ಕೆಂಪೇಗೌಡ ಏರ್​ಪೋರ್ಟ್​​ಗೆ 3ನೇ ಬಾರಿಗೆ ಭಾರತ ಮತ್ತು ದಕ್ಷಿಣ ಏಷ್ಯಾದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಪ್ರಶಸ್ತಿ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಸತತ ಮೂರನೇ ಬಾರಿಗೆ 'ಭಾರತ ಮತ್ತು ದಕ್ಷಿಣ ಏಷ್ಯಾದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ' ಪ್ರಶಸ್ತಿ ಪಡೆದಿದ್ದು, ವಿಶ್ವ ಶ್ರೇಯಾಂಕದಲ್ಲಿ 41ನೇ ಸ್ಥಾನಕ್ಕೇರಿದೆ. ಟರ್ಮಿನಲ್ 2 '5-ಸ್ಟಾರ್' ರೇಟಿಂಗ್ ಪಡೆದ ಭಾರತದ ಮೊದಲ ಟರ್ಮಿನಲ್ ಎಂಬ ಹೆಗ್ಗಳಿಕೆ ಗಳಿಸಿದೆ.

ಕೆಂಪೇಗೌಡ ಏರ್​ಪೋರ್ಟ್​​ಗೆ 3ನೇ ಬಾರಿಗೆ ಭಾರತ ಮತ್ತು ದಕ್ಷಿಣ ಏಷ್ಯಾದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಪ್ರಶಸ್ತಿ
Kempegowda Airport
Image Credit source: BLRAirport

Updated on: Mar 20, 2026 | 3:59 PM

ಬೆಂಗಳೂರು, ಮಾರ್ಚ್​ 20: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Kempegowda Airport) ಮತ್ತೊಂದು ಗರಿಮೆಯನ್ನು ಮುಡಿಗೇರಿಸಿಕೊಂಡಿದೆ. ಕೆಂಪೇಗೌಡ  ಏರ್​ಪೋರ್ಟ್​ ಬೆಂಗಳೂರು ಸ್ಕೈಟ್ರಾಕ್ಸ್ ವರ್ಲ್ಡ್ ಏರ್‌ಪೋರ್ಟ್ ಅವಾರ್ಡ್ಸ್ 2026ರಲ್ಲಿ ಸತತ ಮೂರನೇ ಬಾರಿಗೆ ‘ಭಾರತ ಮತ್ತು ದಕ್ಷಿಣ ಏಷ್ಯಾದ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ’ ಎಂದು ಗುರುತಿಸಲ್ಪಟ್ಟಿದೆ.

ಈ ಮನ್ನಣೆಯು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಪ್ರಮುಖ ಪ್ರಯಾಣ ಕೇಂದ್ರಗಳಲ್ಲಿ ಒಂದಾಗಿರುವುದನ್ನು ಪುನರುಚ್ಚರಿಸುತ್ತದೆ. ಜಾಗತಿಕ ಮಟ್ಟದಲ್ಲಿ ಗಮನಾರ್ಹ ಪ್ರಗತಿ ಸಾಧಿಸಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ವಿಶ್ವ ವಿಮಾನ ನಿಲ್ದಾಣಗಳ ಶ್ರೇಯಾಂಕದಲ್ಲಿ 48ನೇ ಸ್ಥಾನದಿಂದ 41ನೇ ಸ್ಥಾನ ಪಡೆದಿದೆ. ಆ ಮೂಲಕ ವಿಶ್ವದ ಅಗ್ರ 50 ವಿಮಾನ ನಿಲ್ದಾಣಗಳ ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುವುದರ ಜೊತೆಗೆ, ಪ್ರಯಾಣಿಕರಿಗೆ ವಿಶ್ವದರ್ಜೆಯ ಅನುಭವವನ್ನು ನೀಡುವ ಬದ್ಧತೆಯನ್ನು ಎತ್ತಿಹಿಡಿದಿದೆ.

ಕೆಂಪೇಗೌಡ  ಏರ್​ಪೋರ್ಟ್ ಟ್ವೀಟ್​


ವಿಮಾನ ನಿಲ್ದಾಣದ ಶ್ರೇಷ್ಠತೆಗೆ ಜಾಗತಿಕ ಮಾನದಂಡವೆಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟ ‘ಸ್ಕೈಟ್ರಾಕ್ಸ್ ವರ್ಲ್ಡ್ ಏರ್‌ಪೋರ್ಟ್ ಅವಾರ್ಡ್ಸ್’, ಚೆಕ್-ಇನ್, ಆಗಮನ, ವರ್ಗಾವಣೆ, ಚಿಲ್ಲರೆ ವ್ಯಾಪಾರ, ಭದ್ರತೆ, ವಲಸೆ ಮತ್ತು ನಿರ್ಗಮನ ಸೇರಿದಂತೆ ಪ್ರಮುಖ ಅಂಶಗಳಲ್ಲಿ ಅತ್ಯುತ್ತಮ ಗ್ರಾಹಕ ಅನುಭವವನ್ನು ನೀಡುವ ವಿಮಾನ ನಿಲ್ದಾಣಗಳನ್ನು ಗುರುತಿಸುತ್ತದೆ.

