ಬೆಂಗಳೂರು: ಸುಮಾರು 20 ಸಾವಿರಕ್ಕೂ ಹೆಚ್ಚು ಡೋಸ್ ಕೋವ್ಯಾಕ್ಸಿನ್ ಲಸಿಕೆಯನ್ನು (Covaxin Vaccine) ಹೊಂದಿರುವ ಜಯನಗರದ ಯುನೈಟೆಡ್ ಆಸ್ಪತ್ರೆ (Covaxin Vaccine), ಸರಕಾರ ನಿಗದಿಪಡಿಸಿರುವ ದರದಲ್ಲಿ 210 ರೂಪಾಯಿ ರಿಯಾಯಿತಿ ನೀಡಲಿದೆ. ಸಾಮಾಜಿಕ ಕಾಳಜಿಯಿಂದ ಹಾಗೂ ನಮ್ಮ ಬಳಿ ಇರುವ ಲಸಿಕೆಯಿಂದ ಹೆಚ್ಚು ಜನರನ್ನು ರಕ್ಷಣೆ ಮಾಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಯುನೈಟೆಡ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ವಿಕ್ರಮ್ ಸಿದ್ದಾರೆಡ್ಡಿ ಹೇಳಿದ್ದಾರೆ.
ಬೆಂಗಳೂರು ನಗರದಲ್ಲೆಡೆ ಲಸಿಕೆಗಳ ಲಭ್ಯತೆಯಲ್ಲಿ ಕೊರತೆ ಕಂಡುಬರುತ್ತಿದೆ. ಅದರಲ್ಲೂ ವ್ಯಾಪಕವಾಗಿ ಹರಡುತ್ತಿರುವ ಡೆಲ್ಟಾ ಪ್ಲಸ್ ವೇರಿಯಂಟ್ ವಿರುದ್ಧ ಪರಿಣಾಮಕಾರಿಯಾಗಿರುವ ಕೋವ್ಯಾಕ್ಸಿನ್ ಲಸಿಕೆಯ ಕೊರತೆ ಹೆಚ್ಚಾಗಿದೆ. ನಮ್ಮ ಆಸ್ಪತ್ರೆಯ ಮಂಡಳಿಯ ವತಿಯಿಂದ ನಾವು ಎರಡು ತಿಂಗಳ ಹಿಂದೆ ಕೋವ್ಯಾಕ್ಸಿನ್ ಹಾಗೂ ಇತರೆ ಲಸಿಕೆಗಳಿಗೆ ಮುಂಗಡ ಹಣವನ್ನು ನೀಡಿ ಖರೀದಿಸಿದ್ದೇವು. ಇತ್ತೀಚಿಗೆ ನಮ್ಮ ಆಸ್ಪತ್ರೆಗೆ 20,000 ಡೋಸ್ನಷ್ಟು ಕೋವ್ಯಾಕ್ಸಿನ್ ಲಸಿಕೆ ಸರಬರಾಜು ಆಗಿದೆ. ಇದರಲ್ಲಿ 5,000 ಡೋಸ್ಗಳನ್ನು ನಾವು ಕೊರೊನಾ ಎರಡನೇ ಅಲೆಯಲ್ಲಿ ಅತ್ಯುತ್ತಮ ಸೇವೆಯನ್ನು ಒದಗಿಸಿದ ಕಲಬುರ್ಗಿಯ ಆಸ್ಪತ್ರೆಯಲ್ಲಿ ಬಳಸಲಿದ್ದೇವೆ ಎಂದು ಹೇಳಿದರು.
ಇನ್ನುಳಿದ 15 ಸಾವಿರ ಡೋಸ್ಗಳನ್ನು 20 ಸಹಯೋಗಿ ಆಸ್ಪತ್ರೆಯ ಮತ್ತು ಕ್ಲಿನಿಕ್ಗಳ ಮುಖಾಂತರ ಬೆಂಗಳೂರಿನಲ್ಲಿ ಬಳಸಲಿದ್ದು, ಸರಕಾರ ನಿಗದಿ ಪಡಿಸಿರುವ 1,410 ರೂಪಾಯಿಗಳಲ್ಲಿ 210 ರೂಪಾಯಿಗಳ ರಿಯಾಯಿತಿ ನೀಡಿ 1,200 ರೂಪಾಯಿ ದರದಲ್ಲಿ ನೀಡಲು ನಮ್ಮ ಆಸ್ಪತ್ರೆಯ ಆಡಳಿತ ಮಂಡಳಿ ನಿರ್ಧರಿಸಿದೆ. ಎರಡನೇ ಡೋಸ್ ಕೋವ್ಯಾಕ್ಸಿನ್ ದೊರಕದೆ ತೊಂದರೆ ಪಡುತ್ತಿರುವ ಜನರ ಅನುಕೂಲಕ್ಕಾಗಿ ಈ ಯೋಜನೆಯನ್ನು ರೂಪಿಸಿದ್ದೇವೆ ಎಂದು ಯುನೈಟೆಡ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ವಿಕ್ರಮ್ ಸಿದ್ದಾರೆಡ್ಡಿ ತಿಳಿಸಿದರು.
