ಐಟಿ ಕೆಲಸ ತೊರೆದು ರ್‍ಯಾಪಿಡೋ ಆಟೋ ಚಾಲಕಿಯಾದ ಬೆಂಗಳೂರಿನ ಯುವತಿ!

ಬೆಂಗಳೂರಿನಲ್ಲಿ ಐಟಿ ಕೆಲಸ ತೊರೆದು ರ್‍ಯಾಪಿಡೋ ಆಟೋ ಚಾಲಕಿಯಾದ ಯುವತಿಯೊಬ್ಬರ ಸ್ಫೂರ್ತಿದಾಯಕ ಕಥೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ತಂದೆಯ ನಿಧನದ ನಂತರ ತಾಯಿಯ ಆರೈಕೆಗಾಗಿ ಕಾರ್ಪೊರೇಟ್ ಉದ್ಯೋಗ ಬಿಟ್ಟು, ಆಟೋ ಓಡಿಸುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಂಡ ಈ ಯುವತಿಯ ಧೈರ್ಯಕ್ಕೆ ನೆಟ್ಟಿಗರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಐಟಿ ಕೆಲಸ ತೊರೆದು ರ್‍ಯಾಪಿಡೋ ಆಟೋ ಚಾಲಕಿಯಾದ ಬೆಂಗಳೂರಿನ ಯುವತಿ!
ರ್‍ಯಾಪಿಡೋ ಆಟೋ ಚಾಲಕಿ
Image Credit source: Tanvi shetty instagram account

Updated on: Sep 29, 2026 | 12:36 PM

ಮುಖ್ಯಾಂಶಗಳು

  • ಐಟಿ ಕೆಲಸ ತೊರೆದು ರ್‍ಯಾಪಿಡೋ ಆಟೋ ಚಾಲಕಿಯಾದ ಬೆಂಗಳೂರಿನ ಧೀಮಂತ ಯುವತಿ.
  • ತಾಯಿಯ ಆರೈಕೆಗಾಗಿ ಕಾರ್ಪೊರೇಟ್ ಉದ್ಯೋಗ ಬಿಟ್ಟು ಆಟೋ ಓಡಿಸುತ್ತಿರುವ ಮಗಳು.
  • ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಸ್ವಾವಲಂಬಿ ಯುವತಿಯ ಸ್ಫೂರ್ತಿದಾಯಕ ಕಥೆ.

ಬೆಂಗಳೂರು, ಸೆಪ್ಟೆಂಬರ್ 29: ಐಟಿ ಕಂಪನಿಯಲ್ಲಿ ಉದ್ಯೋಗವನ್ನರಸಿ ಲಕ್ಷಾಂತರ ಜನರು ಬೆಂಗಳೂರಿಗೆ ಬರುತ್ತಾರೆ. ಹೀಗಿರುವಾಗ ಕೈತುಂಬಾ ಸಂಬಳ ಸಿಗುವ ಐಟಿ ಕಂಪನಿಯ ಪ್ರತಿಷ್ಠಿತ ಉದ್ಯೋಗವನ್ನು ತೊರೆದು, ರ್‍ಯಾಪಿಡೋ ಆಟೋ ಓಡಿಸುತ್ತಿರುವ ಯುವತಿಯೊಬ್ಬರ ಜೀವನ ಪ್ರಯಾಣದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರ ಮನ ಗೆದ್ದಿದೆ.

ಸರಾಗವಾಗಿ ಇಂಗ್ಲಿಷ್ ಮಾತನಾಡುವ ಆಟೋ ಚಾಲಕಿ

ಸಾಮಾಜಿಕ ಜಾಲತಾಣದ ಕಂಟೆಂಟ್ ಕ್ರಿಯೇಟರ್ ತನ್ವಿ ಶೆಟ್ಟಿ ಎಂಬುವವರು ಬೆಂಗಳೂರಿನಲ್ಲಿ ಈ ಯುವತಿಯ ಆಟೋದಲ್ಲಿ ಪ್ರಯಾಣಿಸುವಾಗ ಆಕೆಯ ಕಥೆಯನ್ನು ವೀಡಿಯೋ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇಂಗ್ಲಿಷ್‌ನಲ್ಲಿ ಸರಾಗವಾಗಿ ಮಾತನಾಡುತ್ತಿದ್ದ ಆಟೋ ಚಾಲಕಿಯನ್ನು ಕಂಡು ಅಚ್ಚರಿಗೊಂಡ ತನ್ವಿ, ಆಕೆಯ ಹಿನ್ನೆಲೆಯನ್ನು ಕೇಳಿದಾಗ ಈ ಸ್ಪೂರ್ತಿದಾಯಕ ವಿಚಾರ ಬೆಳಕಿಗೆ ಬಂದಿದೆ.

