Lokayukta: ಪೊಲೀಸರು ಅತಂತ್ರ: ಎಸಿಬಿ ಕಡತಗಳನ್ನು ಲೋಕಾಯುಕ್ತಕ್ಕೆ ವರ್ಗಾಯಿಸಲು ಎಡಿಜಿಪಿ ಆದೇಶ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Sep 11, 2022 | 10:20 AM

ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಮತ್ತೊಂದು ಆದೇಶ ಹೊರಡಿಸಿ, ಸೆ.12ರ ಒಳಗೆ ಕಡತ ವರ್ಗಾವಣೆ ಮಾಡಲು ಸೂಚಿಸಿದ್ದಾರೆ.

Lokayukta: ಪೊಲೀಸರು ಅತಂತ್ರ: ಎಸಿಬಿ ಕಡತಗಳನ್ನು ಲೋಕಾಯುಕ್ತಕ್ಕೆ ವರ್ಗಾಯಿಸಲು ಎಡಿಜಿಪಿ ಆದೇಶ
ಲೋಕಾಯುಕ್ತ ಮತ್ತು ಎಸಿಬಿ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಕರ್ನಾಟಕ ಸರ್ಕಾರವು ಹೊಸದಾಗಿ ಜಾರಿಗೆ ತಂದಿದ್ದ ಭ್ರಷ್ಟಾಚಾರ ನಿಗ್ರಹ ದಳ (Anti Corruption Bureu – ACB) ರಚನೆಯನ್ನು ರದ್ದುಪಡಿಸಿ, ಹಿಂದಿನಿಂದಲೂ ಅಸ್ತಿತ್ವದಲ್ಲಿದ್ದ ಲೋಕಾಯುಕ್ತ (Karnataka Lokayukfta) ಸಂಸ್ಥೆಗೆ ಬಲ ತುಂಬಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಬೆಳವಣಿಗೆಗೆ ಹೈಕೋರ್ಟ್​ ತೀರ್ಪು ಮುಖ್ಯ ಕಾರಣ. ಎಸಿಬಿ ರಚನೆ ರದ್ದುಪಡಿಸಿ, ಲೋಕಾಯುಕ್ತ ಬಲವರ್ಧನೆಗೆ ಆದೇಶ ಹೊರಬಿದ್ದ ಬೆನ್ನಲ್ಲೇ ಇದೀಗ ಎಡಿಜಿಪಿ ಸೀಮಂತ್ ಕುಮಾರ್ ಸಿಂಗ್ ಮತ್ತೊಂದು ಆದೇಶ ಹೊರಡಿಸಿ, ಸೆ.12ರ ಒಳಗೆ ಕಡತ ವರ್ಗಾವಣೆ ಮಾಡಲು ಸೂಚಿಸಿದ್ದಾರೆ.

ಈ ಬೆಳವಣಿಯ ಬೆನ್ನಲ್ಲೇ ಪೊಲೀಸ್ ಅಧಿಕಾರಿಗಳು ಅತಂತ್ರಗೊಂಡಿದ್ದು, ಮುಂದೇನು ಮಾಡಬೇಕು ಎನ್ನುವ ಬಗ್ಗೆ ಗೊಂದಲ ಮನೆಮಾಡಿದೆ. ಕರ್ನಾಟಕದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸಿಬಿ ಕಚೇರಿಗಳಲ್ಲಿ ಪ್ರಸ್ತುತ 75 ಇನ್​ಸ್ಪೆಕ್ಟರ್​ಗಳು, 45 ಡಿವೈಎಸ್‌ಪಿ, 9 ಮಂದಿ ಎಸ್‌ಪಿ ದರ್ಜೆಯ ಅಧಿಕಾರಿಗಳಿದ್ದಾರೆ. ಇಷ್ಟು ಅಧಿಕಾರಿಗಳಿಗೆ ಸ್ಥಳ ತೋರಿಸುವುದೇ ಗೃಹ ಇಲಾಖೆಗೆ ಕಷ್ಟವಾಗಿದೆ.

ಲೋಕಾಯುಕ್ತ ಸಂಸ್ಥೆಯಲ್ಲಿರುವ ಇನ್​ಸ್ಪೆಕ್ಟರ್, ಡಿವೈಎಸ್‌ಪಿ ಹುದ್ದೆಗಳು ಈಗಾಗಲೇ ಭರ್ತಿಯಾಗಿವೆ. ಪೊಲೀಸ್ ಇಲಾಖೆಯ ಇತರ ವಿಭಾಗಗಳಲ್ಲಿ ಹುದ್ದೆಗೆ ತಕ್ಕಷ್ಟು ಅಧಿಕಾರಿಗಳಿದ್ದಾರೆ. ಈ ಸಂದರ್ಭದಲ್ಲಿ ಎಸಿಬಿಯಲ್ಲಿ ಇರುವ ಅಧಿಕಾರಿಗಳಿಗೆ ಸ್ಥಳ ತೋರಿಸುವುದೇ ಸರ್ಕಾರಕ್ಕೆ ಸವಾಲಾಗುತ್ತಿದೆ. ಎಸ್‌ಪಿ ಹುದ್ದೆಯಲ್ಲಿ ಇರುವ ಐಪಿಎಸ್, ಕೆಎಸ್‌ಪಿಎಸ್ ಅಧಿಕಾರಿಗಳನ್ನು ಯಾವುದಾದರೂ ಹುದ್ದೆಗೆ ವರ್ಗಾವಣೆ ಮಾಡಬಹುದು. ಆದರೆ ಇನ್​ಸ್ಪೆಕ್ಟರ್ ಮತ್ತು ಡಿವೈಎಸ್‌ಪಿಗಳಿಗೆ ಸ್ಥಳ ನಿಯುಕ್ತಿ ಮಾಡೋದು ಇಲಾಖೆಗೆ ಸವಾಲಾಗಿದೆ.

ಲೊಕಾಯುಕ್ತಕ್ಕೆ ಪೊಲೀಸ್ ಠಾಣಾಧಿಕಾರ

ಹೈಕೋರ್ಟ್ ಇತ್ತೀಚಿಗೆ ನೀಡಿದ್ದ ತೀರ್ಪಿನ ಪ್ರಮುಖ ಅಂಶಗಳನ್ನು ಕರ್ನಾಟಕ ಸರ್ಕಾರ ಪಾಲಿಸಿದೆ. ಅದರಂತೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರವನ್ನು ರದ್ದುಪಡಿಸಲಾಗಿದೆ. ಲೋಕಾಯುಕ್ತ ಪೊಲೀಸರಿಗೆ ಭ್ರಷ್ಟಾಚಾರ ನಿಗ್ರಹದ ಅಧಿಕಾರ ನೀಡಲಾಗಿದೆ. ಲೊಕಾಯುಕ್ತ ಪೊಲೀಸ್ ವಿಭಾಗಕ್ಕೆ ಪೊಲೀಸ್ ಠಾಣೆಗಳಿಗೆ ಇರುವ ಅಧಿಕಾರವನ್ನು ಕೊಡಲಾಗಿದೆ. ಭ್ರಷ್ಟಾಚಾರ ನಿಗ್ರಹ ದಳದಲ್ಲಿ ತನಿಖೆ ಬಾಕಿಯಿರುವ ಎಲ್ಲ ಪ್ರಕರಣಗಳು ಹಾಗೂ ಖಾಸಗಿ ದೂರುಗಳನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಲು ಸೂಚಿಸಿದೆ.