ಕೆಂಪೇಗೌಡ ಜಯಂತಿಯಂದು ಬೆಂಗಳೂರಿನಲ್ಲಿ 15 ಲಕ್ಷ ಸಸಿ ನೆಡಲು ಸಿದ್ಧತೆ! ಗಿನ್ನಿಸ್ ದಾಖಲೆ ಬರೆಯಲು ಬಿಡಿಎ ಪ್ಲಾನ್

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (BDA) ಜೂನ್ 27ರ ಕೆಂಪೇಗೌಡ ಜಯಂತಿಯಂದು ನಾಡಪ್ರಭು ಕೆಂಪೇಗೌಡ ಲೇಔಟ್ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ 15 ಲಕ್ಷ ಸಸಿಗಳನ್ನು ನೆಡಲು ಮುಂದಾಗಿದೆ. ಬೆಂಗಳೂರಿನಲ್ಲಿ ಹಸಿರು ನೆಲೆಸುವಂತೆ ಮಾಡುವ ಉದ್ದೇಶದೊಂದಿಗೆ ಹಮ್ಮಿಕೊಳ್ಳಲಾಗಿರುವ ಈ ಕಾರ್ಯ, ಗಿನ್ನಿಸ್ ದಾಖಲೆಗೆ ಭಾಜನವಾಗುವ ನಿರೀಕ್ಷೆ ಇದೆ.

ಕೆಂಪೇಗೌಡ ಜಯಂತಿಯಂದು ಬೆಂಗಳೂರಿನಲ್ಲಿ 15 ಲಕ್ಷ ಸಸಿ ನೆಡಲು ಸಿದ್ಧತೆ! ಗಿನ್ನಿಸ್ ದಾಖಲೆ ಬರೆಯಲು ಬಿಡಿಎ ಪ್ಲಾನ್
ಜೂನ್ 5ರಂದು ಬೆಂಗಳೂರಿಗೆ ಬಂದಾಗ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಗಿಡ ನೆಟ್ಟಿರುವ ಸಂಗ್ರಹ ಚಿತ್ರ
Image Credit source: tv9

Updated on: Jun 10, 2026 | 7:00 AM

ಬೆಂಗಳೂರು, ಜೂನ್ 10: ಬೆಂಗಳೂರಿನ (Bengaluru) ಹಸಿರನ್ನು ಮತ್ತಷ್ಟು ವಿಸ್ತರಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (BDA) ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಯೊಂದನ್ನು ಕೈಗೆತ್ತಿಕೊಂಡಿದೆ. ಬೆಂಗಳೂರಿನ ಸಂಸ್ಥಾಪಕ ಕೆಂಪೇಗೌಡರ ಜನ್ಮದಿನದ ಅಂಗವಾಗಿ ಜೂನ್ 27 ರಂದು ನಗರದಾದ್ಯಂತ ಏಕಕಾಲದಲ್ಲಿ ಬರೋಬ್ಬರಿ 15 ಲಕ್ಷ ಸಸಿಗಳನ್ನು ನೆಡಲು ಬಿಡಿಎ ಭರದಿಂದ ಸಿದ್ಧತೆಗಳನ್ನು ಆರಂಭಿಸಿದೆ. ಈ ಬೃಹತ್ ಹಸಿರು ಅಭಿಯಾನದ ಮೂಲಕ ಗಿನ್ನಿಸ್ ವರ್ಲ್ಡ್ ರೆಕಾರ್ಡ್ (Guinness World Record) ಬರೆಯಲು ಪ್ರಾಧಿಕಾರ ಗುರಿ ಹೊಂದಿದೆ.

ಮುಖ್ಯಾಂಶಗಳು

  • ಜೂನ್ 27ಕ್ಕೆ 15 ಲಕ್ಷ ಸಸಿ ನೆಡಲು ಸಿದ್ಧತೆ.
  • ಕೆಂಪೇಗೌಡ ಲೇಔಟ್‌ನಲ್ಲಿ 5 ಲಕ್ಷ ಗಿಡಗಳನ್ನು ನೆಡಲು ಸಿದ್ಧತೆ.
  • ಗಿನ್ನಿಸ್ ದಾಖಲೆ ಬರೆಯಲು ಬಿಡಿಎ ಬೃಹತ್ ಪ್ಲಾನ್.

