ನನ್ನ ಪ್ರಗತಿ ಪರಿಶೀಲನೆ ಸ್ಟೈಲ್ ಬೇರೆ ರೀತಿ; ಮಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ
ರಾಜ್ಯದ ಎಲ್ಲಾ ಕಡೆಗಳಲ್ಲೂ ವೆಂಟಿಲೇಟರ್, ಆಕ್ಸಿಜನ್ ಬೆಡ್ಗಳನ್ನ ಹೆಚ್ಚಿಸಲಾಗ್ತಿದೆ. ಎಂಥಾ ಪರಿಸ್ಥಿತಿ ಬಂದರೂ ಸನ್ನದ್ದರಾಗಿರಲು ನಾವು ಸಿದ್ಧ. ಮಕ್ಕಳಿಗೆ ಸೋಂಕು ತಗುಲುತ್ತಿರುವ ಬಗ್ಗೆ ಗಂಭೀರವಾಗಿ ಪರಿಗಣಿಸಲಾಗಿದೆ.
ಮಂಗಳೂರು: ಕರಾವಳಿ ಜಿಲ್ಲೆಗಳಿಗೆ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಇಂದು (ಆಗಸ್ಟ್ 12) ಮಂಗಳೂರಿಗೆ ಭೇಟಿ ನೀಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ಗಡಿ ಜಿಲ್ಲೆಯಲ್ಲಿ ಜಾಗೃತೆ ವಹಿಸಬೇಕು. ಪಕ್ಕದ ರಾಜ್ಯದವರಿಗೆ ಟೆಸ್ಟ್ ಮಾಡಬೇಕು. ಈಗಾಗಲೇ ಎಲ್ಲಾ ಗಡಿ ಜಿಲ್ಲೆಗಳಿಗೆ ನಾನು ಭೇಟಿ ಕೊಡುತ್ತಿದ್ದೇನೆ. ಮೈಸೂರು ಮುಗಿಸಿ ನಂತರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಪ್ರವಾಸ ಕೈಗೊಂಡಿದ್ದೇನೆ. ಕೇರಳ ಮತ್ತು ಮಹಾರಾಷ್ಟ್ರದ ಎಲ್ಲಾ ಗಡಿ ಜಿಲ್ಲೆಗಳಿಗೆ ಭೇಟಿ ಕೊಡುತ್ತೇನೆ ಎಂದು ತಿಳಿಸಿದರು.
ರಾಜ್ಯದ ಎಲ್ಲಾ ಕಡೆಗಳಲ್ಲೂ ವೆಂಟಿಲೇಟರ್, ಆಕ್ಸಿಜನ್ ಬೆಡ್ಗಳನ್ನ ಹೆಚ್ಚಿಸಲಾಗುತ್ತಿದೆ. ಎಂಥಾ ಪರಿಸ್ಥಿತಿ ಬಂದರೂ ಸನ್ನದ್ದರಾಗಿರಲು ನಾವು ಸಿದ್ಧ. ಮಕ್ಕಳಿಗೆ ಸೋಂಕು ತಗುಲುತ್ತಿರುವ ಬಗ್ಗೆ ಗಂಭೀರವಾಗಿ ಪರಿಗಣಿಸಲಾಗಿದೆ. ಮಕ್ಕಳ ಇಮ್ಯುನಿಟಿ ಪವರ್ ಹೆಚ್ಚಿಸುವ ಸಲುವಾಗಿ ಪೌಷ್ಟಿಕ ಆಹಾರ ನೀಡಲು ಸೂಚಿಸಲಾಗಿದೆ. ಜಿಲ್ಲೆ ಮತ್ತು ತಾಲೂಕುಗಳಲ್ಲಿ ಮಕ್ಕಳ ಕೋವಿಡ್ ಟೆಸ್ಟ್ಗೆ ಒಳಪಡಿಸಲು ಸೂಚನೆ ನೀಡಲಾಗಿದೆ. ಎಲ್ಲಾ ಆಸ್ಪತ್ರೆಗಳಲ್ಲಿ ಮಕ್ಕಳ ಐಸಿಯು ಮತ್ತು ಬೆಡ್ಗಳು ತಯಾರಾಗಿವೆ ಎಂದು ಹೇಳಿದರು.
3ನೇ ಅಲೆಯಲ್ಲಿ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಹೀಗಾಗಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡುವುದಕ್ಕೆ ವ್ಯವಸ್ಥೆ ಮಾಡುತ್ತಿದ್ದೇವೆ. ರಾಜ್ಯಾದ್ಯಂತ ‘ವಾತ್ಸಲ್ಯ ಕೇಂದ್ರ’ ತೆರೆಯಲಾಗುವುದು. ಮಕ್ಕಳಿಗೆ ಚಿಕಿತ್ಸೆ ನೀಡುವುದಕ್ಕೆ ಐಸಿಯುನಲ್ಲಿಯೂ ವ್ಯವಸ್ಥೆ ಮಾಡಲಾಗುವುದು ಎಂದು ಅಭಿಪ್ರಾಯಪಟ್ಟರು.
