ಬೆಂಗಳೂರು, ನ.13: ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ (Fire Accident) ಅವಘಡ ಸಂಭವಿಸಿದೆ. ಬಾಣಸವಾಡಿ ಔಟರ್ ರಿಂಗ್ ರೋಡ್ ನಲ್ಲಿ ನಾಲ್ಕು ಅಂತಸ್ತಿನ ಬಿಲ್ಡಿಂಗ್ ಧಗ-ಧಗನೇ ಹೊತ್ತಿ ಉರದಿದೆ. ಸದ್ಯ ಭಾರೀ ಅನಾಹುತ ತಪ್ಪಿದ್ದು ಕಟ್ಟಡದಲ್ಲಿ ಸಿಲುಕಿದ್ದ ಇಬ್ಬರು ಸೆಕ್ಯೂರಿಟಿ ಗಾರ್ಡ್ಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸೆಕ್ಯೂರಿಟೀಸ್ಗಳನ್ನ ಅಗ್ನಿಶಾಮಕದಳ ಸಿಬ್ಬಂದಿ ರಕ್ಷಿಸಿದ್ದಾರೆ. ಘಟನೆಯಲ್ಲಿ ಫರ್ನಿಚರ್ ಶಾಪ್, ಕೋಚಿಂಗ್ ಸೆಂಟರ್, ಐಟಿ ಕಂಪನಿಯ ದಾಖಲೆಗಳು ಸಂಪೂರ್ಣ ಸುಟ್ಟು ಕರಕಲಾಗಿದೆ. ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರುವ ಶಂಕೆ ವ್ಯಕ್ತವಾಗಿದೆ.
ತಡ ರಾತ್ರಿ 12 ಘಂಟೆಗೆ ಬಾಣಸವಾಡಿ ಔಟರ್ ರಿಂಗ್ ರೋಡ್ ನಲ್ಲಿರುವ ನಾಲ್ಕು ಅಂತಸ್ತಿನ ಬಿಲ್ಡಿಂಗ್ ಧಗ-ಧಗನೇ ಹೊತ್ತಿ ಉರದಿದೆ. ನೆಲ ಹಾಗೂ ಮೊದಲ ಮಹಡಿಯಲ್ಲಿ ಸ್ಟ್ಯಾನ್ಲಿ ಫರ್ನಿಚರ್ಸ್, ಎರಡನೇ ಮಹಡಿಯಲ್ಲಿ ಕಾಮೆಡ್ ಕೋಂಚಿಂಗ್ ಸೆಂಟರ್, 3 ಮತ್ತು 4 ನೇ ಮಹಡಿಯಲ್ಲಿ ಬ್ರೇಕ್ಸ್ ಕಂಟ್ರೋಲ್ಸ್, ಸಾಫ್ಟ್‌ವೇರ್ ಕಂಪನಿ ಇತ್ತು. ಇಡೀ ಕಟ್ಟಡ ಸಂಪೂರ್ಣ ಸುಟ್ಟು ಕರಕಲಾಗಿದೆ. ಸ್ಥಳಕ್ಕೆ ಬಂದ ಅಗ್ನಿಶಾಮಕದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.
