ಜ್ಯೋತಿಷಿ ಕಮಲಾಕರ್​​ ಭಟ್​​ ಕೇಸ್​​: ಬಿ.ಕೆ. ಹರಿಪ್ರಸಾದ್​- ಸುರೇಶ್​​ ಕುಮಾರ್​ ನಡುವೆ ವಾಕ್ಸಮರ; ಕಾರಣ ಇಲ್ಲಿದೆ

ಕೊಲೆ ಪ್ರಕರಣದಲ್ಲಿ  ಜ್ಯೋತಿಷಿ ಕಮಲಾಕರ್ ಭಟ್ ಭಾಗಿಯಾಗಿರುವ ವಿಚಾರವೀಗ ರಾಜಕೀಯ ವಾಕ್ಸಮರಕ್ಕೆ ಕಾರಣವಾಗಿದೆ. ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್ ಜ್ಯೋತಿಷಿಗೆ ಪ್ರೋತ್ಸಾಹ ನೀಡಿದ ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ನೈತಿಕ ಹೊಣೆ ಹೊರಬೇಕು ಎಂದು ಆರೋಪಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿರುವ ಸುರೇಶ್ ಕುಮಾರ್, ಆರೋಪಗಳು ಆಧಾರರಹಿತ ಮತ್ತು ರಾಜಕೀಯ ಪ್ರೇರಿತ ಎಂದಿದ್ದಾರೆ.

ಜ್ಯೋತಿಷಿ ಕಮಲಾಕರ್​​ ಭಟ್​​ ಕೇಸ್​​: ಬಿ.ಕೆ. ಹರಿಪ್ರಸಾದ್​- ಸುರೇಶ್​​ ಕುಮಾರ್​ ನಡುವೆ ವಾಕ್ಸಮರ; ಕಾರಣ ಇಲ್ಲಿದೆ
ಹರಿಪ್ರಸಾದ್​ Vs ಸುರೇಶ್​​ ಕುಮಾರ್​
Image Credit source: Google

Updated on: Feb 04, 2026 | 2:40 PM

ಬೆಂಗಳೂರು, ಫೆಬ್ರವರಿ 04: ವಿವಾಹಿತ ಮಹಿಳೆಯೋರ್ವರ ಜೊತೆಗೆ ಜ್ಯೋತಿಷಿ ಕಮಲಾಕರ್ ಭಟ್ ಅಕ್ರಮ ಸಂಬಂಧ ಆರೋಪ ವಿಚಾರವಾಗಿ ನಡೆದ ಗಲಾಟೆಯಲ್ಲಿ ಓರ್ವ ಮೃತಪಟ್ಟಿರುವ ಘಟನೆಯೀಗ ಪರಿಷತ್​​ ಕಾಂಗ್ರೆಸ್ ಸದಸ್ಯ ಬಿ.ಕೆ. ಹರಿಪ್ರಸಾದ್​​ ಮತ್ತು ಬಿಜೆಪಿ ಶಾಸಕ ಎಸ್​​.ಸುರೇಶ್​​ ಕುಮಾರ್​ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಪ್ರಕರಣ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​​ ಮಾಡಿರುವ ಹರಿಪ್ರಸಾದ್​​ ಬಿಜೆಪಿ ಮತ್ತು ತಮ್ಮ ಹೆಸರನ್ನು ಉಲ್ಲೇಖಿಸಿರುವ ಬಗ್ಗೆ ಸುರೇಶ್​​ ಕುಮಾರ್​​ ಗರಂ ಆಗಿದ್ದು, ಕಾಂಗ್ರೆಸ್​​ ನಾಯಕನ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.

ಹರಿಪ್ರಸಾದ್​ ಆರೋಪವೇನು?

