‘ತಂದೆ ಕೆಲಸದಲ್ಲಿದ್ದರೆ ಸಾಲದು, ತಾಯಿ ಗೃಹಿಣಿಯಾಗಿರಬೇಕು’: ಬೆಂಗಳೂರಿನ ಪ್ರತಿಷ್ಠಿತ ಶಾಲೆಯ ಅಸಲಿ ಬಣ್ಣ ಬಯಲು
ಬೆಂಗಳೂರಿನ ಪ್ರತಿಷ್ಠಿತ ಶಾಲೆಗಳಲ್ಲಿ ಪ್ರವೇಶಾತಿಗಾಗಿ ದುಡಿಯುವ ತಾಯಂದಿರಿಗೆ ತಾರತಮ್ಯ ಎಸಗಲಾಗುತ್ತಿದೆ. ಮಕ್ಕಳಿಗೆ ಸೀಟು ಸಿಗಲು ತಾಯಿ ಗೃಹಿಣಿಯಾಗಿರಬೇಕು ಎಂಬ ಅಲಿಖಿತ ನಿಯಮ ಪಾಲಿಸಲಾಗುತ್ತಿದೆ. ಇದು ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ಮಹಿಳೆಯರ ಸ್ವಾತಂತ್ರ್ಯವನ್ನು ಪ್ರಶ್ನಿಸುವ ಇಂತಹ ನೀತಿಗಳು ಮಕ್ಕಳಿಗೆ ಯಾವ ಮೌಲ್ಯ ಕಲಿಸುತ್ತವೆ ಎಂಬುದು ಪೋಷಕರ ಪ್ರಶ್ನೆ.

ಬೆಂಗಳೂರು, ಅ.5: ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು, ಅವರಿಗೆ ಸ್ವಾವಲಂಬನೆ ಹಾಗೂ ಸಮಾನತೆಯ ಪಾಠ ಕಲ್ಪಿಸಬೇಕು ಎಂದು ಹಗಲಿರುಳು ಶ್ರಮಿಸುವ ದುಡಿಯುವ ತಾಯಂದಿರಿಗೆ ಬೆಂಗಳೂರಿನ ಪ್ರತಿಷ್ಠಿತ ಶಾಲೆಯೊಂದು ಶಾಕ್ ನೀಡಿದೆ. ಮಕ್ಕಳಿಗೆ ಶಾಲೆಯಲ್ಲಿ ಸೀಟು ಸಿಗಬೇಕಾದರೆ ತಾಯಿ ಉದ್ಯೋಗಸ್ಥೆಯಾಗಿರಬಾರದು, ಗೃಹಿಣಿಯಾಗಿರಬೇಕು ಎಂಬ ವಿಚಿತ್ರ ಅಲಿಖಿತ ನಿಯಮವನ್ನು ಅನುಸರಿಸುತ್ತಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ತಮ್ಮ 2.5 ವರ್ಷದ ಹೆಣ್ಣು ಮಗಳಿಗಾಗಿ ಶಾಲೆ ಹುಡುಕುತ್ತಿದ್ದ ಬೆಂಗಳೂರಿನ ತಾಯಿಯೊಬ್ಬರು ತಮಗಾದ ಕಹಿ ಅನುಭವವನ್ನು ಸಾಮಾಜಿಕ ಜಾಲತಾಣ ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.
