ಬೆಂಗಳೂರು: ಭಾರತಕ್ಕೆ ಸ್ವಾತಂತ್ರ್ಯ ದೊರಕಿ 75 ವರ್ಷಗಳು ಪೂರೈಸುತ್ತಿರುವ ಹಿನ್ನೆಲೆ ದೇಶಾದ್ಯಂತ ಸ್ವಾತಂತ್ರ್ಯೋತ್ಸವದ ಅಮೃತಮಹೋತ್ಸವ (Azadi ka Amrit Mahotsav)ವನ್ನು ವಿಜ್ರಂಭಣೆಯಿಂದ ಆಚರಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯದಲ್ಲೂ ಭರ್ಜರಿ ತಯಾರಿಗಳನ್ನು ನಡೆಸಲಾಗುತ್ತಿದೆ. ಇದೀಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಹತ್ವದ ಕಾರ್ಯಕ್ರಮವೊಂದನ್ನು ಆಯೋಜಿಸಿದೆ. ಬೆಂಗಳೂರು ನಗರದ ಪ್ರತಿಯೊಂದು ಮನೆಗಳಲ್ಲಿ ರಾಷ್ಟ್ರಧ್ವಜ ರಾರಾಜಿಸುವಂತೆ ಮಾಡಲು ಇಲಾಖೆಯಿಂದ ಬೆಂಗಳೂರು ಮಹಾನಗರ ಪಾಲಿಕೆ (BBMP)ಗೆ 2 ಲಕ್ಷ ಧ್ವಜಗಳನ್ನು ಹಸ್ತಾಂತರಿಸಲಾಗುತ್ತಿದೆ. ಈ ಧ್ವಜಗಳನ್ನು ಬಿಬಿಎಂಪಿ ಪ್ರತಿ ಮನೆಗಳಿಗೂ ವಿತರಣೆ ಮಾಡಲಿದೆ.
ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಆಗಸ್ಟ್ 8ರಿಂದ ಆ.17ರ ವರೆಗೆ ಕೇಂದ್ರ ಸರ್ಕಾರ ಸೂಚಿಸಿದಂತೆ ದೇಶಾದ್ಯಂತ ಹರ್ ಘರ್ ತಿರಂಗಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅಲ್ಲದೆ ಪ್ರತಿಯೊಂದು ಮನೆ ಹಾಗೂ ಅಂಗಡಿಗಳ ಮುಂದೆ ತಿರಂಗ ಹಾರಿಸುವಂತೆ ಸೂಚನೆ ನೀಡಲಾಗಿದೆ. ಈ ನಡುವೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸ್ವಾತಂತ್ರ್ಯದ ಅಮೃತ ಮಹೋತ್ಸವ ಉನ್ನತ ಮಟ್ಟದ ಸಮಿತಿ ತಿರಂಗ ಅಭಿಯಾನವನ್ನು ಆರಂಭಿಸಲಿದೆ. ಇದರ ಭಾಗವಾಗಿ 2 ಲಕ್ಷ ರಾಷ್ಟ್ರಧ್ವಜಗಳನ್ನು ಬಿಬಿಎಂಪಿಗೆ ಹಸ್ತಾಂತರಿಸಲಾಗುತ್ತಿದ್ದು, ಅಧಿಕಾರಿಗಳು ಪ್ರತಿ ಮನೆಗಳಿಗೂ ಧ್ವಜಗಳನ್ನು ವಿತರಣೆ ಮಾಡಲಿದ್ದಾರೆ.
ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ರಾಜ್ಯದಲ್ಲೂ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನಜಾಗೃತಿ ನಡೆಸಲಾಗುತ್ತಿದೆ. ಕರ್ನಾಟಕ ಸರ್ಕಾರವು ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳು, ವಿಶ್ವವಿದ್ಯಾಲಯಗಳಲ್ಲಿ, ಸರ್ಕಾರಿ ಕಚೇರಿಗಳು, ಮದರಸಾಗಳಲ್ಲಿ ಕಡ್ಡಾಯವಾಗಿ ತಿರಂಗವನ್ನು ಹಾರಿಸುವಂತೆ ಸೂಚಿಸಲಾಗಿದೆ. ಅಲ್ಲದೆ ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜಗಳನ್ನು ಹಾರಿಸುವಂತೆ ಸೂಚನೆ ನೀಡಿದೆ.
ಶಾಲಾ, ಕಾಲೇಜು ವಿದ್ಯಾರ್ಥಿಗಳಲ್ಲಿ ರಾಷ್ಟ್ರಭಕ್ತಿ ಮೂಡಿಸುವ ನಿಟ್ಟಿನಲ್ಲಿ ಹಾಗೂ ಅಮೃತಮಹೋತ್ಸವದ ಪ್ರಯುಕ್ತ ಪ್ರಬಂಧ ಸ್ಪರ್ಧೆಗಳನ್ನು ಆಯೋಜಿಸುವಂತೆ ಶಿಕ್ಷಣ ಇಲಾಖೆ ಸೂಚಿಸಿದ್ದು, ಅದರಂತೆ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಸ್ಪರ್ಧೆಗಳನ್ನು ಶಾಲಾ, ಕಾಲೇಜು, ಮದರಸಾಗಳಲ್ಲಿ ಆಯೋಜಿಸಬೇಕು ಎಂದು ಇಲಾಖೆಯು ಸೂಚಿಸಿದೆ. ಇದೇ ಆದೇಶದಲ್ಲಿ ಆಯಾ ಶಾಲಾ ಕಾಲೇಜುಗಳ ಭೋದಕ ಹಾಗೂ ಭೋದಕೇತರ ಸಿಬ್ಬಂದಿಗಳ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸುವಂತೆ ಸೂಚಿಸಲಾಗಿದೆ.
Published On - 1:12 pm, Sat, 23 July 22