
ನೆಲಮಂಗಲ, ಏಪ್ರಿಲ್ 13: ನೈಸ್ ರಸ್ತೆಯಲ್ಲಿ ವಾಹನ ತಪಾಸಣೆ ನಡೆಸಿ ಬಿಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ನೆಲಮಂಗಲ ಆರ್ಟಿಒ ಕಚೇರಿಯ ಇಬ್ಬರು ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. 30,000 ರೂ. ಲಂಚಕ್ಕೆ ಬೇಡಿಕೆಯಿಟ್ಟಿದ್ದ ಸಂಬಂಧ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ಆರ್ಟಿಒ ಕಚೇರಿಯ ಪ್ರೊಬೇಷನರಿ ಇನ್ಸ್ಪೆಕ್ಟರ್ಗಳಾದ ದಿನೇಶ್ ಕುಮಾರ್, ಕಿರಣ್ ಮತ್ತು ಖಾಸಗಿ ವ್ಯಕ್ತಿ ರಮೇಶ್ ಎಂಬಾತನನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ತಪಾಸಣೆ ನೆಪದಲ್ಲಿ ವಾಹನಗಳನಗಳನ್ನು ತಡೆಯುತ್ತಿದ್ದ ಅಧಿಕಾರಿಗಳು ಗೂಗಲ್ ಪೇ ಮೂಲಕ 2,000, 1,000 ರೂಪಾಯಿ ಹಣವನ್ನು ಲಂಚ ಪಡೆದಿದ್ದರು. ಇಂದು ಖಾಸಗಿ ವ್ಯಕ್ತಿ ರಮೇಶ್ 300 ರೂ. ಲಂಚ ಪಡೆವಾಗ ಲೋಕಾಯುಕ್ತ ಪೊಲೀಸರು ಇವರನ್ನು ಖೆಡ್ಡಾಕೆ ಕೆಡವಿದ್ದಾರೆ. ಓವರ್‌ಲೋಡ್ ಟ್ರಕ್ ಬಿಡಲು ಲಂಚಕ್ಕೆ ಬೇಡಿಕೆ ಇಟ್ಟಿರುವ ಬಗ್ಗೆ ಮಹಾರಾಷ್ಟ್ರ ಮೂಲದ ಪ್ರಶಾಂತ್ ದತ್ತಾತ್ರೇಯ ಎಂಬುವವರು ಲೋಕಾಯುಕ್ತಕ್ಕೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ವಿರುದ್ಧ ದೂರು ನೀಡಿದ್ದರು. ಈ ಹಿನ್ನೆಲೆ ಲೋಕಾಯುಕ್ತ ಎಸ್ಪಿ ವಂಶಿಕೃಷ್ಣ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.
ಇದನ್ನೂ ಓದಿ: ಕೆಜಿಗಟ್ಟಲೆ ಚಿನ್ನ, 14 ಕೋಟಿ ರೂ. ಅಕ್ರಮ ಆಸ್ತಿ; ದಿನಗೂಲಿ ನೌಕರ ಕೋಟಿ ಕುಬೇರನಾಗಿದ್ದೇ ರೋಚಕ!
ಪ್ರತಿನಿತ್ಯ ವಾಹನಗಳ ತಪಾಸಣೆ ನಡೆಸುತ್ತಿದ್ದ ಇಬ್ಬರು ಆರ್‌ಟಿಓ ಅಧಿಕಾರಿಗಳು ವಾಹನಗಳ ಚಾಲಕರ ಬಳಿ ಲಂಚ ಪಡೆದು ಕಳುಹಿಸುತ್ತಿರುವ ಆರೋಪ ಕೇಳಿಬಂದಿತ್ತು. ದೂರುದಾರರ ಪ್ರಕಾರ ವಾಹನ ವಾಹನವನ್ನು ಸಾಗಲು ಅನುಮತಿ ನೀಡಿದ ನಂತರ ಉಳಿದ ಹಣವನ್ನು ಪಾವತಿಸಬೇಕೆಂದು ಅಧಿಕಾರಿಗಳು ಅವರಿಗೆ ತಿಳಿಸಿದ್ದರು ಎನ್ನಲಾಗಿದೆ. ಈ ಕುರಿತ ದೂರಿನ ಆಧಾರದದಲ್ಲಿ ಲೋಕಾಯುಕ್ತ ಪೊಲೀಸರು ಆರ್ಟಿಒ ಅಧಿಕಾರಿಗಳನ್ನು ಟ್ರ‍್ಯಾಪ್ ಮಾಡಿ ವಿಚಾರಣೆಗೆ ಒಳಪಡಿಸಿದ್ದಾರೆ.
ವರದಿ: ಮಂಜುನಾಥ್, ಟಿವಿ9 ನೆಲಮಂಗಲ
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:34 pm, Mon, 13 April 26