ಉಪೇಂದ್ರ ಬೆನ್ನಲ್ಲೇ ಇದೀಗ ಸಚಿವ ಎಸ್​ಎಸ್​ ಮಲ್ಲಿಕಾರ್ಜುನ ವಿಡಿಯೋ ವೈರಲ್, ದೂರು ದಾಖಲು

|

Updated on: Aug 16, 2023 | 12:14 PM

ನಟ ಉಪೇಂದ್ರ ಅವರು ಇತ್ತೀಚೆಗೆ ತಮ್ಮ ಫೇಸ್​ಬುಕ್​ ಲೈವ್​ನಲ್ಲಿ ಬಳಸಿದ್ದ ಹಳೇ ಗಾದೆ ಮಾತು ಭಾರೀ ವಿವಾದಕ್ಕೀಡಾಗಿದ್ದು, ಈ ಪ್ರಕರಣ ಪೊಲೀಸು, ಕೋರ್ಟ್​ ಮೆಟ್ಟಿಲೇರಿದೆ. ಇದರ ಬೆನ್ನಲ್ಲೇ ಇದೀಗ ಉಪೇಂದ್ರ ಬಳಸಿದ್ದ ಪದವನ್ನೇ ಸಚಿವ ಎಸ್​ಎಸ್​ ಮಲ್ಲಿಕಾರ್ಜುನ ಅವರು ಮಾತನಾಡಿರುವ ವಿಡಿಯೋ ವೈರಲ್​ ಆಗಿದ್ದು ಈ ಬಗ್ಗೆ ದೂರು ದಾಖಲಾಗಿದೆ.

ಉಪೇಂದ್ರ ಬೆನ್ನಲ್ಲೇ ಇದೀಗ ಸಚಿವ ಎಸ್​ಎಸ್​ ಮಲ್ಲಿಕಾರ್ಜುನ ವಿಡಿಯೋ ವೈರಲ್,  ದೂರು ದಾಖಲು
ಸಚಿವ ಎಸ್​ಎಸ್​ ಮಲ್ಲಿಕಾರ್ಜುನ
Follow us on

ಬೆಂಗಳೂರು, (ಆಗಸ್ಟ್ 16): ರಿಯಲ್ ಸ್ಟಾರ್ ನಟ ಉಪೇಂದ್ರ(Upendra) ಬಳಸಿದ ಹಳೇ ಗಾದೆ ಮಾತು ಭಾರೀ ವಿವಾದಕ್ಕೆ ಕಾರಣವಾಗಿದೆ. ಇತ್ತೀಚೆಗೆ ಫೇಸ್​ಬುಕ್​ ಲೈವ್​ನಲ್ಲಿ ದಲಿತ ಸಮುದಾಯದ ಬಗ್ಗೆ ಬಳಸಿದ ಪದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಇದರ ಮಧ್ಯೆ ಉಪೇಂದ್ರ ಬಳಸಿದ್ದ ಪದವನ್ನೇ ಸಚಿವ ಎಂಬಿ ಪಾಟೀಲ್ ಮಾಡಿದ್ದ ಟ್ವೀಟ್ ವೈರಲ್ ಆಗಿದೆ. ಅಲ್ಲದೇ ಮತ್ತೋರ್ವ ಸಚಿವ ಎಸ್​ಎಸ್​ ಮಲ್ಲಿಕಾರ್ಜುನ (SS Mallikarjun) ಸಹ ಅದೇ ರೀತಿಯ ಪದ ಬಳಕೆ ಮಾಡಿ ಮಾತನಾಡಿರುವ ವಿಡಿಯೋ ವೈರಲ್ ಆಗಿದ್ದು, ಇವರ ವಿರುದ್ಧ ಏಕೆ ದೂರು ದಾಖಲು ಮಾಡಿಲ್ಲ ಎಂದು ಆಕ್ರೋಶಗಳು ವ್ಯಕ್ತವಾಗಿವೆ. ಇದರ ಬೆನ್ನಲ್ಲೇ ಇದೀಗ ಎಸ್​ಎಸ್​ ಮಲ್ಲಿಕಾರ್ಜುನ ವಿರುದ್ಧ ದೂರು ದಾಖಲಾಗಿದೆ.

ಎಸ್ಎಂ ದಿವಾಕರ್ ಎಂಬುವರು ಆಗಸ್ಟ್ 15 ರಂದು ಸಚಿವರ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ರಾಜಾಜಿನಗರ ಠಾಣೆ ಪೊಲೀಸರು ಎನ್‌ಸಿಆರ್ ದಾಖಲಿಸಿದ್ದು, ಪ್ರಕರಣವನ್ನು ವಿಧಾನಸೌಧ ಪೊಲೀಸ್​ ಠಾಣೆಗೆ ವರ್ಗಾಯಿಸುವ ಪ್ರಕ್ರಿಯೆ ನಡೆದಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಜಾತಿ ನಿಂದನೆ ಆರೋಪದಲ್ಲಿ ಉಪೇಂದ್ರಗೆ ರಿಲೀಫ್; ನಟನ ವಿರುದ್ಧದ ಎಫ್‌ಐಆರ್​ಗೆ ಹೈಕೋರ್ಟ್ ತಡೆ

ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ ಪರಮೇಶ್ವರ್, ಒಂದು ಸಮುದಾಯದ ಬಗ್ಗೆ ಕೀಳಾಗಿ ಮಾತನಾಡುವುದು ನಿಲ್ಲಿಸಬೇಕು. ನಾಣ್ಣುಡಿ ಇದೆ ಅಂತ ಹೇಳಿ ಕೀಳಾಗಿ ಮಾತನಾಡುವುದು ಸರಿಯಲ್ಲ. ಇದನ್ನು ನಿಲ್ಲಿಸಿದರೆ ಒಳ್ಳೆಯದು, ಇಂತಹ ಹೇಳಿಕೆಗಳನ್ನು ನಾನು ಸಹಿಸಲ್ಲ. ಹೀಗೆ ಮಾತಾಡುವುದು ಸಮುದಾಯಕ್ಕೆ ಮಾಡಿದ ಅವಮಾನ ಅಲ್ವಾ? ಸಚಿವರೇ ಆಗಲಿ ಯಾರೇ ಆಗಲಿ ಕಾನೂ‌ನು ಕ್ರಮ ತೆಗೆದುಕೊಳ್ಳುತ್ತೇವೆ. ಉಪೇಂದ್ರ, ಮಲ್ಲಿಕಾರ್ಜುನ ಕೇಸ್ ಬಗ್ಗೆ ಸಿಎಂ ಜೊತೆ ಚರ್ಚಿಸುತ್ತೇನೆ ಎಂದು ಸ್ಪಷ್ಟಪಡಿಸಿದರು.

ಸಚಿವ ಎಸ್​.ಎಸ್.ಮಲ್ಲಿಕಾರ್ಜುನ ಏನ್ ಮಾತನಾಡಿದ್ದಾರೆ ಗೊತ್ತಿಲ್ಲ. ಸಚಿವ ಮಲ್ಲಿಕಾರ್ಜುನ ಹೇಳಿಕೆ ಬಗ್ಗೆ ಪತ್ರಿಕೆಯಲ್ಲಿ ನಾನು ಓದಿದ್ದೇನೆ. ಸಾರ್ವಜನಿಕ ಜೀವನದಲ್ಲಿ ಇದ್ದು ಕೀಳಾಗಿ ಮಾತಾಡುವುದು ಸರಿಯಲ್ಲ. ಎರಡೂ ಪ್ರಕರಣಗಳ ಬಗ್ಗೆ ಕಾನೂ‌ನು ರೀತಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ದಲಿತ ಸಮುದಾಯದ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆಂದು ಆರೋಪಿಸಿ ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಮಧುಸೂದನ್ ಎನ್ನುವುರು ಬೆಂಗಳೂರಿನ ಚೆನ್ನಮ್ಮನ ಅಚ್ಚುಕಟ್ಟು ಠಾಣೆಯಲ್ಲಿ ಅಟ್ರಾಸಿಟಿ ಕೇಸ್ ದಾಖಲಿಸಿದ್ದರು. ಆದ್ರೆ, ಈ ಪ್ರಕರಣ ರದ್ದುಕೋರಿ ಉಪೇಂದ್ರ ಹೈಕೋರ್ಟ್ ಮೊರೆ ಹೋಗಿದ್ದು, ಸದ್ಯ ಕೋರ್ಟ್ ಎಫ್​ಐಆರ್​ಗೆ ತಡೆ ನೀಡಿದೆ. ಇದರ ಬೆನ್ನಲ್ಲೇ ಇದೀಗ ಸಾಮಾಜಿಕ ತಾಲತಾಣಗಳಲ್ಲಿ ತೋಟಗಾರಿಕೆ ಸಚಿವ ಎಸ್​ಎಸ್​ ಮಲ್ಲಿಕಾರ್ಜುನ ಅವರು ವಿಡಿಯೋ ವೈರಲ್​ ಅಗಿದ್ದು, ಆ ವಿಡಿಯೋದಲ್ಲಿ ಉಪೇಂದ್ರ ಬಳಸಿದ್ದ ಪದವನ್ನೇ ಸಚಿವ ಮಲ್ಲಿಕಾರ್ಜುನ ಅವರು ಸಹ ಬಳಸಿದ್ದಾರೆ. ಊರಿನ ಅಭಿವೃದ್ಧಿ ವಿಚಾರವಾಗಿ ಅಧಿಕಾರಿಯೊಬ್ಬರ ಜೊತೆ ಮಾತನಾಡುವಾಗ ಮಲ್ಲಿಕಾರ್ಜುನ ಅವರು ಆ ಪದವನ್ನು ಹೇಳಿದ್ದಾರೆ. ಇದೀಗ ಆ ವಿಡಿಯೋವನ್ನು ಸಾಮಾಜಿ ಜಾಲತಾಣಗಳಲ್ಲಿ ಹಂಚಿಕೊಂಡು ಉಪೇಂದ್ರ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಎಸ್​ಎಸ್​ ಮಲ್ಲಿಕಾರ್ಜುನ, ಯಾವುದೇ ಉದ್ದೇಶದಿಂದ ಹೇಳಿಲ್ಲ. ನಾನು ಅಧಿಕಾರಿಗಳಿಗೆ ಒಳ್ಳೆಯ ಕೆಲಸಗಳನ್ನು ಮಾಡುವಂತೆ ಮಾತ್ರ ಕೇಳಿದ್ದೇನೆ ಎಂದು ಸ್ಪಷ್ಟಪಡಿಸಿದರು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

Published On - 11:54 am, Wed, 16 August 23