
ಬೆಂಗಳೂರು, ಜ.24: ಬೆಂಗಳೂರು (Bangalore) ಜೀವನದಿಂದ ಹೊರಗೆ ಬರುವುದು ಸುಲಭದ ಮಾತಲ್ಲ, ಅಲ್ಲಿನ ಜೀವನಕ್ಕೆ ಹೊಂದಿಕೊಂಡ ನಂತರ, ಬೇರೊಂದು ಕಡೆ ಸುಲಭವಾಗಿ ಜೀವನ ನಡೆಸಲು ತಕ್ಷಣದಲ್ಲಿ ಸಾಧ್ಯವಿಲ್ಲ. ಅದರಲ್ಲೂ ಬೆಂಗಳೂರಿನಲ್ಲೇ ಹುಟ್ಟಿ, ಬೆಳೆದವರಿಗೆ ಈ ನಗರವನ್ನು ಬಿಟ್ಟು ಹೋಗಲು ಸಾಧ್ಯವಿಲ್ಲ, ಆದರೆ ಇಂದಿನ ಬೆಂಗಳೂರಿನ ಪರಿಸ್ಥಿತಿಯನ್ನು ನೋಡಿ. ಅನೇಕರು ಬೆಂಗಳೂರು ತೊರೆಯುವ ಮಾತುಗಳನ್ನು ಹಾಡುತ್ತಿದ್ದಾರೆ. ಇದಕ್ಕೆ ಕಾರಣ, ಇಲ್ಲಿನ ಕೆಟ್ಟ ವಾತಾವರಣ ಹಾಗೂ ಟ್ರಾಫಿಕ್, ಜನರು ಈ ಟ್ರಾಫಿಕ್ಗೆ ಹೈರಾಣು ಆಗಿದ್ದಾರೆ. ಈ ಕಾರಣಕ್ಕೆ ಜಗತ್ತಿನ ಅತ್ಯಂತ ಜನದಟ್ಟಣೆ ಇರುವ ನಗರಗಳಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಇದೀಗ ಉದ್ಯಮಿಯೊಬ್ಬರು ಇಲ್ಲಿನ ಟ್ರಾಫಿಕ್ ಹಾಗೂ ವಾತವರಣಕ್ಕೆ ಬೇಸತ್ತು ರಾಜಧಾನಿಯನ್ನು ಬಿಡಲು ನಿರ್ಧರಿಸಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 41 ವರ್ಷದ ಉದ್ಯಮಿಯೊಬ್ಬರನ್ನು ಸಂಚಾರ ದಟ್ಟಣೆ ಕಂಗೆಡಿಸಿದೆ.
ಕಳೆದ ಒಂದು ವರ್ಷದಿಂದ ಹೆಚ್ಚಾಗುತ್ತಿರುವ ಟ್ರಾಫಿಕ್ ಜಾಮ್‌ಗಳು ಮತ್ತು ಧೂಳು ಮಾಲಿನ್ಯ ತನ್ನ ಆರೋಗ್ಯ ಮತ್ತು ಮನಶಾಂತಿಗೆ ಹಾನಿ ಮಾಡುತ್ತಿವೆ ಎಂದು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕುಟುಂಬದೊಂದಿಗೆ ನೆಮ್ಮದಿಯ ಜೀವನಕ್ಕೆ ಅವರು ನಗರವನ್ನು ಬಿಟ್ಟು ಹೊರಗೆ ಹೋಗುವ ಪ್ಲಾನ್ ಮಾಡಿಕೊಂಡಿದ್ದಾರೆ. ನಾನು ಹುಟ್ಟಿ ಬೆಳೆದ ಬೆಂಗಳೂರಿಗೆ ಈಗ ವಿದಾಯ ಹೇಳುವ ಸಮಯ ಬಂದಿದೆ. ನಾನು 41 ವರ್ಷದವನಾಗಿದ್ದು, ನನ್ನ ಸ್ವಂತ ವ್ಯವಹಾರ ನಡೆಸುತ್ತಿದ್ದೇನೆ. ಕಳೆದ ಒಂದು ವರ್ಷದಿಂದ ಬೆಂಗಳೂರಿನ ಟ್ರಾಫಿಕ್, ಧೂಳು ಮಾಲಿನ್ಯ ಮತ್ತು ಒತ್ತಡದ ಮಟ್ಟಗಳು ನನ್ನನ್ನು ತುಂಬಾ ಕಾಡುತ್ತಿವೆ. ಹೆಚ್ಚುತ್ತಿರುವ ಟ್ರಾಫಿಕ್ ಜಾಮ್‌ಗಳಲ್ಲಿ ಗಂಟೆಗಟ್ಟಲೆ ಪ್ರಯಾಣ ಮಾಡಬೇಕಾದ ನಿಷ್ಠಾವಂತ ತೆರಿಗೆದಾರರು ಮತ್ತು ಉದ್ಯೋಗಿಗಳ ಸ್ಥಿತಿ ನೋಡಿ ಬೇಸರವಾಗುತ್ತದೆ. ಕುಟುಂಬದೊಂದಿಗೆ ಬೇರೆ ಕಡೆ ಹೋಗಲು ಯೋಚನೆ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಳ್ಳಾರಿಯಲ್ಲಿ ಉಸಿರಾಡಿದರೂ ಸಾಕು 3 ಸಿಗರೇಟ್ ಸೇದಿದ ಹಾಗೆ!
