ಬೆಂಗಳೂರಿನಲ್ಲಿ ಝಗಮಗಿಸಲಿದೆ ವೀಕೆಂಡ್! ಭಾನುವಾರ ಮುಂಜಾನೆ 5 ರ ವರೆಗೂ ಪಬ್, ಬಾರ್, ರೆಸ್ಟೋರೆಂಟ್ ಓಪನ್ ಸಾಧ್ಯತೆ

Bangalore News: ಈ ವಾರಾಂತ್ಯ ಬೆಂಗಳೂರಿನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇದೆ. ಫುಟ್‌ಬಾಲ್ ವಿಶ್ವಕಪ್‌ನ ಫ್ರಾನ್ಸ್–ಇಂಗ್ಲೆಂಡ್ ಪಂದ್ಯ ಹಾಗೂ ಫೈನಲ್ ಪಂದ್ಯ ವೀಕ್ಷಿಸಲು ಅನುಕೂಲವಾಗುವಂತೆ ನಗರದ ಪಬ್, ಬಾರ್ ಹಾಗೂ ರೆಸ್ಟೋರೆಂಟ್‌ಗಳನ್ನು ಭಾನುವಾರ ಮುಂಜಾನೆ 5 ಗಂಟೆಯವರೆಗೆ ತೆರೆಯಲು ಅನುಮತಿ ನೀಡುವ ನಿರೀಕ್ಷೆಯಿದೆ.

ಬೆಂಗಳೂರಿನಲ್ಲಿ ಝಗಮಗಿಸಲಿದೆ ವೀಕೆಂಡ್! ಭಾನುವಾರ ಮುಂಜಾನೆ 5 ರ ವರೆಗೂ ಪಬ್, ಬಾರ್, ರೆಸ್ಟೋರೆಂಟ್ ಓಪನ್ ಸಾಧ್ಯತೆ
ಸಾಂದರ್ಭಿಕ ಚಿತ್ರ

Updated on: Jul 17, 2026 | 9:36 AM

ಮುಖ್ಯಾಂಶಗಳು

  • ಭಾನುವಾರ ಬೆಳಗ್ಗೆ 5ರವರೆಗೆ ಪಬ್, ಬಾರ್, ರೆಸ್ಟೋರೆಂಟ್​ಗೆ ಅವಕಾಶ ಸಾಧ್ಯತೆ
  • ಫುಟ್‌ಬಾಲ್ ಅಭಿಮಾನಿಗಳಿಗೆ ವಿಶೇಷ ವ್ಯವಸ್ಥೆ
  • ಪಬ್‌, ಬಾರ್‌ಗಳಲ್ಲಿ ಭದ್ರತೆ ಹೆಚ್ಚಳ

ಬೆಂಗಳೂರು, ಜುಲೈ 17: ಈ ವಾರಾಂತ್ಯ ಐಟಿ ನಗರಿ ಬೆಂಗಳೂರಿನಲ್ಲಿ (Bengaluru) ಫುಟ್‌ಬಾಲ್ ಅಭಿಮಾನಿಗಳ ಸಂಭ್ರಮ ಜೋರಾಗುವ ಲಕ್ಷಣಗಳು ಗೋಚರಿಸುತ್ತಿವೆ. ಫುಟ್‌ಬಾಲ್ ವಿಶ್ವಕಪ್‌ನ ಮೂರನೇ ಸ್ಥಾನಕ್ಕಾಗಿ ನಡೆಯಲಿರುವ ಫ್ರಾನ್ಸ್–ಇಂಗ್ಲೆಂಡ್ ಪಂದ್ಯ ಹಾಗೂ ಫೈನಲ್ ಪಂದ್ಯವನ್ನು ಅಭಿಮಾನಿಗಳು ಒಟ್ಟಾಗಿ ವೀಕ್ಷಿಸಲು ನಗರದ ಪಬ್‌ಗಳು, ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳು ವಿಶೇಷ ಸಿದ್ಧತೆ ಆರಂಭಿಸಿವೆ. ಪಂದ್ಯಗಳ ಸಮಯ ಮುಂಜಾನೆ ಇರುವುದರಿಂದ, ಭಾನುವಾರ ಬೆಳಗ್ಗೆ 5 ಗಂಟೆಯವರೆಗೆ ವ್ಯಾಪಾರ ನಡೆಸಲು ಅನುಮತಿ ನೀಡುವಂತೆ ಉದ್ಯಮಿಗಳು ಸರ್ಕಾರ ಹಾಗೂ ಬೆಂಗಳೂರು ನಗರ ಪೊಲೀಸರನ್ನು ಕೋರಿದ್ದಾರೆ. ಈಗಾಗಲೇ ಅಬಕಾರಿ ಇಲಾಖೆಯಿಂದ ಅಗತ್ಯ ಅನುಮತಿ ದೊರೆತಿದ್ದು, ಪೊಲೀಸ್ ಇಲಾಖೆಯ ಅಂತಿಮ ಅನುಮತಿಗಾಗಿ ಕಾಯಲಾಗುತ್ತಿದೆ.

