
ಬೆಂಗಳೂರು, ಅ.5: ರಾಜಧಾನಿ ಬೆಂಗಳೂರಿನಲ್ಲಿ ವರುಣನ ಆರ್ಭಟ ಮತ್ತೆ ತೀವ್ರಗೊಂಡಿದೆ. ಸೋಮವಾರ ಮಧ್ಯಾಹ್ನದ ವೇಳೆಗೆ ನಗರದ ಹಲವೆಡೆ ಕಪ್ಪು ಮೋಡಗಳು ಕವಿದು, ಗುಡುಗು-ಸಿಡಿಲು ಸಹಿತ ಧಾರಾಕಾರ ಮಳೆ ಸುರಿದಿದೆ. ದಿಢೀರ್ ಸುರಿದ ವರ್ಷಧಾರೆಯಿಂದಾಗಿ ನಗರದ ಪ್ರಮುಖ ರಸ್ತೆಗಳು ಹಾಗೂ ತಗ್ಗು ಪ್ರದೇಶಗಳಲ್ಲಿ ನೀರು ನಿಂತು, ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ಪರದಾಟ ನಡೆಸುವಂತಾಗಿದೆ.
ಮೆಜೆಸ್ಟಿಕ್, ಆನಂದ್ ರಾವ್ ಸರ್ಕಲ್, ಕೆಆರ್ ಪುರಂ, ಟಿನ್ ಫ್ಯಾಕ್ಟರಿ, ಟಿಸಿ ಪಾಳ್ಯ, ಜಕ್ಕೂರು ಹಾಗೂ ಹೆಬ್ಬಾಳ ಸುತ್ತಮುತ್ತ ಭಾರಿ ಮಳೆಯಾಗಿದೆ. ಕೆಆರ್ ಪುರಂ ಮೆಟ್ರೋ ನಿಲ್ದಾಣ ಮತ್ತು ಟಿನ್ ಫ್ಯಾಕ್ಟರಿ ರಸ್ತೆಯ ಸುತ್ತಮುತ್ತ ಜಲಾವೃತಗೊಂಡಿದ್ದು, ಸಂಚಾರ ಸಂಪೂರ್ಣ ನಿದಾನಗೊಂಡಿದೆ. ದಿಢೀರ್ ಸುರಿದ ಧಾರಾಕಾರ ಮಳೆಯಿಂದಾಗಿ ರಸ್ತೆಗಳಲ್ಲಿ ದೃಶ್ಯಗೋಚರತೆ ಕಡಿಮೆಯಾಗಿದ್ದು, ವಾಹನ ಸವಾರರು ಹೆಡ್ಲೈಟ್ ಆನ್ ಮಾಡಿಕೊಂಡು ಸಾಗುವಂತಾಯಿತು.
ಮಳೆಯಿಂದಾಗಿ ಹಲವು ಕಡೆ ನೀರು ನಿಂತ ಪರಿಣಾಮ ಬೆಂಗಳೂರು ಸಂಚಾರ ಪೊಲೀಸರು ಮುನ್ನೆಚ್ಚರಿಕೆ ಸಲಹೆ ಜಾರಿ ಮಾಡಿದ್ದಾರೆ. ಗೆದ್ದಲಹಳ್ಳಿ ರೈಲ್ವೆ ಸೇತುವೆ ಬಳಿ ರಸ್ತೆಯಲ್ಲಿ ಭಾರಿ ಪ್ರಮಾಣದ ಮಳೆ ನೀರು ಶೇಖರಣೆಯಾಗಿದೆ. ಹೀಗಾಗಿ ಹೆಣ್ಣೂರು ಕಡೆಗೆ ಸಾಗುವ ಮಾರ್ಗದಲ್ಲಿ ವಾಹನ ಸಂಚಾರ ನಿಧಾನಗತಿಯಲ್ಲಿದ್ದು, ಚಾಲಕರು ಜಾಗರೂಕತೆಯಿಂದ ಚಲಿಸುವಂತೆ ಪೊಲೀಸರು ಕೋರಿದ್ದಾರೆ.
