
ನೆಲಮಂಗಲ, ಡಿಸೆಂಬರ್ 26: ಕ್ರಿಸ್ ಮಸ್ ಹಬ್ಬದ ರಜೆಗೆಂದು ಹುಟ್ಟೂರಿಗೆ ಹೋಗಿ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (accident) ಒಂದೇ ಕುಟುಂಬದ ಇಬ್ಬರು ಸಾವನ್ನಪ್ಪಿದ್ದು (death), ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ತೋಟಗೆರೆ ಕ್ರಾಸ್‌ನಲ್ಲಿ ಘಟನೆ ನಡೆದಿದೆ. ಗೌರಿಬಿದನೂರು ಮೂಲದ ಹರೀಶ್(39) ಮತ್ತು ವೀರಭದ್ರ(80) ಮೃತರು. ಕಾರಿನಲ್ಲಿದ್ದ ಗೌರಮ್ಮ, ಮೈತ್ರಿ, ಸಿರಿ, ವಂದನಾಗೆ ಗಂಭೀರ ಗಾಯಗಳಾಗಿದ್ದು, ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಮಾದನಾಯಕನಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಹರೀಶ್ (39), ಪತ್ನಿ ಮೈತ್ರಿ (32), ಮಗಳು ಸಿರಿ (10), ತಂದೆ ವೀರಭದ್ರ (88), ತಾಯಿ ಗೌರಮ್ಮ (62) ಹಾಗೂ ಪುಟ್ಟ ಬಾಲಕಿ ಹರೀಶ್ ಅಕ್ಕನ ಮಗಳು ವಂದನಾ (8) ಇವರು ಗುರುವಾರ ದಾಸರಹಳ್ಳಿಯಲ್ಲಿರುವ ಸ್ವಂತ ಮನೆಯಿಂದ ಹುಟ್ಟೂರು ಗೌರಿಬಿದನೂರಿಗೆ ತೆರಳಿದ್ದರು. ಹುಟ್ಟೂರಿನಲ್ಲಿ ಜಮೀನು ನೋಡಿಕೊಂದು ಕುಟುಂಬದವರ ಜೊತೆ ಸಮಯ ಕಳೆದು ವಾಪಸ್ ಆಗುತ್ತಿದ್ದರು.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ಬಸ್ ಭಸ್ಮ: ಮೂವರು ನಾಪತ್ತೆ, ಸಾವಿನ ಸಂಖ್ಯೆಯಲ್ಲಿ ಗೊಂದಲ
ಸಂಜೆ 6ಗಂಟೆಗೆ ಗೌರಿಬಿದನೂರಿನಿಂದ ಹೊರಟಿದ್ದ ಕುಟುಂಬ, ಹರೀಶ್ ಡ್ರೈವಿಂಗ್ ಮಾಡುತ್ತಿದ್ದರು. ರೈಲ್ವೆ ಗೊಲ್ಲಹಳ್ಲಿಯಿಂದ ಹೆಸರಘಟ್ಟ ಮಾರ್ಗವಾಗಿ ದಾಸರಹಳ್ಳಿಗೆ ತೆರಳುತ್ತಿದ್ದರು. ಆದರೆ ದಾರಿ ಮಧ್ಯೆ ತೋಟದ ಗುಡ್ಡದಹಳ್ಳಿ ಟರ್ನಿಂಗ್ ಬಳಿ ಲಾರಿಯೊಂದನ್ನು ಓವರ್ ಟೇಕ್ ಮಾಡಲು ಮುಂದಾಗಿದ್ದಾರೆ. ಈ ವೇಳೆ ಎದುರಗಡೆ ಬಂದ ಲಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಹೋಗಿ ಬಲಭಾಗಕ್ಕೆ ಎಳೆದಿದ್ದಾರೆ.
ಸಂಜೆ 7:30 ಆಗಿದ್ದರಿಂದ ಕತ್ತಲಲ್ಲಿ ಎದುರಿಗೆ ಇದ್ದ ಮರಕ್ಕೆ ಕಾರು ಡಿಕ್ಕಿ ಹೊಡೆದಿದ್ದು, ಹರೀಶ್ ಹಾಗೂ ತಂದೆ ವೀರಭದ್ರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನುಳಿದ ಮೈತ್ರಿ, ಗೌರಮ್ಮ, ಸಿರಿ, ವಂದನಾ ಸ್ಥಿತಿ ಚಿಂತಾಜನಕವಾಗಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಗೆ ನೆಲಮಂಗಲ ಶವಾಗಾರಕ್ಕೆ ರವಾನಿಸಲಾಗಿದೆ.
ಜಮೀನಿನಲ್ಲಿ ಕಾಣಿಸಿಕೊಂಡ ಬೆಂಕಿ ನಂದಿಸಲು ಹೋಗಿ ರೈತ ಸಜೀವ ದಹನವಾಗಿರುವಂತಹ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಗ್ರಾಮದಲ್ಲಿ ನಡೆದಿದೆ. ಕೃಷ್ಣಪ್ಪ(55) ಮೃತ ರೈತ.
ಇದನ್ನೂ ಓದಿ: ಸಿರುಗುಪ್ಪ ಬಳಿ ಕಾರು ಪಲ್ಟಿಯಾಗಿ ಭೀಕರ ಅಪಘಾತ: ತಮಿಳುನಾಡಿನ ದೇಗುಲಕ್ಕೆ ಹೋಗಿ ಬರುತ್ತಿದ್ದ ಒಂದೇ ಕುಟುಂಬದ ಮೂವರು ಸಾವು
ಜಮೀನಿನಲ್ಲಿದ್ದ ಹುಲ್ಲಿನ ರಾಶಿಗೆ ಆಕಸ್ಮಿಕ ಬೆಂಕಿ ತಗುಲಿದ್ದು, ರೈತ ಬೆಂಕಿ ನಂದಿಸಲು ಮುಂದಾಗಿದ್ದ. ಈ ವೇಳೆ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ರೈತ ಕೃಷ್ಣಪ್ಪ ಸಾವನ್ನಪ್ಪಿದ್ದಾರೆ. ನೆಲಮಂಗಲ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ: ಮಂಜುನಾಥ್ ಟಿವಿ9 ನೆಲಮಂಗಲ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.