Basava Mantapa Book Controversy: ‘ಬಸವ ಮಂಟಪ’ ಪುಸ್ತಕ ವಿವಾದ; ಲೇಖಕ ರವಿ ಹಂಜ್ ವಿರುದ್ಧ ದೂರು

ಬಸವ ಮಂಟಪ ಪುಸ್ತಕ ವಿವಾದ: 'ಬಸವ ಮಂಟಪ' ಕೃತಿಯಲ್ಲಿ ಬಸವಣ್ಣನವರಿಗೆ ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಲೇಖಕ ರವಿ ಹಂಜ್ ವಿರುದ್ಧ ಹೈಗ್ರೌಂಡ್ಸ್ ಠಾಣೆಗೆ ದೂರು ನೀಡಲಾಗಿದೆ. ಬಸವ ಮಂಟಪ ಕೃತಿಯ ವಿರುದ್ಧ ಲಿಂಗಾಯತ ಹಾಗೂ ಬಸವಪರ ಸಂಘಟನೆಗಳಿಂದಲೂ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬಸವಣ್ಣನವರ ವ್ಯಕ್ತಿತ್ವ, ವಚನ ಸಾಹಿತ್ಯಕ್ಕೆ ಅವಮಾನ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

Basava Mantapa Book Controversy: ಬಸವ ಮಂಟಪ ಪುಸ್ತಕ ವಿವಾದ; ಲೇಖಕ ರವಿ ಹಂಜ್ ವಿರುದ್ಧ ದೂರು
ಲೇಖಕ ರವಿ ಹಂಜ್ ವಿರುದ್ಧ ದೂರು
Edited By:

Updated on: Nov 19, 2026 | 2:37 PM

ಬೆಂಗಳೂರು, ನವೆಂಬರ್​​ 19: ‘ಬಸವ ಮಂಟಪ’ ಪುಸ್ತಕದಲ್ಲಿ ಬಸವಣ್ಣನವರಿಗೆ ಅವಮಾನ ಮಾಡಿದ ಆರೋಪ ಕೇಳಿಬಂದಿದ್ದು, ಲೇಖಕ ರವಿ ಹಂಜ್ ವಿರುದ್ಧ ಶಾಸಕ ಬಿ.ಆರ್.ಪಾಟೀಲ್ ನೇತೃತ್ವದ ಬಸವಣ್ಣ ಅನುಯಾಯಿಗಳ ನಿಯೋಗ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಿದೆ. ಲೇಖಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ. ಮತ್ತೊಂದೆಡೆ ಬೆಂಗಳೂರಿನ ಬಸವ ಸಮಿತಿ ಆವರಣದಲ್ಲಿ ಬಸವ ಮಂಟಪ ಪುಸ್ತಕ ಸುಟ್ಟು ಆಕ್ರೋಶ ವ್ಯಕ್ತಪಡಿಸಿರುವ ಘಟನೆಯೂ ನಡೆದಿದೆ. ಲೇಖಕ ರವಿ ಹಂಜ್​​ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿರುವ ಬಸವಣ್ಣನವರ ಅನುಯಾಯಿಗಳು, ಪುಸ್ತಕದಲ್ಲಿ ಆಕ್ಷೇಪಾರ್ಹ ಅಂಶ ದಾಖಲಾಗಿದೆ. ಹೀಗಾಗಿ ಪುಸ್ತಕ ನಿಷೇಧಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.

‘ಬಸವಣ್ಣನವರ ಘನತೆಗೆ ಧಕ್ಕೆ ತರುವ ಪ್ರಯತ್ನ’