ಜಯನಗರದ ಯುನೈಟೆಡ್ ಆಸ್ಪತ್ರೆಯನ್ನು ಕೊವಿಡ್ ಲಸಿಕೆ ನೀಡುವ ಸಲುವಾಗಿಯೇ ಕಾಯ್ದಿರಿಸಲಾಗಿದ್ದು, ಇದನ್ನು ಲಸಿಕೆ ನೀಡುವ ಸ್ಪೇಷಾಲಿಟಿ ಆಸ್ಪತ್ರೆಯಾಗಿ ಮಾರ್ಪಡಿಸಲಾಗಿದೆ. ಇದರಿಂದಾಗಿ ಲಸಿಕೆ ಪಡೆಯುವವರು ಯಾವುದೇ ಭಯವಿಲ್ಲದೆ ಆಸ್ಪತ್ರೆಗೆ ತೆರಳಿ ಲಸಿಕೆ ಪಡೆಯಬಹುದಾಗಿದೆ. ಈ ಆಸ್ಪತ್ರೆಯನ್ನು ಲಸಿಕೆ ಪಡೆಯುವವರಿಗೆ ಸೇಫ್ ಜೋನ್ ಎನ್ನಬಹುದೆಂದು ಡಾ.ವಿಕ್ರಮ್ ಸಿದ್ದಾರೆಡ್ಡಿ ಅಭಿಪ್ರಾಯಪಟ್ಟರು.
ಯುನೈಟೆಡ್ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಶಾಂತಕುಮಾರ್ ಮುರುಡಾ ಮಾತನಾಡಿ, ಐಸಿಎಂಆರ್ ಸಂಸ್ಥೆಯ ವತಿಯಿಂದ ನಡೆಸಲಾದ ಸಂಶೋಧನೆಯಲ್ಲಿ ಕೋವ್ಯಾಕ್ಸಿನ್ ಡೆಲ್ಟಾ ಹಾಗೂ ಡೆಲ್ಟಾ ಪ್ಲಸ್ ವೇರಿಯೆಂಟ್ ವಿರುದ್ಧ ಬಹಳ ಪರಿಣಾಮಕಾರಿ ಎಂದು ತಿಳಿದುಬಂದಿದೆ. ನಮ್ಮ ಆಸ್ಪತ್ರೆಯಲ್ಲಿ ಈ ಲಸಿಕೆ ಲಭ್ಯವಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಕೊರೊನಾ ಮಹಾಮಾರಿಯ ವಿರುದ್ಧ ರಕ್ಷಣೆ ಪಡೆದುಕೊಳ್ಳಲು ಅನುವು ಮಾಡಿಕೊಡುವುದು ನಮ್ಮ ಉದ್ದೇಶವಾಗಿದೆ. ಕಡಿಮೆ ಸಮಯದಲ್ಲಿ ಹೆಚ್ಚು ಜನರಿಗೆ ಈ ಲಸಿಕೆಯನ್ನು ತಲುಪಿಸುವ ನಿಟ್ಟಿನಲ್ಲಿ ನಮ್ಮ ಸಹಯೋಗಿ ಆಸ್ಪತ್ರೆಗಳ ಮೂಲಕವೂ ಲಸಿಕೆಯನ್ನು ಸಾರ್ವಜನಿಕರಿಗೆ ದೊರಕಿಸಿಕೊಡಲಿದ್ದೇವೆ.
ಆಸ್ಪತ್ರೆಯ ವತಿಯಿಂದ ಕಡಿಮೆ ದರದಲ್ಲಿ ಸದಸ್ಯತ್ವ ಕಾರ್ಡನ್ನೂ ಪಡೆದುಕೊಳ್ಳುವ ಮೂಲಕ ಎರಡನೇ ಡೋಸ್ ಕೋವ್ಯಾಕ್ಸಿನನ್ನು ಕಾಯ್ದಿರಿಸುವ ಅವಕಾಶವನ್ನು ಕಲ್ಪಿಸಲಾಗಿದೆ. ಈಗಾಗಲೇ ನಮ್ಮ ಆಸ್ಪತ್ರೆಯ ವತಿಯಿಂದ 4 ಸಾವಿರಕ್ಕೂ ಹೆಚ್ಚು ಸ್ಪುಟ್ನಿಕ್-ವಿ ಲಸಿಕೆಯ ಎರಡೂ ಡೋಸನ್ನು ನೀಡಲಾಗಿದ್ದು, ಇನ್ನೂ 12 ಸಾವಿರ ಡೋಸ್ಗೆ ಆರ್ಡರ್ ನೀಡಿದ್ದೇವೆ ಎಂದು ಹೇಳಿದರು.
ಬೆಂಗಳೂರಿನ ಜಯನಗರದ ಮಾಧವ ಪಾರ್ಕ್ನಲ್ಲಿರುವ ಯುನೈಟೆಡ್ ಆಸ್ಪತ್ರೆಯಲ್ಲಿ ಈ ಲಸಿಕೆಯನ್ನು ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ವಾಟ್ಸಾಪ್ ಮೂಲಕ ಸುಲಭವಾಗಿ ಸ್ಲಾಟ್ ಬುಕ್ ಮಾಡಬಹುದು. ವಾಟ್ಸಾಪ್ ನಂ- 9916977777
ಯುನೈಟೆಡ್ ಆಸ್ಪತ್ರೆ- 080 4566 6666 / 080 6933
ಇದನ್ನೂ ಓದಿ
ಗೋವಾದಲ್ಲಿ ಅವಧಿಗೂ ಪೂರ್ವ ವಿಧಾನಸಭೆ ಚುನಾವಣೆ?!-ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದೇನು?
ನನ್ನ ಪ್ರಗತಿ ಪರಿಶೀಲನೆ ಸ್ಟೈಲ್ ಬೇರೆ ರೀತಿ; ಮಂಗಳೂರನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ
(210 Rs cost of Covaxin vaccine Jayanagar United Hospital has decided to offer a discount)