
ಬೆಂಗಳೂರು, ನ.10: ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಣ (CM Relief Fund Fraud) ಪಡೆಯಲು ನಕಲಿ ವೈದ್ಯಕೀಯ ದಾಖಲೆಗಳನ್ನು ನೀಡಿರುವ ಆರೋಪದ ಮೇಲೆ 59 ವರ್ಷದ ವ್ಯಕ್ತಿಯೊಬ್ಬರನ್ನು ಬಂಧಿಸಲಾಗಿದೆ. ಆರೋಪಿಯನ್ನು ಬೆಂಗಳೂರಿನ ನೆಲಮಂಗಲದ ಜಿ ಧನಂಜಯ ಎಂದು ಗುರುತಿಸಲಾಗಿದೆ. ಈ ಬಗ್ಗೆ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರು ಎಂದು ಪೊಲೀಸರು ಹೇಳಿರುವುದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ತುರ್ತು ಚಿಕಿತ್ಸೆಯ ಅಗತ್ಯವಿರುವ ರೋಗಿಗಳಿಗೆ ಹಣಕಾಸಿನ ನೆರವು ನೀಡುವುದಾಗಿ ಹೇಳಿ ಅವರಿಂದ ನಕಲಿ ಆಸ್ಪತ್ರೆ ಬಿಲ್‌ಗಳು ಮತ್ತು ವೈದ್ಯಕೀಯ ದಾಖಲೆಗಳನ್ನು ಪಡೆದು ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಧನಂಜಯ ಅವರು ಶಿಕ್ಷಕರಾಗಿದ್ದು, ಯಶವಂತಪುರದ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ರೋಗಿಗಳ ವಿವರಗಳನ್ನು ಸಂಗ್ರಹಿಸಿ, ಅವರ ಮಾಹಿತಿಯನ್ನು ಬಳಸಿಕೊಂಡು, ನಕಲಿ ದಾಖಲೆಗಳನ್ನು ಸೃಷ್ಟಿಸಿ ಪರಿಹಾರ ಮೊತ್ತವನ್ನು ಪಡೆಯಲು ಮುಖ್ಯಮಂತ್ರಿಯವರ ಗೃಹ ಕಚೇರಿ ‘ಕೃಷ್ಣ’ಕ್ಕೆ ಕಳಿಸಿದ್ದರು ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಪೊಲೀಸ್ ಮೂಲಗಳ ಪ್ರಕಾರ, ಧನಂಜಯ ಒಬ್ಬರೇ ಈ ಕೆಲಸ ಮಾಡಿಲ್ಲ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕ್ಯಾತಣ್ಣ, ಜಯಮ್ಮ, ಯಶೋದಮ್ಮ ಮತ್ತು ಚಂದ್ರಶೇಖರ್ ಎಂಬುವವರ ಹೆಸರು ಕೂಡ ಈ ತನಿಖೆಯಲ್ಲಿ ಕೇಳಿ ಬಂದಿದೆ. ಇದರಲ್ಲಿ ಕ್ಯಾತಣ್ಣ ಮತ್ತು ಇನ್ನೊಬ್ಬ ಶಂಕಿತ ವ್ಯಕ್ತಿ ನಿಧನರಾದ ನಂತರ ಧನಂಜಯ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಮತ್ತೊಂದು ಅರ್ಜಿಯನ್ನು ಸಲ್ಲಿಸಿ, ಎರಡನೇ ಬಾರಿಗೆ ಪ್ರಯೋಜನಗಳನ್ನು ಪಡೆಯಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.
ಇನ್ನು ಮುಖ್ಯಮಂತ್ರಿಯವರ ಗೃಹ ಕಚೇರಿ ‘ಕೃಷ್ಣ’ಕ್ಕೆ ಮೇಯಲ್ಲಿ ಬಂದ ಅರ್ಜಿಗಳನ್ನು ಪರಿಶೀಲನೆ ನಡೆಸಿದಾಗ ಈ ಅಕ್ರಮ ಬೆಳಕಿಗೆ ಬಂದಿದೆ. ಆದರೆ ಈ ಅಕ್ರಮದ ಹಿಂದೆ ಯಾರ ಕೈವಾಡ ಇದೆ ಎಂಬುದನ್ನು ಪತ್ತೆ ಮಾಡಲು ಸಾಧ್ಯವಾಗಲಿರಲಿಲ್ಲ. ನವೆಂಬರ್ 5 ರಂದು ಧನಂಜಯ ಅವರು ವಿಧಾನಸೌಧದ ಎರಡನೇ ಮಹಡಿಯಲ್ಲಿರುವ ಮುಖ್ಯಮಂತ್ರಿ ಕಚೇರಿಗೆ ನಕಲಿ ಅರ್ಜಿಗಳಲ್ಲಿ ಒಂದಕ್ಕೆ ಪರಿಹಾರ ಬಿಡುಗಡೆ ಮಾಡಲು ಯಾಕೆ ವಿಳಂಬವಾಗಿದೆ ಎಂದು ವಿಚಾರಿಸಲು ಬಂದಾಗ ಈ ಪ್ರಕರಣದ ಹಿಂದೆ ಧನಂಜಯ ಅವರು ಇರುವ ಬಗ್ಗೆ ತಿಳಿದು ಬಂದಿದೆ. ಅಧಿಕಾರಿಗಳು ಅವರನ್ನು ಈ ಬಗ್ಗೆ ಕೇಳಿದಾಗ ಸತ್ಯಾಂಶ ಹೊರಬಿದ್ದಿದೆ.
ಹಲವಾರು ಜನರಿಗೆ ಸಹಾಯ ಮಾಡುವುದಾಗಿ ಹೇಳಿ, ಅವರಿಂದ ಆಧಾರ್ ಸಂಖ್ಯೆಗಳು, ಬ್ಯಾಂಕ್ ಖಾತೆ ಮಾಹಿತಿ ಮತ್ತು ಇತರ ವೈಯಕ್ತಿಕ ವಿವರಗಳನ್ನು ಸಂಗ್ರಹಿಸಿ, ನಕಲಿ ಅರ್ಜಿ ಸಲ್ಲಿಸಿದ್ದಾರೆ. ಹಣ ಮಂಜೂರು ಮಾಡಿದ ನಂತರ ಪ್ರತಿಯೊಬ್ಬರಿಂದ 50,000 ರೂ. ಕಮಿಷನ್ ಪಡೆಯುತ್ತಿದ್ದರು. ಧನಂಜಯ ಈ ಹಿಂದೆಯೂ ಇಂತಹ ಪ್ರಕರಣದಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿದೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