ವೈದ್ಯರ ನಿರ್ಲಕ್ಷ್ಯ, ಹಣದ ಆಸೆಯಿಂದಲ್ಲೇ ನನ್ನ ಸ್ನೇಹಿತ ಸಾವು? ಯಶವಂತಪುರದ ಖಾಸಗಿ ಆಸ್ಪತ್ರೆ ಎದುರು ಕುಟುಂಬಸ್ಥರು, ಸ್ನೇಹಿತರ ಆಕ್ರೋಶ

ಬೆಂಗಳೂರಿನ ಯಶವಂತಪುರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ವಿಳಂಬದಿಂದ 22 ವರ್ಷದ ಶಹೀನ್ ಸಾವನ್ನಪ್ಪಿದ್ದಾರೆ. ಇನ್ಶೂರೆನ್ಸ್ ಮತ್ತು ಡೆಪಾಸಿಟ್‌ಗಾಗಿ ಆಸ್ಪತ್ರೆ ಹಣಕಾಸು ವಿಳಂಬ ಮಾಡಿದ್ದೇ ಇದಕ್ಕೆ ಕಾರಣವೆಂದು ಕುಟುಂಬಸ್ಥರು ಆರೋಪಿಸಿದ್ದಾರೆ. ವೈದ್ಯಕೀಯ ನಿರ್ಲಕ್ಷ್ಯದ ವಿರುದ್ಧ ಭಾರಿ ಪ್ರತಿಭಟನೆ ನಡೆದಿದ್ದು, ನ್ಯಾಯಕ್ಕಾಗಿ ಒತ್ತಾಯಿಸಲಾಗಿದೆ. ಘಟನಾ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

ವೈದ್ಯರ ನಿರ್ಲಕ್ಷ್ಯ, ಹಣದ ಆಸೆಯಿಂದಲ್ಲೇ ನನ್ನ ಸ್ನೇಹಿತ ಸಾವು? ಯಶವಂತಪುರದ ಖಾಸಗಿ ಆಸ್ಪತ್ರೆ ಎದುರು ಕುಟುಂಬಸ್ಥರು, ಸ್ನೇಹಿತರ ಆಕ್ರೋಶ
ಬೆಂಗಳೂರು ಆಸ್ಪತ್ರೆ ನಿರ್ಲಕ್ಷ್ಯ
Image Credit source: Tv9 kannada
Edited By:

Updated on: Oct 24, 2026 | 7:54 AM

ಬೆಂಗಳೂರು, ಅ.24: ಬೆಂಗಳೂರಿನ ಯಶವಂತಪುರದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಮೂಲದ 22 ವರ್ಷದ ಯುವಕ ಶಹೀನ್ ಸಾವನ್ನಪ್ಪಿದ್ದಾರೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ನೀಡದೆ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ ಮತ್ತು ಇನ್ಶೂರೆನ್ಸ್ ಹಾಗೂ ಡೆಪಾಸಿಟ್ ಹಣಕ್ಕಾಗಿ ವಿಳಂಬ ಮಾಡಿದ್ದೇ ಯುವಕನ ಸಾವಿಗೆ ಕಾರಣ ಎಂದು ಮೃತನ ಕುಟುಂಬಸ್ಥರು ಮತ್ತು ಸ್ನೇಹಿತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಆಸ್ಪತ್ರೆ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ.

ಮೃತ ಯುವಕ ಶಹೀನ್ ಅವರ ಸ್ನೇಹಿತ ಸಿದ್ಧಾರ್ಥ್ ಮಾಧ್ಯಮಗಳೊಂದಿಗೆ ಮಾತನಾಡಿ ಆಸ್ಪತ್ರೆಯ ಗಂಭೀರ ಲೋಪಗಳನ್ನು ಹೊರಹಾಕಿದ್ದಾರೆ.”ನಿನ್ನೆ ನನ್ನ ಸ್ನೇಹಿತ ಶಹೀನ್ ವಿಪರೀತ ರಕ್ತ ವಾಂತಿ ಮಾಡಿಕೊಳ್ಳುತ್ತಿದ್ದ. ಕಫದ ಇನ್ಫೆಕ್ಷನ್ ಹಾಗೂ ಟಿಬಿ ಸಂಶಯದ ಹಿನ್ನೆಲೆಯಲ್ಲಿ ಆತನನ್ನು ಯಶವಂತಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಖಾಸಗಿ ಕಂಪನಿಯೊಂದರಲ್ಲಿ ಶಹೀನ್ ಕೆಲಸ ಮಾಡಿಕೊಂಡಿದ್ದ. ನಿನ್ನೆ ರಾತ್ರಿಯೇ ಎಲ್ಲಾ ಇನ್ಶೂರೆನ್ಸ್ ಪ್ರಕ್ರಿಯೆಗಳನ್ನು ಮುಗಿಸಿಕೊಟ್ಟಿದ್ದೆವು. ಆದರೆ, ಆಸ್ಪತ್ರೆಯವರು ‘ಇನ್ಶೂರೆನ್ಸ್ ಕ್ಲಿಯರ್ ಆಗಿಲ್ಲ, 1 ಲಕ್ಷ ಬಂದಿದೆ, 5 ಲಕ್ಷ ಬೇಕು’ ಎಂದು ಪಟ್ಟು ಹಿಡಿದರು. ಕೊನೆಗೆ ನಾವು ಕಷ್ಟಪಟ್ಟು 50 ಸಾವಿರ ರೂಪಾಯಿ ನಗದು ಡೆಪಾಸಿಟ್ ಕೂಡ ಕಟ್ಟಿದೆವು ಎಂದು ಹೇಳಿದ್ದಾರೆ.

