ಬೆಂಗಳೂರು: ಆಂಬುಲೆನ್ಸ್ ಚಾಲಕನ ನಿರ್ಲಕ್ಷ್ಯದಿಂದ ವಾಹನಾಪಘಾತ; ರಿಚ್‌ಮಂಡ್ ವೃತ್ತದಲ್ಲಿ ದಂಪತಿ ಸಾವು

ಬೆಂಗಳೂರಿನ ರಿಚ್‌ಮಂಡ್ ವೃತ್ತದಲ್ಲಿ ನವೆಂಬರ್ 1 ರಂದು ತಡರಾತ್ರಿ ಅತಿವೇಗದ ಆಂಬ್ಯುಲೆನ್ಸ್ ಮೂರು ಮೋಟಾರ್‌ಸೈಕಲ್‌ಗಳಿಗೆ ಗುದ್ದಿದ್ದು, ಸ್ಕೂಟರ್​ನಲ್ಲಿದ್ದ ಗಂಡ ಹೆಂಡತಿಯಿಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದಿಬ್ಬರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ. ಚಾಲಕ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿರುವುದು ಪೊಲೀಸರ ತನಿಖೆಯಿಂದ ದೃಢಪಟ್ಟಿದೆ.

ಬೆಂಗಳೂರು: ಆಂಬುಲೆನ್ಸ್ ಚಾಲಕನ ನಿರ್ಲಕ್ಷ್ಯದಿಂದ ವಾಹನಾಪಘಾತ; ರಿಚ್‌ಮಂಡ್ ವೃತ್ತದಲ್ಲಿ ದಂಪತಿ ಸಾವು
ಆಂಬುಲೆನ್ಸ್ ಚಾಲಕನ ನಿರ್ಲಕ್ಷ್ಯದಿಂದ ವಾಹನಾಪಘಾತ

Updated on: Nov 03, 2025 | 10:42 AM

ಬೆಂಗಳೂರು, ನವೆಂಬರ್ 3: ಜೀವ ಉಳಿಸಬೇಕಾದ ಆಂಬುಲೆನ್ಸ್ (Ambulance Accident) ಜೀವ ತೆಗೆದ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ. ನವೆಂಬರ್ 1 ರ ತಡರಾತ್ರಿ ಬೆಂಗಳೂರಿನ ರಿಚ್‌ಮಂಡ್ ವೃತ್ತದಲ್ಲಿ ಕ್ಲೌಡ್‌ನೈನ್ ಆಸ್ಪತ್ರೆಯಿಂದ ಬಂದ ಅತಿವೇಗದ ಆಂಬ್ಯುಲೆನ್ಸ್ ಮೂರು ಮೋಟಾರ್ ಸೈಕಲ್​ಗೆ ಹೊಡೆದಿದೆ. ಸ್ಕೂಟರ್​ನಲ್ಲಿದ್ದ ಗಂಡ ಹೆಂಡತಿಯಿಬ್ಬರೂ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಅತಿವೇಗದಿಂದ 3 ವಾಹನಗಳಿಗೆ ಗುದ್ದಿದ ಆಂಬುಲೆನ್ಸ್

ಶನಿವಾರ ರಾತ್ರಿ 11:00 ಗಂಟೆ ಸುಮಾರಿಗೆ ನಗರದ ರಿಚ್ಮಂಡ್ ವೃತ್ತದ ಬಳಿ ಈ ಘಟನೆ ನಡೆದಿದ್ದು, ಆಂಬ್ಯುಲೆನ್ಸ್ ಮೂರು ಮೋಟಾರ್‌ಸೈಕಲ್‌ಗಳಿಗೆ ಡಿಕ್ಕಿ ಹೊಡೆದು ಅವುಗಳಲ್ಲಿ ಒಂದನ್ನು ಕೆಲವು ಮೀಟರ್‌ಗಳಷ್ಟು ಎಳೆದುಕೊಂಡು ಹೋಗಿದ್ದು, ಪೊಲೀಸ್ ಹೊರಠಾಣೆಯೊಂದಕ್ಕೆ ಡಿಕ್ಕಿ ಹೊಡೆದ ನಂತರ ನಿಂತಿತ್ತು. ಅತಿ ವೇಗದಿಂದ ಬಂದ ಆಂಬುಲೆನ್ಸ್, 3 ವಾಹನಗಳಲ್ಲಿದ್ದ ಮೊಹಮ್ಮದ್ ರಿಯಾಜ್ (22), ಮೊಹಮ್ಮದ್ ಸಿದ್ದಿಕ್ (25) ಮತ್ತು ಇಸ್ಮಾಯಿಲ್ ನಾಥನ್ ದಬಾಪು (40) ದಂಪತಿಗಳಿಗೆ ಗುದ್ದಿತ್ತು.

ಎಕ್ಸ್​ನಲ್ಲಿ ಪೋಸ್ಟ್ ಮಾಡಲಾದ ವೀಡಿಯೋ ಇಲ್ಲಿದೆ

ಸ್ಥಳದಲ್ಲೇ ದಂಪತಿ ಸಾವು

ಘಟನೆಯಲ್ಲಿ ಡಿಯೋ ಸ್ಕೂಟರ್ನಲ್ಲಿದ್ದ ಇಸ್ಮಾಯಿಲ್ ನಾಥನ್ ದಬಾಪು ಮತ್ತು ಅವರ ಪತ್ನಿ ಸಮೀನ್ ಬಾನು (33)ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮೊಹಮ್ಮದ್ ರಿಯಾಜ್ ಮತ್ತು ಮೊಹಮ್ಮದ್ ಸಿದ್ದಿಕ್ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ನಂತರ ಓಡಿಹೋಗಿದ್ದ ಆಂಬುಲೆನ್ಸ್ ಚಾಲಕ ಅಶೋಕ್ ಕುಮಾರ್, ನಂತರ ಪೊಲೀಸರಲ್ಲಿ ಶರಣಾಗಿದ್ದು, ಪೊಲೀಸರು ಆತನ ಮೇಲೆ ಅತಿವೇಗ ಚಾಲನೆಯ ಆರೋಪ ಹೊರಿಸಿದ್ದಾರೆ. ಯಾವುದೇ ವೈದ್ಯಕೀಯ ತುರ್ತು ಪರಿಸ್ಥಿತಿಯಿಲ್ಲದಿದ್ದರೂ ಚಾಲಕ ನಿರ್ಲಕ್ಷ್ಯದಿಂದ ವಾಹನವನ್ನು ವೇಗವಾಗಿ ಚಲಾಯಿಸಿರುವುದು ಪೊಲೀಸರ ತನಿಖೆಯ ವೇಲೆ ದೃಢಪಟ್ಟಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:40 am, Mon, 3 November 25