ಐಟಿ ಕೆಲಸ ಬಿಡಲು ಕಾರಣವೇನು?

ಈ ಯುವತಿ ಹಿಂದೆ ಖಾಸಗಿ ಐಟಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಆದರೆ ತಂದೆಯ ನಿಧನದ ನಂತರ ಕುಟುಂಬದಲ್ಲಿ ದೊಡ್ಡ ಆಘಾತ ಎದುರಾಯಿತು. ಐಟಿ ಕಂಪನಿಯ ನೈಟ್ ಶಿಫ್ಟ್ ಕೆಲಸದಿಂದಾಗಿ ತಾಯಿಯನ್ನು ರಾತ್ರಿ ವೇಳೆ ಮನೆಯಲ್ಲಿ ಒಬ್ಬಂಟಿಯಾಗಿ ಬಿಟ್ಟು ಹೋಗುವುದು ಆಕೆಗೆ ಕಷ್ಟವಾಯಿತು. ತಾಯಿಯ ಯೋಗಕ್ಷೇಮ ಹಾಗೂ ಆರೈಕೆಯನ್ನು ಆದ್ಯತೆಯಾಗಿ ತೆಗೆದುಕೊಂಡ ಈಕೆ, ಕಾರ್ಪೊರೇಟ್ ಕೆಲಸಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದರು.

ಸಮಾಜದ ಮಾತು ಮೆಟ್ಟಿ ನಿಂತ ಧೈರ್ಯ

ಆರಂಭದಲ್ಲಿ ಐಟಿ ಕೆಲಸ ಬಿಟ್ಟು ಆಟೋ ಓಡಿಸುವ ನಿರ್ಧಾರಕ್ಕೆ ಆಕೆಯ ಕುಟುಂಬದಿಂದ ವಿರೋಧ ವ್ಯಕ್ತವಾಗಿತ್ತು. “ಚನ್ನಾಗಿ ಓದಿದ ಹೆಣ್ಣುಮಗಳು ಆಟೋ ಓಡಿಸುವುದೇ? ಜನರು ಏನೆಂದುಕೊಳ್ಳುತ್ತಾರೆ?” ಎಂಬ ಪ್ರಶ್ನೆಗಳು ಎದುರಾಗಿದ್ದವು. ಆದರೆ ಆಕೆ ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಸ್ವಾವಲಂಬಿ ದಾರಿಯನ್ನು ಆಯ್ದುಕೊಂಡರು.

“ಇದು ಕಾರ್ಪೊರೇಟ್ ಕೆಲಸಕ್ಕಿಂತ ಉತ್ತಮವಾಗಿದೆ. ನನ್ನ ತಾಯಿಯ ಜೊತೆ ಸಮಯ ಕಳೆಯಲು ಸಾಧ್ಯವಾಗುತ್ತಿದೆ ಮತ್ತು ಐಟಿ ಕೆಲಸಕ್ಕಿಂತಲೂ ಹೆಚ್ಚಿನ ಆದಾಯ ಗಳಿಸುತ್ತಿದ್ದೇನೆ” ಎಂದು ಯುವತಿ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಸದ್ಯ ಈ ವೀಡಿಯೋ ಲಕ್ಷಾಂತರ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಸಮಾಜದ ಕಟ್ಟುಪಾಡುಗಳನ್ನು ಮುರಿದು ಸ್ವತಂತ್ರ ಬದುಕು ಕಟ್ಟಿಕೊಂಡ ಯುವತಿಯ ಧೈರ್ಯ ಹಾಗೂ ತಾಯಿಯ ಮೇಲಿನ ಪ್ರೀತಿಗೆ ನೆಟ್ಟಿಗರು ಭಾರಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭಾವನಾ ಹೆಗಡೆ

ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ9 ಡಿಜಿಟಲ್​ನಲ್ಲಿ ವೃತ್ತಿ ಜೀವನ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.

Read More
Loading...
Unable to load recommendations.
Follow Us