‘ಬೇಡ್ತಿ–ವರದಾ ನದಿ ಜೋಡಣೆಯ ಸಂಪೂರ್ಣ ಜವಾಬ್ದಾರಿ ರಾಜ್ಯ ಸರ್ಕಾರದ್ದು’: ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್ ಸ್ಪಷ್ಟನೆ

ಬೇಡ್ತಿ–ವರದಾ ನದಿ ಜೋಡಣೆ ಯೋಜನೆಯ ಸಂಪೂರ್ಣ ಜವಾಬ್ದಾರಿ ರಾಜ್ಯ ಸರ್ಕಾರದ್ದು; ಕೇಂದ್ರದ್ದು ಕೇವಲ ತಾಂತ್ರಿಕ ನೆರವು ಮಾತ್ರ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಮನವಿಗೆ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್ ಲಿಖಿತ ಉತ್ತರ ನೀಡಿದ್ದಾರೆ. ಸಂಸದರು ಎತ್ತಿರುವ ಪರಿಸರ ಹಾಗೂ ಜನಹಿತದ ಕಾಳಜಿಗಳನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಎಲ್ಲಾ ಶಾಸನಬದ್ಧ ಅರಣ್ಯ, ವನ್ಯಜೀವಿ ಮತ್ತು ಪರಿಸರ ನಿಯಮಾವಳಿಗಳ ಕುರಿತು ರಾಜ್ಯ ಸರ್ಕಾರ ವರದಿ ನೀಡಿದರೆ ಅದನ್ನು ಕೇಂದ್ರ ಪರಿಸರ ಇಲಾಖೆಯು ಕೂಲಂಕಷವಾಗಿ ಪರಿಶೀಲಿಸಲಿದೆ ಎಂದು ಸಚಿವರು ತಿಳಿಸಿದ್ದಾರೆ.

ಬೇಡ್ತಿ–ವರದಾ ನದಿ ಜೋಡಣೆಯ ಸಂಪೂರ್ಣ ಜವಾಬ್ದಾರಿ ರಾಜ್ಯ ಸರ್ಕಾರದ್ದು: ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್ ಸ್ಪಷ್ಟನೆ
ಸಂಸದ ಕಾಗೇರಿಗೆ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್ ಲಿಖಿತ ಉತ್ತರ

Updated on: Oct 26, 2026 | 7:08 PM

ಬೆಂಗಳೂರು/ಉತ್ತರ ಕನ್ನಡ, ಅಕ್ಟೋಬರ್​​ 26: ಬೇಡ್ತಿ–ವರದಾ ನದಿ ಜೋಡಣೆ ಯೋಜನೆಯ ಸಂಪೂರ್ಣ ಜವಾಬ್ದಾರಿ ರಾಜ್ಯ ಸರ್ಕಾರದ್ದು. ಕೇಂದ್ರದ ಪಾತ್ರ ಕೇವಲ ತಾಂತ್ರಿಕ ಬೆಂಬಲಕ್ಕಷ್ಟೇ ಸೀಮಿತ ಎಂದು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್ ಹೇಳಿದ್ದಾರೆ. ನದಿ ಜೋಡಣೆ ಯೋಜನೆ ಸ್ಥಗಿತಕ್ಕೆ ಆಗ್ರಹಿಸಿ ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಾಡಿದ್ದ ಮನವಿಗೆ ಕೇಂದ್ರ ಸಚಿವರು ಲಿಖಿತ ಉತ್ತರ ನೀಡಿದ್ದು, ಯಾವುದೇ ನೀರಾವರಿ ಅಥವಾ ನದಿ ಜೋಡಣೆ ಯೋಜನೆಗಳನ್ನು ರೂಪಿಸುವುದು, ಅವುಗಳ ಅಭಿವೃದ್ಧಿ ಹಾಗೂ ನಿರ್ವಹಣೆ ಮಾಡುವುದು ಸಂಪೂರ್ಣವಾಗಿ ಆಯಾ ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವ ವಿಷಯವಾಗಿದೆ. ಇದರಲ್ಲಿ ಕೇಂದ್ರ ಸರ್ಕಾರದ ನೇರ ಹಸ್ತಕ್ಷೇಪವಾಗಲಿ ಅಥವಾ ಜಾರಿಯ ಹೊಣೆಯಾಗಲಿ ಇರುವುದಿಲ್ಲ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ.

‘ಯೋಜನೆ ಅನುಷ್ಠಾನದಲ್ಲಿ ಕೇಂದ್ರದ ಪಾತ್ರವಿಲ್ಲ’