ಈಗಾಗಲೇ ತಡರಾತ್ರಿ ವರೆಗೆ ಪಬ್, ಬಾರ್ ತೆರೆಯಲು ಅನುಮತಿ

ಜುಲೈ 14 ಮತ್ತು 15ರಂದು ಫುಟ್​ಬಾಲ್ ವಿಶ್ವಕಪ್ ಸೆಮಿಫೈನಲ್ ಪಂದ್ಯಗಳ ಹಿನ್ನೆಲೆಯಲ್ಲಿ ಸರ್ಕಾರ ಹಾಗೂ ಬೆಂಗಳೂರು ನಗರ ಪೊಲೀಸರು ಮಧ್ಯರಾತ್ರಿಯ ನಂತರವೂ ರೆಸ್ಟೋರೆಂಟ್‌ಗಳು ಮತ್ತು ಆಹಾರ ಮಳಿಗೆಗಳು ಕಾರ್ಯನಿರ್ವಹಿಸಲು ಅವಕಾಶ ನೀಡಿದ್ದರು. ಬಳಿಕ ಅಬಕಾರಿ ಇಲಾಖೆಯೂ ಅನುಮತಿ ನೀಡಿದ ಪರಿಣಾಮ ಹಲವು ಪಬ್ ಹಾಗೂ ಬಾರ್‌ಗಳಲ್ಲಿ ಅಭಿಮಾನಿಗಳು ಪಂದ್ಯ ವೀಕ್ಷಿಸಿ ಸಂಭ್ರಮಿಸಿದ್ದರು. ಈ ಪ್ರಯೋಗಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತ ಹಿನ್ನೆಲೆಯಲ್ಲಿ, ಇದೀಗ ವಾರಾಂತ್ಯದ ಪಂದ್ಯಗಳಿಗೂ ಇದೇ ಮಾದರಿಯ ವ್ಯವಸ್ಥೆ ಮುಂದುವರಿಸಲು ಉದ್ಯಮಿಗಳು ಮನವಿ ಮಾಡಿದ್ದಾರೆ.

ಸಿಬ್ಬಂದಿಗೆ ವಿಶೇಷ ವ್ಯವಸ್ಥೆ

ರಾತ್ರಿ ತಡವರೆಗೆ ಕಾರ್ಯಾಚರಣೆ ನಡೆಸಲು ರೆಸ್ಟೋರೆಂಟ್ ಹಾಗೂ ಪಬ್‌ಗಳು ಸಿಬ್ಬಂದಿಗಾಗಿ ವಿಶೇಷ ವ್ಯವಸ್ಥೆ ಮಾಡಿಕೊಂಡಿವೆ. ಹಂತ ಹಂತವಾಗಿ ಶಿಫ್ಟ್‌ಗಳನ್ನು ರೂಪಿಸುವುದು, ಮಹಿಳಾ ಸಿಬ್ಬಂದಿಗೆ ಸುರಕ್ಷಿತ ಸಾರಿಗೆ ವ್ಯವಸ್ಥೆ, ಹೆಚ್ಚುವರಿ ಭದ್ರತಾ ಸಿಬ್ಬಂದಿ, ಸಿಸಿಟಿವಿ ನಿಗಾ, ಒಳಾಂಗಣದಲ್ಲಿ ಮಾತ್ರ ಪಂದ್ಯ ಪ್ರದರ್ಶನ ಹಾಗೂ ಬೆಟ್ಟಿಂಗ್‌ಗೆ ಸಂಪೂರ್ಣ ನಿರ್ಬಂಧ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.

ಅಭಿಮಾನಿಗಳಲ್ಲಿ ಹೆಚ್ಚಿದ ಉತ್ಸಾಹ

ಸೆಮಿಫೈನಲ್ ಪಂದ್ಯಗಳ ವೇಳೆ ನಗರದ ವಿವಿಧ ಭಾಗಗಳಲ್ಲಿ ನೂರಾರು ಫುಟ್‌ಬಾಲ್ ಅಭಿಮಾನಿಗಳು ಸೇರಿ ಪಂದ್ಯ ವೀಕ್ಷಿಸಿ ಸಂಭ್ರಮಿಸಿದ್ದರು. ಇದೀಗ ಮೂರನೇ ಸ್ಥಾನಕ್ಕಾಗಿ ನಡೆಯಲಿರುವ ಪಂದ್ಯ ಮತ್ತು ಫೈನಲ್‌ಗೂ ಇನ್ನಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರುವ ನಿರೀಕ್ಷೆಯಿದೆ.

ಇದನ್ನೂ ಓದಿ: ಬೆಂಗಳೂರಿನ ಜನರಿಗೆ ಗುಡ್​​​ ನ್ಯೂಸ್; ಫಿಫಾ ವಿಶ್ವಕಪ್ ಸೆಮಿಫೈನಲ್ ನೋಡಲು ವಿಶೇಷ ಆದೇಶ

ಒಟ್ಟಾರೆ, ಈ ವಾರಾಂತ್ಯ ಬೆಂಗಳೂರಿನಲ್ಲಿ ಕ್ರೀಡಾ ಸಂಭ್ರಮದ ಜೊತೆಗೆ ನೈಟ್‌ಲೈಫ್ ಕೂಡ ಝಗಮಗಿಸಲಿದ್ದು, ಪಬ್‌, ಬಾರ್‌, ರೆಸ್ಟೋರೆಂಟ್‌ಗಳಲ್ಲಿ ಹಬ್ಬದ ವಾತಾವರಣ ಕಂಡುಬರುವ ಸಾಧ್ಯತೆ ಇದೆ. ಪೊಲೀಸ್ ಇಲಾಖೆಯಿಂದ ಅಂತಿಮ ಅನುಮತಿ ದೊರೆತರೆ, ಭಾನುವಾರ ಮುಂಜಾನೆ 5 ಗಂಟೆಯವರೆಗೆ ನಗರದಲ್ಲಿ ಫುಟ್‌ಬಾಲ್ ಫೀವರ್ ಮುಂದುವರಿಯಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:34 am, Fri, 17 July 26

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us