ಬೆಂಗಳೂರು, ಸೆ.05: ಸೇವೆ ಕಾಯಂ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೋಮವಾರ ಪೌರ ಕಾರ್ಮಿಕರು ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಆದರೆ ಈಗಾಗಲೇ ನಾವು ಪೌರ ಕಾರ್ಮಿಕರೊಂದಿಗೆ ಸಭೆ ನಡೆಸಿ ಮಾತನಾಡಿದ್ದೇವೆ. ಅವರು ಪ್ರತಿಭಟನೆ ಕೈ ಬಿಡಲಿದ್ದಾರೆ ಎಂದು ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್(BBMP Commissioner Tushar Girinath) ಅವರು ತಿಳಿಸಿದ್ದಾರೆ. ಸೋಮವಾರ ಪೌರ ಕಾರ್ಮಿಕರು ಕೈಗೊಳ್ಳಬೇಕಿದ್ದ ಪ್ರತಿಭಟನೆಗೆ ಸಂಬಂಧಿಸಿ ಕಮಿಷನರ್ ತುಷಾರ್ ಗಿರಿನಾಥ್ ಪ್ರತಿಕ್ರಿಯೆ ನೀಡಿದ್ದು ಒಟ್ಟು 14,600 ಪೌರ ಕಾರ್ಮಿಕರಿಗೆ ಕಾಯಂ ಪೌರಕಾರ್ಮಿಕರನ್ನಾಗಿ ಮಾಡಲು ಸರ್ಕಾರ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, 11 ಸಾವಿರದ 100 ಜನ ಪೌರ ಕಾರ್ಮಿಕರು ಎರಡನೇ ಆದೇಶಕ್ಕೆ ಒಳ ಪಡಲಿದ್ದಾರೆ. ಮೊದಲನೇ ಆದೇಶದಲ್ಲಿ 3 ಸಾವಿರ ಪೌರಕಾರ್ಮಿಕರು ಕಾಯಂ ನೌಕರರಾಗಲಿದ್ದಾರೆ. ಒಟ್ಟು 14,600 ಪೌರ ಕಾರ್ಮಿಕರಿಗೆ ಕಾಯಂ ಪೌರಕಾರ್ಮಿಕರನ್ನಾಗಿ ಮಾಡಲು ಸರ್ಕಾರ ಒಪ್ಪಿಗೆ ನೀಡಿದೆ. ಎರಡೂ ಆದೇಶಗಳಲ್ಲಿ ಸ್ವಲ್ಪ ವ್ಯತ್ಯಾಸಗಳಿದ್ದು ಸಮಸ್ಯೆ ಆಗ ಬಾರದು ಅನ್ನೋ ಕಾರಣಕ್ಕೆ ಸರ್ಕಾರಕ್ಕೆ ವಾಪಸ್ ಕಳಿಸಲಾಗಿದೆ. ಸದ್ಯದಲ್ಲೆ ಸರ್ಕಾರದ ಒಪ್ಪಿಗೆ ಮೇರೆಗೆ 14,600 ಪೌರಕಾರ್ಮಿಕರಿಗೆ ಕಾಯಂ ನೌಕರರನ್ನಾಗಿ ಆದೇಶ ನೀಡಲಾಗುವುದು. ಈಗಾಗಲೇ ನಾವು ಪೌರ ಕಾರ್ಮಿಕರೊಂದಿಗೆ ಸಭೆ ನಡೆಸಿ ಮಾತನಾಡಿದ್ದೇವೆ. ಅವರು ಪ್ರತಿಭಟನೆ ಕೈ ಬಿಡಲಿದ್ದಾರೆ ಎಂದು ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ಹೇಳಿದರು.
ಇನ್ನು ಇದೇ ವೇಳೆ ನಗರದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿರುವ ಸಂಬಂಧ ತುಷಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ನಗರದಲ್ಲಿ ಡೆಂಘಿ ಪ್ರಕರಣಗಳು ಜಾಸ್ತಿ ಆಗಿದೆ. ಜಾಸ್ತಿ ಯಾಕೆ ಆಗುತ್ತಿದೆ ಅಂದ್ರೆ ಮಳೆ ಬಿಟ್ಟು ಬಿಟ್ಟು ಬರುತ್ತಿದೆ. ಸಿಟಿಯಲ್ಲಿ ನಿರಂತರ ಮಳೆ ಬರುತ್ತಿಲ್ಲ. ಒಮ್ಮೆ ಮಳೆ ಬಂದ್ರೆ ಲಾಂಗ್ ಗ್ಯಾಪ್ ಆಗಿ ಮತ್ತೆ ಮಳೆ ಬರುತ್ತಿದೆ. ಇದರಿಂದ ಸೊಳ್ಳೆಗಳು ಜಾಸ್ತಿ ಆಗ್ತಿವೆ. ಎರಡು ವರ್ಷಗಳಿಂದ ಇದೇ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಳ್ಳತ್ತೇವೆ ಎಂದು ಬಿಬಿಎಂಪಿ ಕಮಿಷನರ್ ತುಷಾರ್ ಗಿರಿನಾಥ್ ತಿಳಿಸಿದರು.
