ಬೆಂಗಳೂರು, ನವೆಂಬರ್ 23: ನಿರ್ಭಯ ನಿಧಿ ಅಡಿಯಲ್ಲಿ ನಗರದ ಪೊಲೀಸ್ ಆಯುಕ್ತರ ಕಛೇರಿ ಬಳಿಯ ಅಲಿ ಆಸ್ಕರ್ ರಸ್ತೆಯಲ್ಲಿ ನಿರ್ಮಾಣವಾಗಿರುವ ಬೆಂಗಳೂರು ನಗರ ಸೇಫ್ ಸಿಟಿ ಕಮಾಂಡ್ ಸೆಂಟರ್ (Safe City Command Center) ಕಟ್ಟಡವನ್ನು ನಾಳೆ ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಲಿದ್ದಾರೆ. ಈ ಯೋಜನೆಗೆ ಈ ಹಿಂದೆ ಸುಮಾರು 900 ಕೋಟಿ ರೂ. ಟೆಂಡರ್ ಆಗಿತ್ತು. ಆದರೆ ಆಗ ಐಪಿಎಸ್ ಅಧಿಕಾರಿ ಡಿ. ರೂಪಾ ಟೆಂಡರ್ ಪ್ರಕ್ರಿಯೆ ಬಗ್ಗೆ ಪ್ರಶ್ನೆ ಮಾಡಿದ್ದರು. ಅದಕ್ಕೆ ಪ್ರತಿಫಲವಾಗಿ ಅವರು ತಮ್ಮ ಹುದ್ದೆ ಕಳೆದುಕೊಳ್ಳಬೇಕಾಯಿತು. ಆದರೆ ಈಗ ಅದೇ ಯೋಜನೆಯ ಸುಮಾರು 495 ಕೋಟಿ ರೂ. ಜಾರಿಗೆ ಬರುತ್ತಿದೆ. ಆ ಮೂಲಕ ಸರ್ಕಾರಕ್ಕೆ 450 ಕೋಟಿ ರೂ. ಉಳಿತಾಯ ಮಾಡಿದ್ದಾರೆ.
ನಿರ್ಭಯ ನಿಧಿ ಅಡಿಯ ಬೆಂಗಳೂರು ನಗರ ಸೇಫ್ ಸಿಟಿ ಯೋಜನೆಯ ಟೆಂಡರ್ ಪ್ರಕ್ರಿಯೆಯಲ್ಲಿ ಗೋಲ್ಮಾಲ್ ನಡೆದಿದೆ ಎಂದು ಐಪಿಎಸ್ ಅಧಿಕಾರಿ ಡಿ. ರೂಪಾ ಈ ಹಿಂದೆಯೇ ಆರೋಪಿಸಿದ್ದರು. ಈ ಕುರಿತಾಗಿ ಅವರು ಸರ್ಕಾರದ ಮುಖ್ಯಕಾರ್ಯದರ್ಶಿಗೆ ಪತ್ರ ಕೂಡ ಬರೆದಿದ್ದರು. ಸೇಫ್ ಸಿಟಿ ಯೋಜನೆಯ ಟೆಂಡರ್ ವಿಚಾರವಾಗಿಯೇ ಡಿ. ರೂಪಾ ಮತ್ತು ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಕಮಿಷನರ್ ಆಗಿದ್ದ ಹೇಮಂತ್ ನಿಂಬಾಳ್ಕರ್ ಮಧ್ಯೆ ಜಟಾಪಟಿಗೆ ಕೂಡ ಕಾರಣವಾಗಿತ್ತು.
ಮೊದಲ ಬಾರಿಗೆ ಗುತ್ತಿಗೆ ನೀಡಲು ಟೆಂಡರ್ ಕರೆದಾಗ, ಮೆಟ್ರಿಕ್ ಸರ್ವೆಲೆನ್ಸ್ ಮತ್ತು ಇನ್ನೊಂದು ಕಂಪೆನಿ ಅತೀ ಕಡಿಮೆ ಹಣದಲ್ಲಿ ಅಂದರೆ ರೂ 950 ಕೋಟಿ ಅಂದಾಜು ಮೊತ್ತಕ್ಕೆ ಕೆಲಸ ಮಾಡಲು ಮುಂದೆ ಬಂದವು. ಆಗ ಈ ವಿಚಾರ ಪ್ರಧಾನಿ ಕಾಯಾರ್ಲಯದ ತನಕ ಹೋಗಿತ್ತು. ಯಾಕೆಂದರೆ, ಈ ಎರಡು ಕಂಪೆನಿಗಳ ನಿರ್ದೇಶಕರು ಒಂದೇ ಎಂಬುದು ವಾದವಾಗಿತ್ತು. ರೂಪಾ ಅವರು ಈ ವಿಚಾರ ಎತ್ತಿದ ಮೇಲೆ, ಟೆಂಡ್ರ್ ರದ್ದು ಪಡಿಸಿದ ಸರ್ಕಾರ, ಹೊಸದಾಗಿ ಹರಾಜು ಮಾಹಿತಿ ನೀಡಿತು. ಆಗ ಹನಿವೆಲ್ ಟೆಕ್ನಾಲಜಿಸ್ ಅವರು ರೂ 495 ಕೋಟಿಗೆ ಕೆಲಸ ಮಾಡಲು ಮುಂದೆ ಬಂದಿತು. ಅದು ಈಗ ಸಾಕಾರಗೊಳ್ಳುತ್ತಿದೆ.
ಇದನ್ನೂ ಓದಿ: Bengaluru Safe City project: ಏನಿದು ಸೇಫ್ ಸಿಟಿ ಪ್ರಾಜೆಕ್ಟ್, ಬೆಂಗಳೂರಿಗೇಕೆ ಮುಖ್ಯ?
ಸದ್ಯ ಇಡೀ ಯೋಜನೆಯ ಒಂದು ಭಾಗವಾಗಿ ಈ ಬೆಂಗಳೂರು ನಗರ ಸೇಫ್ ಸಿಟಿ ಕಮಾಂಡ್ ಸೆಂಟರ್ ಕಟ್ಟಡ ಉದ್ಘಾಟನೆ ಮಾಡಲಾಗುತ್ತಿದೆ. ಡಿಸಿಎಂ ಡಿಕೆ ಶಿವಕುಮಾರ್, ಗೃಹ ಸಚಿವ ಜಿ. ಪರಮೇಶ್ವರ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸಚಿವ ಎಂ. ರಾಜೀವ್ ಚಂದ್ರಶೇಖರ್ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:23 pm, Thu, 23 November 23