ಇಲ್ಲಿದೆ ನೋಡಿ ವಿಡಿಯೋ;

Medical Negligence Alleged After Puttur Youth Dies At Yeshwanthpur Hospital: ಮೃತನ ಕುಟುಂಬಸ್ಥರ ಆರೋಪ
“ಮಧ್ಯಾಹ್ನ 3 ಗಂಟೆಗೆ ಸರ್ಜರಿ ಮಾಡಬೇಕು ಎಂದಿದ್ದವರು, ಹಣಕಾಸು ಹಾಗೂ ಇನ್ಶೂರೆನ್ಸ್ ನೆಪವೊಡ್ಡಿ ಬರೋಬ್ಬರಿ 4 ಗಂಟೆಗಳ ಕಾಲ ಚಿಕಿತ್ಸೆಯನ್ನು ತಡ ಮಾಡಿದರು. ಕೊನೆಗೆ ಐಸಿಯುಗೆ ಕರೆದುಕೊಂಡು ಹೋದ ಕೆಲವೇ ನಿಮಿಷಗಳಲ್ಲಿ ಪ್ರಾಣಹೋಗಿದೆ ಎಂದು ವೈದ್ಯರು ತಿಳಿಸಿದರು. ಸಾವಿಗೆ ನಿಖರವಾದ ಕಾರಣ ಏನು ಎಂಬುದನ್ನು ವೈದ್ಯರು ನಮಗೆ ಸ್ಪಷ್ಟವಾಗಿ ಹೇಳುತ್ತಿಲ್ಲ. ಕುಟುಂಬದವರಿಗೆ ವಿಷಯ ತಿಳಿಯುವ ಮುನ್ನವೇ ಆಸ್ಪತ್ರೆಯವರು ಪೊಲೀಸರನ್ನು ಕರೆಸಿಕೊಂಡಿದ್ದಾರೆ. ಸಂಪೂರ್ಣವಾಗಿ ಆಸ್ಪತ್ರೆ ಕಡೆಯವರಿಂದಲೇ ಈ ತೊಂದರೆಯಾಗಿದ್ದು, ವೈದ್ಯರ ನಿರ್ಲಕ್ಷ್ಯವೇ ನನ್ನ ಸ್ನೇಹಿತನ ಪ್ರಾಣ ತೆಗೆದಿದೆ ಎಂದು ಸಿದ್ಧಾರ್ಥ್ ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ: ವ್ಯಕ್ತಿ ಮೇಲೆ ರೌಡಿಶೀಟ್ ಕೇಸ್ ಓಪನ್ ಮಾಡುವ ಬಗ್ಗೆ ಪೊಲೀಸರಿಗೆ ಮಹತ್ವದ ಸಲಹೆ ನೀಡಿದ ಹೈಕೋರ್ಟ್​

ಯುವಕ ಶಹೀನ್ ಸಾವಿಗೆ ಆಸ್ಪತ್ರೆಯ ಹಣದ ದುರಾಶೆ ಹಾಗೂ ವೈದ್ಯರ ವಿಳಂಬ ಧೋರಣೆಯೇ ಕಾರಣ ಎಂದು ಆರೋಪಿಸಿ ಪೋಷಕರು, ಸಂಬಂಧಿಕರು ಹಾಗೂ ಸ್ನೇಹಿತರು ಆಸ್ಪತ್ರೆ ಆವರಣದಲ್ಲಿ ಭಾರಿ ಪ್ರತಿಭಟನೆ ಮತ್ತು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇಹಿತಕರ ಘಟನೆಗಳು ನಡೆಯದಂತೆ ತಡೆಯಲು ಯಶವಂತಪುರ ಪೊಲೀಸರು ಆಸ್ಪತ್ರೆ ಬಳಿ ಭಾರಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Published On - 6:48 am, Sat, 24 October 26

ಪ್ರದೀಪ್​ ಚಿಕ್ಕಾಟಿ

ಮೂಲತಃ ಚಾಮರಾಜನಗರ ಜಿಲ್ಲೆಯವನಾಗಿದ್ದು, ಶಾಲಾ ದಿನಗಳಿಂದಲೂ ಮಾಧ್ಯಮಕ್ಕೆ ಸೇರುವ ಹಂಬಲ ಇತ್ತು. ಹೀಗಾಗಿ ಫೈರ್ ಅಂಡ್ ಸೇಫ್ಟಿ ಇಂಜಿನಿಯರಿಂಗ್ ವ್ಯಾಸಂಗ ಮಾಡಿ ಕೆಲಸಕ್ಕೆ ಸೇರಿದ್ದರು ಅ ಕೆಲಸ ಬಿಟ್ಟು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ವ್ಯಾಸಂಗ ಮಾಡಿದೆ. ಬಳಿಕ ಸುಮಾರು 7 ವರ್ಷ‌ದಿಂದ ಮೈಸೂರು, ಹೈದರಾಬಾದ್ ನ ಕೆಲ ಮಾಧ್ಯಮ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಪ್ರಸ್ತುತ Tv9 ಕನ್ನಡದ ಕ್ರೈಂ ವರದಿಗಾರನಾಗಿದ್ದೇನೆ. ಓದು, ಬರಹ, ಪ್ರವಾಸ ನನ್ನಿಷ್ಟದ ಹವ್ಯಾಸಗಳು.

Read More
Loading...
Unable to load recommendations.
Follow Us