‘ಬಸವ ಮಂಟಪ’ ಪುಸ್ತಕದಲ್ಲಿ ಬಸವಣ್ಣ ಅವರಿಗೆ ಅಪಮಾನ ಮಾಡಲಾಗಿದ್ದು, ರಾಜ್ಯಾದ್ಯಂತ ಬಸವ ಬೆಂಬಲಿಗರಿಗೆ ನೋವಾಗಿದೆ ಎಂದು ಸಚಿವ ಎಂ.ಬಿ.ಪಾಟೀಲ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಸಚಿವ ಶರಣಪ್ರಕಾಶ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಇದು ಬಸವಣ್ಣನವರ ಘನತೆಗೆ ಧಕ್ಕೆ ತರುವ ಪ್ರಯತ್ನ ಎಂದಿದ್ದಾರೆ. ಬಸವಣ್ಣನವರು ಕೇವಲ ಲಿಂಗಾಯತ ಸಮುದಾಯಕ್ಕೆ ಸೀಮಿತರಲ್ಲ, ಮನುಷ್ಯತ್ವವೇ ಧರ್ಮ ಎಂದು ಸಾರಿದವರು. ಸಂಕವ್ವ, ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಅಂಬಿಗರ ಚೌಡಯ್ಯ ಮುಂತಾದ ಎಲ್ಲಾ ಸಮುದಾಯದವರಿಗೂ ಅನುಭವ ಮಂಟಪದಲ್ಲಿ ಸ್ಥಾನ ನೀಡಿದವರು. ಅಂತಹ ಮಹಾನ್ ವ್ಯಕ್ತಿಯನ್ನು ಕೊಲೆಗಡುಕ, ಲೂಟಿಕೋರ ಎಂದು ಬಿಂಬಿಸುತ್ತಿರುವುದನ್ನು ಒಪ್ಪಲಾಗದು ಎಂದು ಸಚಿವರು ಕಿಡಿ ಕಾರಿದ್ದಾರೆ.  ಇದೆಲ್ಲದರ ಹಿಂದೆ ಹಿರಿಯ ಪತ್ರಕರ್ತ ವಿಶ್ವೇಶ್ವರ್​​ ಭಟ್​​ ಇರೋದಾಗಿಯೂ ಅವರು ಆರೋಪಿಸಿದ್ದಾರೆ.

Loading...

ಇದನ್ನೂ ಓದಿ: ಹಿರಿಯ ಡಿಡಿಪಿಐ ಹುದ್ದೆಗಳು ಖಾಲಿ-ಖಾಲಿ: ಶಿಕ್ಷಣ ಇಲಾಖೆಯ ಆಡಳಿತಕ್ಕೆ ಭಾರಿ ಹಿನ್ನಡೆ, ಶಿಕ್ಷಣದ ಮೇಲೂ ಪರಿಣಾಮದ ಆತಂಕ

ರವಿ ಹಂಜ್‌ ಒಬ್ಬ ಕ್ರಿಮಿನಲ್‌ ಆಗಿದ್ದು, ಬಸವಣ್ಣರನ್ನು ಕೂಡ ಕ್ರಿಮಿನಲ್ ಎಂದು ಬಿಂಬಿಸಲು ಹೊರಟಿದ್ದಾರೆ. ಬಸವಣ್ಣರ ವಚನ ತಿರುಚಲು ಯತ್ನಿಸಿದ್ದಾರೆ. ಈ ಬಗ್ಗೆ ಸಿಎಂ ಗಮನಕ್ಕೆ ತಂದು ಕಾನೂನು ತಜ್ಞರು ಜತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ. ಬಸವ ಸಂಸ್ಕೃತಿ ಮೇಲೆ ದಾಳಿ ಮಾಡಿದ್ರೆ ನಾವು ಸುಮ್ಮನಿರಲ್ಲ. ಈ ಕಾರ್ಯಕ್ರಮದಲ್ಲಿ ಶಂಕರ ಬಿದರಿ ಹಾಗೂ ಮನು ಬಳಿಗಾರ್ ಚಪ್ಪಾಳೆ ಹೊಡೆದಿದ್ದಾರೆ. ಇವರು ಆಧುನಿಕ ಕೊಂಡಿ ಮಂಚಣ್ಣನಂತವರು ಎಂದು ಸಚಿವರು ವಾಗ್ದಾಳಿ ನಡೆಸಿದ್ದಾರೆ.