ಆಗಸ್ಟ್ 23ರಿಂದ 9-12ನೇ ತರಗತಿಗಳ ಆರಂಭಕ್ಕೆ ನಿರ್ಧಾರ ಮಾಡಲಾಗಿದೆ. ಬ್ಯಾಚ್ ವೈಸ್ ತರಗತಿ ಆರಂಭ ಮಾಡಲು ನಿರ್ಧರಿಸಿದ್ದೇವೆ. ಇದನ್ನು ನೋಡಿಕೊಂಡು ಮುಂದಿನ ನಿರ್ಧಾರ ಮಾಡುತ್ತೇವೆ ಎಂದು ಮಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಕೊವಿಡ್ ಕೇರ್ ಸೆಂಟರ್‌ಗೆ ದಾಖಲಿಸಲು ಸೂಚನೆ ನೀಡಿದರು. ಈ ವೇಳೆ ಮಧ್ಯಪ್ರವೇಶಿಸಿದ ಸಿಎಂ ಬಸವರಾಜ ಬೊಮ್ಮಾಯಿ, ಕೊವಿಡ್ ಕೇರ್ ಸೆಂಟರ್‌ಗೆ ಬನ್ನಿ ಅಂದ್ರೆ ಜನ ಬರಲ್ಲ. ಮೊದಲು ಕೋವಿಡ್ ಕೇರ್ ಸೆಂಟರ್ಗಳಲ್ಲಿ ವ್ಯವಸ್ಥೆ ಹೆಚ್ಚಿಸಿ. ಆಕ್ಸಿಜನ್, ವೆಂಟಿಲೇಟರ್ ಸೇರಿ ಎಲ್ಲಾ ಸೌಕರ್ಯ ಮಾಡಿ ಕೊಡಿ. ಆ ಬಳಿಕ ಸೋಂಕಿತ ವ್ಯಕ್ತಿಯ ಮನೆಯ ಸುತ್ತ ಟೆಸ್ಟಿಂಗ್ ಹೆಚ್ಚಿಸಿ. ನಂತರ ವೈದ್ಯರ ತಂಡ ನೇಮಿಸಿ ಸೋಂಕಿತನ ರೋಗ ಲಕ್ಷಣ ಗಮನಿಸಿ ಮನವೊಲಿಸಿ. ಆದಷ್ಟು ಸೋಂಕಿತರನ್ನ ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಿ ಎಂದು ತಿಳಿಸಿದರು.
ಈ ವೇಳೆ ಎಲ್ಲದಕ್ಕೂ ಪರಿಹಾರ ಕೊಡೋಣ ಎಂದು ತಿಳಿಸಿದ ಬೊಮ್ಮಾಯಿ, ನನ್ನ ಪ್ರಗತಿ ಪರಿಶೀಲನೆ ಸ್ಟೈಲ್ ಸ್ವಲ್ಪ ಬೇರೆ ರೀತಿ. ನಾನು ಇಲ್ಲೇ ಅದಕ್ಕೆಲ್ಲಾ ಪರಿಹಾರ ಕಂಡುಕೊಂಡೇ ಹೋಗುತ್ತೀನಿ ಎಂದು ಹೇಳಿದರು.
ವೈಜ್ಞಾನಿಕ ಕಾರಣ ನೋಡಿ ಹೋಂ ಐಸೋಲೇಷನ್ ಮಾಡಿ. ವೈದ್ಯರ ಮೂಲಕ ಸೋಂಕಿತರ ಮನವೊಲಿಕೆ ಕೆಲಸ ಮಾಡಿ. ಗ್ರಾಮೀಣ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ತಳಮಟ್ಟದಲ್ಲಿ ಕೊರೊನಾ ಸೋಂಕಿನ ಬಗ್ಗೆ ಪರಿಶೀಲಿಸಿ. ಹೋಂ ಐಸೋಲೇಷನ್‌ನಲ್ಲಿರುವವರಿಗೆ ದಿನಕ್ಕೆ 2 ಬಾರಿ ತಪಾಸಣೆ ಮಾಡಿ. ಅವರ ಮನೆ, ಕೊಠಡಿ, ಸುತ್ತಲಿನ ವ್ಯವಸ್ಥೆಯತ್ತ ಗಮನಹರಿಸಿ. ಕೊವಿಡ್ ಕೇರ್ ಸೆಂಟರ್ ಕೂಡ ಸುವ್ಯವಸ್ಥಿತವಾಗಿರಲಿ. ಉತ್ತಮವಾಗಿ ಕೆಲಸ ಮಾಡಿದ್ರೆ ಲಾಕ್‌ಡೌನ್ ಅಗತ್ಯವಿಲ್ಲ ಅಂತ ಸಭೆಯಲ್ಲಿ ಅಧಿಕಾರಿಗಳಿಗೆ ಸಿಎಂ ಬೊಮ್ಮಾಯಿ ಸೂಚನೆ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಯು.ಟಿ.ಖಾದರ್, ಪಾಸಿಟಿವ್ ಬಂದ್ರೆ ಕೊವಿಡ್ ಕೇರ್ ಸೆಂಟರ್‌ಗೆ ಸೇರಿಸ್ತೀರಿ. ಆದರೆ ಇದು ಪ್ರಾಕ್ಟಿಕಲ್ ಆಗಿ ಮಾಡುವುದಕ್ಕೆ ಅಸಾಧ್ಯ. ಹೋಂ ಐಸೋಲೇಷನ್ ಮಾಡುತ್ತಾರೆಂದು ಟೆಸ್ಟ್ ಮಾಡಿಸ್ತಾರೆ. ಆದರೆ ನೀವು ಕೊವಿಡ್ ಕೇರ್ ಸೆಂಟರ್‌ಗೆ ಸೇರಿಸಿದರೆ ಜನರು ಕೊವಿಡ್ ಟೆಸ್ಟ್ ಮಾಡಿಸುವುದಕ್ಕೂ ಬರುವುದಿಲ್ಲ. ಟೆಸ್ಟ್ ಮಾಡಿ ಅವರನ್ನು ಜೈಲಿಗೆ ಹಾಕಿದಂತೆ ಆಗುತ್ತದೆ. ಭಯದಿಂದ ಯಾರೂ ಟೆಸ್ಟ್‌ಗೇ ಬರುವುದಿಲ್ಲ. ಹೀಗಾಗಿ ಆದೇಶ ಮಾಡುವ ಮುನ್ನ ಚರ್ಚೆ ಮಾಡಬೇಕು ಅಂತ ತಿಳಿಸಿದರು.
