ಬೆಂಗಳೂರು: ಬಿಬಿಎಂಪಿ ಚುನಾವಣೆಗೆ (BBMP Elections) 3 ತಿಂಗಳು ಕಾಲಾವಕಾಶ ಬೇಕು ಎಂದು ಕರ್ನಾಟಕ ಸರ್ಕಾರವು ಹೈಕೋರ್ಟ್ಗೆ (Karnataka High Court) ವಿನಂತಿಸಿದೆ. ನ್ಯಾಯಮೂರ್ತಿ ಭಕ್ತವತ್ಸಲ ಸಮಿತಿಯಿಂದ ಹಿಂದುಳಿದ ವರ್ಗಗಳ ಮೀಸಲಾತಿ ಹಾಗೂ ರಾಜಕೀಯ ಹಿಂದುಳಿದಿರುವಿಕೆ ಸಂಬಂಧ ಮಾಹಿತಿ ಕೇಳಲಾಗಿದೆ. ಮಾಹಿತಿ ನೀಡಲು ಭಕ್ತವತ್ಸಲ ಸಮಿತಿ ಕಾಲಾವಕಾಶ ಕೇಳಿರುವುದರಿಂದ ಬಿಬಿಎಂಪಿ ಚುನಾವಣೆಗೆ 3 ತಿಂಗಳು ಕಾಲಾವಕಾಶ ನೀಡಬೇಕು ಎಂದು ರಾಜ್ಯ ಸರ್ಕಾರದ ಪರ ನ್ಯಾಯಾಲಯಕ್ಕೆ ಹಾಜರಾಗಿದ್ದ ಸಹಾಯಕ ಅಡ್ವೊಕೇಟ್ ಜನರಲ್ (ಎಎಜಿ) ಧ್ಯಾನ್ ಚಿನ್ನಪ್ಪ ಮನವಿ ಮಾಡಿದರು.
ಸುಪ್ರೀಂಕೋರ್ಟ್ನಲ್ಲೂ ಚುನಾವಣೆಗೆ ನಿರ್ದೇಶನ ಕೋರಲಾಗಿದೆ. ಸುಪ್ರೀಂಕೋರ್ಟ್ನಲ್ಲಿ ಇಂದು (ಡಿ 1) ಅರ್ಜಿ ವಿಚಾರಣೆ ನಡೆಯುವ ಸಾಧ್ಯತೆ ಇದೆ ಎಂದು ಚುನಾವಣಾ ಆಯೋಗದ ಪರ ವಕೀಲ ಕೆ.ಎನ್.ಫಣೀಂದ್ರ ಹೈಕೋರ್ಟ್ ಗಮನಕ್ಕೆ ತಂದರು. ವಾದ-ಪ್ರತಿವಾದಗಳನ್ನು ಆಲಿಸಿದ ಹೈಕೋರ್ಟ್ ವಿಚಾರಣೆಯನ್ನು ಡಿಸೆಂಬರ್ 6ಕ್ಕೆ ಮುಂದೂಡಿತು.
ಬಿಬಿಎಂಪಿ ಚುನಾವಣೆಗೆ ಆಗಸ್ಟ್ 3ರಂದು ಮೀಸಲಾತಿ ಪಟ್ಟಿಯನ್ನು ಹೊರಡಿಸಲಾಗಿತ್ತು. ಆದರೆ ಈ ಪಟ್ಟಿಯನ್ನು ಹೈಕೋರ್ಟ್ ಸೆಪ್ಟೆಂಬರ್ನಲ್ಲಿ ರದ್ದುಪಡಿಸಿ, ನವೆಂಬರ್ 30ರ ಒಳಗೆ ಹೊಸದಾಗಿ ಮೀಸಲಾತಿ ಪ್ರಕಟಿಸಬೇಕು ಹಾಗೂ ಡಿಸೆಂಬರ್ 31ರ ಒಳಗೆ ಚುನಾವಣೆ ನಡೆಸಬೇಕು ಎಂದು ಸೂಚಿಸಿತ್ತು. ಈ ಆದೇಶವನ್ನೂ ಸರ್ಕಾರವು ಪ್ರಶ್ನಿಸಿದ್ದು, ಮೇಲ್ಮನವಿ ಸಲ್ಲಿಸಿದೆ.
ಕರ್ನಾಟಕದ ವಿಧಾನಸಭೆ ಚುನಾವಣೆಯು ಮುಂದಿನ ವರ್ಷ, ಅಂದರೆ 2023ರ ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಯುವ ಸಾಧ್ಯತೆಯಿದೆ. ವಿಧಾನಸಭೆ ಚುನಾವಣೆಯ ನಂತರವೇ ಬಿಬಿಎಂಪಿ ಚುನಾವಣೆ ನಡೆಯಬಹುದು. ಆಡಳಿತಾರೂಢ ಬಿಜೆಪಿಯ ಮುಂಚೂಣಿ ನಾಯಕರು ಇದೇ ಅಭಿಪ್ರಾಯ ಹೊಂದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ ಶೀಘ್ರ ಚುನಾವಣೆ ನಡೆಯಬೇಕು ಎಂಬ ಅಭಿಪ್ರಾಯವನ್ನು ಚುನಾವಣಾ ಆಯೋಗ ಹೊಂದಿದೆ. ಇದೀಗ ಸರ್ಕಾರವು ಭಕ್ತವತ್ಸವ ಆಯೋಗವನ್ನು ತನ್ನ ವಾದಕ್ಕೆ ಪೂರಕವಾಗಿ ಬಳಸಿಕೊಳ್ಳುತ್ತಿದ್ದು, ಅದನ್ನೇ ಮುಂದೊಡ್ಡಿ ಕಾಲಮಿತಿ ವಿಸ್ತರಿಸಲು ಮನವಿ ಮಾಡಿಕೊಂಡಿದೆ.