ಬೆಂಗಳೂರಿನ ಬನಶಂಕರಿ ಪ್ರದೇಶದಲ್ಲಿರುವ ಕೆಲವು ಪ್ರತಿಷ್ಠಿತ ಹಳೆಯ ಶಾಲೆಗಳಲ್ಲಿ ಪ್ರವೇಶಾತಿ ಪಡೆಯಲು ಈ ರೀತಿಯ ತಾರತಮ್ಯ ಎಸಗಲಾಗುತ್ತಿದೆ ಎಂದು ಮಹಿಳೆ ಆರೋಪಿಸಿದ್ದಾರೆ. “ಶಾಲೆಗಳಿಗೆ ಅರ್ಜಿ ಸಲ್ಲಿಸುವಾಗ ತಾಯಿ ಕೆಲಸದಲ್ಲಿದ್ದರೆ ಅಂತಹ ಅರ್ಜಿಗಳನ್ನು ನೇರವಾಗಿ ತಿರಸ್ಕರಿಸಲಾಗುತ್ತದೆ. ತಾಯಿ ಗೃಹಿಣಿಯಾಗಿದ್ದರೆ ಮಾತ್ರ ಸೀಟು ನೀಡಲು ಆದ್ಯತೆ ನೀಡಲಾಗುತ್ತದೆ. ಇದು ಈ ಶಾಲೆಗಳ ಅಲಿಖಿತ ನಿಯಮ” ಎಂದು ಮಹಿಳೆ ತಮ್ಮ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಈ ಕುರಿತು ಇತರ ಪೋಷಕರ ಬಳಿ ವಿಚಾರಿಸಿದಾಗ, ಪ್ರವೇಶಾತಿ ಸಿಗಬೇಕಾದರೆ ಅರ್ಜಿಯಲ್ಲಿ ತಾಯಿ ಕೆಲಸ ಮಾಡುತ್ತಿಲ್ಲ ಎಂದು ‘ಸುಳ್ಳು’ ನಮೂದಿಸುವಂತೆ ಅನೇಕ ಪೋಷಕರು ಸಲಹೆ ನೀಡಿದ್ದಾಗಿ ಅವರು ತಿಳಿಸಿದ್ದಾರೆ. ಈ ಶಾಲೆಗಳು ಕೇವಲ ಪ್ರವೇಶಾತಿಯಲ್ಲಿ ಅಷ್ಟೇ ಅಲ್ಲ, ಪ್ರತಿ ವರ್ಷ ವಿದ್ಯಾರ್ಥಿಗಳ ತಾಯಂದಿರ ಉದ್ಯೋಗದ ಸ್ಥಿತಿಗತಿಯನ್ನು ಪರಿಶೀಲಿಸಿ ಕಣ್ಣಿಡುತ್ತವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವೈರಲ್ ಪೋಸ್ಟ್ ಇಲ್ಲಿದೆ ನೋಡಿ:

ಮಹಿಳೆಯರ ಉದ್ಯೋಗ ಮತ್ತು ಸ್ವಾವಲಂಬನೆಯನ್ನು ಅಪರಾಧದಂತೆ ನೋಡುವ ಇಂತಹ ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಎಂತಹ ಮೌಲ್ಯಗಳನ್ನು ಕಲಿಸಲು ಸಾಧ್ಯ ಎಂದು ಆ ತಾಯಿ ತೀವ್ರವಾಗಿ ಪ್ರಶ್ನಿಸಿದ್ದಾರೆ. “ಬೆಂಗಳೂರಿನಂತಹ ಆಧುನಿಕ ಹಾಗೂ ತಂತ್ರಜ್ಞಾನದ ರಾಜಧಾನಿಯಲ್ಲೇ ಮಹಿಳೆಯರ ವಿರುದ್ಧ ಇಂತಹ ಹಿಂಜರಿಕೆ ವಿಚಾರಗಳನ್ನು ಪೋಷಕರು ಸುಲಭವಾಗಿ ಒಪ್ಪಿಕೊಳ್ಳುತ್ತಿರುವುದು ನನಗೆ ಆಘಾತ ತಂದಿದೆ” ಎಂದಿದ್ದಾರೆ.
ಸದ್ಯ ‘u/Wooden-Program-7927’ ಎಂಬ ರೆಡ್ಡಿಟ್ ಖಾತೆಯಿಂದ ಪೋಸ್ಟ್ ಆದ ಈ ವಿಷಯವು ವೈರಲ್ ಆಗಿದ್ದು, ಸಾವಿರಾರು ನೆಟ್ಟಿಗರು ಕಮೆಂಟ್ ಮಾಡುವ ಮೂಲಕ ಶಾಲೆಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. “ಇಂತಹ ಶಾಲೆಗಳ ಹೆಸರನ್ನು ಬಹಿರಂಗಪಡಿಸಿ ಶೇಮ್ ಮಾಡಬೇಕು. ಪೋಷಕರು ಸೌಮ್ಯವಾಗಿ ಒಪ್ಪಿಕೊಳ್ಳುವುದರಿಂದಲೇ ಇಂತಹ ಸಂಸ್ಥೆಗಳ ಆಟ ನಡೆಯುತ್ತಿದೆ” ಎಂದು ನೆಟ್ಟಿಗರೊಬ್ಬರು ಕಮೆಂಟ್ ಮಾಡಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




