ಕರ್ನಾಟಕ ಹವಾಮಾನ ವರದಿ: ಬೆಂಗಳೂರಿನಲ್ಲಿ ಇನ್ನೂ 3 ದಿನ ಮಳೆರಾಯನದ್ದೇ ಹವಾ! ದಕ್ಷಿಣ ಒಳನಾಡಿಗೆ ಯೆಲ್ಲೋ ಅಲರ್ಟ್​

Karnataka Weather: ಬೆಂಗಳೂರು ಸೇರಿದಂತೆ ಇಂದು ಹಲವೆಡೆ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸೋಮವಾರ ಸುರಿದ ಮಳೆಗೆ ಮೈಸೂರಿನಲ್ಲಿ ಅವಾಂತರಗಳು ಸೃಷ್ಟಿಯಾಗಿದ್ದು, ವಾಹನ ಸಂಚಾರದಲ್ಲಿ ತೀವ್ರ ಅಡೆತಡೆಗಳು ಉಂಟಾಗಿವೆ. ಇನ್ನೂ ಮೂರು ದಿನ ರಾಜ್ಯದಲ್ಲಿ ವರುಣಾರ್ಭಟವಿರಲಿದೆ ಎಂದು ಇಲಾಖೆ ತಿಳಿಸಿದೆ.

ಕರ್ನಾಟಕ ಹವಾಮಾನ ವರದಿ: ಬೆಂಗಳೂರಿನಲ್ಲಿ ಇನ್ನೂ 3 ದಿನ ಮಳೆರಾಯನದ್ದೇ ಹವಾ! ದಕ್ಷಿಣ ಒಳನಾಡಿಗೆ ಯೆಲ್ಲೋ ಅಲರ್ಟ್​
ಬೆಂಗಳೂರಿನಲ್ಲಿ ಇನ್ನೂ 3 ದಿನ ಮಳೆರಾಯನದ್ದೇ ಹವಾ!
Image Credit source: MediaForge AI

Updated on: May 05, 2026 | 7:20 AM

ಬೆಂಗಳೂರು, ಮೇ 05: ಬೆಂಗಳೂರು ಸೇರಿದಂತೆ ಇಂದು ರಾಜ್ಯದ ಹಲವೆಡೆ ಮಳೆಯಾಗುವ ಮುನ್ಸೂಚನೆಯಿದೆ ಎಂದು ಹವಾಮಾನ (Karnataka Weather) ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಮುಂದಿನ ಮೂರು ದಿನಗಳ ಕಾಲ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದೆಲ್ಲೆಡೆ ಮುಂದಿನ ನಾಲ್ಕು ದಿನ ಮಳೆಯಾಗಲಿದ್ದು, ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.

ಎಲ್ಲೆಲ್ಲಿ  ಮಳೆ

ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ. ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ಒಣ ಹವೆಯಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಕರ್ನಾಟಕದ ಯಾದಗಿರಿ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಂಭವವಿದ್ದು, ಉಳಿದೆಡೆ ಶುಷ್ಕ ವಾತಾವರಣವಿರಲಿದೆ ಎಂದು ಇಲಾಖೆ ತಿಳಿಸಿದೆ.

ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಬಳ್ಳಾರಿ, ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ 30-40 ಕಿ. ಮೀ ವೇಗದ ಗಾಳಿಯೊಂದಿಗೆ ಗುಡುಗು ಸಹಿತ ಜೋರು ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

ಇನ್ನೂ ಮೂರು ದಿನ ಗುಡುಗು, ಮಳೆಯಬ್ಬರ!

ಮೇ 7 ಮತ್ತು 8 ರಂದು ಬೆಳಗಾವಿ, ಉತ್ತರ ಕನ್ನಡ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ಇವುಗಳನ್ನು ಹೊರತುಪಡಿಸಿ ರಾಜ್ಯದ ಉಳಿದೆಲ್ಲಾ ಜಿಲ್ಲೆಗಳಲ್ಲಿ ಮಳೆ ಮುಂದುವರಿಯಲಿದ್ದು, ಎಲ್ಲೋ ಅಲರ್ಟ್ ಜಾರಿಯಲ್ಲಿರುತ್ತದೆ. ಬೀದರ್, ಕಲಬುರ್ಗಿ, ವಿಜಯಪುರ, ಯಾದಗಿರಿ, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಸಾಧಾರಣ ಮಳೆಯ ನಿರೀಕ್ಷೆಯಿದೆ. ಈ ಆರು ಜಿಲ್ಲೆಗಳನ್ನು ಹೊರತುಪಡಿಸಿ ರಾಜ್ಯದ ಇತರೆಲ್ಲಾ ಭಾಗಗಳಲ್ಲಿ ಯೆಲ್ಲೋ ಅಲರ್ಟ್ ಇರಲಿದೆ.

ಮೈಸೂರು ಜಿಲ್ಲೆಯಲ್ಲಿ ಮಳೆಯ ಅನಾಹುತ

ಮೈಸೂರು ಜಿಲ್ಲೆಯಲ್ಲಿ ಮಳೆ ಮತ್ತು ಗಾಳಿಯ ಆರ್ಭಟ ಮುಂದುವರಿದಿದೆ. ಹುಣಸೂರು ತಾಲ್ಲೂಕಿನ ಬಿಳಿಕೆರೆ ಹಾಗೂ ಮನುಗನಹಳ್ಳಿ ಮಧ್ಯೆ ಮಳೆ ಗಾಳಿಗೆ ಬೃಹತ್ ಮರವೊಂದು ಧರೆಗುರುಳಿದೆ. ಇದರಿಂದಾಗಿ ಮೈಸೂರು-ಹುಣಸೂರು ಮುಖ್ಯ ರಸ್ತೆಯಲ್ಲಿ ಸಂಚಾರಕ್ಕೆ ತೀವ್ರ ಅಡಚಣೆಯಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us