ಕಾರವಾರದ ಸಿದ್ದಾಪುರದಲ್ಲಿ ಕಮಲಾಕರ್ ಭಟ್ ಹೆಸರಿನ ಜ್ಯೋತಿಷಿಯ ಅಕ್ರಮ ಸಂಬಂಧಕ್ಕೆ 41 ವರ್ಷದ ಅಮಾಯಕ ವಸಂತ್ ನಾಯ್ಕ್ ಬಲಿಯಾಗಿದ್ದಾರೆ. ಈ ಕ್ರಿಮಿನಲ್ ಪ್ರಕರಣ ನ್ಯಾಯಯುತ ತನಿಖೆಯಾಗಿ, ನ್ಯಾಯಾಲಯ ತೀರ್ಪು ಕೊಡುತ್ತದೆ. ಆದರೆ, ಇಂತಹ ಪ್ರಕರಣದಲ್ಲಿ ಸಂಘಪರಿವಾರದ ಹಿನ್ನಲೆಯಿಂದ ಬಂದ ಬಿಜೆಪಿಯ ಸುರೇಶ್​​ ಕುಮಾರ್​ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರರಂತಹ ಜನಪ್ರತಿನಿಧಿಗಳ ಪಾತ್ರ ಏನು? ಎಂಬುದು ಸ್ವಸ್ಥ ಸಮಾಜ ದೃಷ್ಟಿಯಿಂದ ಮುಖ್ಯವಾಗುತ್ತದೆ. ಕಮಲಾಕರ ಭಟ್ ಎಂಬ ಜ್ಯೋತಿಷಿ ಭಾಗಿಯಾದ ಕೊಲೆ ಕೇಸ್​​ನಲ್ಲಿ ರಾಜಾಜಿನಗರ ಶಾಸಕ ಸುರೇಶ್​​ ಕುಮಾರ್​​ ಪಾತ್ರವಿಲ್ಲವೇ? ಕೊಲೆ ಆರೋಪಿ ಜೋತಿಷಿ ಗುರೂಜಿ ಕಮಲಾಕರ ಭಟ್ಟನನ್ನು ಓರ್ವ ಶಾಸಕನಾಗಿ ಪ್ರೋತ್ಸಾಹಿಸಿ ಬೆಳೆಸಿದ್ದು ಸಂವಿಧಾನಕ್ಕೆ ಮಾಡುವ ಅಪಚಾರವಲ್ಲವೇ ? ಒರ್ವ ಮಾಜಿ ಕಾನೂನು ಸಚಿವನಿಗೆ ಇಷ್ಟೂ ಅರಿವಿಲ್ಲದಿರುವುದು ಈ ರಾಜ್ಯದ ದುರಂತವಾಗಿದೆ.

ಕೊಲೆಗಡುಕ, ಮಹಿಳಾ ಪೀಡಕ ಕಮಲಾಕರ ಭಟ್ ತನ್ನಲ್ಲಿಗೆ ಜೋತಿಷ್ಯ ಕೇಳಲು ಬರುವ ಗ್ರಾಹಕರನ್ನು ಲೈಂಗಿಕವಾಗಿ ಶೋಷಿಸುತ್ತಿದ್ದ. ಅದರ ಭಾಗವಾಗಿಯೇ ಮಹಿಳೆಯ ಜೊತೆ ಅಕ್ರಮ ಸಂಬಂಧ ಹೊಂದಿ ಅದು ಕೊಲೆಯವರೆಗೂ ಹೋಗಿದೆ. ಈ ರೀತಿ ಜನರ ಮೂಢನಂಬಿಕೆಯನ್ನೇ ಬಳಸಿಕೊಂಡು ಹಲವು ಅಕ್ರಮಗಳನ್ನು ಸಂಪಾದಿಸಿಕೊಂಡು ಇಂತಹ “ಜೀ-ಗುರೂಜಿ”ಗಳು ಸಮಾಜ ಸೇವೆಯ ಹೆಸರಿನಲ್ಲಿ ಸಮಾಜವನ್ನೇ ಯಾಮಾರಿಸುತ್ತಾರೆ. ಇಂತಹ ಮೂಢನಂಬಿಕೆಯ ಅಕ್ರಮ ದಂಧೆಗಳನ್ನು ಬಿಜೆಪಿಯ ಸ್ವಯಂ ಘೋಷಿತ ಸಜ್ಜನ ಶಾಸಕ ಬಿರುದಾಂಕಿತ ಬಿಜೆಪಿಯ ಸುರೇಶ್ ಕುಮಾರ್ ಬೆನ್ನುತ್ತಟ್ಟಿ ಪ್ರೋತ್ಸಾಹಿಸಿ ಬೆಳೆಸಿದ್ದಾರೆ. ಹಾಗಾಗಿ ಈ ಕೊಲೆಯಲ್ಲಿ ಸುರೇಶ್ ಕುಮಾರ್ ಅಂತವರ ಪಾತ್ರ ಬಹಳ ಮುಖ್ಯವಾಗುತ್ತದೆ. ಹಾಗಾಗಿಯೇ ಶಾಸಕ ಸುರೇಶ್ ಕುಮಾರ್ ಕೂಡಾ ಈ ಕೊಲೆಯ ನೈತಿಕ ಹೊಣೆಯನ್ನು ಹೊತ್ತುಕೊಳ್ಳಬೇಕು ಎಂದು ಹರಿಪ್ರಸಾದ್​​ ಹೇಳಿದ್ದಾರೆ.