ಈ ಪೋಸ್ಟ್ ಮೂಲಕ ನಾನು ಬೆಂಗಳೂರನ್ನು ದ್ವೇಷ ಮಾಡುತ್ತೇನೆ ಎಂದಲ್ಲ. ಬೆಂಗಳೂರಿನ ಜನ ಈ ಟ್ರಾಫಿಕ್ನಿಂದ ಬೇಸತ್ತು ಬೇರೆ ಬೇರೆ ಕಡೆ ಹೋಗುತ್ತಿದ್ದಾರೆ ಎಂಬುದು ನಮ್ಮ ಸರ್ಕಾರ ತಿಳಿಯಬೇಕು. ಈಗ ನಾನು ತೆಗೆದುಕೊಂಡ ನಿರ್ಧಾರ ಸರ್ಕಾರಕ್ಕೆ ಎಚ್ಚರಿಕೆ. ಈ ಪೋಸ್ಟ್‌ಗೆ ಅನೇಕ ನೆಟ್ಟಿಗರು ಸಹಮತ ವ್ಯಕ್ತಪಡಿಸಿದ್ದು, ಬೆಂಗಳೂರನ್ನು ತೊರೆಯುವ ಬಗ್ಗೆ ತಮ್ಮದೇ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಒಬ್ಬರು ನಾನು ಕೂಡ ಈ ಯೋಚನೆಯನ್ನು ಮಾಡಿದ್ದೇನೆ, ಬೆಂಗಳೂರಿನಿಂದ ಮೈಸೂರು ಹೋಗುವ ಯೋಜನೆ ಹಾಕಿಕೊಂಡಿದ್ದೇನೆ. . ನನ್ನ ಕೆಲ ಸಹೋದ್ಯೋಗಿಗಳು ಮತ್ತು ಕುಟುಂಬದವರು ಈಗಾಗಲೇ ಅದೇ ಕಾರಣಕ್ಕೆ ಅಲ್ಲಿಗೆ ಸ್ಥಳಾಂತರವಾಗಿದ್ದಾರೆ ಎಂದು ಹೇಳಿದ್ದಾರೆ. ಮತ್ತೊಬ್ಬರು, ಟ್ರಾಫಿಕ್ ಅನ್ನು ಬೇಕಾದರೂ ಸಹಿಸಿಕೊಳ್ಳಬಹುದು. ಆದರೆ ಧೂಳು, ಕಸ, ಮಣ್ಣು ನನಗೆ ತುಂಬಾ ಕಾಡುತ್ತಿದೆ. ನಗರ ಇಷ್ಟು ಅಸಮರ್ಪಕವಾಗಿ ಮತ್ತು ನಿರ್ಲಕ್ಷ್ಯದಿಂದ ಎಂದಿಗೂ ಕಾಣಿಸಿಕೊಂಡಿರಲಿಲ್ಲ. ಪಾನ್/ಗುಟ್ಕಾ ಕಲೆಗಳ ಸಮಸ್ಯೆಯೂ ಇಷ್ಟು ಗಂಭೀರವಾಗಿರಲಿಲ್ಲ ಎಂದು ಹೇಳಿದ್ದಾರೆ. ಇನ್ನು ಈ ಎಲ್ಲ ಕಮೆಂಟ್ ನೋಡಿ ಈ ಉದ್ಯಮಿ ನಾನು ಮಂಗಳೂರು ಬೆಸ್ಟ್ ಎಂದು ಆಯ್ಕೆ ಮಾಡಿಕೊಂಡಿದ್ದೇನೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