ರಾಜ್ಯ ಸರ್ಕಾರಗಳು ತಮ್ಮದೇ ಆದ ಆಡಳಿತಾತ್ಮಕ ಆದ್ಯತೆಗಳು ಮತ್ತು ಸಂಪನ್ಮೂಲಗಳ ಲಭ್ಯತೆಯ ಆಧಾರದ ಮೇಲೆ ಇಂತಹ ಯೋಜನೆಗಳನ್ನು ಕೈಗೆತ್ತಿಕೊಳ್ಳುತ್ತವೆ. ಸಂಬಂಧಪಟ್ಟ ರಾಜ್ಯ ಸರ್ಕಾರದಿಂದ ಪ್ರಸ್ತಾವನೆ ಬಂದಾಗ ನಿಯಮಾವಳಿಗಳ ಪ್ರಕಾರ ಕೇವಲ ತಾಂತ್ರಿಕ ಮಾರ್ಗದರ್ಶನ ಮತ್ತು ಸಲಹಾತ್ಮಕ ನೆರವು ನೀಡುವುದನ್ನು ಬಿಟ್ಟರೆ ಕೇಂದ್ರ ಸರ್ಕಾರಕ್ಕೆ ಯೋಜನೆ ಅನುಷ್ಠಾನದಲ್ಲಿ ಯಾವುದೇ ಪಾತ್ರವಿಲ್ಲ. ಕರ್ನಾಟಕ ಸರ್ಕಾರದ ಜಲಸಂಪನ್ಮೂಲ ಇಲಾಖೆಯು ಅಧಿಕೃತವಾಗಿ ವಿನಂತಿಸಿಕೊಂಡಿದ್ದರಿಂದ ಹಾಗೂ 2025ರ ಡಿಸೆಂಬರ್​​ 23ರಂದು ಒಪ್ಪಂದ ಮಾಡಿಕೊಂಡ ಹಿನ್ನೆಲೆಯಲ್ಲಿ ಮಾತ್ರ ರಾಷ್ಟ್ರೀಯ ಜಲ ಅಭಿವೃದ್ಧಿ ಸಂಸ್ಥೆ (NWDA) ಈ ಡಿಪಿಆರ್ ಸಿದ್ಧಪಡಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದೆ. ಜಲಸಂಪನ್ಮೂಲ ಸಚಿವಾಲಯವು ರಾಜ್ಯ ಸರ್ಕಾರದ ಜೊತೆಗಿನ ಒಡಂಬಡಿಕೆಯಂತೆ ಕೇವಲ ಯೋಜನಾ ವರದಿಯನ್ನು ಸಿದ್ಧಪಡಿಸುತ್ತಿದೆಯೇ ಹೊರತು, ಇದೇ ಅಂತಿಮ ಯೋಜನಾ ವರದಿಯಲ್ಲ ಎಂದವರು ತಿಳಿಸಿದ್ದಾರೆ.

ಇದನ್ನೂ ಓದಿ: ಬೇಡ್ತಿ ನದಿ ತಿರುವಿನಿಂದಾಗುವ ಪರಿಣಾಮಗಳೇನು? ಯೋಜನೆಗೆ ವಿರೋಧವೇಕೆ? ಎಳೆ ಎಳೆಯಾಗಿ ಬಿಚ್ಚಿಟ್ಟ ತಜ್ಞರು

​’ಜಲಾನಯನ ಪ್ರದೇಶದ ಜನರ ಅಗತ್ಯತೆ ಕೂಲಂಕಷವಾಗಿ ಪರಿಶೀಲನೆ’

ಅಲ್ಲದೆ, ಈ ಹಂತದಲ್ಲಿ ನದಿಯ ಕೆಳಹಂತದ ಪರಿಸರ ವ್ಯವಸ್ಥೆ, ಕೃಷಿ, ಮೀನುಗಾರಿಕೆ, ಅಂತರ್ಜಲ ಹಾಗೂ ಬೇಡ್ತಿ ಜಲಾನಯನ ಪ್ರದೇಶದ ಜನರ ಅಗತ್ಯತೆಗಳನ್ನು ಕೂಲಂಕಷವಾಗಿ ಪರಿಶೀಲಿಸಲಾಗುವುದು.ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಎತ್ತಿರುವ ಪರಿಸರ ಹಾಗೂ ಜನಹಿತದ ಕಾಳಜಿಗಳನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಎಲ್ಲಾ ಶಾಸನಬದ್ಧ ಅರಣ್ಯ, ವನ್ಯಜೀವಿ ಮತ್ತು ಪರಿಸರ ನಿಯಮಾವಳಿಗಳ ಕುರಿತು ರಾಜ್ಯ ಸರ್ಕಾರ ವರದಿ ನೀಡಿದರೆ ಅದನ್ನುಕೇಂದ್ರ ಪರಿಸರ ಇಲಾಖೆಯು ಕೂಲಂಕಷವಾಗಿ ಪರಿಶೀಲಿಸಲಿದೆ ಎಂದು ಸಚಿವರು ತಿಳಿಸಿದ್ದಾರೆ. ಪ್ರಸ್ತಾವಿತ ಬೇಡ್ತಿ–ವರದಾ ನದಿ ಜೋಡಣೆ ಯೋಜನೆಯು ಕಾರ್ಯಸಾಧುವಲ್ಲ ಹಾಗೂ ಸ್ಥಳೀಯ ಜನರ ಹಿತಾಸಕ್ತಿಗೆ ವಿರುದ್ಧವಾಗಿದೆ. ಆದ್ದರಿಂದ ಇದನ್ನು ಅನುಷ್ಠಾನಗೊಳಿಸಬಾರದು, ಯೋಜನೆಯ ವಿಸ್ತೃತ ಯೋಜನಾ ವರದಿ (DPR) ಸಿದ್ಧಪಡಿಸುವ ಪ್ರಕ್ರಿಯೆಯನ್ನು ಕೂಡಲೇ ಸ್ಥಗಿತಗೊಳಿಸಬೇಕು ಮತ್ತು ಮುಂದಿನ ಎಲ್ಲಾ ಚಟುವಟಿಕೆಗಳನ್ನು ತಡೆಹಿಡಿಯಬೇಕು ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಮನವಿ ಮಾಡಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 7:03 pm, Mon, 26 October 26

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Loading...
Unable to load recommendations.
Follow Us