ವಾರ್ಡ್ ಪುನರ್ವಿಂಗಡನೆ: ಸರ್ಕಾರಕ್ಕೆ ನೊಟೀಸ್
ಬಿಬಿಎಂಪಿ ವಾರ್ಡ್ಗಳ ಪುನರ್ವಿಂಗಡನೆ ಬಗ್ಗೆಯೂ ಹಲವು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವಿಚಾರವೂ ಇದೀಗ ಹೈಕೋರ್ಟ್ ಮೆಟ್ಟಿಲೇರಿದೆ. ಒಂದೇ ವಾರ್ಡ್ನ ಮತದಾರರನ್ನು ಎರಡು ಪ್ರತ್ಯೇಕ ವಿಧಾನಸಭಾ ಕ್ಷೇತ್ರಗಳಿಗೆ ಹಂಚಿಕೆ ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಗೆ ಸಂಬಂಧಿಸಿದಂತೆಯೂ ಹೈಕೋರ್ಟ್ ಕರ್ನಾಟಕ ಸರ್ಕಾರಕ್ಕೆ ನೊಟೀಸ್ ಜಾರಿಮಾಡಿದೆ. ಮುಖ್ಯ ನ್ಯಾಯಮೂರ್ತಿ ಪಿ.ಬಿ.ವರ್ಲೆ ಅವರಿದ್ದ ವಿಭಾಗೀಯಪೀಠವು ಬೊಮ್ಮನಹಳ್ಳಿ ಶಾಸಕ ಎಂ.ಸತೀಶ್ರೆಡ್ಡಿ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿತು. ಚುನಾವಣಾ ಆಯೋಗ, ಬಿಬಿಎಂಪಿ ಹಾಗೂ ನಗರಾಭಿವೃದ್ಧಿ ಇಲಾಖೆಗೆ ಪ್ರತಿಕ್ರಿಯೆ ನೀಡುವಂತೆ ನ್ಯಾಯಪೀಠವು ನೊಟೀಸ್ ಜಾರಿ ಮಾಡಿದೆ.
ಹೈಕೋರ್ಟ್ನಲ್ಲಿ ಅರ್ಜಿದಾರರ ಪರ ವಾದಿಸಿದ ವಕೀಲ ರವಿವರ್ಮಕುಮಾರ್, ‘ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಹುಳಿಮಾವು ವಾರ್ಡ್ಗೆ (236) ಹೆಚ್ಚುವರಿಯಾಗಿ 6 (14+6=20) ವಾರ್ಡ್ಗಳನ್ನು ಸೇರಿಸಲಾಗಿದೆ. ಇದರಲ್ಲಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವಾರ್ಡ್ಗಳೂ ಇವೆ. ಇದು ಕರ್ನಾಟಕ ಮುನಿಸಿಪಲ್ ಕಾರ್ಪೊರೇಷನ್ ಕಾಯ್ದೆಯ 7ನೇ ಸೆಕ್ಷನ್ಗೆ ವ್ಯತಿರಿಕ್ತ ಕ್ರಮ. ಇದರಿಂದ ಮತದಾರರದಲ್ಲಿ ಗೊಂದಲ ಉಂಟಾಗಿದೆ. ಹೀಗಾಗಿ ಕ್ಷೇತ್ರ ಪುನರ್ವಿಂಗಡನೆ ಅಧಿಸೂಚನೆಯನ್ನೇ ರದ್ದುಪಡಿಸಬೇಕು. ಮರುಪರಿಶೀಲನೆಗೆ ಸೂಚಿಸಬೇಕು’ ಎಂದು ಮನವಿ ಮಾಡಿದರು. ಈ ಮನವಿ ಆಧರಿಸಿ ಹೈಕೋರ್ಟ್ ಕರ್ನಾಟಕ ಸರ್ಕಾರಕ್ಕೆ ನೊಟೀಸ್ ಜಾರಿ ಮಾಡಿದೆ.
ಇದನ್ನೂ ಓದಿ: ಬಿಬಿಎಂಪಿ ಚುನಾವಣೆಗೆ ಮತದಾರರ ಕರಡುಪಟ್ಟಿ ಬಿಡುಗಡೆ: ನಿಮ್ಮ ಹೆಸರು, ವಿವರ ಸರಿಯಿದೆಯಾ ಚೆಕ್ ಮಾಡಿಕೊಳ್ಳಿ!
Published On - 7:20 am, Thu, 1 December 22