ಇದನ್ನೂ ಓದಿ: ಮಳೆಯ ನಡುವೆ ಬೆಂಗಳೂರು ಏರ್‌ಪೋರ್ಟ್‌ನಲ್ಲಿ ‘ಮಿನಿ ವಾಟರ್ ಫಾಲ್ಸ್’? ಚರ್ಚೆಗೆ ಗ್ರಾಸವಾದ ವೈರಲ್ ವಿಡಿಯೋ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ಥಿರವಾದ ಕಾರ್ಯಕ್ಷಮತೆಯನ್ನು ಆಧರಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. ಕೆಂಪೇಗೌಡ ಏರ್​ಪೋರ್ಟ್ ಇತ್ತೀಚಿನ ದಿನಗಳಲ್ಲಿ ಸತತವಾಗಿ ಜಾಗತಿಕ ಮನ್ನಣೆಗಳನ್ನು ಪಡೆಯುತ್ತಿದ್ದು, ನಾಲ್ಕನೇ ಬಾರಿಗೆ ‘ವಿಶ್ವದ ಅತ್ಯುತ್ತಮ ಆಗಮನದ ವಿಮಾನ ನಿಲ್ದಾಣ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರೊಂದಿಗೆ, ಟರ್ಮಿನಲ್ 2 ಸ್ಕೈಟ್ರಾಕ್ಸ್‌ನಿಂದ ‘5-ಸ್ಟಾರ್’ ರೇಟಿಂಗ್ ಪಡೆದ ಭಾರತದ ಮೊದಲ ಟರ್ಮಿನಲ್ ಎಂಬ ದಾಖಲೆ ಬರೆದಿದೆ. ಹಾಗೆಯೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಮಂಡಳಿಯಿಂದ ವಿಮಾನ ನಿಲ್ದಾಣ ಕಾರ್ಬನ್ ಮಾನ್ಯತೆ ಕಾರ್ಯಕ್ರಮದಡಿ ಅತ್ಯುನ್ನತ ಮಟ್ಟದ 5ನೇ ಹಂತವನ್ನು ಮತ್ತು ಪ್ರವೇಶ ಸಾಧ್ಯತೆ ಮಾನ್ಯತೆಯ ಅಡಿಯಲ್ಲಿ 3ನೇ ಹಂತವನ್ನು ಸಾಧಿಸಿದೆ.

ಕೆಂಪೇಗೌಡ ಏರ್​ಪೋರ್ಟ್​ನ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕ ಹರಿ ಮರಾರ್‌ ಹೇಳಿದ್ದಿಷ್ಟು 

ಇನ್ನು ಈ ಕುರಿತು ಕೆಂಪೇಗೌಡ ಏರ್​ಪೋರ್ಟ್​ನ ಸಿಇಒ ಹಾಗೂ ವ್ಯವಸ್ಥಾಪಕ ನಿರ್ದೇಶಕ ಹರಿ ಮರಾರ್‌ ಮಾತನಾಡಿದ್ದು, ಸ್ಕೈಟ್ರಾಕ್ಸ್ ವರ್ಲ್ಡ್ ಏರ್ಪೋರ್ಟ್ ಅವಾರ್ಡ್ಸ್‌ನಲ್ಲಿ ನಮಗೆ ಸತತವಾಗಿ ಸಂದ ಈ ಮಾನ್ಯತೆಯು ನಮ್ಮ ದೀರ್ಘಕಾಲೀನ ದೃಷ್ಟಿಕೋನ ಮತ್ತು ಪ್ರಯಾಣಿಕರ ಅನುಭವದ ಮೇಲೆ ನಾವು ಹೊಂದಿರುವ ನಿರಂತರ ಗಮನವನ್ನು ಪ್ರತಿಬಿಂಬಿಸುತ್ತದೆ. ಇದು ನಮ್ಮ ತಂಡ ಮತ್ತು ಸಹಭಾಗಿ ಸಂಸ್ಥೆಗಳ ಸಾಮೂಹಿಕ ಪ್ರಯತ್ನಕ್ಕೆ ಸಂದ ಜಯ ಎಂದರು.

