಲದ ಆಸರೆ ಆಸ್ವತ್ರೆಯ 74 ಗರ್ಭಪಾತದ ವರದಿ ಮಾಡದಂತೆ ಸುನೀಲ್ ಕುಮಾರ್ ಒತ್ತಡ ಹಾಕಿದ್ದಾರೆ ಎಂದು ಆರೋಪಿಸಿದ್ದರು.
ಒತ್ತಡದ ನಡುವೆಯು ಆಸ್ವತ್ರೆಯ ಕರ್ಮಕಾಂಡ ಬಯಲು ಮಾಡಿ ಕೇಸ್ ದಾಖಲಿಸಿದಕ್ಕೆ ಮಂಜುನಾಥ್ ಅವರಿಗೆ ಕಿರುಕುಳ ನೀಡಿದ್ದಾರೆ. ಅಷ್ಟೇ ಅಲ್ಲದೆ, ಮಂಜುನಾಥ್ ಅವರು ಹೊಸಕೋಟೆಯ ಓವಂ ಆಸ್ವತ್ರೆಯಲ್ಲೂ MTP ಖಾಯ್ದೆಯಡಿ ಅನುಮತಿ ಪಡೆಯದೆ ಗರ್ಭಪಾತ ಪ್ರಕರಣ ಪತ್ತೆ ಮಾಡಿದ್ದಾರೆ. ಈ ಬಗ್ಗೆ ವರದಿ ಬಯಲು ಮಾಡದಂತೆ ಡಿಹೆಚ್ಒ ಸುನೀಲ್ ಅವರು ಕಿರುಕುಳ ನೀಡಿದ್ದಾಗಿ ಪತ್ರದಲ್ಲಿ ಆರೋಪಿಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