
ಬೆಂಗಳೂರು, ನ.11: ಭಾರತದ ಪ್ರಸಿದ್ಧ ಮಾಜಿ ಹಾಕಿ ಪಟು ಹಾಗೂ ಒಲಿಂಪಿಕ್ ಚಿನ್ನದ ಪದಕ ವಿಜೇತ ಎಂ.ಎಂ. ಸೋಮಯ್ಯ ಅವರ ಮನೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣವನ್ನು ಬೆಂಗಳೂರಿನ ಇಂದಿರಾನಗರ ಠಾಣೆ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಕಳುವಾಗಿದ್ದ ಒಲಿಂಪಿಕ್ ಪದಕಗಳು ಹಾಗೂ ಚಿನ್ನಾಭರಣಗಳನ್ನು ಪೊಲೀಸರು ಸಂಪೂರ್ಣವಾಗಿ ವಶಪಡಿಸಿಕೊಂಡಿದ್ದಾರೆ. ಬಂಧಿತ ಆರೋಪಿಗಳನ್ನು ಮಾಣಿಕ್ಯ ಹಾಗೂ ಭರತ್ ಎಂದು ಗುರುತಿಸಲಾಗಿದೆ.
ಸೋಮಯ್ಯ ಅವರು ಬೆಂಗಳೂರಿನ ಇಂದಿರಾನಗರ ಠಾಣಾ ವ್ಯಾಪ್ತಿಯಲ್ಲಿರುವ ತಮ್ಮ ನಿವಾಸಕ್ಕೆ ಬೀಗ ಹಾಕಿ, ಸ್ವಂತ ಕೆಲಸದ ನಿಮಿತ್ತ ಕೊಡಗು ಜಿಲ್ಲೆಯ ಮಡಿಕೇರಿಗೆ ತೆರಳಿದ್ದರು. ಮನೆ ಖಾಲಿ ಇರುವುದನ್ನೇ ಬಂಡವಾಳ ಮಾಡಿಕೊಂಡ ಖದೀಮರು, ಮನೆಗೆ ಕನ್ನ ಹಾಕಿ ಹಲವು ಮೌಲ್ಯದ ವಸ್ತುಗಳು ದೋಚಿದ್ದರು. ಆರೋಪಿಗಳು ಮನೆಯಲ್ಲಿದ್ದ ಅತ್ಯಂತ ಮೌಲ್ಯಯುತವಾದ ಒಲಿಂಪಿಕ್ ಚಿನ್ನದ ಪದಕ, ಬೆಳ್ಳಿ ಪದಕ, 2 ಕಂಚಿನ ಪದಕಗಳು, ಬೆಲೆಬಾಳುವ ಚಿನ್ನಾಭರಣ ಹಾಗೂ 30,000 ರೂ. ನಗದನ್ನು ಕದ್ದು ಪರಾರಿಯಾಗಿದ್ದರು.
ಕಳ್ಳತನದ ಕುರಿತು ಸೋಮಯ್ಯ ಅವರು ದೂರು ನೀಡುತ್ತಿದ್ದಂತೆಯೇ ಸಕ್ರಿಯರಾದ ಇಂದಿರಾನಗರ ಠಾಣೆ ಪೊಲೀಸರು, ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತನಿಖೆಯನ್ನು ಚುರುಕುಗೊಳಿಸಿದ ಪೊಲೀಸರು ಆರೋಪಿಗಳಾದ ಮಾಣಿಕ್ಯ ಮತ್ತು ಭರತ್‌ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರಿಂದ ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಕೀರ್ತಿ ತಂದಿದ್ದ ಪದಕಗಳು, ಚಿನ್ನಾಭರಣ ಹಾಗೂ ಕದ್ದಿದ್ದ ಹಣ ಸೇರಿದಂತೆ ಎಲ್ಲಾ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಹಾಕಿ ದಿಗ್ಗಜ ಎಂ.ಎಂ. ಸೋಮಯ್ಯ ಮನೆಯಲ್ಲಿದ್ದ ಒಲಿಂಪಿಕ್ಸ್ ಚಿನ್ನದ ಪದಕ ಕಳವು
ಮನೆಯ ಸಿಸಿಟಿವಿ ಫೂಟೇಜ್ ಪರಿಶೀಲಿಸಿದಾಗ, ಅಕ್ಟೋಬರ್ 28 ರಂದು ಮುಂಜಾನೆ 2:34 ರ ಸುಮಾರಿಗೆ ಇಬ್ಬರು ದುಷ್ಕರ್ಮಿಗಳು ಬಾಗಿಲು ಮುರಿದು ಒಳನುಗ್ಗಿರುವುದು ಪತ್ತೆಯಾಗಿದೆ. ಓರ್ವ ಆರೋಪಿ ನೀಲಿ ಶರ್ಟ್ ಹಾಗೂ ಮತ್ತೋರ್ವ ಕೆಂಪು ಶರ್ಟ್ ಧರಿಸಿ ಕಳವು ನಡೆಸಿರುವುದು ದೃಶ್ಯಾವಳಿಯಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. 1 ಚಿನ್ನದ ಪದಕ, 1 ಬೆಳ್ಳಿ ಪದಕ ಹಾಗೂ 2 ಕಂಚಿನ ಪದಕಗಳು, 10 ಗ್ರಾಂ ತೂಕದ ಚಿನ್ನದ ಬಳೆಗಳು. 144 ಗ್ರಾಂ ತೂಕದ ಎರಡು ಬೆಳ್ಳಿಯ ಕಪ್‌ಗಳು, 6 ಬೆಳ್ಳಿಯ ಚಮಚಗಳು ಹಾಗೂ 80 ಗ್ರಾಂ ತೂಕದ ಬೆಳ್ಳಿಯ ಬಿಂದಿಗೆ/ಪಾತ್ರೆ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಈ ಸಿಸಿಟಿವಿ ದೃಶ್ಯ ಆಧಾರದಲ್ಲಿ ಪೊಲೀಸರು ಪತ್ತೆ ಕಾರ್ಯಚರಣೆಯನ್ನು ನಡೆಸಿದರು. ಇದೀಗ ಇಬ್ಬರನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