ಬೆಂಗಳೂರು: ಶಾಲಾ ಕಟ್ಟಡದಿಂದ ಹಾರಿ 17 ವರ್ಷದ ಬಾಲಕ ಸಾವು

ಬೆಂಗಳೂರಿನಲ್ಲಿ ಮಕ್ಕಳ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೀಗ ರಿಚರ್ಡ್ಸ್ ಟೌನ್‌ನಲ್ಲಿ 17 ವರ್ಷದ ವಿದ್ಯಾರ್ಥಿಯೊಬ್ಬ ಶಾಲಾ ಕಟ್ಟಡದಿಂದ ಹಾರಿ ಸಾವನ್ನಪ್ಪಿದ್ದಾನೆ. ಈ ಘಟನೆ ಅ.13ರಂದು ನಡೆದಿದ್ದು, ವಿದ್ಯಾರ್ಥಿಯ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಸಿಸಿಟಿವಿ ಪರಿಶೀಲಿಸಿ, ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು: ಶಾಲಾ ಕಟ್ಟಡದಿಂದ ಹಾರಿ 17 ವರ್ಷದ ಬಾಲಕ ಸಾವು
ಸಾಂದರ್ಭಿಕ ಚಿತ್ರ

Updated on: Oct 14, 2025 | 12:07 PM

ಬೆಂಗಳೂರು, ಅ.14: ಬೆಂಗಳೂರಿನಲ್ಲಿ (Bengaluru) ದಿನದಿಂದ ದಿನಕ್ಕೆ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಅದರಲ್ಲೂ ಮಕ್ಕಳು ಹೆಚ್ಚಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.  ಸಣ್ಣ ಪುಟ್ಟ ವಿಚಾರಗಳಿಗೆ ಆತ್ಮಹತ್ಯೆಯ ದಾರಿಯನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಬೆಂಗಳೂರಿನ ಪೂರ್ವ ಭಾಗದ ರಿಚರ್ಡ್ಸ್ ಟೌನ್‌ನಲ್ಲಿ ಸೋಮವಾರದಂದು (ಅ.13) 17 ವರ್ಷದ ಬಾಲಕನೊಬ್ಬ ತನ್ನ ಶಾಲಾ ಕಟ್ಟಡದಿಂದ ಹಾರಿ ಸಾವನ್ನಪ್ಪಿದ್ದಾನೆ. ಮೃತನ್ನು 12ನೇ ತರಗತಿಯ ವಿಜ್ಞಾನ ವಿದ್ಯಾರ್ಥಿ ಎಂದು ಹೇಳಲಾಗಿದೆ.  ಬೆಳಿಗ್ಗೆ 8.20ರ ಸುಮಾರಿಗೆ ಶಾಲಾ ಕಟ್ಟಡದಿಂದ ಹಾರಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಏನು ಎಂಬುದು ಇಲ್ಲಿಯವರೆಗೆ ತಿಳಿದು ಬಂದಿಲ್ಲ.  ವಿದ್ಯಾರ್ಥಿಯ ಸಾವನ್ನು ಅಹಜ ಸಾವು ಎಂದು ವರದಿ (ಯುಡಿಆರ್) ಮಾಡಲಾಗಿದೆ. ಈಗಾಗಲೇ ಪೊಲೀಸರು ಶಾಲೆಯ ಸಿಸಿಟಿವಿಯನ್ನು ಪರಿಶೀಲನೆ ಮಾಡಿದ್ದು, ವಿದ್ಯಾರ್ಥಿ ಸಾವಿಗೆ ಕಾರಣ ಏನು ಎಂಬುದನ್ನು ತನಿಖೆ ನಡೆಸುತ್ತಿದ್ದಾರೆ.

ಶಾಲೆಯ ಆಡಳಿತ ಮಂಡಳಿ ವಿದ್ಯಾರ್ಥಿಯ ಮನೆಯವರಿಗೆ ಕಳಿಸಿದ ಪತ್ರದ ಪ್ರಕಾರ, ಶಾಲೆಯಲ್ಲಿ ಮಕ್ಕಳ ಬೆಳಗಿನ ಅಸೆಂಬ್ಲಿ ಸಮಯದಲ್ಲಿ ವಿದ್ಯಾರ್ಥಿ ಶಾಲೆಯ ಎರಡನೇ ಮಹಡಿಯಿಂದ ಹಾರಿದ್ದಾನೆ ಎಂದು ಹೇಳಲಾಗಿದೆ. ವಿದ್ಯಾರ್ಥಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ ಎಂದು ಈ ಪತ್ರದಲ್ಲಿ ತಿಳಿಸಲಾಗಿದೆ. ಶಾಲೆಯ ಶಿಕ್ಷಕರು ಹೇಳಿರುವಂತೆ, ತುಂಬಾ ಚುಟುವಟಿಕೆಯಿಂದ ಇರುವ ವಿದ್ಯಾರ್ಥಿ, ಶಾಲೆಯ ಎಲ್ಲ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದ, ಪ್ರತಿಭಾನ್ವಿತ ಕ್ರೀಡಾಪಟು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸೋಷಿಯಲ್ ಮೀಡಿಯಾದಿಂದ ಹೆಚ್ಚಿದ ಅಪರಾಧ, ಕಳೆದ ವರ್ಷಕ್ಕಿಂತ ಶೇ 21 ಹೆಚ್ಚಳ

ಇನ್ನು ವಿದ್ಯಾರ್ಥಿಯ ಸಾವಿನ ಸುದ್ದಿಯಿಂದ ಮನೆಯವರು ಕೂಡ ತುಂಬಾ ಅಘಾತಕ್ಕೆ ಒಳಲಾಗಿದ್ದು, ಮಂಗಳವಾರ ಶಾಲೆಗೂ ರಜೆಯನ್ನು ನೀಡಲಾಗಿದೆ. ವಿದ್ಯಾರ್ಥಿಯ ಸಾವಿಗೆ ಕಾರಣವೇನು? ಮೇಲ್ನೋಟಕ್ಕೆ ಆತ್ಮಹತ್ಯೆಯಾಗಿದ್ದರು, ನಿಜವಾದ ಕಾರಣ ತನಿಖೆಯಿಂದ ತಿಳಿಯಬೇಕಿದೆ ಎಂದು ಪೊಲೀಸರು ಹೇಳಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

Published On - 11:35 am, Tue, 14 October 25