ಇನ್ನು ಈ ಕಟ್ಟಡ ಶಂಕರ್ ಎಂಬುವರಿಗೆ ಸೇರಿದ್ದಾಗಿದೆ. ಶಂಕರ್ ಅವರು ಐದು ವರ್ಷಗಳಿಂದ ಕಟ್ಟಡ ಬಾಡಿಗೆಗೆ ನೀಡಿದ್ದರು. ಬೆಂಕಿಗೆ ಆಹುತಿಯಾದ ಕಟ್ಟಡ ನೋಡಿ ಶಂಕರ್ ಹಾಗೂ ಪತ್ನಿಯ ಕಣ್ಣೀರು ಹಾಕಿದ್ದಾರೆ. ಈ ಘಟನೆ ಸಂಬಂಧ ಮಾತನಾಡಿದ ಕಟ್ಟಡ ಮಾಲೀಕ ಶಂಕರ್, ನಾಲ್ಕು ಮಹಡಿ ಬಾಡಿಗೆಗೆ ನೀಡಲಾಗಿತ್ತು. ನೆಲ ಮಹಡಿ ಮತ್ತು ಮೊದಲನೇ ಮಹಡಿ ಫರ್ನಿಚರ್ ಶೋರೂಂ ಇತ್ತು. ಎರಡನೇ ಮಹಡಿಯಲ್ಲಿ ಕೋಚಿಂಗ್ ಸೆಂಟರ್ ಇತ್ತು. ಮೂರು ಮತ್ತು ನಾಲ್ಕನೇ ಮಹಡಿಯಲ್ಲಿ ಸಾಫ್ಟ್‌ವೇರ್ ಕಂಪನಿ ಇತ್ತು. ರಾತ್ರಿ ಬಂದು ನೋಡುವಷ್ಟರಲ್ಲಿ ಬೆಂಕಿ ಉರಿತಾ ಇತ್ತು. ದೀಪಾವಳಿ ಹಬ್ಬ, ಪಟಾಕಿ ಕಿಡಿ ಹತ್ತಿರಬೇಕು ಅನ್ನಿಸ್ತಿದೆ. ಫೈರ್ ಸೇಫ್ಟಿ ಬಗ್ಗೆ ಕ್ರಮ ತಗೊಂಡಿದ್ರು ಅನ್ಸತ್ತೆ. ಈಗ ಪೊಲೀಸರಿಗೆ ದೂರು ಕೊಡಬೇಕು ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಹರ್ಯಾಣ: ನ್ಯಾಪ್ಕಿನ್ ತಯಾರಿಕಾ ಕಾರ್ಖಾನೆಯಲ್ಲಿ ಅಗ್ನಿ ಅವಘಡ
ಇನ್ನು ಮತ್ತೊಂದೆಡೆ ನರಕ ಚತುರ್ದಶಿ ದಿನವಾದ ಭಾನುವಾರ ನಗರದ ವಿವಿಧೆಡೆ ಪಟಾಕಿ ಅವಘಡಗಳು ಸಂಭವಿಸಿವೆ. ನಿನ್ನೆ ಒಂದೇ ದಿನ ನಾರಾಯಣ ನೇತ್ರಾಲಯದಲ್ಲಿ 16 ಪ್ರಕರಣಗಳು ವರದಿಯಾಗಿವೆ. ಈ ಪ್ರಕರಣಗಳಲ್ಲಿ ಆರು ಮಂದಿಗೆ ಗಂಭೀರ ಗಾಯಗಳಾಗಿದ್ದು, 10 ಮಂದಿಗೆ ಪಟಾಕಿ ಕಿಡಿಯಿಂದ ಸಣ್ಣ ಪುಟ್ಟ ಗಾಯಗಳಾಗಿವೆ. ಇವರಲ್ಲಿ ಶೇ 90ರಷ್ಟು ಮಂದಿ ಪಟಾಕಿ ಹಚ್ಚದಿದ್ದರೂ, ವೀಕ್ಷಿಸುವ ವೇಳೆ ಗಾಯಗೊಂಡಿದ್ದಾರೆ.
ಇನ್ನು ಗಂಭೀರವಾಗಿ ಗಾಯಗೊಂಡಿರುವ ಆರು ಪ್ರಕರಣಗಳಲ್ಲಿ ಮೂರು ಮಂದಿ 19 ರಿಂದ 22 ವರ್ಷದೊಳಗಿನವರಾಗಿದ್ದಾರೆ. ಇಬ್ಬರು ಹತ್ತು ವರ್ಷದದ ಮಕ್ಕಳಾಗಿದ್ದು, ಒಬ್ಬರು 50 ವರ್ಷದವರಾಗಿದ್ದಾರೆ. ಇಬ್ಬರಿಗೆ ಕಣ್ಣಿನ ಒಳಗಡೆ ರಕ್ತಸ್ರಾವ ಆಗಿದೆ. ಮಕ್ಕಳ ಕಣ್ಣಿನಲ್ಲಿ ಸೇರಿದ್ದ ರಾಸಾಯನಿಕ ಕಣಗಳನ್ನು ತೆಗೆದು, ಸ್ವಚ್ಛಗೊಳಿಸಲಾಗಿದೆ ಎಂದು ನಾರಾಯಣ ನೇತ್ರಾಲಯದ ಅಧ್ಯಕ್ಷ ಡಾ.ರೋಹಿತ್ ಶೆಟ್ಟಿ ತಿಳಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 6:39 am, Mon, 13 November 23