ಬೆಂಗಳೂರಿನ ಯುವಕರಲ್ಲಿ ಹೆಚ್ಚುತ್ತಿದೆ ಬಾಯಿ ಕ್ಯಾನ್ಸರ್: ಲಕ್ಷಣಗಳಿದ್ದರೆ ನಿರ್ಲಕ್ಷಿಸಬೇಡಿ, ತಜ್ಞರ ಎಚ್ಚರಿಕೆ

ಬೆಂಗಳೂರಿನ ಯುವಜನತೆಯಲ್ಲಿ ಬಾಯಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿರುವ ಆಘಾತಕಾರಿ ವಿಚಾರ ಬಯಲಾಗಿದೆ. ತಂಬಾಕು ಸೇವನೆ, ಒತ್ತಡ ಮತ್ತು ಜೀವನಶೈಲಿಯ ಬದಲಾವಣೆಯಿಂದ 30-40ರ ವಯೋಮಾನದವರಲ್ಲಿ ಹೆಚ್ಚೆಚ್ಚು ಕ್ಯಾನ್ಸರ್ ಪತ್ತೆಯಾಗುತ್ತಿದೆ. ಆರಂಭದಲ್ಲಿ ನೋವು ಇಲ್ಲದ ಕಾರಣ ಲಕ್ಷಣಗಳನ್ನು ಜನರು ನಿರ್ಲಕ್ಷಿಸುತ್ತಿದ್ದಾರೆ. ಆದರೆ, ನಿರ್ಲಕ್ಷಿಸಬಾರದು ಎಂದು ವೈದ್ಯರು ಎಚ್ಚರಿಸಿದ್ದಾರೆ.

ಬೆಂಗಳೂರಿನ ಯುವಕರಲ್ಲಿ ಹೆಚ್ಚುತ್ತಿದೆ ಬಾಯಿ ಕ್ಯಾನ್ಸರ್: ಲಕ್ಷಣಗಳಿದ್ದರೆ ನಿರ್ಲಕ್ಷಿಸಬೇಡಿ, ತಜ್ಞರ ಎಚ್ಚರಿಕೆ
ಸಾಂದರ್ಭಿಕ ಚಿತ್ರ
Image Credit source: shutterstock.com

Updated on: Apr 23, 2026 | 8:43 AM

ಬೆಂಗಳೂರು, ಏಪ್ರಿಲ್ 23: ಸಾಮಾನ್ಯವಾಗಿ ಬಾಯಿ ಕ್ಯಾನ್ಸರ್ (Oral Cancer) ವಯಸ್ಸಾದವರಲ್ಲಿ ಕಾಣಿಸಿಕೊಳ್ಳುತ್ತದೆ ಎಂಬ ಭಾವನೆ ಇತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಬೆಂಗಳೂರಿನ (Bengaluru) 30 ಮತ್ತು 40ರ ವಯೋಮಾನದ ಯುವಜನತೆಯಲ್ಲಿ ಇದರ ಲಕ್ಷಣಗಳು ಹೆಚ್ಚಾಗಿ ಪತ್ತೆಯಾಗುತ್ತಿವೆ ಎಂದು ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ. ಬಾಯಿ ಕ್ಯಾನ್ಸರ್​​ಗೆ ತಂಬಾಕು ಸೇವನೆ ಇಂದಿಗೂ ಪ್ರಮುಖ ಕಾರಣವಾಗಿದ್ದರೂ, ಲಕ್ಷಣಗಳನ್ನು ಆರಂಭದಲ್ಲಿಯೇ ಪತ್ತೆಹಚ್ಚುವಲ್ಲಿ ವಿಳಂಬವಾಗುತ್ತಿರುವುದು ಈ ಅಪಾಯವನ್ನು ಹೆಚ್ಚಿಸಿದೆ ಎಂದು ಮೆಡಿಕಲ್ ಆಂಕಾಲಜಿಸ್ಟ್ ಡಾ. ರಾಜೀವ್ ವಿಜಯಕುಮಾರ್ ಹೇಳಿರುವುದಾಗಿ ಡೆಕ್ಕನ್ ಹೆರಾಲ್ಡ್ ವರದಿ ತಿಳಿಸಿದೆ.

ಯುವಕರಲ್ಲಿ ಬಾಯಿ ಕ್ಯಾನ್ಸರ್ ಹೆಚ್ಚಳಕ್ಕೆ ಕಾರಣಗಳೇನು?

