ಬೆಂಗಳೂರು, ಸೆ.05: ಇಡೀ ದೇಶಕ್ಕೆ ದೇಶವೇ ಬೆಚ್ಚಿಬಿದ್ದಿದ್ದ ದೆಹಲಿಯ ಕಾಲೇಜು ವಿದ್ಯಾರ್ಥಿನಿ ಮೇಲೆ ಬಸ್‌ನಲ್ಲಿ ನಡೆದ ಅತ್ಯಾಚಾರ(Delhi Gang Rape) ಪ್ರಕರಣ ಬಳಿಕ ಕೇಂದ್ರ ಸರ್ಕಾರ ಎಲ್ಲಾ ಖಾಸಗಿ, ಸರ್ಕಾರಿ ಬಸ್ಸುಗಳಲ್ಲೂ ಜಿಪಿಎಸ್, ಪ್ಯಾನಿಕ್ ಬಟನ್, ಸಿಸಿ ಟಿವಿ ಅವಳವಡಿಸಲೇಬೇಕೆಂದು ಆದೇಶ ಮಾಡಿತ್ತು. ಈ ಹಿನ್ನೆಲೆಯಲ್ಲಿ ಈಗಾಗಲೇ ಬಿಎಂಟಿಸಿಯಲ್ಲಿ ಯೋಜನೆ ಜಾರಿಗೆ ತರಲಾಗಿದೆ. ಹಾಗಾಗಿ ರಾಜ್ಯ ಸರ್ಕಾರ(State Government) ಇದೀಗ ಖಾಸಗಿ ಬಸ್ಸುಗಳಲ್ಲೂ ಕಡ್ಡಾಯವಾಗಿ ಜಿಪಿಎಸ್, ಪ್ಯಾನಿಕ್ ಬಟನ್, ಸಿಸಿ ಟಿವಿ ಅಳವಡಿಸಲು ಆದೇಶ ಮಾಡಿದೆ. ಇದಕ್ಕೆ ಕೆರಳಿರುವ ಖಾಸಗಿ ಬಸ್ ಮಾಲೀಕರು ಈಗಾಗಲೇ ನಿಮ್ಮ ಶಕ್ತಿ ಯೋಜನೆಯಿಂದ ಪ್ರಯಾಣಿಕರಿಲ್ಲದೆ ನಾವು ಬೀದಿಗೆ ಬಿದ್ದಿದ್ದೇವೆ ಇಂತಹ ಸಂದರ್ಭದಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಿ ಪ್ಯಾನಿಕ್ ಬಟ್ಟನ್ನು, ಜಿಪಿಎಸ್ಸು ಅಂದರೆ ನಮ್ಮ ಕೈಯಲ್ಲಿ ಆಗಲ್ಲ, ಬೇಕಾದ್ರೆ ಹಣ ಕೊಡಿ ಹಾಕಿಸ್ತೀವಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಿಳಾ ಪ್ರಯಾಣಿಕರಿಗೆ ಸಾರಿಗೆ ಇಲಾಖೆ ಗುಡ್ ನ್ಯೂಸ್ ನೀಡಿದೆ. ಖಾಸಗಿ ಬಸ್‌ಗಳಲ್ಲೂ ಮಹಿಳೆಯರ ಸುರಕ್ಷತೆ ಬಗ್ಗೆ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದು, ಮಹಿಳೆಯರ ಸುರಕ್ಷತೆಯ ದೃಷ್ಠಿಯಿಂದ ಖಾಸಗಿ ಬಸ್‌ಗಳಲ್ಲೂ ಜಿಪಿಎಸ್ ಟ್ರ್ಯಾಕ್ ಸಿಸ್ಟಂ, ಬಸ್ ನ ಡೋರ್ ಆಟೋ ಮ್ಯಾಟಿಕ್ ಮೂಲಕ ಪ್ಯಾನಿಕ್ ಬಟನ್ ಸಿಸ್ಟಂ ಅಳವಡಿಕೆಗೆ ಆದೇಶ ಹೊರಡಿಸಿದೆ. ಈ ಮೂಲಕ ಬಸ್ ಎಲ್ಲೆಲ್ಲಿ ಸಂಚಾರ ಮಾಡುತ್ತೆ, ಯಾವ ಮಾರ್ಗದಲ್ಲಿ ಓಡುತ್ತಿದೆ ಎಂಬ ಮಾಹಿತಿ ಕಲೆ ಹಾಕಲಿದೆ.