ಇದನ್ನೂ ಓದಿ: ವಿವಾಹವಾಗಿ ಇಬ್ಬರು ಮಕ್ಕಳಿದ್ದರೂ ಕಮಲಾಕರ ಗುರೂಜಿ ಜೊತೆಗೆ ಸಂಬಂಧ; ಪುತ್ರಿಯಿಂದಲೇ ಮ್ಯಾಟರ್​​ ರಿವೀಲ್

ಸುರೇಶ್​​ ಕುಮಾರ್​​ ಕೌಂಟರ್​

ಸಿದ್ದಾಪುರದಲ್ಲಿ ನಡೆದ ಹೇಯ ಕೃತ್ಯವೊಂದನ್ನು ಮುಂದಿಟ್ಟುಕೊಂಡು, ಅದಕ್ಕೆ ರಾಜಕೀಯ ಬಣ್ಣ ಬಳಿದು ನನ್ನ ಹೆಸರನ್ನು ತಳುಕು ಹಾಕಲು ನೀವು ನಡೆಸಿರುವ ಪ್ರಯತ್ನ ನಿಮ್ಮ ಬೌದ್ಧಿಕ ದಿವಾಳಿತನವನ್ನು ಎತ್ತಿ ತೋರಿಸುವಂತಿದೆ. ಒಬ್ಬ ವ್ಯಕ್ತಿ ಮಾಡಿದ ಅಪರಾಧಕ್ಕೆ, ಆತನ ಪರಿಚಯವಿದ್ದ ಜನಪ್ರತಿನಿಧಿಯೇ ನೈತಿಕ ಹೊಣೆ ಹೊರಬೇಕು ಎಂಬ ನಿಮ್ಮ ವಾದ ಬಾಲಿಶವಾದದ್ದು. ಸಾರ್ವಜನಿಕ ಜೀವನದಲ್ಲಿರುವ ನಾವು ಸಾವಿರಾರು ಜನರನ್ನು ಭೇಟಿಯಾಗುತ್ತೇವೆ. ಯಾರೋ ಒಬ್ಬರು ನನ್ನ ಜೊತೆ ಫೋಟೋ ತೆಗೆಸಿಕೊಂಡರು ಅಥವಾ ಪರಿಚಯಸ್ಥರಾಗಿದ್ದರು ಎಂಬ ಒಂದೇ ಕಾರಣಕ್ಕೆ, ಅವರ ಖಾಸಗಿ ಬದುಕಿನ ವಿಕೃತಿಗಳಿಗೆ ಅಥವಾ ಅವರು ಎಸಗುವ ಕ್ರಿಮಿನಲ್ ಕೃತ್ಯಗಳಿಗೆ ನಾನು ಉತ್ತರದಾಯಿಯಾಗುತ್ತೇನೆಯೇ? ಹಾಗಾದರೆ, ನಿಮ್ಮ ಪಕ್ಷದ ನಾಯಕರ ಜೊತೆ ಫೋಟೋ ತೆಗೆಸಿಕೊಂಡವರು, ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡವರು ಜೈಲು ಪಾಲಾದ ಉದಾಹರಣೆಗಳಿಲ್ಲವೇ? ಆಗ ನಿಮ್ಮ ನಾಯಕರುಗಳೆಲ್ಲ ಆ ಅಪರಾಧಗಳ ನೈತಿಕ ಹೊಣೆ ಹೊತ್ತಿದ್ದಾರೆಯೇ? ಎಂದು ಸುರೇಶ್​​ ಕುಮಾರ್​​ ಪ್ರಶ್ನಿಸಿದ್ದಾರೆ.

