
ಬೆಂಗಳೂರು, ಅ.21: ಬೆಂಗಳೂರಿನಲ್ಲಿ (Bengaluru Doctor) 22 ವರ್ಷದ ಯೂವತಿಯೊಬ್ಬರಿಗೆ 56 ವರ್ಷದ ಚರ್ಮರೋಗ ತಜ್ಞ ಕಿರುಕುಳ ನೀಡಿರುವ ಘಟನೆಯೊಂದು ವರದಿಯಾಗಿದೆ. ಈ ಘಟನೆ ಬೆಂಗಳೂರಿನ ಖಾಸಗಿ ಕ್ಲಿನಿಕ್‌ನಲ್ಲಿ ನಡೆದಿದೆ. ವೈದ್ಯರನ್ನು ಈಗ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಇನ್ನು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದ್ದು, ಯುವತಿ ಕ್ಲಿನಿಕ್ ಒಳಗೆ ಇರುವ ವೇಳೆ ಈ ವೈದ್ಯ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಪ್ರಕರಣ ದಾಖಲಾಗಿದೆ. ಯುವತಿ ತನ್ನ ತಂದೆ ಜತೆಗೆ ಕ್ಲಿನಿಕ್ಗೆ ಭೇಟಿ ನೀಡಿದ್ದಾರೆ. ಆದರೆ ಆಕೆಯ ತಂದೆ ಕ್ಲಿನಿಕ್ ಒಳಗೆ ಬಂದಿಲ್ಲ.
ಇನ್ನು ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ವೈದ್ಯರು ಪರಿಸ್ಥಿತಿಯ ಲಾಭ ಪಡೆದು ಚರ್ಮದ ಸೋಂಕನ್ನು ಪರೀಕ್ಷಿಸುವ ನೆಪದಲ್ಲಿ ಅನುಚಿತವಾಗಿ ಸ್ಪರ್ಶಿಸಿದ್ದಾರೆ. ಹಲವಾರು ಬಾರಿ ತನ್ನನ್ನು ತಬ್ಬಿಕೊಂಡು ಮುತ್ತಿಟ್ಟಿದ್ದಾರೆ ಹಾಗೂ ನನ್ನ ಜತೆಗೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಪರೀಕ್ಷೆ ಮಾಡಬೇಕು ಎಂದು ವೈದ್ಯರು ತನ್ನ ಬಟ್ಟೆ ಬಿಚ್ಚುವಂತೆ ಒತ್ತಾಯಿಸಿದ್ದಾರೆ. ಖಾಸಗಿಯಾಗಿ ಸಮಯ ಕಳೆಯಲು ಹೋಟೆಲ್ ರೂಮ್ಗೆ ಬರುವಂತೆ ಹೇಳಿದರು ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾರೆ.
ಈ ಘಟನೆ ನಡೆದ ನಂತರ ಯುವತಿ ತನ್ನ ಮನೆಯವರಿಗೆ ತಿಳಿಸಿದ್ದು, ಯುವತಿಯ ಕುಟುಂಬದವರು, ಅಕ್ಕ-ಪಕ್ಕದ ನಿವಾಸಿಗಳೊಂದಿಗೆ ಕ್ಲಿನಿಕ್ಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ನಿಭಾಯಿಸಿದ್ದಾರೆ. ಹಾಗೂ ವೈದ್ಯರನ್ನು ಬಂಧಿಸಿದ್ದಾರೆ. ಆದರೆ ವೈದ್ಯರು ಈ ಆರೋಪವನ್ನು ನಿರಾಕರಿಸಿದ್ದಾರೆ. ನಾನು ಮಾಡಿದ ಚಿಕಿತ್ಸೆಯ ಕ್ರಮವನ್ನು ತಪ್ಪಾಗಿ ಅರ್ಥಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಪ್ರತಿಭಟನೆ, ಮನವಿ ಎಲ್ಲವೂ ಆಯಿತು, 8 ವರ್ಷದಿಂದ ಈ ರಸ್ತೆ ಶೋಚನೀಯ ಸ್ಥಿತಿಯಲ್ಲಿದೆ
ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 75 (ಲೈಂಗಿಕ ಕಿರುಕುಳ) ಮತ್ತು 79 (ಮಹಿಳೆಯ ನಮ್ರತೆಯನ್ನು ಅವಮಾನಿಸುವ ಉದ್ದೇಶದಿಂದ ಮಾತು, ಸನ್ನೆ ಅಥವಾ ಕೃತ್ಯ) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಹಾಗೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