ಇದನ್ನೂ ಓದಿ: ‘ತಂದೆ ಕೆಲಸದಲ್ಲಿದ್ದರೆ ಸಾಲದು, ತಾಯಿ ಗೃಹಿಣಿಯಾಗಿರಬೇಕು’: ಬೆಂಗಳೂರಿನ ಪ್ರತಿಷ್ಠಿತ ಶಾಲೆಯ ಅಸಲಿ ಬಣ್ಣ ಬಯಲು
ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಮುನ್ಸೂಚನೆಯಂತೆ, ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಮುಂದಿನ 2 ದಿನಗಳ ಕಾಲ (ಅಕ್ಟೋಬರ್ 5 ಮತ್ತು 6) ಗುಡುಗು ಹಾಗೂ ಸಿಡಿಲು ಸಹಿತ ಸಾಧಾರಣದಿಂದ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಸಾಧಾರಣ ಮಳೆಯಿಂದಾಗಿ ನಗರದ ತಗ್ಗು ಪ್ರದೇಶಗಳು ಹಾಗೂ ಅಂಡರ್ಪಾಸ್ಗಳಲ್ಲಿ ನೀರು ನಿಲ್ಲುವ ಸಾಧ್ಯತೆಯಿದ್ದು, ಸಂಜೆ ಕಚೇರಿಗಳಿಂದ ಮನೆಗೆ ಮರಳುವ ಉದ್ಯೋಗಿಗಳು ಮತ್ತು ವಾಹನ ಸವಾರರು ಹೆಚ್ಚಿನ ಸಮಯ ಮೀಸಲಿಟ್ಟು ಜಾಗರೂಕರಾಗಿ ಪ್ರಯಾಣಿಸುವಂತೆ ಸೂಚಿಸಲಾಗಿದೆ.
ಕೊಡಗು ಜಿಲ್ಲೆಯಾದ್ಯಂತ ಭಾರಿ ಗುಡುಗು-ಸಿಡಿಲಿನೊಂದಿಗೆ ಸುರಿದ ಮಳೆ ಮಂಜಿನ ನಗರಿಗೆ ತಂಪು ನೀಡಿದ್ದರೆ, ಹಾವೇರಿ ಜಿಲ್ಲೆಯಲ್ಲಿ ಕೆಲಸದ ವೇಳೆಗೆ ಸುರಿದ ಮಳೆಗೆ ಸಿಡಿಲು ಬಡೆದು ಜಮೀನಿನಲ್ಲಿದ್ದ ವೃದ್ಧ ರೈತರೊಬ್ಬರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಹಾವೇರಿ ಜಿಲ್ಲೆಯ ಹಲವೆಡೆ ಇಂದು ಸಿಡಿಲು ಮತ್ತು ಗುಡುಗು ಸಹಿತ ಭಾರಿ ಮಳೆಯಾಗಿದೆ. ಸವಣೂರು ತಾಲೂಕಿನ ಚಿಕ್ಕಮರಳಿಹಳ್ಳಿ ಗ್ರಾಮದಲ್ಲಿ ಈ ಕರಳು ಹಿಂಡುವ ಘಟನೆ ಸಂಭವಿಸಿದೆ.
ಚಿಕ್ಕಮರಳಿಹಳ್ಳಿ ಗ್ರಾಮದ ನಿವಾಸಿ ದೊಡ್ಡಹನುಮಂತಪ್ಪ ನಿಂಗಪ್ಪ ರಿತ್ತಿ (60) ಮೃತಪಟ್ಟ ದುರದೃಷ್ಟಕರ ರೈತ. ದೊಡ್ಡಹನುಮಂತಪ್ಪ ಅವರು ತಮ್ಮ ಜಮೀನಿನಲ್ಲಿ ಕೆಲಸಕ್ಕೆ ತೆರಳಿದ್ದಾಗ ದಿಢೀರನೆ ಭಾರಿ ಮಳೆ ಹಾಗೂ ಸಿಡಿಲು ಆರಂಭವಾಗಿದೆ. ಮಳೆಯಿಂದ ರಕ್ಷಣೆ ಪಡೆಯಲು ಅವರು ಜಮೀನಿನಲ್ಲಿದ್ದ ಮರದ ಕೆಳಗೆ ನಿಂತಿದ್ದ ವೇಳೆ ಭೀಕರ ಸಿಡಿಲು ಬಡೆದು ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:09 pm, Mon, 5 October 26