ಬಹಳ ಹಿಂದೆ ಯಶವಂತಪುರದ ಪೆಟ್ರೋಲ್ ಬಂಕ್ ಬಳಿ ನನ್ನ ಗಾಡಿಗೆ ಇಂಧನ ತುಂಬಿಸುತ್ತಿರುವಾಗ ಈ ವ್ಯಕ್ತಿಯ ಪರಿಚಯವಾಗಿತ್ತು. ನಾನು ಒಮ್ಮೆ ಮಾತ್ರ ಅವರನ್ನು ಭೇಟಿ ಮಾಡಿರುವುದು. ಈಗೇನಾದರೂ ನನಗೆ ಎದುರಿಗೆ ಸಿಕ್ಕರೆ ಅವರನ್ನು ಗುರುತು ಹಿಡಿಯುವುದೂ ಅಸಾಧ್ಯ. ​ನೀವು ನನಗೆ ಸಂವಿಧಾನದ ಪಾಠ ಮಾಡಲು ಬಂದಿದ್ದೀರಿ. ಒಬ್ಬ ಮಾಜಿ ಕಾನೂನು ಸಚಿವನಾಗಿ ಸಂವಿಧಾನದ ಪ್ರತಿಯೊಂದು ಸಾಲಿನ ಮಹತ್ವ ನನಗೆ ಚೆನ್ನಾಗಿ ತಿಳಿದಿದೆ. ವೈಜ್ಞಾನಿಕ ಮನೋಭಾವ ಮತ್ತು ತಾರ್ಕಿಕತೆ ಎಂದರೆ, ಘಟನೆಗಳ ಸತ್ಯಾಸತ್ಯತೆಯನ್ನು ಅರಿಯದೇ ಕೇವಲ ರಾಜಕೀಯ ದ್ವೇಷಕ್ಕಾಗಿ ಇಲ್ಲಸಲ್ಲದ ಆರೋಪ ಮಾಡುವುದಲ್ಲ. ತನಿಖೆ ನಡೆಯುತ್ತಿರುವ ಗಂಭೀರ ಪ್ರಕರಣವೊಂದರಲ್ಲಿ, ನೇರ ಸಾಕ್ಷ್ಯಗಳಿಲ್ಲದೇ ಒಬ್ಬ ಶಾಸಕನ ಪಾತ್ರವಿದೆ ಎಂದು ತೀರ್ಪು ನೀಡುವುದು ಯಾವ ರೀತಿಯ ವೈಜ್ಞಾನಿಕ ಮನೋಭಾವ? ಇದು ಪಕ್ಕಾ ಪೂರ್ವಾಗ್ರಹ ಪೀಡಿತ ಮನಸ್ಥಿತಿ. ಇನ್ನೂ ಹೆಚ್ಚಾಗಿ ಹೇಳಬೇಕೆಂದರೆ ಇದು ಕೊಳೆತ ಮನಸ್ಥಿತಿ ಎಂದು ಸುರೇಶ್​ ಕುಮಾರ್​​ ತಿವಿದಿದ್ದಾರೆ.

ಇದನ್ನೂ ಓದಿ: ಕಮಲಾಕರ ಭಟ್​ ಗುರೂಜಿ ಜೊತೆ ಮಹಿಳೆ ಅಕ್ರಮ ಸಂಬಂಧ; ದೂರು ನೀಡಿದ್ದಕ್ಕೆ ಹಲ್ಲೆ, ಓರ್ವ ಸಾವು

ನಾನು ಜ್ಯೋತಿಷ್ಯವನ್ನ ತುಂಬಾ ನಂಬುವನೂ ಅಲ್ಲ ಅಥವಾ ಯಾವುದೇ ಮೂಢನಂಬಿಕೆಯನ್ನ ಬೆಂಬಲಿಸುವನೂ ಅಲ್ಲ. ಆದರೆ, ಧಾರ್ಮಿಕ ನಂಬಿಕೆಗಳಿಗೂ, ಕ್ರಿಮಿನಲ್ ಚಟುವಟಿಕೆಗಳಿಗೂ ಇರುವ ವ್ಯತ್ಯಾಸ ತಿಳಿಯದಷ್ಟು ದಡ್ಡನೂ ನಾನಲ್ಲ. ಕೊಲೆಗಾರ ಕೊಲೆಗಾರನೇ, ಅವನು ಜ್ಯೋತಿಷಿಯಾಗಿರಲಿ ಅಥವಾ ರಾಜಕಾರಣಿಯಾಗಿರಲಿ. ಆತನಿಗೆ ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆಯಾಗಬೇಕು ಎಂಬುದೇ ನನ್ನ ನಿಲುವು. ಅದನ್ನು ಬಿಟ್ಟು, ಬಿಜೆಪಿಯವರಿಗೆ ಕ್ರಿಮಿನಲ್ ಗಳ ಜೊತೆ ಅವಿನಾಭಾವ ಸಂಬಂಧ ಎಂದು ಸಾರಾಸಗಟಾಗಿ ಇಡೀ ಪಕ್ಷವನ್ನು ನಿಂದಿಸುವುದು ನಿಮ್ಮ ಹತಾಶೆಯನ್ನು ತೋರಿಸುತ್ತದೆ. ಅಪರಾಧವನ್ನು ಅಪರಾಧವನ್ನಾಗಿ ನೋಡುವ ಸಂಸ್ಕಾರ ಬೆಳೆಸಿಕೊಳ್ಳಿ. ಶವದ ಮುಂದೆ ನಿಂತು ರಾಜಕೀಯ ಲಾಭ ಹುಡುಕುವ ನಿಮ್ಮ ಚಾಳಿ, ಸ್ವಸ್ಥ ಸಮಾಜಕ್ಕೆ ಮತ್ತು ನೀವು ಉಲ್ಲೇಖಿಸಿದ ಸಂವಿಧಾನಕ್ಕೆ ಮಾಡುವ ದ್ರೋಹ. ಆ ಭಗವಂತ ನಿಮಗೆ ಸದ್ಬುದ್ದಿ ನೀಡಲಿ ಎಂದವರು ಕೌಂಟರ್​​ ಕೊಟ್ಟಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 2:36 pm, Wed, 4 February 26