
ಬೆಂಗಳೂರು, ನ,18: ರಾಜಧಾನಿಯಲ್ಲಿ ಕಳೆದ ಕೆಲವು ದಿನಗಳಿಂದ ಹಾಡುಹಗಲೇ ಕೊಲೆ, ದರೋಡೆ ಕೃತ್ಯಗಳು ಹೆಚ್ಚಾಗಿದೆ. ಜನರಲ್ಲಿ ಈ ಬಗ್ಗೆ ಆತಂಕ ಕೂಡ ಉಂಟಾಗಿದೆ. ಈ ಬಗ್ಗೆ ಸರ್ಕಾರಕ್ಕೂ ಹಾಗೂ ಪೊಲೀಸ್ ಇಲಾಖೆಗಳಿಗೆ ಹಲವು ಭಾರೀ ಮನವಿ ಹಾಗೂ ಎಚ್ಚರಿಕೆಗಳು ಹೋಗಿದೆ. ಇದೀಗ ಇಂದು ಬೆಳ್ಳಂಬೆಳಗ್ಗೆ ಅತ್ಯಂತ ಭೀಕರ ಹಾಗೂ ಅಮಾನವೀಯ ಘಟನೆಯೊಂದು ನಡೆದಿದೆ. ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುಷ್ಕರ್ಮಿಗಳು ವ್ಯಕ್ತಿಯೊಬ್ಬನ ಕೈಕಾಲು ಕಟ್ಟಿಹಾಕಿ, ಮೈಮೇಲೆ ಪೆಟ್ರೋಲ್ ಸುರಿದು ನಡುರಸ್ತೆಯಲ್ಲೇ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಘಟನೆಯಲ್ಲಿ ತೀವ್ರವಾಗಿ ಸುಟ್ಟ ಗಾಯಗಳಿಗೆ ತುತ್ತಾಗಿರುವ ಸಯ್ಯದ್ ಹಾಜಿ ಅಲಿಯಾಸ್ ಮೊಹಮ್ಮದ್ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಅತ್ಯಂತ ಗಂಭೀರವಾಗಿದೆ.
ಇಂದು ಬೆಳಗ್ಗೆ ಸುಮಾರು 6:00 ರಿಂದ 6:30ರ ಸುಮಾರಿಗೆ ಗಿರಿನಗರ ವ್ಯಾಪ್ತಿಯ ರಸ್ತೆಯಲ್ಲಿ ವ್ಯಕ್ತಿಯೊಬ್ಬರು ಸುಟ್ಟ ಗಾಯಗಳಿಂದ ನರಳಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಗಿರಿನಗರ ಪೊಲೀಸರು ಗಾಯಾಳುವನ್ನು ರಕ್ಷಿಸಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯ ಸುಟ್ಟಗಾಯಗಳ ವಿಭಾಗದಲ್ಲಿ ಡಾ. ಯೋಗೇಶ್ವರಪ್ಪ ನೇತೃತ್ವದ ವೈದ್ಯರ ತಂಡ ಗಾಯಾಳುವಿಗೆ ತೀವ್ರ ನಿಗಾ ಘಟಕದಲ್ಲಿ (ICU) ಚಿಕಿತ್ಸೆ ನೀಡುತ್ತಿದೆ. ಗಾಯಾಳು ಸಯ್ಯದ್ ಹಾಜಿ ದೇಹವು ಶೇ. 50 ರಿಂದ 70ರಷ್ಟು ಸುಟ್ಟುಹೋಗಿದ್ದು, ಎದೆ ಹಾಗೂ ಶ್ವಾಸಕೋಶದ ಭಾಗಕ್ಕೂ ತೀವ್ರ ಹಾನಿಯಾಗಿದೆ. ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಅವರು ಸದ್ಯ ಮಾತನಾಡುವ ಪರಿಸ್ಥಿತಿಯಲ್ಲೂ ಇಲ್ಲ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಇದುವರೆಗೂ ಗಾಯಾಳುವಿನ ಸಂಬಂಧಿಕರು ಆಸ್ಪತ್ರೆಗೆ ಭೇಟಿ ನೀಡಿಲ್ಲ ಎನ್ನಲಾಗಿದೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಕೆ. ವಂಶಿಕೃಷ್ಣ, “ಬೆಳಗ್ಗೆ 6:30ರ ಸುಮಾರಿಗೆ ಮಾಹಿತಿ ಬಂದ ತಕ್ಷಣ ನಮ್ಮ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ. ಗಾಯಾಳು ಸಯ್ಯದ್ ಹಾಜಿ ಅಲಿಯಾಸ್ ಮೊಹಮ್ಮದ್ ಅವರ ಕೈ ಮತ್ತು ಕಾಲುಗಳನ್ನು ಕಟ್ಟಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿದೆ. ಈ ಮೊದಲು ಪಾದರಾಯನಪುರದಲ್ಲಿ ವಾಸವಾಗಿದ್ದ ಅವರು ಇತ್ತೀಚೆಗೆ ಗಿರಿನಗರ ಭಾಗದಲ್ಲಿ ಓಡಾಡಿಕೊಂಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ” ಎಂದು ತಿಳಿಸಿದ್ದಾರೆ.
“ಈ ಕೃತ್ಯವನ್ನು ಯಾರು ಮತ್ತು ಯಾವ ಕಾರಣಕ್ಕಾಗಿ ಎಸಗಿದ್ದಾರೆ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ. ಆರೋಪಿಗಳ ಪತ್ತೆಗಾಗಿ ಈಗಾಗಲೇ ಮೂರು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸಲಾಗುವುದು” ಎಂದು ಡಿಸಿಪಿ ವಂಶಿಕೃಷ್ಣ ಸ್ಪಷ್ಟಪಡಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