ದಕ್ಷಿಣ ಕನ್ನಡ ಡಿಸಿ ಡಾ.ಕೆ.ವಿ.ರಾಜೇಂದ್ರಗೆ ಸಿಎಂ ತರಾಟೆ ಸಭೆ ವೇಳೆ ದಕ್ಷಿಣ ಕನ್ನಡ ಡಿಸಿ ಡಾ.ಕೆ.ವಿ.ರಾಜೇಂದ್ರಗೆ ಸಿಎಂ ತರಾಟೆಗೆ ತೆಗೆದುಕೊಂಡರು. ಮಾಸ್ಕ್, ಗ್ಲೌಸ್ ಇಲ್ಲದೇ ಏನು ಆಡಳಿತ ಮಾಡ್ತೀರಾ ಇಲ್ಲಿ? ಆರೋಗ್ಯ ಸಿಬ್ಬಂದಿಗೆ ಬೇಕಾದ ಸವಲತ್ತು ಕೊಡಲು ಆಗಲ್ವಾ? ಅಷ್ಟು ಸಾಮಾನ್ಯಜ್ಞಾನ ಇಲ್ಲದಿದ್ರೆ ಇಲ್ಲೇನು ಮಾಡ್ತೀರಾ ನೀವು? ಇವತ್ತೇ ಎಲ್ಲ ಖರೀದಿಸಿ ನನಗೆ ವರದಿ ನೀಡಿ ಅಂತ ಜಿಲ್ಲಾಧಿಕಾರಿಯನ್ನು ಸಿಎಂ ಕ್ಲಾಸ್ ತೆಗೆದುಕೊಂಡಿದ್ದರು. ಜೊತೆಗೆ ದಕ್ಷಿಣ ಕನ್ನಡ ಡಿಹೆಚ್ಒ ಡಾ.ಕಿಶೋರ್ ಕುಮಾರ್ಗೂ ತರಾಟೆ ತೆಗೆದುಕೊಂಡ ಬೊಮ್ಮಾಯಿ, ಏನಯ್ಯಾ, ನೀನು ಇಲ್ಲಿ ಏನ್ ಮಾಡ್ತಿದ್ದೀಯಾ ಅಂತ ಹೇಳು? ನಿನ್ನ ಹತ್ರ ಇರುವ ಸಮಸ್ಯೆ ಡಿಸಿ ಗಮನಕ್ಕೆ ತರಲು ಆಗಲ್ವಾ? ಹಿರಿಯ ಆರೋಗ್ಯ ಅಧಿಕಾರಿ ಆಗಿ ನಿದ್ದೆ ಮಾಡ್ತಿದ್ದೀಯಾ? ಮಾಸ್ಕ್, ಗ್ಲೌಸ್ ಕೊರತೆ ಬಗ್ಗೆ ಲೆಕ್ಕ ಇಡಲು ಆಗಲ್ವಾ ನಿನಗೆ? ನಿಮ್ಮ ಸಮರ್ಥನೆ ಬೇಡ, ನನಗೆ ವರದಿ ಕೊಡಿ ಅಂತ ಹೇಳಿದರು.
ಇದನ್ನೂ ಓದಿ
ಹಾರ, ಪೇಟ, ಶಾಲುಗೆ ಬ್ರೇಕ್; ರಾಜ್ಯ ಸರ್ಕಾರದ ಆದೇಶ ವಿರೋಧಿಸಿ ರೈತರಿಂದ ಧರಣಿ
(CM Basavaraj Bommai B arrived in coastal districts and Gave some notice to the dc)
Published On - 1:28 pm, Thu, 12 August 21