ಕೃತಿ ಮುಟ್ಟುಗೋಲಿಗೆ ಸಚಿವ ಈಶ್ವರ ಖಂಡ್ರೆ ಒತ್ತಾಯ

ಬಸವಮಂಟಪ ಕೃತಿ ಮುಟ್ಟುಗೋಲಿಗೆ ಸಚಿವ ಈಶ್ವರ ಖಂಡ್ರೆ ಒತ್ತಾಯಿಸಿದ್ದು, ಈ ಬಗ್ಗೆ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಬಸವಣ್ಣ, ಲಿಂಗಾಯತರ ಬಗ್ಗೆ ರವಿ ಹಂಜ್ ಹೇಳಿಕೆ ಅಸಂಬದ್ಧ. ಬಸವಮಂಟಪ ಕೃತಿ ಮುಟ್ಟುಗೋಲು ಹಾಕಬೇಕು ಮತ್ತು ಸಾಮಾಜಿಕ ತಾಣಗಳಿಂದ ಈ ಕುರಿತ ಎಲ್ಲ ವಿಡಿಯೋ ತೆಗೆದು ಹಾಕಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರೂ ಆಗಿರುವ ಈಶ್ವರ ಖಂಡ್ರೆ ಒತ್ತಾಯಿಸಿದ್ದಾರೆ. ಸಂವಿಧಾನದತ್ತವಾದ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಗೌರವ ನೀಡುತ್ತೇನೆ. ಆದರೆ ಬಸವಣ್ಣನವರನ್ನು ಕೊಲೆಗಡುಕ, ದರೋಡೆಕೋರ, ಬಿಜ್ಜಳನ ಖಜಾನೆ ದುರುಪಯೋಗ ಪಡಿಸಿಕೊಂಡು ಶರಣ ದಾಸೋಹ ಮಾಡಿದ್ದಾನೆ ಎಂದೆಲ್ಲಾ ಅವಹೇಳನಕಾರಿಯಾಗಿ ಮಾತನಾಡುವುವರನ್ನು ಮತ್ತು ಅಂತಹ ಬರಹವನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದವರು ತಿಳಿಸಿದ್ದಾರೆ.

ಬಸವಣ್ಣ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುವುದು ಸರಿಯಲ್ಲ. ಪ್ರಚಾರಕ್ಕಾಗಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಕೆಲಸ ಮಾಡಬಾರದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ತಂಗಡಗಿ ಹೇಳಿದ್ದಾರೆ. ಇಂತಹವರ ವಿರುದ್ಧ ಕ್ರಮ ಕೈಗೊಳ್ಳಲು ಸಿಎಂ ಗಮನಕ್ಕೆ ತರುತ್ತೇವೆ. ಬಸವಣ್ಣನವರ ಬಗ್ಗೆ ಇವರಿಗೆ ಅರಿವೇ ಇಲ್ಲ. ಸಚಿವ ಸಂಪುಟ ಸಭೆಯಲ್ಲಿ ಕೂಡ ಈ ಬಗ್ಗೆ ಪ್ರಸ್ತಾಪ ಮಾಡುತ್ತೇನೆ ಎಂದವರು ತಿಳಿಸಿದ್ದಾರೆ.

ಲೇಖಕರ ಮಾಧ್ಯಮ ಸಂದರ್ಶನಗಳಿಗೂ ಆಕ್ಷೇಪ

ಬಸವ ಮಂಟಪ ಕೃತಿಯ ವಿರುದ್ಧ ಲಿಂಗಾಯತ ಹಾಗೂ ಬಸವಪರ ಸಂಘಟನೆಗಳಿಂದಲೂ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಬಸವಣ್ಣನವರ ವ್ಯಕ್ತಿತ್ವ, ವಚನ ಸಾಹಿತ್ಯಕ್ಕೆ ಅವಮಾನ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಲೇಖಕ ರವಿ ಹಂಜ್ ನೀಡಿದ ಮಾಧ್ಯಮ ಸಂದರ್ಶನಗಳಿಗೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದು, ವೀರಶೈವ ಮತ್ತು ಲಿಂಗಾಯತ ಒಂದೇ ಎಂಬ ಲೇಖಕರ ಪ್ರತಿಪಾದನೆಗೂ, ಪ್ರತ್ಯೇಕ ಲಿಂಗಾಯತ ಧರ್ಮದ ಮಾನ್ಯತೆಗಾಗಿ ಹೋರಾಡಿದ ಮುಖಂಡರಿಂದ ಅಸಮಾಧಾನ ವ್ಯಕ್ತವಾಗಿದೆ. ಕೃತಿಯನ್ನು ತಕ್ಷಣ ನಿಷೇಧಿಸುವಂತೆ ಮತ್ತು ಲೇಖಕಕರನ್ನು ಬಂಧಿಸುವಂತೆ ಜಾಗತಿಕ ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವ ದಳ ಒತ್ತಾಯಿಸಿವೆ. ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸುವ ಎಚ್ಚರಿಕೆಯನ್ನೂ ನೀಡಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 2:27 pm, Thu, 19 November 26

ಪ್ರಮೋದ್​ ಶಾಸ್ತ್ರಿ ಜಿ.
Loading...
Unable to load recommendations.
Follow Us