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ವಿಶೇಷ ನಿರ್ದೇಶನದ ಮೇರೆಗೆ ಈ ಬೃಹತ್ ವನಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಬಿಡಿಎ ಅಭಿವೃದ್ಧಿಪಡಿಸಿರುವ ನಾಡಪ್ರಭು ಕೆಂಪೇಗೌಡ ಲೇಔಟ್ ಒಂದರಲ್ಲೇ 5 ಲಕ್ಷ ಸಸಿಗಳನ್ನು ನೆಡಲು ತೀರ್ಮಾನಿಸಲಾಗಿದೆ. ಇನ್ನುಳಿದ 10 ಲಕ್ಷ ಸಸಿಗಳನ್ನು ಬನಶಂಕರಿ 6ನೇ ಹಂತ ಸೇರಿದಂತೆ ಪ್ರಾಧಿಕಾರದ ವಿವಿಧ ಬಡಾವಣೆಗಳು ಹಾಗೂ ಮೈಸೂರು ರಸ್ತೆ, ಮಾಗಡಿ ರಸ್ತೆಯನ್ನು ಸಂಪರ್ಕಿಸುವ ಪ್ರಮುಖ ರಸ್ತೆಯ ಇಕ್ಕೆಲಗಳಲ್ಲಿ ನೆಡಲು ಬಿಡಿಎ ಯೋಜಿಸಿದೆ.

ಒಂದು ಮನೆ, ಒಂದು ಔಷಧೀಯ ಸಸ್ಯ

ಈ ಹಸಿರು ಅಭಿಯಾನದಲ್ಲಿ ಕೇವಲ ಅಲಂಕಾರಿಕ ಗಿಡಗಳನ್ನಷ್ಟೇ ನೆಡದೆ, ಪ್ರಕೃತಿ ಮತ್ತು ಪರಿಸರಕ್ಕೆ ಪೂರಕವಾದ ದೇಶೀಯ ಹಾಗೂ ಹಣ್ಣಿನ ಗಿಡಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮಾವು, ಹಲಸು, ಬೇವು, ಸಪೋಟ ಸೇರಿದಂತೆ ಸುಮಾರು 350ಕ್ಕೂ ಹೆಚ್ಚು ತಳಿಯ ವಿವಿಧ ಅಪರೂಪದ ಸ್ಥಳೀಯ ಔಷಧೀಯ ಸಸ್ಯಗಳನ್ನು ಇಲ್ಲಿ ನೆಡಲಾಗುತ್ತಿದೆ. ವಸತಿ ಪ್ರದೇಶಗಳಲ್ಲಿ ಜೀವವೈವಿಧ್ಯತೆಯನ್ನು ಹೆಚ್ಚಿಸುವ ಸಲುವಾಗಿ ‘ಒಂದು ಮನೆ, ಒಂದು ಔಷಧೀಯ ಸಸ್ಯ (One House, One Medicinal Plant)’ ಎಂಬ ವಿಶಿಷ್ಟ ಪರಿಕಲ್ಪನೆಯನ್ನು ಈ ಅಭಿಯಾನದಲ್ಲಿ ಅಳವಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಬಿಬಿಎಂಪಿ ಕಸ ಗುತ್ತಿಗೆ ವಿವಾದ: ಪರಿಶೀಲನೆಗೆ ಉನ್ನತ ಮಟ್ಟದ ಸಮಿತಿ ರಚನೆ

ಈ ಕುರಿತು ಮಾಹಿತಿ ನೀಡಿರುವ ಬಿಡಿಎ ಅಧ್ಯಕ್ಷ ಹಾಗೂ ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್, ‘ಮುಖ್ಯಮಂತ್ರಿಗಳ ಸೂಚನೆಯಂತೆ ಕೆಂಪೇಗೌಡ ಜಯಂತಿಯ ಶುಭ ದಿನದಂದು ನಮ್ಮ ಪ್ರಾಧಿಕಾರದ ವ್ಯಾಪ್ತಿಯ ಲೇಔಟ್‌ಗಳಲ್ಲಿ ಬೃಹತ್ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಅಧಿಕಾರಿಗಳು ಈಗಾಗಲೇ ಸ್ಥಳ ಪರಿಶೀಲನೆ ಹಾಗೂ ಸಸಿಗಳ ಸಂಗ್ರಹಣೆ ಪ್ರಕ್ರಿಯೆ ಆರಂಭಿಸಿದ್ದಾರೆ. ಸಾರ್ವಜನಿಕರ ಸಹಭಾಗಿತ್ವದೊಂದಿಗೆ ನಡೆಯಲಿರುವ ಈ ಬೃಹತ್ ಪರಿಸರ ಆಂದೋಲನವು ಖಂಡಿತವಾಗಿಯೂ ಗಿನ್ನಿಸ್ ದಾಖಲೆ ಬರೆಯಲಿದೆ ಎಂಬ ಸಂಪೂರ್ಣ ವಿಶ್ವಾಸವಿದೆ’ ಎಂದು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Follow Us