ಆಧುನಿಕ ವಿಮಾನ ನಿಲ್ದಾಣದ ಅನುಭವ ಹೇಗಿರಬೇಕೆಂಬುದರ ಮಿತಿಯನ್ನು ಇವೆರೆಲ್ಲರೂ ಸದಾ ವಿಸ್ತರಿಸುತ್ತಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ವಿನ್ಯಾಸ, ತಂತ್ರಜ್ಞಾನ ಮತ್ತು ಸುಸ್ಥಿರತೆಗಳನ್ನು ಒಗ್ಗೂಡಿಸಿ ಪ್ರಯಾಣಿಕರಿಗೆ ಸುಗಮ ಪ್ರಯಾಣವನ್ನು ಒದಗಿಸುವ ಭವಿಷ್ಯದ ನಿರ್ಮಾಣದತ್ತ ನಮ್ಮ ಗಮನವಿದೆ. ಈ ಪ್ರದೇಶದ ಪ್ರಮುಖ ಪ್ರಯಾಣ ಕೇಂದ್ರವಾಗಿ ಬೆಳೆಯುತ್ತಾ ನಮ್ಮ ಸ್ಥಾನವನ್ನು ಬಲಪಡಿಸುತ್ತಿರುವ ಈ ಸಂದರ್ಭದಲ್ಲಿ, ಸೇವೆ ಮತ್ತು ಅನುಭವದ ಗುಣಮಟ್ಟವನ್ನು ಸದಾ ಉನ್ನತ ಮಟ್ಟಕ್ಕೇರಿಸಲು ನಾವು ಬದ್ಧರಾಗಿದ್ದೇವೆ ಎಂದಿದ್ದಾರೆ.

ಸ್ಕೈಟ್ರಾಕ್ಸ್‌ನ ಸಿಇಒ ಎಡ್ವರ್ಡ್ ಪ್ಲಾಸ್ಟೆಡ್ ಅವರು ಮಾತನಾಡಿ, ಸತತ ಮೂರನೇ ವರ್ಷ ಈ ಪ್ರಶಸ್ತಿಯನ್ನು ಗೆದ್ದಿರುವುದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣನದ ಅದ್ಭುತ ಸಾಧನೆ. ಪ್ರಯಾಣಿಕರು ತೋರಿದ ಮೆಚ್ಚುಗೆಯನ್ನು ಎತ್ತಿತೋರಿಸುತ್ತದೆ. ಜೊತೆಗೆ, ಟರ್ಮಿನಲ್ 2 ವಿಮಾನ ನಿಲ್ದಾಣದ ಖ್ಯಾತಿಯನ್ನು ಬಲಪಡಿಸಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಸ್ತುತ ಈ ಪ್ರದೇಶದ ಅತ್ಯಂತ ಗುರುತಿಸಬಹುದಾದ ವಿಮಾನ ನಿಲ್ದಾಣಗಳಲ್ಲಿ ಸ್ಥಾನ ಪಡೆದಿದೆ ಎಂದು ತಿಳಿಸಿದರು.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಯಾಣಿಕರ ಮತ್ತು ಸರಕು ಸಾಗಣೆ ಕಾರ್ಯಾಚರಣೆಗಳಲ್ಲಿ ಬಲವಾದ ಬೆಳವಣಿಗೆಯನ್ನು ಹೊಂದುತ್ತಿದೆ. 2025 ರಲ್ಲಿ 43.82 ದಶಲಕ್ಷ ಪ್ರಯಾಣಿಕರಿಗೆ ಸೇವೆ ಸಲ್ಲಿಸಿ 520,985 ಮೆಟ್ರಿಕ್ ಟನ್ ಸರಕುಗಳನ್ನು ಸಾಗಿಸಿದೆ. ಸಂಪರ್ಕ ಜಾಲದ ವಿಸ್ತರಣೆ ಮತ್ತು ಮೂಲಸೌಕರ್ಯ ವರ್ಧನೆಗಳಿಂದ ಬೆಂಬಲಿತವಾಗಿರುವ ಈ ವಿಮಾನ ನಿಲ್ದಾಣವು ಈ ಪ್ರದೇಶದಲ್ಲಿ ಪ್ರಮುಖ ವರ್ಗಾವಣೆ ಕೇಂದ್ರವಾಗಿ ತನ್ನ ಸ್ಥಾನವನ್ನು ಮತ್ತಷ್ಟು ಬಲಪಡಿಸುತ್ತಿದೆ. ಇದು ಪ್ರಯಾಣಿಕರ ನಿರೀಕ್ಷೆಗಳೊಂದಿಗೆ ವಿಕಸನಗೊಳ್ಳುವ ವಿಭಿನ್ನ ವಿಮಾನ ನಿಲ್ದಾಣ ಅನುಭವವನ್ನು ಒದಗಿಸುವ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.

