
ಬೆಂಗಳೂರು, ಡಿ.23: ಕೆಲವರು ಬೆಂಗಳೂರನ್ನು (Bangalore traffic) ಮೆಚ್ಚಿಕೊಂಡರೆ, ಇನ್ನು ಕೆಲವರು ಇಲ್ಲಿನ ವ್ಯವಸ್ಥೆಯನ್ನು ದೂರುತ್ತಾರೆ. ರಾಜ್ಯ ರಾಜಧಾನಿ ಎಲ್ಲರಿಗೂ ಆಸರೆಯಾಗಿದೆ. ಆದರೆ ಇಲ್ಲಿನ ರಸ್ತೆ, ಟ್ರಾಫಿಕ್, ವಾತಾವರಣದ ಬಗ್ಗೆ ಅನೇಕರಿಗೆ ಅಸಮಾಧಾನ ಇದೆ. ಇದೀಗ ಇಲ್ಲೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಪವಿತ್ರಾ ಕುಲಕರ್ಣಿ ಎಂಬುವವರು, ಹಂಚಿಕೊಂಡಿರುವ ವಿಡಿಯೋದಲ್ಲಿ ಬೆಂಗಳೂರಿನಲ್ಲಿ ತಾವು ಅನುಭವಿಸಿದ ಸಂಕಷ್ಟದ ಬಗ್ಗೆ ಹಂಚಿಕೊಂಡಿದ್ದಾರೆ. ಆಟೋದಲ್ಲಿ ಹೋಗುತ್ತಿದ್ದ ವೇಳೆ ನಡೆದ ಘಟನೆಯನ್ನು ಈ ವಿಡಿಯೋ ಮೂಲಕ ವಿವರಿಸಿದ್ದಾರೆ. ನಗರದ ಜನದಟ್ಟಣೆಯ ರಸ್ತೆಗಳಲ್ಲಿ ದೈನಂದಿನ ಜೀವನದ ಕೆಟ್ಟ ಚಿತ್ರಣ ಹೇಗಿದೆ ಎಂಬುದನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಈ ವಿಡಿಯೊದಲ್ಲಿ ಹೀಗೆ ಬರೆದುಕೊಂಡಿದ್ದಾರೆ “ಇದು ಬೆಂಗಳೂರಿನ ಸಹಿಸಲಾಗದ ಕ್ಷಣ?” ಗಂಟೆಗಟ್ಟಲೆ ಕಸದ ಲಾರಿಯ ಪಕ್ಕದಲ್ಲಿ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡರೂ ಏನೂ ಅನಿಸುತ್ತಿಲ್ಲ ಎಂದು ಹೇಳಿದ್ದಾರೆ. ಪವಿತ್ರಾ ಕುಲಕರ್ಣಿ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡ ವೇಳೆ ಚಿತ್ರಹಿಂಸೆ ಅನುಭವಿಸಿದ್ದಾರೆ. ತಮ್ಮ ರಿಕ್ಷಾದ ಪಕ್ಕದಲ್ಲೇ ಕಸ ಲಾರಿಯೊಂದು ಬಂದು ನಿಂತಿತ್ತು. ತನ್ನ ಗಮ್ಯಸ್ಥಾನವನ್ನು ತಲುಪಲು 78 ನಿಮಿಷಗಳು ಬೇಕು. ಜತೆಗೆ ಟ್ರಾಫಿಕ್, ಅದರ ನಡುವೆ ಈ ಕಸ ವಾಸನೆ, ಇದು ಪ್ರತಿದಿನದ ನರಕಯಾತನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು ವಿದೇಶಿಗರ ಶಾಶ್ವತ ಮನೆ: ಭಾರತದ ಸರಳ ಜೀವನಕ್ಕೆ ರಷ್ಯಾ ಮಹಿಳೆ ಫಿದಾ
ಇನ್ನು ಈ ವಿಡಿಯೋ ಬಗ್ಗೆ ನೆಟ್ಟಿಗರು ಕೂಡ ಕಮೆಂಟ್ ಮಾಡಿದ್ದಾರೆ. ಟ್ರಾಫಿಕ್ ಮತ್ತು ಆ ವಾಸನೆಗಳು, ಇದು ನಿಜವಾಗಿಯೂ ಮುಂದಿನ ಹಂತ ಎಂದು ಒಬ್ಬರು ಟೀಕಿಸಿದ್ದಾರೆ. ಈ ಪರಿಸ್ಥಿತಿಯನ್ನು ನಾನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಬಲ್ಲೆ, ಪ್ರತಿದಿನವೂ ಈ ಸ್ಥಿತಿ ಬೆಂಗಳೂರಿನಲ್ಲಿ ನಡೆಯುತ್ತದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಇದು ಒಂದು ಹಾಸ್ಯಮಯ ಕ್ಷಣ, ಬೆಂಗಳೂರು ಮಾತ್ರ ನಿಮಗೆ ಹೀಗೆ ಮಾಡಲು ಸಾಧ್ಯ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಈ ನಗರವು ಪ್ರತಿದಿನ ನಿಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತದೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