
ಬೆಂಗಳೂರು , ಡಿ.27: ಗರ್ಭಿಣಿಯರಿಗೆ (pregnant women) ಮೀಸಲಾದ ಪಾರ್ಕಿಂಗ್ ಸ್ಥಳದ ಒಂದು ವಿಡಿಯೋವನ್ನು ವ್ಯಕ್ತಿಯೊಬ್ಬರು ಹಂಚಿಕೊಂಡಿದ್ದಾರೆ. ಬೆಂಗಳೂರಿನ ಮಾಲ್ವೊಂದರಲ್ಲಿ ಈ ದೃಶ್ಯ ಕಂಡು ಬಂದಿದೆ. ಮಹಿಳೆಯರಿಗಾಗಿ, ಅದರಲ್ಲೂ ಗರ್ಭಿಣಿಯರಿಗೆ ಈ ವಿಶೇಷ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ಇದೀಗ ಮಾಲ್‌ನ ಈ ಪರಿಕಲ್ಪನೆಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಮಾಲ್‌ನ ಪಾರ್ಕಿಂಗ್ ಪ್ರದೇಶದಲ್ಲಿ ಒಂದು ಸಣ್ಣದಾಗಿ ಗರ್ಭಿಣಿಯರಿಗಾಗಿ ವಿಶೇಷ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಬಗ್ಗೆ ವಿಡಿಯೋವೊಂದನ್ನು ಅಕ್ಷಯ್ ರೈನಾ ಎಂಬುವವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಇದು “ತಾಯಂದಿರಿಗಾಗಿ ಕಾಯ್ದಿರಿಸಲಾಗಿದೆ” ಎಂಬ ಬೋರ್ಡ್ನ್ನು ಕೂಡ ಈ ಪಾರ್ಕಿಂಗ್ ಸ್ಥಳದಲ್ಲಿ ಹಾಕಲಾಗಿದೆ. ಗುಲಾಬಿ ಥೀಮ್ ಮೂಲಕ ಈ ಪಾರ್ಕಿಂಗ್ ಸ್ಥಳವನ್ನು ವಿನ್ಯಾಸ ಮಾಡಲಾಗಿದೆ. ಇದು ತುಂಬಾ ವಿಶೇಷವಾಗಿ ಕಂಡು ಬಂದಿದೆ. ದೊಡ್ಡ ಶಾಪಿಂಗ್ ಮಾಲ್‌ನಲ್ಲಿ ಜನ ಹಾಗೂ ವಾಹನ ದಟ್ಟಣೆ ಇರುವುದು ಸಹಜ. ಇದರಿಂದ ಗರ್ಭಿಣಿಯರಿಗೆ ಯಾವುದೇ ತೊಂದರೆ ಆಗಬಾರದು ಎಂದು ಈ ವ್ಯವಸ್ಥೆಯನ್ನು ಮಾಡಲಾಗಿದೆ. ಪಿಂಕ್ ಕಲರ್ನಿಂದ ಈ ಪಾರ್ಕಿಂಗ್ ಸ್ಥಳವನ್ನು ಅಲಂಕಾರ ಮಾಡಲಾಗಿದೆ.
ಈ ದೃಶ್ಯದ ಬಗ್ಗೆ ಅಕ್ಷಯ್ ರೈನಾ ಅದ್ಭುತವಾಗಿ ವಿವರಿಸಿದ್ದಾರೆ. “ತುಂಬಾ ಒಳ್ಳೆಯ ಪರಿಕಲ್ಪನೆ ಮತ್ತು ನನಗೆ ಅದು ತುಂಬಾ ಇಷ್ಟವಾಯಿತು. ಈ ದೃಶ್ಯ ಕಂಡು ಬಂದದ್ದು ನೆಕ್ಸಸ್ ಮಾಲ್‌ನಲ್ಲಿ, ಸಾಂಪ್ರದಾಯಿಕ ಸೌಲಭ್ಯಗಳನ್ನು ಮೀರಿ ಯೋಚಿಸಿದ್ದಕ್ಕಾಗಿ ಮಾಲ್ ಆಡಳಿತ ಮಂಡಳಿಗೆ ಧನ್ಯವಾದಗಳು” ಎಂದು ಹೇಳಿದ್ದಾರೆ. ಮಹಿಳೆಯರಿಗೆ, ವಿಶೇಷವಾಗಿ ತಾಯಂದಿರಿಗೆ ಪ್ರತ್ಯೇಕ ಸ್ಥಳವನ್ನು ಇಟ್ಟುಕೊಂಡಿರುವ ಬೆಂಗಳೂರಿನ ನೆಕ್ಸಸ್‌ಮಾಲ್‌ಗಳಿಗೆ ಹ್ಯಾಟ್ಸ್ ಆಫ್. ಭಾರತದ ಇತರ ಎಲ್ಲಾ ಮಾಲ್‌ಗಳು ಇದನ್ನು ಜಾರಿಗೆ ತರಬೇಕು ಎಂದು ಈ ವಿಡಿಯೋದಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ತಡರಾತ್ರಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಕಿರುಕುಳ ನೀಡಿದ ಮೂವರು ಪುಂಡರು
ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಅನೇಕರು ಈ ವಿಡಿಯೋವನ್ನು ನೋಡಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದು ತುಂಬಾ ಸಹಾಯಕವಾಗಿದೆ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇದು ಮಾಲ್‌ಗಳ ಜನದಟ್ಟಣೆ ಮತ್ತು ಗೊಂದಲಮಯ ಪಾರ್ಕಿಂಗ್‌ನಲ್ಲಿ ಬಹಳ ಅವಶ್ಯಕವಾದ ಸ್ಥಳವಾಗಿದೆ, ಇದರಿಂದಾಗಿ ತಾಯಂದಿರು ತಮ್ಮ ವಾಹನವನ್ನು ಸುಲಭವಾಗಿ ನಿಲ್ಲಿಸಿ ಮಾಲ್‌ಗೆ ಸುಲಭವಾಗಿ ಹೋಗಬಹುದು ಎಂದು ಮತ್ತೊಬ್ಬರು ಹೇಳಿದ್ದಾರೆ. ಇದು ನೋಡಲು ತುಂಬಾ ಹೃದಯಸ್ಪರ್ಶಿಯಾಗಿದೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