ಸ್ಟೇಟ್ ಕಂಟ್ರೋಲ್ ರೂಂ ನಿಂದ ಬಸ್ ಗಳ ಬಗ್ಗೆ ಮಾಹಿತಿ ಕಲೆಹಾಕಲಿರುವ ಸಾರಿಗೆ ಇಲಾಖೆ ದೆಹಲಿ ನಿರ್ಭಯ ಕೇಸ್ ಬಳಿಕ ಇದೀಗ ರಾಜ್ಯದಲ್ಲಿ ಖಾಸಗಿ ಬಸ್ಗಳನ್ನ ಟ್ರ್ಯಾಕ್ ಮಾಡಲು ಸಿದ್ದತೆ ನಡೆಸಿದೆ. ಆದರೆ ಖಾಸಗಿ ಬಸ್ ಗಳಲ್ಲಿ ಪ್ಯಾನಿಕ್ ಬಟನ್ ಮತ್ತು ಜಿಪಿಎಸ್ ಟ್ರ್ಯಾಕ್ ಅಳವಡಿಕೆಗೆ ಖಾಸಗಿ ಬಸ್ ಮಾಲೀಕರ ಸಂಘ ಅಸಮಾಧಾನ ವ್ಯಕ್ತಪಡಿಸಿದ್ದು ಈಗಾಗಲೇ ಶಕ್ತಿ ಯೋಜನೆಯಿಂದ ನಮ್ಮ ಉದ್ಯಮ ನೆಲಕಚ್ಚಿದೆ. ಈ ಟೈಮಲ್ಲಿ ಸಾವಿರಾರು ರೂಪಾಯಿ ಖರ್ಚು ಮಾಡಲು ಆಗೋದಿಲ್ಲ. ಸತ್ತ ಹೆಣ್ಣಕ್ಕೆ ಶೃಂಗಾರ ಮಾಡಲು ನಮ್ಮ ಕೈಯಲ್ಲಿ ಆಗಲ್ಲ. ಇದರಿಂದ ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಜಿಪಿಎಸ್, ಪ್ಯಾನಿಕ್ ಬಟ್ಟನ್ನು, ಸಿಸಿ ಕ್ಯಾಮರಾ ಕಂಪನಿಗಳಿಂದ ಕಮೀಷನ್ ಸಿಗುತ್ತವೆ ಅನ್ಸುತ್ತೆ. ಅದಕ್ಕೆ ಈ ಆದೇಶವನ್ನು ಈಗ ಹೊರಡಿಸಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಇದನ್ನೂ ಓದಿ: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಚಿಲ್ಲರೆ ಗಲಾಟೆಗೆ ಮುಕ್ತಿ: ಯುಪಿಐ ಸ್ಕ್ಯಾನ್ ಮಾಡಿ ಟಿಕೆಟ್ ತಗೊಳ್ಳಿ
ಇನ್ನು ಇತ್ತ ಸಾರಿಗೆ ಇಲಾಖೆಯ ಸುತ್ತೋಲೆಗೆ ಖಾಸಗಿ ಬಸ್ಗಳ ಮಾಲೀಕರಿಂದ ಆಕ್ರೋಶ ವ್ಯಕ್ತವಾಗಿದ್ದು ಪ್ಯಾನಿಕ್ ಬಟನ್, ಜಿಪಿಎಸ್ ಟ್ರ್ಯಾಕ್ ಸಿಸ್ಟಮ್ ಸೇರಿ ಇನ್ನಿತರ ಪರಿಕರಗಳು ಬಸ್ ಮಾಲೀಕರೇ ಭರಿಸಬೇಕು ಎಂದು ಸಾರಿಗೆ ಇಲಾಖೆ ತಿಳಿಸಿದೆ. ಹೀಗಾಗಿ ಖಾಸಗಿ ಬಸ್ ಮಾಲೀಕರಿಂದ ತೀವ್ರ ಅಸಮಧಾನ ವ್ಯಕ್ತವಾಗಿದೆ. ಶಕ್ತಿ ಯೋಜನೆಯಿಂದ ರಾಜ್ಯದ ಖಾಸಗಿ ಬಸ್ ಗಳು ಲಾಸ್ ನಲ್ಲಿವೆ ಪ್ರತಿನಿತ್ಯ ಖಾಲಿ ಖಾಲಿ ಬಸ್ ಗಳ ಸಂಚಾರ ಆಗ್ತಿದೆ. ಇದ್ರ ನಡುವೆ ಹೊಸ ಹೊಸ ಪ್ರಯೋಗಗಳು ನಮ್ಮ ತಲೆ ಮೇಲೆ ಹೇರುವ ಕೆಲಸ ಮಾಡಲಾಗ್ತಿದೆ ಎಂದು ಬಸ್ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ, ಇದು ನಾವು ಹೊರಡಿಸಿರುವ ಆದೇಶವಲ್ಲ 2016 ರಲ್ಲಿ ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶ. ಈಗ ಮತ್ತೆ ಕೇಂದ್ರ ಸರ್ಕಾರ ನಮಗೆ ರಿಮೈಂಡ್ ಮಾಡಿದೆ ನಾವು ಹಾಕಿಕೊಳ್ಳಲು ಹೇಳಿದ್ದೀವಿ ಅಷ್ಟೇ ಎಂದರು.
ಇನ್ನು ಮತ್ತೊಂದೆಡೆ ಈ ಬಗ್ಗೆ ಪ್ರಯಾಣಿಕರಾದ ನಂದಿನಿ ಅವರು ಪ್ರತಿಕ್ರಿಯೆ ನೀಡಿದ್ದು, ಇದು ಒಳ್ಳೆಯ ಆದೇಶ ರಾತ್ರಿ ವೇಳೆಯಲ್ಲಿ ಬಸ್ ನಲ್ಲಿ ಪ್ರಯಾಣ ಮಾಡಲು ಭಯ ಆಗುತ್ತದೆ. ಈ ಜಿಪಿಎಸ್ಸು, ಪ್ಯಾನಿಕ್ ಬಟ್ಟನ್ನು, ಸಿಸಿ ಕ್ಯಾಮರಾ ಹಾಕುವುದು ನಮಗೆ ತುಂಬಾ ಧೈರ್ಯ ತರುತ್ತದೆ ಎಂದರು.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನ ಓದಲು ಇದರ ಮೇಲೆ ಕ್ಲಿಕ್ ಮಾಡಿ