
ಬೆಂಗಳೂರು, ಆಗಸ್ಟ್ 23: ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ಹೈ ಸೆಕ್ಯುರಿಟಿ ರಜಿಸ್ಟ್ರೇಷನ್ ಪ್ಲೇಟ್ (HSRP) ನೀಡಲು ಉದ್ಧಟತನ ಮತ್ತು ನಿರ್ಲಕ್ಷ್ಯ ತೋರಿದ ‘ರೋಸ್‌ಮೆರ್ಟಾ ಸೇಫ್ಟಿ ಸಿಸ್ಟಮ್ಸ್’ ಸಂಸ್ಥೆಗೆ ಬೆಂಗಳೂರಿನ ಗ್ರಾಹಕ ನ್ಯಾಯಾಲಯವು 5,000 ರೂಪಾಯಿ ದಂಡ ವಿಧಿಸಿ ಆದೇಶಿಸಿದೆ.
ಯಲಹಂಕ ನಿವಾಸಿ ಅಮೋಘ್ ಜಿ.ಎಂ. ಎಂಬುವರು 2024ರ ಮಾರ್ಚ್ 2 ರಂದು 761 ರೂಪಾಯಿ ಪಾವತಿಸಿ ಆನ್‌ಲೈನ್‌ನಲ್ಲಿ HSRP ನಂಬರ್ ಪ್ಲೇಟ್‌ಗಾಗಿ ಆರ್ಡರ್ ಮಾಡಿದ್ದರು. ಆದರೆ, ಡೀಲರ್ ಬಳಿ ತೆರಳಿದಾಗ ಪ್ಲೇಟ್ ತಲುಪಿಲ್ಲವೆಂದು ವಾಪಸ್ ಕಳುಹಿಸಲಾಯಿತು. ಮುಂದಿನ ಕೆಲವು ತಿಂಗಳುಗಳ ಕಾಲ ಅಮೋಘ್ ಅವರು ನಿರಂತರವಾಗಿ ಗ್ರಾಹಕ ಸೇವಾ ಕೇಂದ್ರ ಮತ್ತು ಡೀಲರ್‌ಗಳನ್ನು ಸಂಪರ್ಕಿಸಿದರೂ, ಸಂಸ್ಥೆಯು ಬರಿ ಸುಳ್ಳು ಭರವಸೆಗಳನ್ನು ನೀಡುತ್ತಾ ಸಮಯ ವ್ಯರ್ಥ ಮಾಡಿತು.
ಸರ್ಕಾರ ನಿಗದಿಪಡಿಸಿದ್ದ HSRP ಅಳವಡಿಕೆಯ ಗಡುವು ಮುಗಿದರೂ ಮತ್ತು ಆರ್ಡರ್ ಮಾಡಿ 16 ತಿಂಗಳುಗಳು ಕಳೆದರೂ ಸಂಸ್ಥೆಯಿಂದ ಸೂಕ್ತ ಸ್ಪಂದನೆ ಸಿಗಲಿಲ್ಲ. ಕೊನೆಗೆ ಬೇಸತ್ತ ಗ್ರಾಹಕರು ಕಾನೂನು ಹೋರಾಟದ ಎಚ್ಚರಿಕೆ ನೀಡಿದ ಬಳಿಕ, 2025ರ ಜುಲೈ 12 ರಂದು ಸಂಸ್ಥೆಯು ನಂಬರ್ ಪ್ಲೇಟ್ ತಲುಪಿಸಿತು.
ಸೇವೆಯಲ್ಲಾದ ಈ ಲೋಪ ಮತ್ತು ವಿಳಂಬದ ವಿರುದ್ಧ ಅಮೋಘ್ ಅವರು ‘ಬೆಂಗಳೂರು ನಗರ 2ನೇ ಹೆಚ್ಚುವರಿ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ’ಕ್ಕೆ ದೂರು ಸಲ್ಲಿಸಿದರು. ದೂರಿನ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷೆ ಅನುರಾಧ ವಿ. ಹಾಗೂ ಸದಸ್ಯೆ ಸವಿತಾ ಐರಾಣಿ ಅವರಿದ್ದ ಪೀಠವು, ಗ್ರಾಹಕರನ್ನು ಅಲೆದಾಡಿಸಿ ಮಾನಸಿಕ ಕಿರುಕುಳ ನೀಡಿದ್ದಕ್ಕಾಗಿ ರೋಸ್‌ಮೆರ್ಟಾ ಸಂಸ್ಥೆಗೆ 3,000 ರೂ. ಪರಿಹಾರ ಹಾಗೂ 2,000 ರೂ. ಕೋರ್ಟ್ ವೆಚ್ಚ ಸೇರಿದಂತೆ ಒಟ್ಟು 5,000 ರೂಪಾಯಿಗಳನ್ನು ಪಾವತಿಸುವಂತೆ ಆದೇಶಿಸಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