ಬಿಐಎಎಲ್‌ ಕುರಿತು:

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತವು (ಬಿಐಎಎಲ್‌) ನಿರ್ವಹಿಸುತ್ತಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಪ್ರಮುಖ ಮೆಟ್ರಿಕ್‌ಗಳಲ್ಲಿ ಉತ್ತಮ ಕಾರ್ಯಕ್ಷಮತೆಯೊಂದಿಗೆ 2025ರ ಹಣಕಾಸು ವರ್ಷವನ್ನು ಪೂರ್ಣಗೊಳಿಸಿದೆ. ಈ ವಿಮಾನ ನಿಲ್ದಾಣವು 43.82 ದಶಲಕ್ಷ ಪ್ರಯಾಣಿಕರಿಗೆ ಸೇವೆ ಸಲ್ಲಿಸಿದ ದಕ್ಷಿಣ ಭಾರತದ ಮೊದಲ ಸಂಸ್ಥೆ.

ಎಸಿಐ ದೊಡ್ಡ ವಿಮಾನ ನಿಲ್ದಾಣ ವಿಭಾಗದಲ್ಲಿ ಸ್ಥಾನ ಗಳಿಸಿದ್ದು. 520,985 ಮೆಟ್ರಿಕ್ ಟನ್ ಸರಕುಗಳನ್ನು ಸಾಗಣೆ ಮಾಡಿದೆ. ದಕ್ಷಿಣ ಭಾರತದ ಅತ್ಯಂತ ಜನನಿಬಿಡ ಮತ್ತು ದೇಶದಲ್ಲಿ ಮೂರನೇ ಅತಿದೊಡ್ಡ ವಿಮಾನ ನಿಲ್ದಾಣವಾಗಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು ಫೆಬ್ರವರಿ 2025 ರಲ್ಲಿ ಗಮನಾರ್ಹ ಮೈಲಿಗಲ್ಲನ್ನು ತಲುಪಿತ್ತು. ಇದು ಪ್ರಾರಂಭವಾದಾಗಿನಿಂದ 390 ದಶಲಕ್ಷಕ್ಕಿಂತ ಹೆಚ್ಚು ಪ್ರಯಾಣಿಕರಿಗೆ ಸೇವೆ ಒದಗಿಸಿದೆ.

ಇದನ್ನೂ ಓದಿ: ದೇವನಹಳ್ಳಿ ಸುತ್ತಮುತ್ತ ಭಾರೀ ಮಳೆ: ಬೆಂಗಳೂರಿಗೆ ಬರಬೇಕಿದ್ದ ವಿಮಾನಗಳು ಬೇರೆಡೆಗೆ ಡೈವರ್ಟ್

ಸರಕು ಸಾಗಣೆಯಲ್ಲಿ, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸತತ ನಾಲ್ಕನೇ ವರ್ಷವೂ ಭಾರತದಲ್ಲಿ ಕೊಳೆಯುವ ಸರಕುಗಳನ್ನು ಸಂಸ್ಕರಿಸುವಲ್ಲಿ ನಂ. 1 ವಿಮಾನ ನಿಲ್ದಾಣವಾಗಿದೆ. ಬಿಐಎಎಲ್‌ನ ಬೆಳವಣಿಗೆಗೆ ಅದರ ಬಹುಪಾಲು ಖಾಸಗಿ ಪ್ರವರ್ತಕರಾದ ಫೇರ್‌ಫ್ಯಾಕ್ಸ್ ಇಂಡಿಯಾ ಹೋಲ್ಡಿಂಗ್ಸ್ ಕಾರ್ಪೊರೇಷನ್ ಶಕ್ತಿ ನೀಡುತ್ತಿದೆ. ಗಮನಾರ್ಹ ಹೂಡಿಕೆಯ ಮೂಲಕ, ವಿಮಾನ ನಿಲ್ದಾಣದ ಅಭಿವೃದ್ಧಿ ಮತ್ತು ರೂಪಾಂತರವನ್ನು ವೇಗಗೊಳಿಸುವಲ್ಲಿ ಫೇರ್‌ಫ್ಯಾಕ್ಸ್ ಪ್ರಮುಖ ಪಾತ್ರ ವಹಿಸುತ್ತದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:57 pm, Fri, 20 March 26

Follow Us