ಅಮಿತ್ ಶಾ ಪ್ರಯಾಣಿಸುತ್ತಿದ್ದ ಮಾರ್ಗ ಮಧ್ಯೆ ಭದ್ರತಾ ವೈಫಲ್ಯ: ಇಬ್ಬರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದ ಪೊಲೀಸರು

| Updated By: ಆಯೇಷಾ ಬಾನು

Updated on: Mar 27, 2023 | 2:23 PM

ಮಾರ್ಚ್ 26ರ ಭಾನುವಾರ ರಾತ್ರಿ ಅಮಿತ್ ಶಾ ತಾಜ್ ವೆಸ್ಟ್ ಎಂಡ್​ನಿಂದ ಹೆಚ್​ಎಎಲ್​ಗೆ ತೆರಳ್ತಿದ್ದ ವೇಳೆ ಸಫೀನಾ ಪ್ಲಾಜಾದಿಂದ ಬೆಂಗಾವಲು ಪಡೆ ಹಿಂದೆ ಇಬ್ಬರು ಬೈಕರ್ಸ್​ಗಳು ಚೇಸ್ ಮಾಡಿದ್ದಾರೆ.

ಬೆಂಗಳೂರು: ಬಿಜೆಪಿ ಚಾಣಕ್ಯ ಅಮಿತ್​ ಶಾರ ರಾಜ್ಯ ಪ್ರವಾಸದಲ್ಲಿ ಭದ್ರತಾ ಲೋಪ ಕಂಡು ಬಂದಿದೆ. ಮಾರ್ಚ್ 26ರ ಭಾನುವಾರ ರಾತ್ರಿ ಅಮಿತ್ ಶಾ ತಾಜ್ ವೆಸ್ಟ್ ಎಂಡ್​ನಿಂದ ಹೆಚ್​ಎಎಲ್​ಗೆ ತೆರಳ್ತಿದ್ದ ವೇಳೆ ಸಫೀನಾ ಪ್ಲಾಜಾದಿಂದ ಬೆಂಗಾವಲು ಪಡೆ ಹಿಂದೆ ಇಬ್ಬರು ಬೈಕರ್ಸ್​ಗಳು ಚೇಸ್ ಮಾಡಿದ್ದಾರೆ. ಸದ್ಯ ಎಸ್ಕಾರ್ಟ್ ವಾಹನಕ್ಕೆ ಅಡ್ಡಬಂದಿದ್ದ ಇಬ್ಬರು ಬೈಕರ್ಸ್ನ್ನು ಭಾರತಿನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಭಾನುವಾರ ತಡರಾತ್ರಿ 11 ಗಂಟೆ ಬಿಜೆಪಿ ಕೋರ್ ಸಮಿತಿಯ ಸಭೆ ನಡೆಸಿ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಿಂದ ಹೆಚ್‌ಎಎಲ್‌ಗೆ ಅಮಿತ್ ಶಾ ತೆರಳುತ್ತಿದ್ದಾಗ ಶಫಿನ್ ಫ್ಲಾಜಾದಿಂದ ಮಣಿಪಾಲ್ ಸೆಂಟರ್ ವರೆಗೆ ಅವರ ಭದ್ರತಾ ವಾಹನಗಳ ಹಿಂದೆ 2 ಬೈಕ್‌ಗಳು ಬಂದಿವೆ. ಸುಮಾರು 300 ಮೀ. ವರೆಗೆ ಬೈಕರ್ಸ್‌ಗಳು ಭದ್ರತಾ ವಾಹನಗಳ ಜೊತೆಯೇ ಬಂದಿದ್ದಾರೆ. ಮಣಿಪಾಲ್ ಸೆಂಟರ್ ಬಳಿ ಬೈಕ್ ಸವಾರರು ಎಡಕ್ಕೆ ತಿರುಗಿದ್ದು ಈ ವೇಳೆ ಬೈಕ್​ ಸವಾರರನ್ನು ಕಂಡು ಪೊಲೀಸರು ಕಕ್ಕಾಬಿಕ್ಕಿಯಾಗಿದ್ದಾರೆ. ಇನ್ನು ಬೆಂಗಾವಲು ವಾಹನ ತೆರಳುತ್ತಿದ್ದಾಗ ಅಡ್ಡಬಂದ ಬೈಕ್​ ಸವಾರರ ಪೈಕಿ ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಮತ್ತೋರ್ವ ಬೈಕ್ ಸವಾರ ಪರಾರಿಯಾಗಿದ್ದ. ಸದ್ಯ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಘಟನೆ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಕಾಂಗ್ರೆಸ್​ ಅಧಿಕಾರದಲ್ಲಿದ್ದಾಗ ಭ್ರಷ್ಟಾಚಾರ ನಡೆದಿದೆ, ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿದೆ: ಅಮಿತ್ ಶಾ ವಾಗ್ದಾಳಿ

ಇನ್ನು ವಶಕ್ಕೆ ಪಡೆದ ಇಮ್ರಾನ್, ಜಿಬ್ರಾನ್​ನನ್ನು ವಿಚಾರಣೆ ನಡೆಸಿದ್ದು ಇಬ್ಬರೂ ವಿದ್ಯಾರ್ಥಿಗಳೆಂದು ತಿಳಿದು ಬಂದಿದೆ. ಇವರು ನೀಲಸಂದ್ರದ ನಿವಾಸಿಗಳಾಗಿದ್ದು R.T.ನಗರದ ಖಾಸಗಿ ಕಾಲೇಜಿನಲ್ಲಿ ಓದುತ್ತಿದ್ದಾರೆ. ನಿನ್ನೆ 2 ಬೈಕ್​ಗಳಲ್ಲಿ ಆರ್.ಟಿ.ನಗರಕ್ಕೆ ತೆರಳಿದ್ದರು. ಫ್ರೇಜರ್​ ಟೌನ್​ನಲ್ಲಿ ಸ್ಪ್ಲೆಂಡರ್​ ಬೈಕ್ ರಿಪೇರಿಗೆ ಬಿಟ್ಟು ನಂತರ ಸುಜುಕಿ ಆ್ಯಕ್ಸಿಸ್​ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಒನ್ ವೇನಲ್ಲಿ ಬಂದಿದ್ದರು. ತಕ್ಷಣ ಟ್ರಾಫಿಕ್ ಪೊಲೀಸರು ಬೈಕ್ ಸವಾರರನ್ನು ತಡೆದಿದ್ದು ಗಾಬರಿಗೊಂಡು ಬೆಂಗಾವಲು ವಾಹನಗಳ ಮಧ್ಯೆ ತೆರಳಿದ್ದರು ಎಂದು ತಿಳಿದು ಬಂದಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:16 pm, Mon, 27 March 23