ಇದನ್ನೂ ಓದಿ: ರಾಜ್ಯದಲ್ಲಿ ಡೆಂಗ್ಯೂ ರೋಗ ಪ್ರಕರಣ ಸಂಖ್ಯೆಯಲ್ಲಿ ಏರಿಕೆ; ಬೆಂಗಳೂರಿನಲ್ಲಿ ಅಧಿಕ ಬಾಧಿತರು
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಡೆಂಗ್ಯೂ ಸೋಂಕಿತರ ಸಂಖ್ಯೆಯಲ್ಲಿ ಶೇಕಡಾ 50% ದಷ್ಟು ಏರಿಕೆ ಆಗಿದೆ. ರಾಜ್ಯದಲ್ಲಿ ಒಟ್ಟು 6700 ಪ್ರಕರಣ ದಾಖಲಾಗಿದ್ರೆ ಬೆಂಗಳೂರು ಒಂದರಲ್ಲೇ 3450 ಜನರಿಗೆ ಡೆಂಗ್ಯೂ ಜ್ವರ ಕಾಡುತ್ತಿದೆ ಇನ್ನೂ ಮುಂದಿನ ದಿನಗಳಲ್ಲಿ ಮಳೆ ಕಾರಣ ಆರೋಗ್ಯದ ಬಗ್ಗೆ ಕಾಳಜಿ ವಹಿಸುವಂತೆ ಆರೋಗ್ಯ ಇಲಾಖೆ ಸಲಹೆ ನೀಡುತ್ತಿದ್ದಾರೆ.
ಡೆಂಗ್ಯೂ ಕಾಣಿಸಿಕೊಳ್ಳುತ್ತಿದ್ದಂತೆ ಕೀಲು ನೋವು, ಸ್ನಾಯು ನೋವು, ಕೆಳಹೊಟ್ಟೆಯಲ್ಲಿ ನೋವು, ವಾಂತಿ ಅಥವಾ ಮಲದಲ್ಲಿ ರಕ್ತ, ತ್ವಚೆಯ ಮೇಲೆ ಸಣ್ಣ ಕೆಂಪು ಚುಕ್ಕೆಗಳು, ಪದೇ ಪದೇ ಜ್ವರ ಮರುಕಳಿಸುವುದು, ಮೈ-ಕೈ ನೋವು ಮತ್ತು ಸ್ನಾಯುಗಳ ಸೆಳೆತ ಎಲ್ಲವೂ ಡೆಂಗ್ಯೂ ಲಕ್ಷಣಗಳಾಗಿವೆ. ಇನ್ನೂ ಬಿಬಿಎಂಪಿ ವ್ಯಾಪ್ತಿಯ ಪೂರ್ವ, ದಕ್ಷಿಣ ಹಾಗೂ ಮಹದೇವಪುರ ವಲಯದಲ್ಲಿ ಡೆಂಗ್ಯೂ ಕೇಸ್‌ಗಳು ಹೆಚ್ಚಾದರು ಕೂಡ ಈ ವರೆಗೆ ಯಾವುದೇ ಸಾವು ನೋವು ಸಂಭವಿಸಿಲ್ಲ. ಹೀಗಾಗಿ ಅಂಗನವಾಡಿ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಯಿಂದ ಜಾಗೃತಿ ಕೆಲಸ ಮಾಡುತ್ತಿದ್ದಾರೆ. ಇನ್ನೂ ಈ ಮೇಲಿನ ಯಾವುದೇ ಲಕ್ಷಣಗಳು ಕಂಡು ಬಂದರೆ ವೈದ್ಯರನ್ನ ಭೇಟಿ ಮಾಡುವಂತೆ ಹೇಳುತ್ತಿದ್ದಾರೆ. ಜುಲೈ 1ರಿಂದ ಜುಲೈ 30ರ ವರೆಗೆ ಬೆಂಗಳೂರು ನಗರದಲ್ಲಿ ಬರೋಬ್ಬರಿ 1,649 ಪ್ರಕರಣ ದಾಖಲಾಗಿದ್ದವು.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