ಬೆಂಗಳೂರು, ಸೆಪ್ಟೆಂಬರ್ 18: ಬೆಂಗಳೂರಿನ ರಸ್ತೆ ಗುಂಡಿಗಳನ್ನು ಮುಚ್ಚಲು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ 15 ದಿನಗಳ ಗಡುವು ನೀಡಿದ ನಂತರ ಬಿಬಿಎಂಪಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಮರೋಪಾದಿಯಲ್ಲಿ ಕೆಲಸ ಮಾಡಿದ್ದಾರೆ. ಪರಿಣಾಮವಾಗಿ ಬಿಬಿಎಂಪಿ ಈವರೆಗೆ ಸುಮಾರು 6,000 ಗುಂಡಿಗಳನ್ನು ಮುಚ್ಚಿದೆ ಮತ್ತು 32,200 ಚದರ ಮೀಟರ್ ಹಾನಿಗೊಳಗಾದ ರಸ್ತೆ ಮೇಲ್ಮೈಗಳನ್ನು ಸರಿಪಡಿಸಿದೆ ಎಂದು ಮೂಲಗಳು ತಿಳಿಸಿವೆ.
ಇನ್ನೆರಡು ದಿನಗಳಲ್ಲಿ ಎಲ್ಲ ರಸ್ತೆಗುಂಡಿಗಳನ್ನು ಮುಚ್ಚಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಆದರೆ ಹೊಸ ಗುಂಡಿಗಳು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
‘ರಸ್ತೆ ಗುಂಡಿ ಗಮನ’ ಆ್ಯಪ್ ಮೂಲಕ ಸುಮಾರು 1,300 ದೂರುಗಳನ್ನು ಸ್ವೀಕರಿಸಲಾಗಿದೆ. ಈ ಪೈಕಿ ಸುಮಾರು 300 ದೂರುಗಳು ರಸ್ತೆ ಗುಂಡಿಗಳಿಗೆ ಸಂಬಂಧಿಸಿದ್ದಲ್ಲ. ಪ್ರಾಥಮಿಕವಾಗಿ ಗುಂಡಿಗೆ ಸಂಬಂಧಿಸಿದ ಸಮಸ್ಯೆಗಳತ್ತ ಗಮನ ಹರಿಸಲಾಗಿದೆ. ಉಳಿದ ಸಮಸ್ಯೆಗಳನ್ನು ಎರಡು ದಿನಗಳಲ್ಲಿ ಪರಿಹರಿಸುವ ನಿರೀಕ್ಷೆಯಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.
ರಸ್ತೆಗಳಲ್ಲಿನ ಗುಂಡಿಗಳ ದುರಸ್ತಿಗೆ ಬಿಬಿಎಂಪಿಯು ಪ್ರತಿ ವಾರ್ಡ್‌ಗೆ ವಾರ್ಷಿಕ 15 ಲಕ್ಷ ರೂ.ಗಳನ್ನು ನಿಗದಿಪಡಿಸಿದೆ. ಇದು ವರ್ಷಕ್ಕೆ ಒಟ್ಟು ಸುಮಾರು 30 ಕೋಟಿ ರೂ. ಆಗುತ್ತದೆ. ಪ್ರಮುಖ ರಸ್ತೆಗಳಿಗೆ ಹೆಚ್ಚುವರಿಯಾಗಿ 15 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಒಟ್ಟಾರೆಯಾಗಿ ಗುಂಡಿ ದುರಸ್ತಿ ಬಜೆಟ್ 45 ಕೋಟಿ ರೂ. ಆಗಿದ್ದು, ಇಲ್ಲಿಯವರೆಗೆ ಅಂದಾಜು 15 ಕೋಟಿ ರೂ. ವ್ಯಯಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು ರಸ್ತೆ ಗುಂಡಿ ಮುಚ್ಚುವ ಗಡುವು ಇಂದು ಅಂತ್ಯ: ರಜಾ ದಿನವಾದ ಭಾನುವಾರವೂ ಮುಂದುವರಿದ ಕಾಮಗಾರಿ!
ಮೆಟ್ರೊ ಕಾಮಗಾರಿ ನಡೆಯುತ್ತಿರುವ ಹೊರ ವರ್ತುಲ ರಸ್ತೆಯಲ್ಲಿ ಸರ್ವೀಸ್ ರಸ್ತೆಗಳನ್ನು ನಿರ್ವಿುಸುವ ಜವಾಬ್ದಾರಿ ಬಿಬಿಎಂಪಿ ಮೇಲಿದೆ. ಮೆಟ್ರೋ ಅಧಿಕಾರಿಗಳು ಮುಖ್ಯ ಮಾರ್ಗಗಳನ್ನು ನಿರ್ವಹಿಸುತ್ತಾರೆ ಎಂದು ಗಿರಿನಾಥ್ ತಿಳಿಸಿದ್ದಾರೆ.
ಹೊರ ವರ್ತುಲ ರಸ್ತೆ ಮತ್ತು ಹೆಚ್ಚಿನ ದಟ್ಟಣೆಯ ಕಾರಿಡಾರ್‌ಗಳನ್ನು ಸುಧಾರಿಸಲು ಬಿಬಿಎಂಪಿ 270 ಕೋಟಿ ರೂ.ಗಳ ಯೋಜನೆಯನ್ನು ಹಮ್ಮಿಕೊಂಡಿದೆ ಮತ್ತು ಪ್ರಸ್ತುತ ಕಾಮಗಾರ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