ತಂಬಾಕು ಮಾತ್ರವಲ್ಲದೆ ಹೈ ಪ್ರೊಸೆಸ್ಡ್ ಆಹಾರಗಳ ಸೇವನೆ, ಮೈಕ್ರೋ ನ್ಯೂಟ್ರಿಯೆಂಟ್ಸ್ ಕೊರತೆ, ಅತಿಯಾದ ಮಾನಸಿಕ ಒತ್ತಡ ಹಾಗೂ HPV ಸೋಂಕು ಕೂಡ ಯುವಜನತೆಯಲ್ಲಿ ಕ್ಯಾನ್ಸರ್ ಹೆಚ್ಚಲು ಕಾರಣವಾಗುತ್ತಿವೆ. ಯುವಕರಲ್ಲಿ ಕ್ಯಾನ್ಸರ್ ಇರಲಾರದು ಎಂಬ ಕನಿಷ್ಠ ಅನುಮಾನವೂ ಇಲ್ಲದಿರುವುದು ರೋಗನಿರ್ಣಯ ವಿಳಂಬಕ್ಕೆ ಕಾರಣವಾಗುತ್ತಿದೆ ಎಂದು ಹೆಡ್ ಅಂಡ್ ನೆಕ್ ಸರ್ಜರಿ ತಜ್ಞ ಡಾ. ನಾರಾಯಣ ಸುಬ್ರಮಣಿಯಂ ಅಭಿಪ್ರಾಯಪಟ್ಟಿರುವುದನ್ನು ವರದಿ ಉಲ್ಲೇಖಿಸಿದೆ.

ಬಾಯಿ ಕ್ಯಾನ್ಸರ್ ಲಕ್ಷಣಗಳೇನು? ಈ ಲಕ್ಷಣಗಳ ಬಗ್ಗೆ ಇರಲಿ ಎಚ್ಚರ

ಬಾಯಿ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳು ನೋವು ರಹಿತವಾಗಿರುತ್ತವೆ. ಹೀಗಾಗಿ ಜನರು ಇದನ್ನು ಸಾಮಾನ್ಯವೆಂದು ನಿರ್ಲಕ್ಷಿಸುತ್ತಾರೆ. ಆದರೆ, ಈ ಕೆಳಗಿನ ಲಕ್ಷಣಗಳು ಕಂಡುಬಂದರೆ ಎಚ್ಚರಿಕೆ ವಹಿಸಬೇಕಂದು ವೈದ್ಯರು ತಿಳಿಸಿದ್ದಾರೆ.

  • ಕೆನ್ನೆಯ ಒಳಭಾಗದಲ್ಲಿ ಬಿಳಿ ಅಥವಾ ಕೆಂಪು ಮಚ್ಚೆಗಳು ಕಾಣಿಸಿಕೊಳ್ಳುವುದು.
  • ಹಲ್ಲುಗಳು ಸಡಿಲಗೊಳ್ಳುವುದು.
  • ಬಾಯಿ ಹುಣ್ಣು ಅಥವಾ ಹಲ್ಲು ನೋವು ದೀರ್ಘಕಾಲ ಗುಣವಾಗದೆ ಇರುವುದು.

ಶೇ 50-65 ರಷ್ಟು ಪ್ರಕರಣಗಳಲ್ಲಿ ಆರಂಭದಲ್ಲಿ ನೋವು ಇಲ್ಲದಿರುವ ಕಾರಣಕ್ಕೆ ರೋಗ ಉಲ್ಬಣಗೊಂಡ ಹಂತದಲ್ಲಿ ಆಸ್ಪತ್ರೆಗೆ ಬರುತ್ತಾರೆ ಎಂದು ರೇಡಿಯೇಶನ್ ಆಂಕಾಲಜಿ ತಜ್ಞೆ ಡಾ. ಲಿಥಿಕಾ ಲಾವಣ್ಯ ವಿವರಿಸಿದ್ದಾರೆ.

ದಂತ ಸಮಸ್ಯೆ ಎಂದು ನಿರ್ಲಕ್ಷಿಸಬೇಡಿ

ಬಹಳಷ್ಟು ಮಂದಿ ಬಾಯಿ ಹುಣ್ಣು ಅಥವಾ ಒಸಡುಗಳಲ್ಲಿ ರಕ್ತ ಬರುವುದನ್ನು ಸಾಮಾನ್ಯ ದಂತ ಸಮಸ್ಯೆ ಎಂದು ಭಾವಿಸಿ ಡೆಂಟಿಸ್ಟ್‌ಗಳ ಬಳಿ ಹೋಗುತ್ತಾರೆ. ಪದೇ ಪದೇ ಚಿಕಿತ್ಸೆ ಪಡೆದರೂ ಗುಣವಾಗದಿದ್ದಾಗ ಆಂಕಾಲಾಜಿಸ್ಟ್‌ಗಳ ಬಳಿ ತಪಾಸಣೆ ಮಾಡಿಸಿಕೊಳ್ಳುವುದು ಉತ್ತಮ ಎಂದು ಡಾ. ಸಾಕ್ಷಿ ಹಿಂದೂಜಾ ಸಲಹೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us